ಕೋಟೆ ರಸ್ತೆಯಲ್ಲಿ ಮಾರ್ಗಸೂಚಿ ಅಳವಡಿಸಿ

0
11

ಚಿತ್ರದುರ್ಗ;

        ಚಿತ್ರದುರ್ಗ ನಗರದ ಐತಿಹಾಸಿಕ ಏಳುಸುತ್ತಿನ ಕೋಟೆಯನ್ನು ವೀಕ್ಷಣೆ ಮಾಡಲು ವಿವಿಧಡೆಗಳಿಂದ ನಿತ್ಯವೂ ಸಾವಿರಾರು ಮಂದಿ ಆಗಮಿಸುತ್ತಿದ್ದು,ಪ್ರವಾಸಿಗರ ಅನುಕೂಲಕ್ಕಾಗಿ ಕೋಟೆ ರಸ್ತೆಯಲ್ಲಿ ಮಾರ್ಗಸೂಚಿ ನಾಮಫಲಕಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಯುಕ್ತ ಸಂಘಟನೆಯ ಗಣೇಶ್ ಜಿಲ್ಲಾ ಉಸ್ತುವಾರಿ ಸಚಿವರನ್ನು ಒತ್ತಾಯಿಸಿದ್ದಾರೆ.

         ರಾಜ್ಯ ಮಾತ್ರವಲ್ಲದೆ ವಿದೇಶಗಳಿಂದಲೂ ಪ್ರತಿದಿನ ನೂರಾರು, ಸಾವಿರಾರು ಜನರು ವೀಕ್ಷಣೆ ಮಾಡಲು ಆಗಮಿಸುತ್ತಿದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ಕೋಟೆಗೆ ಹೋಗುವ ಮಾರ್ಗಸೂಚಿ ನಾಮಫಲಕಗಳನ್ನು ಹಾಕುವ ಮೂಲಕ ಕೋಟೆ ಮುಂಭಾಗದಲ್ಲಿ ಮೂಲಭೂತ ನಾಗರೀಕ ಸೌಲಭ್ಯಗಳನ್ನು ಪ್ರವಾಸಿಗರಿಗೆ ವ್ಯವಸ್ಥೆ ಮಾಡಲು ಚಿತ್ರದುರ್ಗ ಜಿಲ್ಲಾಧಿಕಾರಿಗಳಿಗೆ ಹಾಗೂ ಸಂಬಂದಪಟ್ಟ ಇಲಾಖಾಧಿಕಾರಿಗಳಿಗೆ ಈ ಕೂಡಲೇ ಸೂಕ್ತ ಆದೇಶ ನೀಡಬೇಕು ಎಂದು ಸಚಿವರಿಗೆ ಮನವಿ ಪತ್ರ ಸಲ್ಲಿಸಿ ಅವರು ಒತ್ತಾಯಿಸಿದರು

        ಚಿತ್ರದುರ್ಗ ನಗರ ಜಿಲ್ಲಾ ಕೇಂದ್ರವಾಗಿರುವುದರಿಂದ ಈ ನಗರ ದಿನೆ ದಿನೆ ಬೆಳೆಯುತ್ತಿದ್ದು ಜನಸಂಖ್ಯೆಗೆ ತಕ್ಕಂತೆ ಜಿಲ್ಲಾ ಆಸ್ಪತ್ರೆಯನ್ನು “ಎ” ಗ್ರೇಡ್‍ಗೆ ಏರಿಸಿ ಎಲ್ಲಾ ಹೈಟೆಕ್ ಸೌಲಭ್ಯಗಳನ್ನು ನೀಡುವುದು. ಚಿತ್ರದುರ್ಗ ನಗರಸಭೆ ವ್ಯಾಪ್ತಿಯ 35 ವಾರ್ಡಿನ ವ್ಯಾಪ್ತಿಯಲ್ಲಿ ಪ್ರತಿ ವಾರ್ಡಿನ ಚೆಕ್‍ಬಂಧಿ ಪ್ರಕಾರ ನಾಲ್ಕು ದಿಕ್ಕುಗಳಲ್ಲಿ ವಾರ್ಡಿನ ಹೆಸರು, ವಾರ್ಡಿನ ಸಂಖ್ಯೆ, ಆ ವಾರ್ಡಿನ ಸದಸ್ಯರ ಹೆಸರು, ಜನಸಂಖ್ಯೆ ಉಳ್ಳ ಮಾಹಿತಿ ಫಲಕಗಳನ್ನು ಈ ಕೂಡಲೇ ಅಳವಡಿಸಲು ಸಂಬಂದಪಟ್ಟ ನಗರಸಭೆ ಪೌರಾಯುಕ್ತರಿಗೆ, ಜಿಲ್ಲಾ ನಗರಾಭಿವೃದ್ಧಿ ಕೋಶ ಇಲಾಖಾ ಅಧಿಕಾರಿಗಳಿಗೆ, ಜಿಲ್ಲಾಡಳಿತಕ್ಕೆ ಸೂಕ್ತ ಆದೇಶ ನೀಡಬೇಕು ಎಂದು ಅವರು ಮನವಿ ಪತ್ರದಲ್ಲಿ ಕೋರಿದ್ದಾರೆ.

       ಅದೇ ರೀತಿ ಚಿತ್ರದುರ್ಗ ನಗರದಲ್ಲಿ ಬಿ.ಡಿ.ರಸ್ತೆ ಮತ್ತು ಇತರೆ ಪ್ರಮುಖ ರಸ್ತೆಗಳ ಅಗಲೀಕರಣ ಮಾಡುವುದು ಹಾಗೂ ಹದಗೆಟ್ಟಿರುವ ಎಲ್ಲಾ ರಸ್ತೆಗಳನ್ನು ಈ ಕೂಡಲೇ ಸಿ.ಸಿ.ರಸ್ತೆ ಅಥವಾ ಡಾಂಬರೀಕರಣ ರಸ್ತೆ ಮಾಡಲು ಆದೇಶ ನೀಡಬೇಕು. ಅದೇ ರೀತಿಯಾಗಿ ರಾಷ್ಟ್ರೀಯ ಹೆದ್ದಾರಿ, ರಾಜ್ಯಹೆದ್ದಾರಿ ರಸ್ತೆಗಳ ಎರಡು ಬದಿಗಳಲ್ಲಿ ಮೇಲ್ಸುತುವೆ ಹಾಗೂ ಕೆಳಸೇತುವೆ ಸ್ಥಳಗಳಲ್ಲಿ ಬೀದಿ ದೀಪಗಳನ್ನು ಅಳವಡಿಸಬೇಕು.

        ಸರ್ಕಾರಿ ಮತ್ತು ಖಾಸಗಿ ಕಛೇರಿ ಮತ್ತು ವ್ಯವಹಾರ ಮಾಡುವ ಅಂಗಡಿ, ಹೈಟೆಕ್ ಮತ್ತು ರೆಸಿಡೆನ್ಸಿ ಹೋಟೆಲ್‍ಗಳ, ಕಾಂಪ್ಲೆಕ್ಸ್‍ಗಳ, ಅಪಾರ್ಟ್‍ಮೆಂಟ್‍ಗಳ ಮಳಿಗೆಗಳಲ್ಲಿ ಯಾವುದೇ ರೀತಿ ಜನರ ಮಾಹಿತಿಗಾಗಿ ಹಾಕಿರುವ ಹೆಸರುಗಳ ನಾಮಫಲಕಗಳಲ್ಲಿ ಪ್ರಥಮ ಆದ್ಯತೆಯಾಗಿ ಕನ್ನಡ ಭಾಷೆಯಲ್ಲಿ ದಪ್ಪ ಅಕ್ಷರಗಳಲ್ಲಿ ಎಲ್ಲರಿಗೂ ಎದ್ದು ಕಾಣುವ ರೀತಿ ನಾಮಫಲಕಗಳನ್ನು ಹಾಕಲು ಈ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸೂಚನೆ ಅಥವಾ ಸೂಕ್ತ ಆದೇಶವನ್ನು ಜಿಲ್ಲಾಡಳಿತಕ್ಕೆ ನೀಡುವಂತೆಯೂ ಅವರು ಮನವಿ ಮಾಡಿದ್ದಾರೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

LEAVE A REPLY

Please enter your comment!
Please enter your name here