ತ್ಯಾಜ್ಯ ಪ್ಲಾಸ್ಟಿಕ್‍ನಿಂದ ಟೈಲ್ಸ್ ತಯಾರಿಕೆಗೆ ಪಾಲಿಕೆ ಚಿಂತನೆ…!!!

ತುಮಕೂರು 

     ಪುನರ್‍ಬಳಕೆಗೂ ಬಾರದಿರುವ ಹಾಗೂ ಭೂಗತ (ಲ್ಯಾಂಡ್‍ಫಿಲ್)ಗೊಳ್ಳುವಂತಹ ತ್ಯಾಜ್ಯ ಪ್ಲಾಸ್ಟಿಕ್ ವಸ್ತುಗಳನ್ನು ಆಧುನಿಕ ತಾಂತ್ರಿಕತೆ ಬಳಸಿಕೊಂಡು ಸರಳ ಪ್ರಕ್ರಿಯೆ ಮೂಲಕ ವರ್ಣರಂಜಿತ ಟೈಲ್ಸ್‍ಗಳನ್ನಾಗಿ ಅಥವಾ ಇಂಟರ್‍ಲಾಕ್‍ಗಳನ್ನಾಗಿ ರೂಪಾಂತರಿಸಬಹುದಾದ ಮಹತ್ವದ ಯೋಜನೆಯೊಂದರ ಬಗ್ಗೆ ತುಮಕೂರು ಮಹಾನಗರ ಪಾಲಿಕೆಯು ಜಿಲ್ಲಾಧಿಕಾರಿ ಅವರಿಗೆ ಪ್ರಸ್ತಾವನೆಯೊಂದನ್ನು ಸಲ್ಲಿಸಿದೆ.

      ಪಾಲಿಕೆ ಆಯುಕ್ತ ಟಿ.ಭೂಪಾಲನ್ ಅವರ ಮಾರ್ಗದರ್ಶನದಲ್ಲಿ ಪಾಲಿಕೆಯ ಆರೋಗ್ಯ ಶಾಖೆಯ ಪರಿಸರ ಇಂಜಿನಿಯರ್ ಮೃತ್ಯುಂಜಯ ಅವರು ಈ ಯೋಜನೆಯನ್ನು ಸಿದ್ಧಪಡಿಸಿದ್ದಾರೆ. ಇದೇ ಮೊದಲ ಬಾರಿಗೆ ಪಾಲಿಕೆಯು “ಕಸದಿಂದ ರಸ” ಮಾಡುವ ನಿಟ್ಟಿನಲ್ಲಿ ಇಂತಹುದೊಂದು ವಿಶೇಷ ಹಾಗೂ ಹೊಸ ಪ್ರಯೋಗ ನಡೆಸಲು ಮುಂದಾಗಿದೆ.

ಪ್ರಸ್ತಾವನೆಯ ವಿಶೇಷ

      “ತುಮಕೂರು ನಗರದಲ್ಲಿ ಪ್ರತಿನಿತ್ಯ 100 ಕ್ಕೂ ಅಧಿಕ ಟನ್‍ಗಳಷ್ಟು ಕಸ ಉತ್ಪತ್ತಿಯಾಗುತ್ತದೆ. ಇದನ್ನು ತುಮಕೂರು ತಾಲ್ಲೂಕು ಅಜ್ಜಗೊಂಡನಹಳ್ಳಿಯಲ್ಲಿ ಮಹಾನಗರ ಪಾಲಿಕೆ ನಿರ್ಮಿಸಿರುವ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸಲಾಗುತ್ತದೆ. ಅಲ್ಲಿ ವಿವಿಧ ಪ್ರಕ್ರಿಯೆಗಳಿಗೆ ಒಳಪಡಿಸಿ, ವಿಲೇವಾರಿ ಮಾಡಲಾಗುತ್ತದೆ. ಹಸಿ ಕಸವನ್ನು ಗೊಬ್ಬರವನ್ನಾಗಿ ಪರಿವರ್ತಿಸಲಾಗುತ್ತದೆ.

       ಒಣ ಕಸವನ್ನು (ಪ್ಲಾಸ್ಟಿಕ್ ಇತ್ಯಾದಿ) ಪುನರ್‍ಬಳಕೆಗಾಗಿ ಪ್ರತ್ಯೇಕಿಸಲಾಗುತ್ತದೆ. ಪ್ಲಾಸ್ಟಿಕ್ ಪದಾರ್ಥಗಳಲ್ಲಿ ಪುನರ್ ಬಳಕೆಗೆ ಸಾಧ್ಯವೇ ಆಗದಂತಹವೂ ಇದ್ದು, ಅವುಗಳನ್ನು ಭೂಗತಗೊಳಿಸಲಾಗುತ್ತದೆ. ಇದನ್ನು ಲ್ಯಾಂಡ್‍ಫಿಲ್ ಎನ್ನಲಾಗುತ್ತದೆ. ಈ ರೀತಿ ಲ್ಯಾಂಡ್‍ಫಿಲ್ ಆಗುವಂತಹ ಪ್ಲಾಸ್ಟಿಕ್ ಪದಾರ್ಥಗಳನ್ನೂ ಮತ್ತೆ ಉಪಯೋಗಿಸಿಕೊಂಡು ಟೈಲ್ಸ್‍ಗಳನ್ನು ಅಥವಾ ಇಂಟರ್‍ಲಾಕ್‍ಗಳನ್ನು ತಯಾರಿಸಬಹುದು” ಎಂಬುದೇ ಈ ಪ್ರಸ್ತಾವನೆಯ ವಿಶೇಷ.

ಟೈಲ್ಸ್ ಅಥವಾ ಇಂಟರ್‍ಲಾಕ್

      “ಈ ತಾಂತ್ರಿಕತೆಯು ಬೆಂಗಳೂರಿನಲ್ಲೇ ಲಭ್ಯವಿದೆ. ಯಂತ್ರೋಪಕರಣಗಳನ್ನು ಬಳಸಿಕೊಂಡು ಸುಲಭ ವಿಧಾನದಲ್ಲಿ ವರ್ಣರಂಜಿತ ಟೈಲ್ಸ್ ಅಥವಾ ಇಂಟರ್‍ಲಾಕ್ ಅಥವಾ ಎರಡನ್ನೂ ತಯಾರಿಸಬಹುದು. ಈ ಪ್ರಕ್ರಿಯೆ ನಡೆಸಲು ಮಾನವ ಸಂಪನ್ಮೂಲ ಸಹ ಹೆಚ್ಚೇನೂ ಬೇಕಿಲ್ಲ. ಬೆರಳೆಣಿಕೆಯ ಕಾರ್ಮಿಕರಿದ್ದರೆ ಸಾಕು” ಎಂದು ಹೇಳಲಾಗಿದೆ.

       “ಸುಮಾರು 150 ಪಾಲಿಥಿನ್ ಚೀಲಗಳಿದ್ದರೆ ಅವುಗಳಿಂದ ಒಂದು ಟೈಲ್ ತಯಾರಿಸಬಹುದು. 3 ರಿಂದ 4 ಟನ್‍ಗಳಷ್ಟು ಪ್ಲಾಸ್ಟಿಕ್ ಇದ್ದರೆ 10,000 ಸಂಖ್ಯೆಯ ಟೈಲ್‍ಗಳು ಸಿದ್ಧಗೊಳ್ಳುತ್ತವೆ” ಎಂದು ಈ ಪ್ರಸ್ತಾವನೆಯಲ್ಲಿ ಅಂದಾಜಿಸಲಾಗಿದೆ.

         ಪ್ಲಾಸ್ಟಿಕ್‍ನಿಂದ ತಯಾರಾದ ಟೈಲ್‍ಗಳು ಅಥವಾ ಇಂಟರ್‍ಲಾಕ್‍ಗಳು ಯಾವುದೇ ಸಂದರ್ಭದಲ್ಲೂ ಮುರಿದು ಹೋಗುವುದಿಲ್ಲ. ದೀರ್ಘಕಾಲ ಬಾಳಿಕೆ ಬರುತ್ತದೆ. ಅತಿಹೆಚ್ಚಿನ ಉಷ್ಣಾಂಶ ತಗುಲದಿರುವ ಸ್ಥಳಗಳಲ್ಲಿ ಇವುಗಳನ್ನು ಧಾರಾಳವಾಗಿ ಅಳವಡಿಸಬಹುದಾಗಿದೆ. ಮೊದಲಿಗೆ ಪಾಲಿಕೆ ಕಚೇರಿ ಆವರಣದ ಫುಟ್‍ಪಾತ್‍ಗಳು, ಉದ್ಯಾನವನದಲ್ಲಿ ಇವನ್ನು ಅಳವಡಿಸುವ ಚಿಂತನೆಯಿದೆ. ಇದರ ಯಶಸ್ಸನ್ನು ನೋಡಿ ಇನ್ನಿತರ ಸ್ಥಳಗಳಲ್ಲೂ ಇದನ್ನು ಬಳಸಬಹುದಾಗಿದೆ” ಎಂಬುದು ಪಾಲಿಕೆಯ ಉದ್ದೇಶಿಸಲಾಗಿದೆ.

ಹೈದರಾಬಾದ್‍ನಲ್ಲಿ ಯಶಸ್ಸು

       “ಹೈದರಾಬಾದ್ ನಗರದಲ್ಲಿ ಇಂತಹುದೊಂದು ಪ್ರಯೋಗ ಯಶಸ್ವಿಯಾಗಿದೆ. ಫುಟ್‍ಪಾತ್‍ಗೆ ವರ್ಣರಂಜಿತವಾಗಿರುವ ಪ್ಲಾಸ್ಟಿಕ್ ಟೈಲ್ಸ್ ಅಳವಡಿಸಲಾಗಿದೆ. ಅದೇ ರೀತಿ ತುಮಕೂರು ನಗರದಲ್ಲೂ ಈ ವಿನೂತನ ಪ್ರಯೋಗ ನಡೆಸುವ ಆಲೋಚನೆ ಇದೆ. ಜಿಲ್ಲಾಧಿಕಾರಿಗಳಿಂದ ಪಾಲಿಕೆಯ ಪ್ರಸ್ತಾವನೆಗೆ ಹಸಿರು ನಿಶಾನೆ ದೊರೆತರೆ, ಈ ನಿಟ್ಟಿನಲ್ಲಿ ಮುಂದಿನ ಪ್ರಕ್ರಿಯೆಯನ್ನು ಅಜ್ಜಗೊಂಡನಹಳ್ಳಿ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಆರಂಭಿಸಲಾಗುವುದು” ಎನ್ನುತ್ತಿವೆ ಮೂಲಗಳು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap