ಬಹಿರಂಗ ಟಿಪ್ಪು ಜಯಂತಿ ನಡೆದರೆ ಪ್ರತಿಭಟನೆ

0
11

ದಾವಣಗೆರೆ:

     ಟಿಪ್ಪು ಜಯಂತಿಯ ಹೆಸರಿನಲ್ಲಿ ಬಹಿರಂಗ ಸಭೆ, ಬೈಕ್ ರ್ಯಾಲಿ ಆಯೋಜಿಸಿದರೆ, ಬಿಜೆಪಿ ವತಿಯಿಂದ ಪರ್ಯಾಯ ರ್ಯಾಲಿ, ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್ ಎಚ್ಚರಿಸಿದ್ದಾರೆ.

     ಟಿಪ್ಪು ಜಯಂತಿ ವಿರೋಧಿಸಿ ಶುಕ್ರವಾರ ನಗರದ ಬಿಜೆಪಿ ಕಾರ್ಯಾಲಯದಿಂದ ಪ್ರತಿಭಟನಾ ರ್ಯಾಲಿ ಹೊರಟ ಕಾರ್ಯಕರ್ತರು, ನಗರದ ಪಿಬಿ ರಸ್ತೆಯಲ್ಲಿ ಟಿಪ್ಪು ಸುಲ್ತಾನ್ ಅವರ ಭಾವಚಿತ್ರ ಇರುವ ಫ್ಲೆಕ್ಸ್ ದಹಿಸಿ, ಆಕ್ರೋಶ ವ್ಯಕ್ತಪಡಿಸಿ, ಎಸಿ ಕಚೇರಿಗೆ ತೆರಳಿ ನಡೆಸಿದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು

     ರಾಜ್ಯ ಸರ್ಕಾರ ಒಳ ಸಭಾಂಗಣದಲ್ಲಿ ಟಿಪ್ಪು ಜಯಂತಿ ಆಚರಿಸಲು ಅನುಮತಿ ನೀಡಿದೆ. ಆದರೂ, ದಾವಣಗೆರೆಯಲ್ಲಿ ಟಿಪ್ಪು ಜಯಂತಿ ಪ್ರಯುಕ್ತ ಬೈಕ್ ರ್ಯಾಲಿ, ಬಹಿರಂಗ ಸಭೆ ನಡೆಸಲು ಅನುಮತಿ ನೀಡಿರುವುದು ಅತ್ಯಂತ ಖಂಡನೀಯವಾಗಿದೆ. ಈ ಬಹಿರಂಗ ಸಭೆ, ಬೈಕ್ ರ್ಯಾಲಿಯನ್ನು ರದ್ದು ಪಡಿಸದಿದ್ದರೆ, ಬಿಜೆಪಿಯಿಂದ ಪರ್ಯಾಯ ಪ್ರತಿಭಟನಾ ರ್ಯಾಲಿ ನಡೆಸಲಾಗುವುದು ಎಂದು ಪುನರ್ ಎಚ್ಚರಿಸಿದರು. 

      ರಾಜ್ಯ ಸರ್ಕಾರ ವೋಟ್ ಬ್ಯಾಂಕ್‍ಗಾಗಿ ಮತಾಂಧ ಟಿಪ್ಪು ಜಯಂತಿ ಆಚರಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ಎಂದು ಪ್ರಶ್ನಿಸಿದ ಜಾಧವ್, ತಕ್ಷಣವೇ ರಾಜ್ಯ ಸರ್ಕಾರ ಈ ಟಿಪ್ಪು ಜಯಂತಿಯನ್ನು ರದ್ದುಗೊಳಿಸಬೇಕು. ಅಲ್ಪಸಂಖ್ಯಾತರ ಹೆಸರಿನಲ್ಲಿ ಜಯಂತಿ ಮಾಡುವುದಾದರೆ, ರಾಷ್ಟ್ರ ನಾಯಕ ಅಬ್ದುಲ್ ಕಲಾಂ ಅವರ ಜಯಂತಿ ಆಚರಿಸಬೇಕೆಂದು ಆಗ್ರಹಿಸಿದರು.

      ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಹೆಚ್.ಎನ್.ಶಿವಕುಮಾರ್ ಮಾತನಾಡಿ, ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಿಸುವ ಮೂಲಕ ಹಿಂದೂಗಳ ಭಾವನೆಗಳನ್ನು ಕೆರಳಿಸುವ ಪ್ರಯತ್ನ ಮಾಡುತ್ತಿದೆ. ಮತಾಂಧನಾಗಿದ್ದ ಟಿಪ್ಪು ಸುಲ್ತಾನ್ ಕೊಡಗಿನಲ್ಲಿ ಹಿಂದೂಗಳ ಮಾರಣ ಹೋಮ ನಡೆಸಿರುವ ಬಗ್ಗೆ ಐತಿಹ್ಯಗಳಿವೆ. ಅಲ್ಲದೆ, ಕನ್ನಡ ವಿರೋಧಿಯಾಗಿದ್ದ ಟಿಪ್ಪು ಆಡಲಿತದಲ್ಲಿ ಪರ್ಷಿಯನ್ ಭಾಷೆಯನ್ನು ಜಾರಿಗೆ ತರುವ ಮೂಲಕ ಕನ್ನಡ ಭಾಷೆಯನ್ನು ಕಡೆಗಣಿಸಿದ್ದ. ಚಿತ್ರದುರ್ಗದ ಮದಕರಿ ನಾಯಕನನ್ನು ಮೋಸದಿಂದ ಕೊಲ್ಲಿಸಿದ್ದರು ಎಂದು ಆರೋಪಿಸಿದರು.
ಬಿಜೆಪಿ ಮುಖಂಡ ಕೆ.ಎನ್.ಓಂಕಾರಪ್ಪ ಮಾತನಾಡಿ, ಟಿಪ್ಪು ಸುಲ್ತಾನ್ ಆತನ ಹಾಗೂ ಆತನ ಮಕ್ಕಳ ಹಿತಾಸಕ್ತಿಗಾಗಿ ಬ್ರಿಟೀಷರ ವಿರುದ್ಧ ಹೋರಾಟ ನಡೆಸಿದ್ದರೇ ಹೊರತು, ಹಿಂದೂಸ್ಥಾನಕ್ಕಾಗಿ ಅಲ್ಲ್ಲ.

      ಟಿಪ್ಪು ಆಡಳಿತದಲ್ಲಿ ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯಗಳು ನಡೆಯುತ್ತಿದ್ದವು. ಇಂತಹ ಸಮಾಜಘಾತುಕ ಟಿಪ್ಪು ಜಯಂತಿಯನ್ನು ಆಚರಿಸುವ ಮೂಲಕ ರಾಜ್ಯ ಸರ್ಕಾರ ಹಿಂದೂ ಸಮಾಜಕ್ಕೆ ದ್ರೋಹ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಮುಖಂಡ ಬಿ.ಎಂ.ಸತೀಶ್ ಮಾತನಾಡಿ, ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕನ್ನಡ ವಿರೋಧಿ ಟಿಪ್ಪು ಸುಲ್ತಾನ್ ಜನ್ಮ ದಿನ ಆಚರಿಸುತ್ತಿರುವುದು ಅತ್ಯಂತ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

      ತಕ್ಷಣವೇ ರಾಜ್ಯ ಸರ್ಕಾರ ಟಿಪ್ಪು ಜಯಂತಿಯನ್ನು ರದ್ದುಗೊಳಿಸಬೇಕು. ಇಲ್ಲದಿದ್ದರೆ, ಬಿಜೆಪಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಲಿದೆ ಎಂದು ಪ್ರತಿಭಟನಾನಿರತರು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಶಾಸಕ ಎಸ್.ಎ.ರವೀಂದ್ರನಾಥ್, ಜಿಲ್ಲಾ ಬಿಜೆಪಿ ಕಾರ್ಯದರ್ಶಿಗಳಾದ ಹೆಚ್.ಎನ್.ಶಿವಕುಮಾರ್, ಎನ್.ರಾಜಶೇಖರ್, ಬಿ.ರಮೇಶ ನಾಯ್ಕ, ಬಿಜೆಪಿ ದಕ್ಷಿಣ ಕ್ಷೇತ್ರದ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಉತ್ತರ ಕ್ಷೇತ್ರದ ಅಧ್ಯಕ್ಷ ಟಿ.ಮುಕುಂದಪ್ಪ, ಮುಖಂಡರಾದ ಪ್ರಭು ಕಲ್ಬುರ್ಗಿ, ಶಿವರಾಜ ಪಾಟೀಲ್, ಲಕ್ಷ್ಮಣ್ ನಿಟ್ಟುವಳ್ಳಿ, ಎ.ವೈ.ಪ್ರಕಾಶ್, ದೇವಿರಮ್ಮ ರಾಮಚಂದ್ರಪ್ಪ, ಚೇತುಬಾಯಿ ಕುಮಾರ್, ಸಹನಾ ರವಿ, ಟಿಂಕರ್ ಮಂಜಣ್ಣ, ತರಕಾರಿ ಶಿವು, ಶಿವರಾಜ್ ಪಾಟೀಲ್, ಶಿವನಗೌಡ ಪಾಟೀಲ್, ಗೌತಮ್ ಜೈನ್, ಸೋಗಿ ಶಾಂತಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here