ಖಾಸಗಿ ಸಹಭಾಗಿತ್ವದಲ್ಲಿ ಕೆರೆಗಳ ನಿರ್ವಹಣೆ : ಪುಟ್ಟರಾಜು

ಬೆಂಗಳೂರು

        ರಾಜ್ಯಾದ್ಯಂತ ಅಂತರ್ಜಲದ ಪ್ರಮಾಣವನ್ನು ಹೆಚ್ಚಳ ಮಾಡಲು ಖಾಸಗಿ ಸಹಭಾಗಿತ್ವದಲ್ಲಿ ಕೆರೆಗಳ ನಿರ್ವಹಣೆ ಕಾರ್ಯವನ್ನು ಕೈಗೆತ್ತಿಕೊಳ್ಳಲು ಸರ್ಕಾರ ನಿರ್ಧರಿಸಿದೆ.

        ಈ ಹಿನ್ನೆಲೆಯಲ್ಲಿ ಕೆರೆಗಳನ್ನು ಸಂರಕ್ಷಿಸುವುದು,ಅಭಿವೃದ್ಧಿಪಡಿಸುವುದು ತ್ವರಿತಗತಿಯ ಕೆಲಸವಾಗಬೇಕು ಎಂದು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರದ ಅಧಿಕಾರಿಗಳಿಗೆ ತಿಳಿಸಿದ್ದಾರೆ.

          ಅವರು ಇಂದು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

           ಸಭೆಯಲ್ಲಿ ರಾಜ್ಯದ ಕೆರೆಗಳ ಅದರಲ್ಲೂ ವಿಶೇಷವಾಗಿ ಬೆಂಗಳೂರಿನ ಕೆರೆಗಳ ಸ್ಥಿತಿಗತಿಗಳ ಕುರಿತು ಹಾಗೂ ಅವುಗಳ ಸಂರಕ್ಷಣೆಗೆ ವಹಿಸಬೇಕಾದ ಮುನ್ನೆಚ್ಚರಿಕೆಗಳ ಕುರಿತು ಅಧಿಕಾರಿಗಳು ಹಾಗೂ ತಜ್ಞರೊಂದಿಗೆ ವಿವರವಾಗಿ ಚರ್ಚಿಸಿದರು.

           ಇಂದು ನಮ್ಮ ಕೆರೆಗಳಿಗೆ ಒದಗಿರುವ ದುಸ್ಥಿತಿಯನ್ನು ರಾತ್ರೋರಾತ್ರಿ ಸರಿಪಡಿಸಲಾಗದು. ಕೆಲವು ವಿಚಾರಗಳಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದೂ ಅಗತ್ಯ. ಈ ನಿಟ್ಟಿನಲ್ಲಿ ವಸ್ತುಸ್ಥಿತಿಯನ್ನು ಸಮಗ್ರವಾಗಿ ಅಧ್ಯಯನ ನಡೆಸಿ, ವಿಸ್ತತ ಯೋಜನಾ ವರದಿಗಳನ್ನು ಸಿದ್ಧಪಡಿಸುವಂತೆ ಸೂಚಿಸಿದರು.

          ಅಲ್ಲದೆ, ಈ ಯೋಜನೆಗಳನ್ನು ಕಾರ್ಪೊರೇಟ್ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ ಯೋಜನೆಗಳ ನೆರವಿನೊಂದಿಗೆ ಹಂತ ಹಂತವಾಗಿ ನಿಗದಿತ ಕಾಲಮಿತಿಯಲ್ಲಿ ಜಾರಿಗೊಳಿಸುವಂತೆ ಸೂಚಿಸಿದರು.

          ಕೆರೆಗಳ ನೀರು ಕಲುಷಿತವಾಗಿರುವ ಕುರಿತು, ತಜ್ಞರ ಅಭಿಪ್ರಾಯಗಳನ್ನು ಗಂಭೀರವಾಗಿ ಪರಿಗಣಿಸಿ, ಅಭಿವೃದ್ಧಿ ಯೋಜನೆಗಳನ್ನು ರೂಪಿಸುವಂತೆ ಮುಖ್ಯಮಂತ್ರಿಗಳು ಸಲಹೆ ಮಾಡಿದರು.

         ಬೆಂಗಳೂರು ನಗರದ ಕೆರೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ, ಕೆರೆಗಳ ಜಲಾನಯನ ಪ್ರದೇಶಗಳ ಅಭಿವೃದ್ಧಿಗೂ ಸಹ ಆದ್ಯತೆ ನೀಡುವಂತೆ ತಜ್ಞರು ಮಾಡಿದ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿಗಳು, ರಾಜಕಾಲುವೆ ಒತ್ತುವರಿ ತೆರವುಗೊಳಿಸಿ, ಕೆರೆಗಳಿಗೆ ನೀರು ಸರಾಗವಾಗಿ ಹರಿದುಬರುವಂತೆ ಮಾಡಲು ಸೂಚಿಸಿದರು. ಜೊತೆಗೆ ರಾಜಕಾಲುವೆ ಮೇಲೆ ಮನೆಕಟ್ಟಿಕೊಂಡಿರುವ ಬಡವರಿಗೆ ಪುನರ್ವಸತಿ ಕಲ್ಪಿಸಲು ಪರ್ಯಾಯ ಯೋಜನೆ ರೂಪಿಸಿ, ಪ್ರಸ್ತಾವನೆ ಸಲ್ಲಿಸುವಂತೆ ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿದರು.

        ಮಳೆ ನೀರು ಚರಂಡಿಗೆ ಕೊಳಚೆ ನೀರು ಸೇರದಂತೆ ಎಚ್ಚರ ವಹಿಸಲು ಹಾಗೂ ಒಳಚರಂಡಿ ನೀರಿನ ಸಂಸ್ಕರಣೆಗೆ ಅಗತ್ಯ ಪ್ರಮಾಣದಲ್ಲಿ ಎಸ್‍ಟಿಪಿಗಳನ್ನು ನಿರ್ಮಾಣ ಮಾಡುವ ಬಗ್ಗೆ ಕ್ರಮ ವಹಿಸುವಂತೆ ಸೂಚಿಸಿದರು.

         ಬೆಂಗಳೂರಿನಲ್ಲಿ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ 204 ಕೆರೆಗಳಿವೆ. ಮಾನವ ತ್ಯಾಜ್ಯ, ಡಿಟರ್ಜೆಂಟ್‍ಗಳಲ್ಲಿ ಹಾಗೂ ಕೈಗಾರಿಕಾ ತ್ಯಾಜ್ಯಗಳಲ್ಲಿ ಫಾಸ್ಫೇಟ್ ಮತ್ತು ಸಲ್ಫೇಟ್ ಅಂಶ ಹೆಚ್ಚಾಗಿರುವುದರಿಂದ ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಒಳಚರಂಡಿ ನೀರು ನೇರವಾಗಿ ಕೆರೆಗಳಿಗೆ ಸೇರದಂತೆ, ಕೈಗಾರಿಕಾ ತ್ಯಾಜ್ಯಗಳನ್ನು ಸಂಸ್ಕರಿಸಲು ಎಸ್‍ಟಿಪಿಗಳನ್ನು ನಿರ್ಮಿಸಲಾಗುತ್ತಿದೆ. ಜೊತೆಗೆ ಡಿಟರ್ಜೆಂಟ್‍ಗಳಲ್ಲಿ ಫಾಸ್ಪೇಟ್, ಸಲ್ಫೇಟ್‍ಗಳ ಅಂಶವನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಲು ಕ್ರಮ ವಹಿಸುವಂತೆ ತಿಳಿಸಿದರು.

       ಬೆಳ್ಳಂದೂರು ಕೆರೆ ಸುಧಾರಣೆಗೆ ರಾಷ್ಟ್ರೀಯ ಹಸಿರು ನ್ಯಾಯಪೀಠದ ಮಾರ್ಗದರ್ಶನದಂತೆ ಕ್ರಮ ವಹಿಸಲಾಗುತ್ತಿದೆ. ಈ ಕುರಿತು ಶಾಶ್ವತ ಪರಿಹಾರಗಳಿಗಾಗಿ ಕೆರೆ ಸಂರಕ್ಷಣಾ ಪ್ರಾಧಿಕಾರವು ವಿಸ್ತತ ಯೋಜನಾ ವರದಿಯನ್ನು ಸಿದ್ಧಪಡಿಸಿದ್ದು, ಎನ್‍ಜಿಟಿ ರಚಿಸಿರುವ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ನೇತೃತ್ವದ ಸಮಿತಿಯ ಅನುಮೋದನೆಗಾಗಿ ಸಲ್ಲಿಸಿ, ಕ್ರಮ ವಹಿಸಲಾಗುವುದು ಎಂದು ಸಭೆಗೆ ಮಾಹಿತಿ ನೀಡಲಾಯಿತು.

       ಕೆರೆ ಅಭಿವೃದ್ಧಿಗೆ ಶಾಶ್ವತ ಪರಿಹಾರಗಳನ್ನು ಕಂಡುಕೊಳ್ಳುವುದು ಅತಿ ಅಗತ್ಯವಾಗಿದೆ. ಖಾಸಗಿ ಸಂಸ್ಥೆಗಳು ಕೆರೆಗಳ ಸಂರಕ್ಷಣೆ, ಅಭಿವೃದ್ಧಿ ಪಡಿಸಲು ಉತ್ಸಾಹ ತೋರಿಸಿ ಮುಂದೆ ಬಂದಾಗ ಅಧಿಕಾರಿಗಳು ಅವರಿಗೆ ಉತ್ತೇಜನ ನೀಡಿ, ತ್ವರಿತವಾಗಿ ಅಗತ್ಯ ಅನುಮೋದನೆಗಳನ್ನು ನೀಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಅಂತೆಯೇ ಅವರು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಒಪ್ಪಂದದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿ, ಯೋಜನೆ ಅನುಷ್ಠಾನದಲ್ಲಿ ಲೋಪಗಳಾಗದಂತೆ ಎಚ್ಚರ ವಹಿಸುವಂತೆ ಸೂಚಿಸಿದರು.

       ಉತ್ತರ ಕರ್ನಾಟಕದ ಕೆರೆಗಳ ಹೂಳು ತೆಗೆಯಲು ಸೂಕ್ತ ಕಾರ್ಯಕ್ರಮ ರೂಪಿಸಿ ಮಳೆಗಾಲ ನೀರು ಸಂಗ್ರಹವಾಗಲು ಅನುವು ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

       ಸಭೆಯಲ್ಲಿ ಎಫ್‍ಕೆಸಿಸಿಐ ಪದಾಧಿಕಾರಿಗಳು ಭಾಗವಹಿಸಿ, ರಾಜ್ಯದ ಕೈಗಾರಿಕೋದ್ಯಮಿಗಳು ಕೆರೆ ಸಂರಕ್ಷಣೆಯಲ್ಲಿ ಕೈಜೋಡಿಸುವುದಾಗಿ ಭರವಸೆ ನೀಡಿದರು.

       ಸಭೆಯಲ್ಲಿ ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು, ನಗರಾಭಿವೃದ್ಧಿ ಇಲಾಖೆ, ಅರಣ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಸಣ್ಣ ನೀರಾವರಿ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು, ಕೆರೆ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು ಮತ್ತಿತತರು ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap