ಖಾಸಗಿ ವಿದ್ಯಾಸಂಸ್ಥೆಗಳ ವಿರುದ್ಧ ಶಿಸ್ತುಕ್ರಮಕ್ಕೆ ಆಗ್ರಹ

ಕುಣಿಗಲ್

         ಸೇವಾಮನೋಭಾವದಡಿ ಪ್ರಾರಂಭವಾದ ಖಾಸಗಿ ಶಿಕ್ಷಣ ಸಂಸ್ಥೆಗಳು ವ್ಯಾಪಾರ ಕೇಂದ್ರಗಳಾಗುವ ಮೂಲಕ ಬೇಕಾಬಿಟ್ಟಿಯಾಗಿ ದಾಖಲಾತಿ ಶುಲ್ಕ ಪೀಕುತ್ತಿರುವ ಸಂಸ್ಥೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಜಿಲ್ಲಾಧ್ಯಕ್ಷ ಹೆಚ್.ಜಿ.ರಮೇಶ್ ಹಾಗೂ ತಾಲ್ಲೂಕು ಅಧ್ಯಕ್ಷ ಎಂ.ಡಿ. ಮೋಹನ್ ನೇತೃತ್ವದಲ್ಲಿ ಪ್ರತಿಭಟಿಸಿದರು.

         ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಮುಂದೆ ಪ್ರತಿಭಟಿಸಿದ ಲಂಚಮುಕ್ತ ನಿರ್ಮಾಣ ವೇದಿಕೆಯ ಪದಾಧಿಕಾರಿಗಳು ಉಚ್ಛನ್ಯಾಯಾಲಯದ ಆದೇಶವನ್ನ ಶಿಕ್ಷಣ ಇಲಾಖೆ ಹಾಗೂ ಖಾಸಗಿ ವಿದ್ಯಾಸಂಸ್ಥೆಗಳು ಪರಿಪಾಲಿಸದೆ ವಿದ್ಯಾರ್ಥಿಗಳ ಪೋಷಕರಿಂದ ಮನಸೋ ಇಚ್ಚೆ ಶುಲ್ಕವನ್ನು ಪಡೆಯುತ್ತಿರುವುದನ್ನು ಖಂಡಿಸಿ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

          ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಕುರಿತು ಮಾತನಾಡಿದ ಜಿಲ್ಲಾ ಅಧ್ಯಕ್ಷ ಹೆಚ್.ಜಿ.ರಮೇಶ್ ಜಿಲ್ಲೆಯಲ್ಲಿ ಶಿಕ್ಷಣ ಸಂಸ್ಥೆಗಳು ನಾಯಿಕೊಡೆಯಂತೆ ತಲೆಎತ್ತಿ ಹೆಚ್ಚುತ್ತ ಜಾಹಿರಾತು ಭರಾಟೆಯಲ್ಲಿ ಬಡವರು ಮಧ್ಯಮವರ್ಗದ ಪೋಷಕರನ್ನ ವಂಚಿಸಿ ಹಣ ಮಾಡುವ ದಂಧೆಯಲ್ಲಿ ತೊಡಗಿರುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಈಗಾಗಲೇ ರಾಜ್ಯ ಉಚ್ಛನ್ಯಾಯಾಲಾಯವು ಖಾಸಗಿ ಶಿಕ್ಷಣ ಸಂಸ್ಥೆಗಳು ಇಂತಿಷ್ಟೆ ಶುಲ್ಕವನ್ನ ಪಡೆಯುವಂತೆ ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಿದ್ದರೂ ಸಹ ಖಾಸಗಿ ಶಾಲೆಗಳು ಯಾವುದೇ ಶುಲ್ಕದ ವಿವರಗಳನ್ನ ಶಾಲೆಯ ಆವರಣದಲ್ಲಿ ಪ್ರಕಟಿಸದೆ ಪೋಷಕರನ್ನ ವಂಚಿಸುತ್ತಿರುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

          ತಾಲ್ಲೂಕು ಲಂಚಮುಕ್ತ ವೇದಿಕೆಯ ಅಧ್ಯಕ್ಷ ಎಂ.ಡಿ. ಮೋಹನ್ ಮಾತನಾಡಿ ಸೇವಾ ಮನೋಭಾವದ ಹೆಸರಿನಲ್ಲಿ ಸ್ಥಾಪನೆಯಾಗುತ್ತಿರುವ ಶಿಕ್ಷಣ ಟ್ರಸ್ಟ್‍ಗಳು ಸರ್ಕಾರದ ಹಲವು ಸೌಲಭ್ಯಗಳನ್ನ ಹಾಗೂ ಯೋಜನೆಗಳನ್ನ ಸಮರ್ಪಕವಾಗಿ ಬಳಸಿಕೊಂಡು ತಮ್ಮ ಶಾಲಾ ಕಾಲೇಜುಗಳನ್ನ ನಿರ್ಮಿಸಿಕೊಂಡು ಬರೀ ಹಣಮಾಡುವ ದಂಧೆಯಲ್ಲಿ ನಿರತರಾಗಿರುವುದನ್ನು ವಿಷಾಧನೀಯ ಎಂದ ಅವರು, ಉಚ್ಛನ್ಯಾಯಾಲಯ ಛೀಮಾರಿಯಾಕಿ ಜಾರಿಗೆ ತರುವಂತೆ ಆದೇಶ ನೀಡಿದ್ದರೂ ಸಹ ಶಿಕ್ಷಣ ಇಲಾಖೆ ಸೂಕ್ತ ಕ್ರಮ ಕೈಗೊಳ್ಳದೆ ಖಾಸಗಿ ವಿದ್ಯಾಸಂಸ್ಥೆಯೊಂದಿಗೆ ಶಾಮಿಲ್ ಆಗಿದ್ದು ಜ.23 ಗಡುವನ್ನ ನೀಡಿದ್ದರೂ ಕ್ರಮಕೈಗೊಳ್ಳದೆ ಇರುವುದು.

        ಕ್ಷೇತ್ರ ಶಿಕ್ಷಣಾಧಿಕಾರಿಯ ಬೇಜವಾಬ್ದಾರಿಯಾಗಿರುವುದು ಖಂಡನೀಯ ಇನ್ನಾದರೂ ಸಾರ್ವಜನಿಕವಾಗಿ ಎಲ್ಲಾ ಮಾಹಿತಿಗಳನ್ನ ಶಿಕ್ಷಣ ಇಲಾಖೆಯ ಕಚೇರಿಯಲ್ಲಿ ಹಾಗೂ ಶುಲ್ಕದ ವಿವರಗಳನ್ನ ಖಾಸಗಿ ವಿದ್ಯಾಸಂಸ್ಥೆಗಳು ತಮ್ಮ ಶಾಲಾ ಆವರಣದಲ್ಲಿ ಪ್ರಕಟಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.

         ತಹಸೀಲ್ದಾರ್ ವಿ.ಆರ್. ವಿಶ್ವನಾಥ್ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿ ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೀಡಿದರು. ಶಿಕ್ಷಣ ಇಲಾಖೆಯ ಇಸಿಒ ಧನಂಜಯ ಮತ್ತು ಅಧಿಕಾರಿಗಳು ಪ್ರತಿಭಟನಾಕಾರರ ಮನವೊಲಿಸಿದರು, ಪ್ರತಿಭಟನೆಯನ್ನ ಕೈಬಿಡಲಾಯಿತು.
ಪ್ರತಿಭಟನೆಯಲ್ಲಿ ಮುಖಂಡರುಗಳಾದ ಬಿದನಗೆರೆ ನಾಗೇಶ್, ವಿಷ್ಣುವಿಜಯ್, ಲೋಕೇಶ್, ಕೃಷ್ಣಮೂರ್ತಿ, ಶಿವಕುಮಾರ್, ಶ್ರೀನಿವಾಸ್ ಇಪ್ಪಾಡಿ, ಬೋರೇಗೌಡ, ಮಲ್ಲಿಪಾಳ್ಯ ಶ್ರೀನಿವಾಸ್, ಶೆಟ್ಟಿಗೆರೆ ಗ್ರಾ.ಪಂ.ಸದಸ್ಯ ಕೃಷ್ಣಮೂರ್ತಿ, ರೇಣುಕಪ್ಪ, ಆನಂದ, ಜಗದೀಶ್, ರಮೇಶ್ ಮುಂತಾದವರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap