ರಘು ಆಚಾರ್ ಸದಸ್ಯತ್ವ ಅನರ್ಹಗೊಳಿಸಲು ಆಗ್ರಹ

0
9

ದಾವಣಗೆರೆ

        ಸಾಣೇಹಳ್ಳಿ ಶಾಖಾ ಮಠದ ಶ್ರೀಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ ಬಗ್ಗೆ ಹಗುರವಾಗಿ ಮಾತನಾಡಿರುವ, ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಸದಸ್ಯತ್ವವನ್ನು ಅಧಿವೇಶನದ ಒಳಗಾಗಿ ಅನರ್ಹಗೊಳಿಸಿದಿದ್ದರೆ, ನಮ್ಮ ನಡೆ, ಸುವರ್ಣಸೌಧದ ಕಡೆ ಇರಲಿದೆ ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀಬಸವ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಸಿದ್ದಾರೆ.
ಸಾಣೇಹಳ್ಳಿ ಶ್ರೀಗಳ ಬಗ್ಗೆ ಹಗುರವಾಗಿ ಮಾತನಾಡಿರುವ ವಿಧಾನ ಪರಿಷತ್ ಸದಸ್ಯ ರಘು ಆಚಾರ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಸಮಸ್ತ ಭಕ್ತ ಮಂಡಳಿಯಿಂದ ನಗರದ ಗಾಂಧಿ ವೃತ್ತದಲ್ಲಿ ಬುಧವಾರ ಏರ್ಪಡಿಸಿದ್ದ ಪ್ರತಿಭಟನಾ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.

          ನಾಡಿನ ಧಾರ್ಮಿಕ ಅಸ್ಮಿತೆಯ ಭಾಗವಾಗಿರುವ ಹಾಗೂ ರಂಗಭೂಮಿಯ ಮೂಲಕ ಸಮಾಜದ ಅಂಕುಡೊಂಕು ತಿದ್ದಲು ಶ್ರಮಿಸುತ್ತಿರುವ ಸಾಣೇಹಳ್ಳಿಯ ಶ್ರೀಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ ಬಗ್ಗೆ, ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಉದ್ಧಟತನದ ಹೇಳಿಕೆ ನೀಡಿರುವುದು ಇಡೀ ಪ್ರಜ್ಞಾವಂತ ಸಮಾಜಕ್ಕೆ ನೋವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

         ಸಿರಿಗೆರೆ ತರಳಬಾಳು ಮಠ ಹಾಗೂ ಸಾಣೇಹಳ್ಳಿ ಶಾಖಾ ಮಠಕ್ಕೆ ಬಹು ದೊಡ್ಡ ಪರಂಪರೆ ಇದೆ. ರಾಜಕೀಯ, ಸಾಮಾಜಿಕ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ಅನ್ಯಾಯ ನಡೆದರೂ ಅದನ್ನು ಎದೆಗಾರಿಕೆಯಿಂದ ಪ್ರತಿಭಟಿಸುವ ಶಕ್ತಿ ತರಳಬಾಳು ಮಠಕ್ಕಿದೆ. ಸಾಣೇಹಳ್ಳಿ ಶ್ರೀಗಳು ಇಡೀ ರಾಜಕೀಯ ವ್ಯವಸ್ಥೆಯ ಬಗ್ಗೆ ಮಾತನಾಡಿದ್ದು, ಇದನ್ನು ಅರ್ಥ ಮಾಡಿಕೊಳ್ಳುವ ವ್ಯವಧಾನವೂ ಇಲ್ಲದ ರಘು ಆಚಾರ್ ಅವಿವೇಕದಿಂದ ಮಾತನಾಡಿರುವುದು ಇಡೀ ಕಾವಿ ಪರಂಪರೆಗೆ ಮಾಡಿರುವ ಅಪಮಾನವಾಗಿದೆ ಎಂದು ಕಿಡಿಕಾರಿದರು.

           ಹಿಂದೆ ಶ್ರೀಮಠದ ಬಗ್ಗೆ ಅನೇಕ ರಾಜಕಾರಣಿಗಳು ಇಲ್ಲಸಲ್ಲದನ್ನು ಮಾತನಾಡಿ, ಎಂತಹ ಪಶ್ಚಾತಾಪ ಪಡುತ್ತಿದ್ದಾರೆ ಎಂಬುದನ್ನು ಮೊದಲು ಆಚಾರ್ ಅರಿಯಬೇಕು. ಸಾಣೇಹಳ್ಳಿ ಶ್ರೀಗಳ ಬಗ್ಗೆ ಹಗುರವಾಗಿ ಮಾತನಾಡಿರುವ ರಘು ಆಚಾರ್ ಮೇಲೆ ಇಡೀ ಲಿಂಗಾಯತ ಸಮಾಜ ಹದ್ದಿನ ಕಣ್ಣು ಇಟ್ಟಿದೆ. ಈತನ ವಿರುದ್ಧ ಕಾಂಗ್ರೆಸ್ ವರಿಷ್ಠರು ಶಿಸ್ತು ಕ್ರಮ ಕೈಗೊಂಡು ಪಕ್ಷದಿಂದ ಉಚ್ಚಾಟಿಸದಿದ್ದರೆ, ಆ ಪಕ್ಷ ಮುಂದೆ ವ್ಯತಿರಿಕ್ತ ಪರಿಣಾಮ ಎದುರಿಸಬೇಕಾಗುತ್ತದೆ. ಅಲ್ಲದೆ, ಬರುವ ಚಳಿಗಾಲ ಅಧಿವೇಶನದ ಒಳಗಾಗಿ ಈತನ ಶಾಸಕತ್ವ ಅನರ್ಹಗೊಳಿಸದಿದ್ದರೆ, ನಮ್ಮ ನಡೆ, ಸುವರ್ಣಸೌಧದ ಕಡೆ ಇರಲಿದ್ದು, ಅಲ್ಲಿ ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

           ಸಾಹಿತಿ ಎಸ್.ಟಿ.ಶಾಂತಗಂಗಾಧರ್ ಮಾತನಾಡಿ, ಅವತ್ತು ಶ್ರೀಗಳು ರಾಜಕೀಯ ವ್ಯವಸ್ಥೆಯ ಬಗ್ಗೆ ಮಾತನಾಡುವಾಗ ವೇದಿಕೆಯಲ್ಲಿಯೇ ಇದ್ದ ರಘು ಆಚಾರ್ ಏನೂ ಮಾತನಾಡದೇ, 2 ದಿನದ ಬಳಿಕ ಪತ್ರಿಕಾಗೋಷ್ಠಿ ನಡೆಸಿ, ಸಾಣೇಹಳ್ಳಿ ಶ್ರೀಗಳು ಪೀಠ ತ್ಯಾಗಮಾಡಿ, ಮಠದಿಂದ ಹೊರಬಂದು ರಾಜಕೀಯ ಮಾಡಲಿ ಎಂಬುದಾಗಿ ಹೇಳಿಕೆ ನೀಡಿರುವುದರ ಹಿಂದೆ ಸಿಎಂ ಕುಮಾರಸ್ವಾಮಿ ಹಾಗೂ ಡಿಸಿಎಂ ಜಿ.ಪರಮೇಶ್ವರ್ ಅವರನ್ನು ಮೆಚ್ಚಿಸುವ ತಂತ್ರ ಅಡಗಿದ್ದು, ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದು, ಮಂತ್ರಿಯಾಗುವ ಹಗಲುಗನಸು ಕಾಣುತ್ತಿದಾರೆಂದು ಆರೋಪಿಸಿದರು.

           ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಿಂದ ಆಯ್ಕೆಯಾಗಿ ಮೇಲ್ಮನೆಗೆ ಹೋಗಿರುವ ಮನುಷ್ಯ ಚಿಂತನೆಯಲ್ಲಿ ಮೇಲ್ಮಟ್ಟಕ್ಕೆ ಹೋಗಬೇಕೆ ಹೊರತು, ಹೀಗೆ ಕೀಳು ಮಟ್ಟಕ್ಕೆ ಇಳಿಯಬಾರದು. ಸದಾಚಾರ ಇರುವ ಲಿಂಗಾಯತ ಪರಂಪರೆಯಲ್ಲಿ ಗಣಚಾರ ಸಹ ಇದೆ. ಈ ಗಣಾಚಾರಕ್ಕೆ ಭಕ್ತರು ಇಳಿದರೆ, ನೀವು ಬರೀ ಚಿತ್ರದುರ್ಗ ಅಲ್ಲ. ಎಲ್ಲೂ ಅಡ್ಡಾಡದ ಪರಿಸ್ಥಿತಿ ನಿರ್ಮಾಣವಾಗಲಿದೆ. ಅಕ್ಕಸಾಲಿಗ ಚಿನ್ನ-ಬೆಳ್ಳಿಯನ್ನು ಬಡಿಯಬೇಕೇ ಹೊರತು, ಕಾವಿಧಾರಿಗಳನ್ನು ಬಡಿಯಬಾರದು. ತಮ್ಮ ತಪ್ಪಿನ ಅರಿವು ಮಾಡಿಕೊಂಡು ತಕ್ಷಣವೇ ಆಚಾರ್ ಶ್ರೀಗಳ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು.

           ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಎಂ.ಶಿವಕುಮಾರ್ ಮಾತನಾಡಿ, ವಿಶ್ವಗುರು ಬಸವಣ್ಣನವರು 12ನೇ ಶತಮಾನದಲ್ಲಿ ಸುಮಾರು 99 ಕಾಯಕ ಪ್ರಧಾನ ಜಾತಿಗಳ ಶರಣರನ್ನು ಅನುಭವ ಮಂಟಪಕ್ಕೆ ಕರೆ ತಂದು ಲಿಂಗಾಯತ ಧರ್ಮವನ್ನು ಸ್ಥಾಪನೆ ಮಾಡಿದ್ದಾರೆ. ಈ ಧರ್ಮದ ಆಚಾರ-ವಿಚಾರ, ವಚನ ಸಾಹಿತ್ಯ ಪ್ರಚಾರ ಮಾಡುವುದರ ಜೊತೆಗೆ, ಪ್ರಸಾದ ನಿಲಯಗಳನ್ನು ತೆರೆದು, ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ, ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯಾ ದಾನ ಮಾಡಿರುವ ಹೆಗ್ಗಳಿಕೆ ತರಳಬಾಳು ಮಠಕ್ಕಿದೆ. ಇಂತಹ ಮಠದ ಸಾಣೇಹಳ್ಳಿ ಶಾಖಾ ಮಠದ ಶ್ರೀಗಳ ಬಗ್ಗೆ ಹಗುರವಾಗಿ ಮಾತನಾಡಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

        ತೆವಲಿಗಾಗಿ ಮಠಕ್ಕೆ ಹೋಗುತ್ತಾರೆ ಎಂಬುದಾಗಿ ರಘು ಆಚಾರ್ ಹೇಳಿದ್ದು, ರಾಷ್ಟ್ರಪತಿ, ಪ್ರಧಾನಿ, ರಾಜ್ಯಪಾಲ, ಮುಖ್ಯಮಂತ್ರಿಗಳ ಆದಿಯಾಗಿ ಎಲ್ಲಾ ರಾಜಕಾರಣಿಗಳು ಪಕ್ಷಾತೀತವಾಗಿ ಮಠಕ್ಕೆ ಬರುವುದು ತೆವಲಿಗಾಗಿ ಅಲ್ಲ. ಮಠದ ಪಾವಿತ್ರ್ಯತೆಯ ಹಿನ್ನೆಲೆಯಲ್ಲಿ ಎಂಬುದನ್ನು ಅರಿತು, ಮಠ-ಪೀಠಗಳ ಮಾತನಾಡುವಾಗ ಎಚ್ಚರದಿಂದ ಮಾತನಾಡಬೇಕೆಂದು ಆಗ್ರಹಿಸಿದರು.
ವೀರಶೈವ-ಲಿಂಗಾಯತ ಎಂಬುದು ನಮ್ಮ ವೈಯಕ್ತಿಕ ವಿಚಾರ. ಆದರೆ, ನಮ್ಮ ಮಠ ಪರಂಪರೆಗೆ ಧಕ್ಕೆಯಾದರೆ, ಎಲ್ಲರೂ ಒಂದಾಗಿ ಹೋರಾಟ ಮಾಡುತ್ತೇವೆಂದು ಎಚ್ಚರಿಸಿದ ಅವರು, ತಕ್ಷಣವೇ ರಘು ಆಚಾರ್ ವಿಧಾನ ಪರಿಷತ್ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.

       ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಉಪ ವಿಭಾಗಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.  ಪ್ರತಿಭಟನಾ ಸಭೆಯಲ್ಲಿ ಸಮಸ್ತ ಭಕ್ತ ಮಂಡಳಿಯ ಶಶಿಧರ್ ಹೆಮ್ಮೆನಬೇತೂರು, ಧನಂಜಯ ಕಡ್ಲೇಬಾಳ್, ರವಿಕುಮಾರ ನುಗ್ಗೇಹಳ್ಳಿ, ಆವರಗೆರೆ ರುದ್ರಮುನಿ, ಸುನಿಲ್ ದಾಸಪ್ಳ, ಚೇತನ ಫಾರ್ಮ ಕೆ.ಇ.ಪ್ರಕಾಶ, ನಿಂಗರಾಜ ಅಗಸನಕಟ್ಟೆ, ವನಜಾ ಮಹಲಿಂಗಯ್ಯ, ಕುಮಾರ ಮೆಳ್ಳೇಕಟ್ಟೆ, ದೇವರಾಜ ಅಗಸನಕಟ್ಟೆ, ಶ್ರೀನಿವಾಸ ರಾಮಘಟ್ಟ, ಹರಪನಹಳ್ಳಿ ಮಂಜಣ್ಣ, ಜಗಳೂರು ಸುಭಾಶ್ಚಂದ್ರ ಬೋಸ್, ನಿಂಗನಗೌಡ, ಆನೆಕೊಂಡ ನಿಂಗರಾಜ, ಜಾತಪ್ಪ, ಮಂಜುನಾಥ ಶಿವನಹಳ್ಳಿ, ನಿರಂಜನ ಹಂಪನೂರು, ಅಸಗೋಡು ರವಿ, ವೀಣಾ ಮಂಜುನಾಥ, ಎಸ್ಸಾರ್ ಶ್ರೀನಿವಾಸ, ಹಾವೇರಿ ವಿಶ್ವನಾಥ ಪಾಟೀಲ, ಬಸಾಪುರ ಶಶಿಧರ ಮತ್ತಿತರರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here