ಬೆಳೆವಿಮೆ ಪರಿಹಾರ ನೀಡುವಂತೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಮನವಿ

ಬ್ಯಾಡಗಿ:

      ರೈತ ಹೋರಾಟ ಸಮಿತಿ ನೇತೃತ್ವದಲ್ಲಿ ಸೋಮವಾರ ತಹಶೀಲ್ದಾರ ಕಚೇರಿಗೆ ತೆರಳಿದ ರೈತರು ರಾಜ್ಯದ ರೈತರ ಸಾಲಮನ್ನಾ ಸೇರಿದಂತೆ ಬೆಳೆವಿಮೆ ಪರಿಹಾರ ನೀಡುವಂತೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

         ಈ ಸಂದರ್ಭದಲ್ಲಿ ಮಾತನಾಡಿದ ಮುರಿಗೆಪ್ಪ ಶೆಟ್ಟರ, ಸಾಲಮನ್ನಾ ವಿಷಯದಲ್ಲಿ ಮುಖ್ಯಮತ್ರಿಗಳು ತಪ್ಪು ಹೇಳಿಕೆಗಳನ್ನು ನೀಡುತ್ತಿದ್ದಾರೆ, ವಿಧಾನಸಭೆ ಚುನಾವಣೆಗೂ ಮುನ್ನ ಕುಮಾರಸ್ವಾಮಿ ಅವರಿಗೆ ರೈತರ ಮೇಲಿದ್ದ ಪ್ರೀತಿ ಮುಖ್ಯಮಂತ್ರಿ ಪಟ್ಟಕ್ಕೆ ಏರಿದ ಮೇಲೆ ಎಲ್ಲವೂ ಮಾಯವಾಗಿದೆ ಎಂದು ಆರೋಪಿಸಿದ ಅವರು ಕೂಡಲೇ ಸಾಲಮನ್ನಾ ವಿಷಯವನ್ನು ಇತ್ಯರ್ಥಪಡಿಸುವಂತೆ ಆಗ್ರಹಿಸಿದರು.

         ಲೋಕಸಭೆ ಚುನಾವಣೆ ಪ್ರಣಾಳಿಕೆಯಾಗದಿರಲಿ: ಅತೀವೃಷ್ಟಿ ಮತ್ತು ಅನಾವೃಷ್ಟಿಗಳಿಂದ ರಾಜ್ಯದ ರೈತರು ಕಂಗಾಲಾಗಿದ್ದಾರೆ, ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಅಧಿಕಾರಕ್ಕೆ 24 ಗಂಟೆಯೊಳಗೆ ಸಾಲಮನ್ನಾ ಮಾಡುತ್ತೇನೆ ಎಂದಿದ್ದ ಕುಮಾರಸ್ವಾಮಿ ಅಧಿಕಾರ ವಹಿಸಿಕೊಂಡರು 4500 ಸಾವಿರ ಗಂಟೆಗಳಾದರೂ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಳ್ಳದೇ ರೈತರನ್ನು ಬೀದಿಗಿಳಿದು ಹೋರಾಟ ನಡೆಸಲು ಕಾರಣವಾಗುತ್ತಿದ್ದಾರೆ, ಇದೇ ಮಾತುಗಳನ್ನು ಹೇಳಿ ವಿಧಾನಸಭೆ ಚುನಾವಣೆಯಲ್ಲಿ ಮೋಸವೆಸಗಿದ್ದಾಯಿತು, ಬರುವ ಲೋಕಸಭೆ ಚುನಾವಣೆಗೂ ಸಾಲಮನ್ನಾ ವಿಷಯವನ್ನು ಜೆಡಿಎಸ್ ಪ್ರಣಾಳಿಕೆ ಮಾಡಿಕೊಳ್ಳದಿರಲಿ ಎಂದರು.

        ಅಳಮುಂಜಿ ಪಾತ್ರದಲ್ಲಿ ಮುಖ್ಯಮಂತ್ರಿ:ಸಾಲಮನ್ನಾ ವಿಷಯಕ್ಕೆ ಉತ್ತರ ಕೊಡಲಾಗದ ಮುಖ್ಯಮಂತ್ರಿ ಕುಮಾರಸ್ವಾಮಿ, ಸಾರ್ವಜನಿಕ ಸಭೆ ಸಮಾರಂಭ ಸೇರಿದಂತೆ ಹಾದಿಬೀದಿಗಳಲ್ಲಿ ಹೋದ ಕಡೆಯಲ್ಲೆಲ್ಲಾ ಅಳುಮುಂಜಿ ಪಾತ್ರಗಳನ್ನು ಮಾಡುತ್ತಾ, ಸಾಲಮನ್ನಾ ವಿಷಯವನ್ನು ರೈತರು ಮರೆಯುವಂತೆ ಮಾಡುತ್ತಿದ್ದಾರೆ, ತಮ್ಮ ಅನಾರೋಗ್ಯದ ನೆಪವನ್ನು ಮುಂದಿಟ್ಟುಕೊಂಡು ಅದರ ಲಾಭವನ್ನು ಪಡೆದುಕೊಳ್ಳುವ ಪ್ರಯತ್ನಕ್ಕಿಳಿದಿದ್ದು, ಇದರಿಂದ ರಾಜ್ಯದ ರೈತರ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ ಬದಲಾಗಿ ಬ್ಯಾಂಕ್ ಅಧಿಕಾರಿಗಳು ಮತ್ತು ರೈತರ ನಡುವೆ ಅನಗತ್ಯ ಸಂಘರ್ಷಕ್ಕೆ ಕಾರಣವಾಗಿದ್ದು, ಅಳುಮುಂಜಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮುಖ್ಯಮಂತ್ರಿಗಳು ನಮಗೆ ಬೇಡ ರಾಜೀನಾಮೆ ನೀಡಿ ಆರೋಗ್ಯ ಸುಧಾರಿಸಿಕೊಳ್ಳುವಂತೆ ಸಲಹೆ ನೀಡಿದರು.

         ಷರತ್ತುಗಳು ಬೇಡ: ರೈತರ ಸಾಲಮನ್ನಾ ಮಾಡಲು ಹತ್ತು ಹಲವು ಷರತ್ತುಗಳನ್ನು ವಿಧಿಸಲಾಗುತ್ತಿದ್ದು ಮೊದಲು ಇದನ್ನು ಕೈಬಿಡಬೇಕು, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ವಸೂಲಾತಿ ಪ್ರಕ್ರಿಯೆ ಇನ್ನೂ ನಡೆದಿದ್ದು ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಆದೇಶವನ್ನು ಮಾಡಬೇಕು, ಮತ್ತು ಬ್ಯಾಡಗಿ ತಾಲ್ಲೂಕನ್ನು ಬರಪೀಡತವೆಂದು ಘೋಷಿಸಿ ಅದಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಆರಂಭಿಸುವಂತೆ ಆಗ್ರಹಿಸಿದರು.

           ಈ ಸಂದರ್ಭದಲ್ಲಿ ಈರಪ್ಪ ಸಂಕಣ್ಣನವರ, ಹನುಮಂತಪ್ಪ ಮಾಗೋಡ, ಶಶಿಧರಸ್ವಾಮಿ ಗೊಲ್ಲರಹಳ್ಳಿಮಠ ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು. ತಹಶೀಲ್ಧಾರ ಕಚೇರಿಯ ಶಿರಸ್ತೇದಾರ ಶೆಟ್ಟರ ತಹಶೀಲ್ದಾರ ಪರವಾಗಿ ಮನವಿ ಸ್ವೀಕರಿಸಿ ತಮ್ಮ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರುವ ಭರವಸೆ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap