ಸಂಪರ್ಕ ಕಛೇರಿಯನ್ನು ಉದ್ಘಾಟನೆ

ತುರುವೇಕೆರೆ:

        ಜನವರಿ 30 ಮತ್ತು 31 ರಂದು ಪಟ್ಟಣದಲ್ಲಿ ನಡೆಯಲಿರುವ ನಾಲ್ಕನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ವಿಜೃಂಭಣೆಯಿಂದ ನಡೆಸುವ ಸಲುವಾಗಿ ಈಗಗಲೇ ಭರದ ಸಿದ್ಧತೆ ಪ್ರಾರಂಭವಾಗಿದೆ ಎಂದು ಸಮ್ಮೇಳನದ ಮುಖ್ಯ ಸಂಚಾಲಕ ಕೊಂಡಜ್ಜಿ ವಿಶ್ವನಾಥ್ ತಿಳಿಸಿದರು.

        ಸಮ್ಮೇಳನದ ಪೂರ್ವಬಾವಿಯಾಗಿ ಪ್ರಾರಂಭಿಸಲಾದ ಸಂಪರ್ಕ ಕಛೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಕನ್ನಡ ನಾಡಿಗೆ ಸೇವೆ ಸಲ್ಲಿಸಿರುವ ತಾಲೂಕಿನ ಹಲವಾರು ಗಣ್ಯರನ್ನು ಈ ಸಮ್ಮೇಳನಕ್ಕೆ ಈಗಾಗಲೇ ಆಹ್ವಾನಿಸಲಾಗಿದೆ. ತಾಲೂಕಿನ ಹಲವಾರು ಮಂದಿ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿರುವವರನ್ನೂ ಸಹ ಸಮ್ಮೇಳನಕ್ಕೆ ಆಹ್ವಾನಿಸಲಾಗಿದೆ. ಇನ್ನು ಐದಾರು ದಿನಗಳಲ್ಲಿ ಸಮ್ಮೇಳನದಲ್ಲಿ ಭಾಗವಹಿಸುವವರ ಹೆಸರು ಸಂಪೂರ್ಣಗೊಳ್ಳಲಿದೆ ಎಂದು ಕೊಂಡಜ್ಜಿ ವಿಶ್ವನಾಥ್ ಹೇಳಿದರು.

         ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಸಿ.ವಿ.ಮಹಲಿಂಗಯ್ಯ ಮಾತನಾಡಿ ತಮ್ಮ ತಾಲೂಕಿನಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬಹಳ ಅದ್ದೂರಿಯಾಗಿ ನಡೆಸಲು ಯೋಚಿಸಲಾಗಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷೆ ಬಾ.ಹ.ರಮಾಕುಮಾರಿ ನಮ್ಮ ತಾಲೂಕಿನ ಮಗಳಾಗಿರುವುದು ಹೆಮ್ಮೆಯ ಸಂಗತಿ ಎಂದರು. ಸಮ್ಮೇಳನಕ್ಕೆ ಆಗಮಿಸುವ ಕನ್ನಡಾಭಿಮಾನಿಗಳಿಗೆ ಜಿಲ್ಲಾ ಹಾಲು ಒಕ್ಕೂಟದಿಂದ ಮಜ್ಜಿಗೆಯನ್ನು ನೀಡುವ ಭರವಸೆ ನೀಡಿದರು.

          ಶಾಸಕರ ಅಧ್ಯಕ್ಷತೆಯಲ್ಲಿ ಎರಡು ದಿನ ನಡೆಯುವ ಕಾರ್ಯಕ್ರಮದಲ್ಲಿ ಸಾಧಕರನ್ನು, ಗಣ್ಯರನ್ನು ಸನ್ಮಾನಿಸುವುದು, ಹಲವಾರು ಸಾಹಿತ್ಯ ಗೋಷ್ಟಿಗಳನ್ನು ನಡೆಸುವುದು ಹಾಗೂ ಸಮ್ಮೇಳನದ ಅಂಗವಾಗಿ ಸ್ಮರಣ ಸಂಚಿಕೆಯನ್ನು ಹೊರತರಲಿದ್ದು ಕಥೆ, ಕವನ ಹಾಗು ಜಾಹಿರಾತುಗಳನ್ನು ಈಗಾಗಲೆ ಸಾರ್ವಜನಿಕರಿಂದ ಆಹ್ವಾನಿಸಲಾಗಿದೆ ಎಂದು ಕಸಾಪ ಗೌರವಾಧ್ಯಕ್ಷ ಪ್ರೊ.ಪುಟ್ಟರಂಗಪ್ಪ ತಿಳಿಸಿದರು.
ಪ್ರಚಾರ ಸಮಿತಿಯ ಅಧ್ಯಕ್ಷ ಮಂಗೀಕುಪ್ಪೆ ಗಂಗಣ್ಣ ಮಾತನಾಡಿ ತಾಲೂಕಿನಾದ್ಯಂತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರ ಮಾಡಲು ಹಾಗೂ ಅಕ್ಕ ಪಕ್ಕದ ತಾಲೂಕಿನಿಂದಲೂ ಸಾಹಿತ್ಯಾಸಕ್ತರ ಆಹ್ವಾನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದರು.

           ಈ ಸಂಧರ್ಭದಲ್ಲಿ ಜಿಲ್ಲಾ ಹಾಲು ಒಕ್ಕೂಟದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಿ.ವಿ.ಮಹಲಿಂಗಯ್ಯನವರನ್ನು ಅಭಿನಂದಿಸಲಾಯಿತು.

          ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ನಂ.ರಾಜು, ಕಾರ್ಯದರ್ಶಿ ಚಂದ್ರಯ್ಯ, ನಿಕಟಪೂರ್ವ ಅಧ್ಯಕ್ಷ ಸಾ.ಶಿ.ದೇವರಾಜು, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಎಸ್.ದೇವರಾಜು, ಪ್ರಹ್ಲಾದ್, ಶಿಕ್ಷಕರಾದ ತಾತಯ್ಯ, ಬಾಣಸಂದ್ರ ಹೋಬಳಿ ಘಟಕ ಅಧ್ಯಕ್ಷ ಬುಗುಡನಹಳ್ಳಿ ಕೃಷ್ಣಮೂರ್ತಿ, ಕಾವಲು ಸಮಿತಿ ಅಧ್ಯಕ್ಷ ವೆಂಕಟೇಶ್, ಲಿಂಗರಾಜು, ಪ್ರೊ. ಗಂಗಾದರ್ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.

 

Recent Articles

spot_img

Related Stories

Share via
Copy link
Powered by Social Snap