ನಗರದ ಕೊಳಚೆ ಪ್ರದೇಶದ ನಿವಾಸಿಗಳಿಗೆ ನಿವೇಶಕ್ಕೆ ಆಗ್ರಹಿಸಿ ಧರಣಿ ಸತ್ಯಾಗ್ರಹ

0
9

ಚಳ್ಳಕೆರೆ

         ನಗರದಲ್ಲಿ ಕಳೆದ ಹಲವಾರು ದಶಕಗಳಿಂದ ಸೂಕ್ತ ಸೂರು ನೆಲೆ ಇಲ್ಲದೆ ಬದುಕುತ್ತಿರುವ ನೂರಾರು ಬಡ ಕುಟುಂಬಗಳ ಕೊಳಗೇರಿ ನಿವಾಸಿಗಳಿಗೆ ಸೂಕ್ತ ನಿವೇಶನ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿ ದಲಿತ ವಿಮೋಚನೆ ಮಾನವ ಹಕ್ಕುಗಳ ವೇದಿಕೆ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಧರಣಿ ಸತ್ಯಾಗ್ರಹ ನಡೆಸಿ ತಹಶೀಲ್ದಾರ್‍ಗೆ ಮನವಿ ನೀಡಲಾಯಿತು.

          ವೇದಿಕೆಯ ಜಿಲ್ಲಾ ಸಂಚಾಲಕ ಭೀಮನಕೆರೆ ಶಿವಮೂರ್ತಿ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ನಗರ ವ್ಯಾಪ್ತಿಯ ಅಂಬೇಡ್ಕರ್, ಜನತಾ ಕಾಲೋನಿ, ಗಾಂಧೀನಗರ, ಮದಕರಿನಗರ ಮುಂತಾದ ಕೊಳಚೆ ಪ್ರದೇಶಗಳಲ್ಲಿ ನೂರಾರು ಕುಟುಂಬಗಳು ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ ಬದುಕುತ್ತಿವೆ. ಈ ಬಗ್ಗೆ ಈಗಾಗಲೇ ಸರ್ಕಾರಕ್ಕೆ ಹಲವಾರು ಬಾರಿ ಪ್ರತಿಭಟನೆ ನಡೆಸಿದ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೊಳಗೆರೆ ನಿವಾಸಿಗಳು ಕಡುಬಡವರಾಗಿದ್ದು, ಪ್ರತಿನಿತ್ಯದ ಜೀವನಕ್ಕೆ ಕಷ್ಟಪಡುತ್ತಿದ್ಧಾರೆ.

           ಇವರಿಗೆ ಕೂಡಲೇ ಸರ್ಕಾರ ಉಚಿತವಾಗಿ ಸೂಕ್ತ ನಿವೇಶನವನ್ನು ನೀಡಬೇಕು. ಪ್ರಸ್ತುತ ನಗರದ ಬಳ್ಳಾರಿ ರಸ್ತೆಯ ನೂತನ ಲಿಡ್ಕರ್ ಸಂಸ್ಥೆ ಖ್ಯಾತಿಯ ರಿ. ಸರ್ವೆ ನಂ. 102ರಲ್ಲಿ 5 ಎಕರೆ ಪ್ರದೇಶವನ್ನು ಕೊಳಗೇರಿ ನಿವಾಸಿಗಳಿಗೆ ನಿವೇಶನ ನೀಡಲು ಮೀಸಲಿಡಬೇಕು. ಇತ್ತೀಚೆಗೆ ನಗರಸಭೆ ಜಿ+3 ನಿವೇಶನಗಳಲ್ಲಿ ವಸತಿ ನಿರ್ಮಿಸಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಕ್ಕೆ 1.70 ಲಕ್ಷ, ಸಾಮಾನ್ಯರಿಗೆ 2.30 ಲಕ್ಷ ವಿಧಿಸಿದ್ದು, ಇದು ಆರ್ಥಿಕವಾಗಿ ಕಡುಬಡವರಿಗೆ ಸಾಧ್ಯವಾಗುವುದಿಲ್ಲ. ಅದ್ದರಿಂದ ಕೂಡಲೇ ನಿವೇಶನ ನೀಡಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹ ಪಡಿಸಿದ್ಧಾರೆ.

         ಮನವಿ ಸ್ವೀಕರಿಸಿದ ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ ಕೊಳಗೆರೆ ನಿವಾಸಿಗಳಿಗೆ ನಿವೇಶನ ನೀಡುವ ಕುರಿತು ನೀಡಿರುವ ಮನವಿಯನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಡುವ ಭರವಸೆ ನೀಡಿದರು. ಧರಣಿ ಸತ್ಯಾಗ್ರಹದಲ್ಲಿ ತಾಲ್ಲೂಕು ಸಂಚಾಲಕ ಬಿ.ಒ.ತಿರುಮಲೇಶ್, ಜಿಲ್ಲಾ ಸಂಚಾಲಕ ಎನ್.ಪ್ರಕಾಶ್, ಮಹಿಳಾ ಸಂಚಾಲಕಿ ಪಿ.ರೇಣುಕಮ್ಮ, ವಿ.ಜಯಣ್ಣ, ಸಿ.ಕೆ.ಪಾಪಕ್ಕ, ಟಿ.ರಾಮಣ್ಣ, ಸಿ.ದುರುಗಪ್ಪ, ಗೌರಮ್ಮ, ಎಲ್.ತಿಮ್ಮಕ್ಕ, ಟಿ.ಚಳ್ಳಕೆರ್ವ, ಟಿ.ಕಣುಮೇಶ್, ವೈ.ರವಿಕುಮಾರ್ ಮುಂತಾದವರು ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here