ಕುಮಾರಸ್ವಾಮಿಗೆ ರಾಹುಲ್ ಬುಲಾವ್

0
277

ಬೆಂಗಳೂರು

       ರಾಜ್ಯದಲ್ಲಿ ನಡೆದ ಉಪಚುನಾವಣೆಗಳಲ್ಲಿ ಭರ್ಜರಿ ಜಯ ಸಾಧಿಸಿದ ಹಿನ್ನೆಲೆಯಲ್ಲಿ ಸಿಎಂ ಕುಮಾರಸ್ವಾಮಿ ಮುಂದಿನ ವಾರ ದೆಹಲಿಗೆ ತೆರಳುತ್ತಿದ್ದು, ದಕ್ಷಿಣ ಭಾರತದಲ್ಲಿ ಬಿಜೆಪಿಯ ಅಶ್ವಮೇಧದ ಕುದುರೆಯನ್ನು ಕಟ್ಟಿ ಹಾಕುವ ತಂತ್ರವನ್ನು ರೂಪಿಸುವ ಸಂಬಂಧ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರೊಂದಿಗೆ ಮಹತ್ವದ ಚರ್ಚೆ ನಡೆಸಲಿದ್ದಾರೆ.

        ಉಪಚುನಾವಣೆಗಳ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ರಾಹುಲ್ ಗಾಂಧಿ ಅವರು ಸಿಎಂ ಕುಮಾರಸ್ವಾಮಿ ಅವರ ಜತೆ ದೂರವಾಣಿಯ ಮೂಲಕ ಮಾತನಾಡಿದ್ದು ದೆಹಲಿಗೆ ಬರುವಂತೆ ಆಹ್ವಾನಿಸಿದ್ದಾರೆ.

       ಉಪಚುನಾವಣೆಗಳ ಫಲಿತಾಂಶ ಸರ್ಕಾರವನ್ನು ಅಭದ್ರಗೊಳಿಸುವ ಬಿಜೆಪಿ ಯತ್ನಕ್ಕೆ ಹಿನ್ನಡೆಯುಂಟು ಮಾಡಿರುವುದರಿಂದ ನೆಮ್ಮದಿಯಾಗಿರುವ ಕುಮಾರಸ್ವಾಮಿ, ಮುಂದಿನ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿ ಮುಂದುವರಿಯಬೇಕಾದ ಸ್ವರೂಪದ ಕುರಿತು ರಾಹುಲ್ ಗಾಂಧಿ ಅವರ ಜತೆ ಮಾತುಕತೆ ನಡೆಸಲಿದ್ದಾರೆ ಎಂದು ಉನ್ನತ ಮೂಲಗಳು ಹೇಳಿವೆ.

        ರಾಜ್ಯದಲ್ಲಿ ಮೂರು ಲೋಕಸಭೆಗಳಿಗೆ ನಡೆದ ಉಪಚುನಾವಣೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಸರ್ಕಾರದ ಭದ್ರತೆಯ ಕುರಿತ ಅಪನಂಬಿಕೆಯನ್ನು ದೂರ ಮಾಡಿದ್ದು, ಈ ಬೆಳವಣಿಗೆ ಮುಂದಿನ ಹೆಜ್ಜೆಗಳನ್ನು ಮತ್ತಷ್ಟು ದೃಢವಾಗಿ ಇಡಲು ಸಾಧ್ಯವಾಗಿಸಲಿದೆ ಎಂಬುದು ರಾಹುಲ್ ಗಾಂಧಿ ಮತ್ತು ಕುಮಾರಸ್ವಾಮಿಯವರ ಅಭಿಮತ ಎಂಬುದು ಮೂಲಗಳ ಹೇಳಿಕೆ.

        ಆರಂಭದಲ್ಲಿ ಸಣ್ಣ ಪುಟ್ಟ ಗೊಂದಲಗಳಿದ್ದರೂ ಉಪಚುನಾವಣೆಯ ಒಳಗಾಗಿ ಈ ಗೊಂದಲಗಳನ್ನು ಪರಿಹರಿಸಿಕೊಂಡು ಐದು ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಜಯಗಳಿಸಿರುವುದು ಸಣ್ಣ ಸಾಧನೆಯಲ್ಲ.

        ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದರೆ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯನ್ನು ಮಣಿಸಬಹುದಿತ್ತು. ಆದರೂ ಉಭಯ ಪಕ್ಷಗಳ ನಾಯಕರು, ಕಾರ್ಯಕರ್ತರು ಪ್ರಾಮಾಣಿಕವಾಗಿ ಕೆಲಸ ಮಾಡಿದರು. ಮುಂದಿನ ಲೋಕಸಭಾ ಚುನಾವಣೆಯ ವೇಳೆಗೆ ಇನ್ನಷ್ಟು ಪರಿಣಾಮಕಾರಿಯಾಗಿ ದುಡಿದರೆ ದಕ್ಷಿಣ ಭಾರತದಲ್ಲಿ ಬಿಜೆಪಿಯ ಅಶ್ವಮೇಧ ಯಾಗದ ಕುದುರೆಯನ್ನು ತಡೆಗಟ್ಟಲು ಸಾಧ್ಯ ಎಂದು ಉಭಯ ನಾಯಕರು ಬಾವಿಸಿದ್ದಾರೆ.

        ಈ ಹಿನ್ನೆಲೆಯಲ್ಲಿಯೇ ಮುಂದಿನ ವಾರ ಮುಖ್ಯಮಂತ್ರಿ ಕುಮಾರಸ್ವಾಮಿ ದೆಹಲಿಗೆ ತೆರಳುತ್ತಿದ್ದು, ಅವರೊಂದಿಗೆ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರೂ ತೆರಳಲಿದ್ದಾರೆ.

        ಸಚಿವ ಸಂಪುಟ ವಿಸ್ತರಣೆಯ ವಿಷಯದಲ್ಲಿ ಕಾಂಗ್ರೆಸ್ ಪಕ್ಷ ಈಗ ಆತಂಕಪಡುವ ಅಗತ್ಯವೇನೂ ಇಲ್ಲ. ಯಾಕೆಂದರೆ ಮೈತ್ರಿಕೂಟದ ಕ್ಯಾಂಡಿಡೇಟ್ ಆದರೆ ಮುಂದಿನ ಚುನಾವಣೆಯಲ್ಲಿ ಗೆಲ್ಲುವುದು ಸುಲಭ. ಹಾಗೆ ಮಾಡದೆ ಆಪರೇಷನ್ ಕಮಲ ಕಾರ್ಯಾಚರಣೆಗೆ ಬಲಿಯಾದರೆ ಸಂಕಷ್ಟ ಅನುಭವಿಸಬೇಕಾಗುತ್ತದೆ ಎಂಬುದು ಅಡ್ಡಗೋಡೆಯ ಮೇಲೆ ಕುಳಿತಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಶಾಸಕರಿಗೆ ಗೊತ್ತಿದೆ.

       ಹೀಗಾಗಿ ಸಚಿವ ಸಂಪುಟದಲ್ಲಿ ಕಾಂಗ್ರೆಸ್ ಕೋಟಾದಲ್ಲಿ ಉಳಿದಿರುವ ಆರು ಸ್ಥಾನಗಳ ಪೈಕಿ ನಾಲ್ಕು ಅಥವಾ ಐದು ಸ್ಥಾನಗಳನ್ನು ಭರ್ತಿ ಮಾಡಿಕೊಳ್ಳಬಹುದು ಎಂದು ಈ ಮಾತುಕತೆಯ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ರಾಹುಲ್ ಗಾಂಧಿ ಅವರಿಗೆ ಸಲಹೆ ನೀಡಲಿದ್ದಾರೆ.

        ಆದರೆ ಎಲ್ಲಕ್ಕಿಂತ ಮುಖ್ಯವಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪರಸ್ಪರ ಕೈ ಜೋಡಿಸಿದರೆ ಬಿಜೆಪಿಯನ್ನು ಯಾವ ರೀತಿ ಬಗ್ಗು ಬಡಿಯಬಹುದು ಎಂಬ ಕುರಿತು ಈ ನಾಯಕರು ವಿಸ್ತøತ ಚರ್ಚೆ ನಡೆಸಲಿದ್ದಾರೆ ಎಂಬುದು ಮೂಲಗಳ ಹೇಳಿಕೆ.

        ದೇಶದಲ್ಲಿ ಬಿಜೆಪಿ ವಿರೋಧಿ ಅಲೆ ವ್ಯಾಪಕವಾಗಿದ್ದು ಇದನ್ನು ಸಮರ್ಪಕವಾಗಿ ಬಳಸಿಕೊಳ್ಳುವ ದೃಷ್ಟಿಯಿಂದ ನಾವು ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲದಂತೆ ನೋಡಿಕೊಳ್ಳಬೇಕಾಗಿದೆ. ಇದು ಸಾಧಿತವಾದರೆ ಬಿಜೆಪಿಯನ್ನು ಸೋಲಿಸುವುದು ಸುಲಭ.

       ಈಗಾಗಲೇ ಐದು ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳನ್ನು ಕಳೆದುಕೊಂಡಿರುವುದರಿಂದ ಮತ್ತು ಒಂದು ಕ್ಷೇತ್ರದಲ್ಲಿ ಅದರ ಗೆಲುವಿನ ಅಂತರ ಗಣನೀಯವಾಗಿ ಕಡಿಮೆಯಾಗಿರುವುದರಿಂದ ಬಿಜೆಪಿ ಕಂಗಾಲಾಗಿದೆ.ಈಗಾಗಲೇ ಆ ಪಕ್ಷದಲ್ಲಿ ಹಲವು ಬಣಗಳು ಸೃಷ್ಟಿಯಾಗಿದ್ದು ಅದರ ಪರಿಸ್ಥಿತಿ ಹೀಗಿರುವ ಕಾಲದಲ್ಲಿ ನಾವು ಒಗ್ಗೂಡಿ ದುಡಿದರೆ ನಿಶ್ಚಿತವಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹದಿನೈದಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬಹುದು ಎಂದು ಕುಮಾರಸ್ವಾಮಿ ಈ ಮಾತುಕತೆಯ ಸಂದರ್ಭದಲ್ಲಿ ವಿವರಿಸಲಿದ್ದಾರೆ ಎಂದೂ ಮೂಲಗಳು ವಿವರಿಸಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here