ಎಂಇಎಸ್ ಕರಾಳ ದಿನ ವಿರೋಧಿಸಿ ಪ್ರತಿಕೃತಿ ದಹನ

ದಾವಣಗೆರೆ:

         ಬರುವ ನವೆಂಬರ್ 1ರಂದು ಬೆಳಗಾವಿಯಲ್ಲಿ ಎಂಇಎಸ್ ನಡೆಸಲುದ್ದೇಶಿರುವ ಕರಾಳ ದಿನಾಚರಣೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಒತ್ತಾಯಿಸಿ, ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ನಗರದಲ್ಲಿ ಬುಧವಾರ ಎಂಇಎಸ್ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.

        ಇಲ್ಲಿನ ಪಾಲಿಕೆ ಆವರಣದಿಂದ ಮೆರವಣಿಗೆ ಹೊರಟ ಕರವೇ ಕಾರ್ಯಕರ್ತರು, ಪಿ.ಬಿ. ರಸ್ತೆಯಲ್ಲಿ ಎಂಇಎಸ್ ಪ್ರತಿಕೃತಿ ದಹಿಸಿ, ಆಕ್ರೋಶ ವ್ಯಕ್ತಪಡಿಸಿ ಎಸಿ ಕಚೇರಿಗೆ ತೆರಳಿ ಉಪ ವಿಭಾಗಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ, ಕರ್ನಾಟಕ ಏಕೀಕರಣ ಗೊಂಡಿರುವ ಕರ್ನಾಟಕ ರಾಜ್ಯೋತ್ಸದ ದಿನವಾಗಿರುವ ನ.1ರಂದು ಬೆಳಗಾವಿಯಲ್ಲಿ ಎಂಇಎಸ್ ಪುಂಡರು ಕರಾಳ ದಿನಾಚರಣೆ ನಡೆಸಲು ಮುಂದಾಗಿದ್ದು, ರಾಜ್ಯ ಸರ್ಕಾರ ಇದಕ್ಕೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂದು ಆಗ್ರಹಿಸಿದರು.

       ಸ್ವತಂತ್ರ ಸೇನಾನಿಗಳಾದ ಕಿತ್ತೂರುರಾಣಿ ಚನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ಕರ್ಮಭೂಮಿ ಬೆಳಗಾವಿಯು ಕರ್ನಾಟಕದ ಅವಿಭಾಜ್ಯ ಅಂಗವಾಗಿದೆ. ನಮ್ಮ ನೆಲದಲ್ಲಿ ಕೆಲ ನಾಡದ್ರೋಹಿಗಳು, ಸಮಾಜಘಾತುಕ ಶಕ್ತಿಗಳು ಮಹಾರಾಷ್ಟ್ರ ಏಕೀಕರಣ ಸಮಿತಿಯೆಂಬ ಸಂಘಟನೆ ಹೆಸರಿನಲ್ಲಿ ಪದೇ, ಪದೇ ಪುಂಡಾಟಿಕೆ ನಡೆಸುತ್ತಿದೆ. ನ.1ರಂದು ಕರಾಳ ದಿನಾಚರಣೆ ಮೂಲಕ ಕನ್ನಡಿಗರ ವಿರುದ್ಧ ಮರಾಠಿ ಸಮುದಾಯವನ್ನು ಎತ್ತಿ ಕಟ್ಟುವ ಮೂಲಕ ಮತ್ತೆ ಪುಂಡಾಟಿಕೆ ನಡೆಸಲು ಮುಂದಾಗಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

      ಎಂಇಎಸ್ ಬೆಳಗಾವಿಯಲ್ಲಿ ಪದೇ, ಪದೇ ಕ್ಯಾತೆ ತೆಗೆಯುತ್ತಾ, ಕನ್ನಡ-ಮರಾಠಿ ಭಾಷಿಗರ ಮಧ್ಯೆ ಸಾಮರಸ್ಯ ಕದಡುತ್ತಿದೆ. ಉದ್ವಿಗ್ನ ಪರಿಸ್ಥಿತಿ ನಿರ್ಮಿಸುವ ಮೂಲಕ ತನ್ನ ಸ್ವಾರ್ಥ ಸಾಧನೆಗೆ ಮುಂದಾಗಿದೆ. ಉಭಯ ಭಾಷಿಕರ ಮಧ್ಯೆ ಸಂಘರ್ಷ ಹುಟ್ಟು ಹಾಕುವ ಮೂಲಕ ಕನ್ನಡಿಗರ ಸ್ವಾಭಿಮಾನವನ್ನೇ ಕೆರಳಿಸುವ ಕೆಲಸ ಮಾಡುತ್ತಿರುವುದು ಸರಿಯಲ್ಲ. ಎಂಇಎಸ್ ತನ್ನ ಕುಚೇಷ್ಟೆ ಪ್ರದರ್ಶಿಸಲೆಂದೇ ಬೆಳಗಾವಿಯಲ್ಲಿ ಕರಾಳ ದಿನಾಚರಣೆಗೆ ನಡೆರಸಲು ಮುಂದಾಗಿದ್ದು, ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ನೀಡಬಾರದು.

      ರಾಜ್ಯದ್ರೋಹದ ಆರೋಪದ ಮೇಲೆ ಎಂಇಎಸ್ ಕಾರ್ಯಕರ್ತರನ್ನು ತಕ್ಷಣವೇ ಬಂಧಿಸಿ ಮುಂದಾಗುವ ಅನಾಹುತಗಳನ್ನು ತಪ್ಪಿಸಬೇಕು. ಎಂಇಎಸ್ ಅನ್ನು ಭಯೋತ್ಪಾದಕ ಸಂಘಟನೆಯೆಂದು ಪರಿಗಣಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪಾಮೇನಹಳ್ಳಿ ನಾಗರಾಜ, ಗಿರೀಶಕುಮಾರ, ಬಸವರಾಜ, ಪರಮೇಶ, ಮಂಜುನಾಥ, ನಾಗರಾಜ, ಅನಿಲ್, ಗೋಪಿ, ರವಿಕುಮಾರ, ಪ್ರಕೀಶ, ಮಂಜುಳಮ್ಮ, ಬಸಮ್ಮ, ಕಮಲಮ್ಮ, ಶಾಂತಪ್ಪ ಮತ್ತಿತರರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap