‘ಮೌಲ್ಯಶಿಕ್ಷಣ ಇಂದಿನ ಅನಿವಾರ್ಯತೆ’

ತುಮಕೂರು:

       ಶಿಕ್ಷಣದ ಮೂಲಕ ಭವಿಷ್ಯದ ತಲೆಮಾರಿಗೆ ಮೌಲ್ಯಗಳನ್ನು ವರ್ಗಾಯಿಸುವುದು ಇಂದಿನ ಅನಿವಾರ್ಯತೆ. ಆ ಮೂಲಕ ಯುವಜನತೆ ರಾಷ್ಟ್ರಕಟ್ಟುವ ಕೆಲಸದಲ್ಲಿ ತೊಡಗುವಂತಾಗಬೇಕು ಎಂದು ಶಿಕ್ಷಣ ಚಿಂತಕ ಹಾಗೂ ಹಿರಿಯಯೋಗಪಟು ಎಂ.ಕೆ.ನಾಗರಾಜರಾವ್ ತಿಳಿಸಿದರು.

         ಸ್ವಾತಂತ್ರ್ಯ ಹೋರಾಟಗಾರ ಮೌಲಾನಾಅಬುಲ್ ಕಲಾಂ ಆಜಾದ್ ಅವರಜನ್ಮ ದಿನದ ಹಿನ್ನೆಲೆಯಲ್ಲಿ ತುಮಕೂರು ವಿಶ್ವವಿದ್ಯಾನಿಲಯ ಭಾನುವಾರ ಆಯೋಜಿಸಿದ್ದ ‘ರಾಷ್ಟ್ರೀಯ ಶಿಕ್ಷಣ ದಿನಾಚರಣೆ’ಯಲ್ಲಿ ಅವರು ಮಾತನಾಡಿದರು.

          ಆಧುನಿಕ ಸಮಾಜವನ್ನು ನೋಡಿದಾಗ ನಮ್ಮ ಶಿಕ್ಷಣ ನಿಜಕ್ಕೂಜನತೆಯನ್ನು ಸುಶಿಕ್ಷಿತರನ್ನಾಗಿ ಮಾಡುತ್ತಿದೆಯೇ ಎಂಬ ಅನುಮಾನ ಮೂಡುತ್ತದೆ. ಶಿಕ್ಷಣದಲ್ಲಿ ಮೌಲ್ಯಗಳ ಕೊರತೆಯೇಇದಕ್ಕೆಕಾರಣ. ಶಿಕ್ಷಣದಲ್ಲಿ ಮೌಲ್ಯಗಳನ್ನು ಬಿಂಬಿಸುವ ಕಾರ್ಯ ಪ್ರಾಥಮಿಕ ಶಾಲಾ ಹಂತದಿಂದಲೇ ಆರಂಭವಾಗಬೇಕು ಎಂದರು.

         ಶಿಕ್ಷಣದ ಸುಧಾರಣೆಗೆ ಸಾಕಷ್ಟು ಆಯೋಗಗಳು ಬಂದಿವೆ. ಅವು ಒಳ್ಳೆಯ ವರದಿಗಳನ್ನೂ ನೀಡಿವೆ. ಆದರೆ ಯಾವ ಆಯೋಗದ ವರದಿಯೂ ಸಂಪೂರ್ಣವಾಗಿ ಜಾರಿಯಾಗಿಲ್ಲ. ಹೊಸ ಸರ್ಕಾರ ಬಂದಕೂಡಲೇ ಹೊಸದೊಂದು ಆಯೋಗವನ್ನು ರಚಿಸುವ ಚಾಳಿಯಿಂದಾಗಿ ನಮ್ಮ ಶಿಕ್ಷಣದ ಇತಿಹಾಸದಲ್ಲಿ ಬರೀ ವರದಿಗಳೇ ತುಂಬಿಕೊಂಡಿವೆ ಎಂದು ವಿಷಾದಿಸಿದರು.

          ಭಾರತೀಯ ಶಿಕ್ಷಣ ಪದ್ಧತಿಗೆತನ್ನದೇ ಸ್ಥಾನಮಾನವಿದೆ. ಆದರೆ ಬ್ರಿಟಿಷರು ಗುಮಾಸ್ತರನ್ನು ತಯಾರಿಸುವ ಶಿಕ್ಷಣ ಪದ್ಧತಿಯನ್ನು ಭಾರತದಲ್ಲಿ ಜಾರಿಗೆತಂದರು. ಭಾರತೀಯ ಶಿಕ್ಷಣ ಪದ್ಧತಿಯ ಶ್ರೇಷ್ಠ ಅಂಶಗಳ ಬಗ್ಗೆ ನಾವು ಮರುಚಿಂತನೆ ನಡೆಸುವ ಅಗತ್ಯವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ವೈ.ಎಸ್. ಸಿದ್ದೇಗೌಡ ಮಾತನಾಡಿ, ಇಚ್ಛಾಶಕ್ತಿಯ ಕೊರತೆ ಯಾವುದೇ ಕ್ಷೇತ್ರದ ಪ್ರಗತಿಗೆ ಬಹುದೊಡ್ಡ ತೊಡಕು ಎಂದರು.

         ನೈತಿಕ ನಾಯಕತ್ವವುಳ್ಳ ಸೃಜನಶೀಲ ಮನಸ್ಸು ಇಂದಿನ ಅವಶ್ಯಕತೆಯಾಗಿದೆ. ನಾಯಕರಲ್ಲಿ ಸಂಪೂರ್ಣ ವಿಶ್ವಾಸವಿರಿಸಿ ಅವರನ್ನು ಹಿಂಬಾಲಿಸುವ ಪರಿಸ್ಥಿತಿ ಈಗ ಇಲ್ಲ. ಒಂದೆಡೆಜನರು ನಂಬುವ ನಾಯಕರಿಲ್ಲ, ಇನ್ನೊಂದೆಡೆ ಜನರೂ ತಮ್ಮ ನಾಯರಕನ್ನು ಎಚ್ಚರದಿಂದ ಗಮನಿಸುತ್ತಿದ್ದಾರೆ ಎಂದರು.

         ಮೌಲಾನಾಅವರು ಗಾಂಧೀಜಿಯವರ ಅಪ್ಪಟ ಅನುಯಾಯಿಯಾಗಿದ್ದರು. ಸುಭಾಸ್‍ಅವರ ಹೋರಾಟದ ಬಗೆಗೂ ಗೌರವ ಹೊಂದಿದ್ದರು. ಅವರಿಗೆ ತಮ್ಮ ಚಿಂತನೆಗಳ ಬಗ್ಗೆ ಸ್ಪಷ್ಟತೆಯಿತ್ತು. ಶಿಕ್ಷಣ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ ಎಂದರು.

         ತುಮಕೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶಕ ಪ್ರೊ.ಎಂ.ಕೊಟ್ರೇಶ್ ಸ್ವಾಗತಿಸಿದರು. ಪ್ರಭಾರ ಕುಲಸಚಿವ ಪ್ರೊ.ಪಾಟೀಲ್ ಮಲ್ಲಿಕಾರ್ಜುನ ವಂದಿಸಿದರು. ಸಹಾಯಕ ಪ್ರಾಧ್ಯಾಪಕಿ ಎಂ.ಮಂಗಳಾಗೌರಿ ಪ್ರಾರ್ಥಿಸಿದರು. ಉಪಕುಲಸಚಿವ ಡಾ.ಡಿ. ಸುರೇಶ್ ನಿರೂಪಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap