ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಶಾಸಕ ಶ್ರೀರಾಮುಲು.

ಚಳ್ಳಕೆರೆ

          ಚಳ್ಳಕೆರೆ ಹಾಗೂ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಬರಗಾಲದ ಸ್ಥಿತಿ ಶಾಶ್ವತವಾಗಿದ್ದು, ಸರ್ಕಾರದಿಂದ ಜನತೆ ಹೆಚ್ಚಿನ ಸೌಲಭ್ಯಗಳನ್ನು ನಿರೀಕ್ಷಿಸುವುದು ಸ್ವಾಭಾವಿಕ. ಆದರೆ, ತಾಲ್ಲೂಕು ಮಟ್ಟದ ಅಧಿಕಾರಿಗಳು ಮಾತ್ರ ಬರದ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಿಷ್ಕ್ರೀಯವಾಗಿರುವುದು ಬೇಸರದ ಸಂಗತಿ ಎಂದು ಮೊಳಕಾಲ್ಮೂರು ಕ್ಷೇತ್ರದ ಶಾಸಕ ಬಿ.ಶ್ರೀರಾಮುಲು ತಮ್ಮ ಅಸಮದಾನವನ್ನು ವ್ಯಕ್ತ ಪಡಿಸಿದರು.

          ಅವರು, ಗುರುವಾರ ಇಲ್ಲಿನ ತಾಲ್ಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ತಮ್ಮ ಕ್ಷೇತ್ರ ವ್ಯಾಪ್ತಿಯ ನಾಯಕನಹಟ್ಟಿ ಮತ್ತು ತಳಕು ಹೋಬಳಿಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಳೆದ ಎರಡು ಬಾರಿ ಸಭೆ ನಡೆಸಿದಾಗ ಇಲ್ಲಿನ ಕೆಲವು ತಾಲ್ಲೂಕು ಮಟ್ಟದ ಅಧಿಕಾರಿಗಳು ಅನುಪಾಲನಾ ವರದಿಯನ್ನು ನೀಡಿದ್ದು, ಇಂದು ಸಹ ನೀಡಿದ ವರದಿ ಹಾಗೂ ಅವರು ಸಭೆಯಲ್ಲಿ ಮಂಡಿಸುವ ಅಂಕಿಅಂಶಗಳ ಬಗ್ಗೆ ಅಜಗಜಾಂತರ ವ್ಯತ್ಯಾಸವಿದೆ. ಆದರೆ, ಅನಗತ್ಯವಾಗಿ ಸುಳ್ಳು ಹೇಳುವ ಅಧಿಕಾರಿಗಳು ಈ ಬಗ್ಗೆ ಆತ್ಮವಿರ್ಮಶೆಗೆ ಒಳಗಾಗಬೇಕಿದೆ.

          ಅಧಿಕಾರಿ ವರ್ಗ ಸಕರಾತ್ಮಕವಾಗಿ ಕಾರ್ಯನಿರ್ವಹಿಸಿದಲ್ಲಿ ಸರ್ಕಾರಕ್ಕೂ ಹಾಗೂ ಜನಪ್ರತಿನಿಧಿಗಳಿಗೆ ಹೆಚ್ಚು ಗೌರವ ಬರುತ್ತದೆ. ಸರ್ಕಾರ ಎಲ್ಲಾ ರೀತಿಯ ಸೌಲಭ್ಯ ಮತ್ತು ಸವಲತ್ತುಗಳನ್ನು ಅಧಿಕಾರಿ ವರ್ಗಕ್ಕೆ ನೀಡಿದ್ದರೂ ಸಹ ಗ್ರಾಮೀಣ ಭಾಗದ ಜನರ ಸಮಸ್ಯೆಗಳ ಬಗ್ಗೆ ನಿರ್ಲಕ್ಷ ತಾಳುವ ಉದಾಸೀನತೆ ತೋರುವ ವರ್ತನೆ ನೋವಿನ ಸಂಗತಿ ಎಂದರು. ನನಗೆ ವೈಯಕ್ತಿಕವಾಗಿ ಯಾವುದೇ ಅಧಿಕಾರಿಯನ್ನು ಅಪರಾಧಿಸ್ಥಾನದಲ್ಲಿ ನೋಡುವ ಉದ್ದೇಶವಿಲ್ಲ. ಆದರೆ ಜನರಿಂದ ಆಯ್ಕೆಯಾದ ನಾವು ಜನರ ಸಮಸ್ಯೆಗಳಿಗೆ ಸ್ಪಂದಿಸದೇ ಇದ್ದರೆ, ಹೇಗೆ.

             ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಅಧಿಕಾರಿಗಳು ಚಿಂತನೆ ನಡೆಸಬೇಕಿದೆ. ಅಧಿಕಾರಿಗಳು ಮನಸು ಮಾಡಿದರೆ ಮಾತ್ರ ಎಲ್ಲಾ ಯೋಜನೆಗಳು ಅನುಷ್ಠಾನಗೊಳ್ಳುವುದಲ್ಲದೆ ಫಲಾನುಭವಿಗಳು ಸಹ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು.
ಪ್ರಾರಂಭದಲ್ಲಿ ಸಕಾಯಕ ಕೃಷಿ ನಿರ್ದೇಶಕ ಎನ್.ಮಾರುತಿ ಮಾಹಿತಿ ನೀಡಿ, ಪ್ರಸ್ತುತ ವರ್ಷ 18 ಸಾವಿರಕ್ಕೂ ಹೆಚ್ಚು ಜನರು ಬೆಳೆ ವಿಮೆ ಪಾವತಿ ಮಾಡಿದ್ದಾರೆ. ಈ ಬಗ್ಗೆ ಈಗಾಗಲೇ ಸರ್ಕಾರಕ್ಕೆ ಸಂಪೂರ್ಣ ವರದಿ ನೀಡಲಾಗಿದೆ.

             ತಳಕು ಮತ್ತು ನಾಯಕನಹಟ್ಟಿ ಹೋಬಳಿಯಲ್ಲಿ ಮಳೆ ಪ್ರಮಾಣ ಕುಸಿದು ಹೆಚ್ಚಿನ ಬೆಳೆಯಾಗಿಲ್ಲ. ಉದ್ಯೋಗ ಖಾತರಿ ಯೋಜನೆಯಡಿ ಕೆಲವೊಂದು ಕಾಮಗಾರಿ ಕೈಗೊಂಡಿದೆ ಎಂದರು. ಕೃಷಿ ಹೊಂಡ ನಿರ್ಮಾಣದಲ್ಲಿ ಎರಡೂ ಹೋಬಳಿಗಳ ವ್ಯಾಪ್ತಿಯಲ್ಲಿ 212 ಕೃಷಿ ಹೊಂಡ ನಿರ್ಮಿಸಬೇಕಿದ್ದು, ಪ್ರಸ್ತುತ 102 ಕೃಷಿ ಹೊಂಡ ನಿರ್ಮಿಸಿದ್ದು 42 ಪ್ರಗತಿಯಲ್ಲಿವೆ ಎಂದರು. ಅರ್ಜಿ ಸಲ್ಲಿಸಿದ ಎಲ್ಲಾ ರೈತರಿಗೆ ಸಬ್ಸಿಡಿ ದರದಲ್ಲಿ ತಾಡಪಾಲ್‍ಗಳನ್ನು ನೀಡಲಾಗಿದೆ ಎಂದರು.

              ಲೋಪಯೋಗಿ ಇಲಾಖೆ ಇಂಜಿನಿಯರ್ ಸತ್ಯಣ್ಣ ಮಾಹಿತಿ ನೀಡಿ, ತಳಕು ಹೋಬಳಿ ವ್ಯಾಪ್ತಿಯಲ್ಲಿ ಹದಗೆಟ್ಟ ರಸ್ತೆ ದುರಸ್ಥಿ ಕಾರ್ಯಕ್ಕೆ ಅಧಿಕಾರಿಗಳಿಗೆ ಈಗಾಗಲೇ ವರದಿ ಕಳುಹಿಸಿದ್ದು, ಒಟ್ಟು 11 ಕೋಟಿ ಹಣ ವೆಚ್ಚವಾಗಲಿದ್ದು, ತಾತ್ಕಾಲಿಕವಾಗಿ 2 ಕೋಟಿ ಹಣ ಮಂಜೂರಾಗಿದ್ದು, ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸುವ ಭರವಸೆ ನೀಡಿದರು.

             ಶಿಶು ಅಭಿವೃದ್ಧಿ ಅಧಿಕಾರಿ ಸಿ.ಕೆ.ಗಿರಿಜಾಂಬ ಮಾತನಾಡಿ, ಮೊಳಕಾಲ್ಮೂರು ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 53 ಅಂಗನವಾಡಿ ಕಟ್ಟಡಗಳಿಗೆ ನಿವೇಶನವಿಲ್ಲ. 40 ಅಂಗನವಾಡಿ ಕಟ್ಟಡಗಳಿಗೆ ಶೌಚಾಲಯದ ವ್ಯವಸ್ಥೆ ಇಲ್ಲವೆಂದು ಮಾಹಿತಿ ನೀಡಿದರು. ಹೊಸ ಅಂಗನವಾಡಿ ಕಟ್ಟಡ ನಿರ್ಮಾಣದ ಕಾರ್ಯಪ್ರಗತಿಯಲ್ಲಿದೆ ಎಂದರು. ತಾಲ್ಲೂಕು ಆರೋಗ್ಯಾಧಿಕಾರಿ ಎನ್.ಪ್ರೇಮಸುಧಾ ಮಾಹಿತಿ ನೀಡಿ, ಗ್ರಾಮೀಣ ಪ್ರದೇಶದ ಎಲ್ಲಾ ಆರೋಗ್ಯ ಕೇಂದ್ರಗಳಿಗೆ ವೈದ್ಯರನ್ನು ನಿಯೋಜಿಸಲಾಗಿದೆ. ಗಡಿಭಾಗದಲ್ಲಿನ ಓಬಳಾಪುರ ಆಸ್ಪತ್ರೆಗೆ ವೈದ್ಯರನ್ನು ನಿಯೋಜಿಸಿದ್ದು, ಯಾವುದೇ ಸಮಸ್ಯೆ ಇಲ್ಲವೆಂದರು.

              ಸಮಾಜ ಕಲ್ಯಣಾಧಿಕಾರಿ ಮಂಜಪ್ಪ ಮಾಹಿತಿ ನೀಡಿ, ಎರಡು ಹಾಸ್ಟಲ್‍ಗಳಿದ್ದು, ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸಲಾಗಿದೆ. ಹೆಚ್ಚುವರಿಯಾಗಿ ಹಾಸ್ಟಲ್ ನಿರ್ಮಿಸಲು ಜಾಗದ ಕೊರತೆ ಇದ್ದು, ಸೂಕ್ತ ಜಾಗ ನೀಡಿದಲ್ಲಿ ಅನುಮತಿ ಪಡೆದು ನಿರ್ಮಿಸುವ ಭರವಸೆ ನೀಡಿದರು. ಪರಿಶಿಷ್ಟ ವರ್ಗದ ಕಲ್ಯಾಣಾಧಿಕಾರಿ ಮಾಹಿತಿ ನೀಡಿ, ನಾಲ್ಕು ನೂತನ ಹಾಸ್ಟಲ್ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಇನ್ನೂ ಉಳಿದ ಕಟ್ಟಡ ನಿರ್ಮಾಣಕ್ಕೆ ಮಂಜೂರಾತಿ ದೊರೆಯಬೇಕಿದೆ ಎಂದರು. ತೋಟಗಾರಿಕೆ ಅಧಿಕಾರಿ ವಿರೂಪಾಕ್ಷಪ್ಪ ಮಾಹಿತಿ ನೀಡಿ, ಒಟ್ಟು 163 ಫಲಾನುಭವಿಗಳಿಗೆ ಸ್ವಿಂಕ್ಲರ್ ಸೌಲಭ್ಯ ಕಲ್ಪಿಸಲಾಗಿದೆ ಎಂದರು.

              ತಾಲ್ಲೂಕಿನ ನಾಯಕನಹಟ್ಟಿ ಹೋಬಳಿಯ ಕಾರ್ತಿಕೇಯನಹಟ್ಟಿಯಲ್ಲಿ ಶುದ್ದ ಕುಡಿಯುವ ಘಟಕವನ್ನು ಖಾಸಗಿ ವ್ಯಕ್ತಿಯೊಬ್ಬರು ಜಮೀನಿಗೆ ಬಳಸಿಕೊಳ್ಳುತ್ತಿದ್ಧಾರೆಂದು ದೂರು ನೀಡಿದಾಗ ಸಂಬಂಧಪಟ್ಟ ಪಿಡಿಒಗೆ ಸೂಚನೆ ನೀಡಿ ಕೂಡಲೇ ಈ ರೀತಿ ಬಳಕೆ ಸಲ್ಲದು ಎಂದರು. ಸಣ್ಣ ನೀರಾವರಿ ಇಲಾಖೆ ಅಧಿಕಾರಿ ತಿಪ್ಪೇರುದ್ರಪ್ಪ ಮಾಹಿತಿ ನೀಡಿ, ಕೆರೆಗಳ ಅಭಿವೃದ್ಧಿಯ ಬಗ್ಗೆ ವಿವರಣೆ ನೀಡಿದರು.
ಅರಣ್ಯಾಧಿಕಾರಿ ಎಸ್.ಸುರೇಶ್, ಸಾಮಾಜಿಕ ಅರಣ್ಯ ವಲಯ ಯೋಜನೆಯಲ್ಲಿ ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.

              ಪಶುಸಂಗೋಪನಾಧಿಕಾರಿ ಬಿ.ಹನುಮಪ್ಪ, ರೇಷ್ಮ ಅಧಿಕಾರಿ ಕೆಂಜಡಿಯಪ್ಪ, ಅಕ್ಷರ ದಾಸೋದ ತಿಪ್ಪೇಸ್ವಾಮಿ ಸಭೆಯಲ್ಲಿ ಉಪಸ್ಥಿತರಿದ್ದರು. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಪರಿಶಿಷ್ಟ ವರ್ಗದನಿಗದ ಅಧಿಕಾರಿ ಗೈರು ಹಾಜರಾಗಿದ್ದು, ನೋಟಿಸ್ ನೀಡುವಂತೆ ಸೂಚನೆ ನೀಡಿದರು.

              ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಕವಿತಾರಾಮಣ್ಣ, ಉಪಾಧ್ಯಕ್ಷೆ ತಿಪ್ಪಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಗಿರಿಯಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ರಾಮರೆಡ್ಡಿ, ಸಣ್ಣ ಸೂರಪ್ಪ, ಸುನಂದಮ್ಮ, ಗದ್ದಿಗೆ ತಿಪ್ಪೇಸ್ವಾಮಿ, ಉಮಾ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಜೆ.ಪಿ.ಜಯಪಾಲಯ್ಯ, ಎಂ.ವೈ.ಟಿ.ಸ್ವಾಮಿ, ಮಲ್ಲೇಶ್, ಇಒ ಈಶ್ವರಪ್ರಸಾದ್ ಸಭೆಯಲ್ಲಿ ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap