ಬೀದಿಗಳಲ್ಲಿ ಪ್ರಚಾರ ನಡೆಸಿ ಬಂದ್‍ಗೆ ಸಹಕಾರ ನೀಡುವಂತೆ ಮನವಿ

0
5

ಚಳ್ಳಕೆರೆ

      ರಾಷ್ಟ್ರೀಯ ಕಾರ್ಮಿಕರ ಒಕ್ಕೂಟ ಭಾರತ ಬಂದ್ ಕರೆ ನೀಡಿದ ಹಿನ್ನೆಲೆಯಲ್ಲಿ ಇಲ್ಲಿನ ಎಐಟಿಯುಸಿ ಮತ್ತು ಸಿಐಟಿಯುಸಿ ನೇತೃತ್ವದ ಕಾರ್ಮಿಕ ಸಂಘಟನೆಗಳು ನಗರದಾದ್ಯಂತ ಬಂದ್ ಆಚರಿಸುವ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗಿನಿಂದಲೇ ಸಂಘಟನೆಯ ವಿವಿಧ ಮುಖಂಡರು ನಗರದ ಬೀದಿ, ಬೀದಿಗಳಲ್ಲಿ ಪ್ರಚಾರ ನಡೆಸಿ ಬಂದ್‍ಗೆ ಸಹಕಾರ ನೀಡುವಂತೆ ಮನವಿ ಮಾಡಿದರು.

     ಆಟೋರಿಕ್ಷಾ ಮೂಲಕ ನಗರದ ಎಲ್ಲಾ ರಸ್ತೆಗಳಲ್ಲಿ ಸಂಚಾರ ನಡೆಸಿದ ಕಾರ್ಮಿಕ ಸಂಘಟನೆಗಳ ಮುಖಂಡರು ಕೇಂದ್ರ ಸರ್ಕಾರ ನರೇಂದ್ರಮೋದಿಯವರ ಕಾರ್ಮಿಕ ವಿರೋಧಿ ನೀತಿಯನ್ನು ಪ್ರತಿಭಟಿಸಲು ಉದ್ಯೋಗ ಸೃಷ್ಠಿ ಮಾಡುವ ಭರವಸೆ ನೀಡಿ, ಭರವಸೆಯನ್ನು ಈಡೇರಿಸದೇ ಇರುವುದು, ಸಾರ್ವಜನಿಕ ಉದ್ಯೋಗಿಗಳ ಖಾಸಗೀಕರಣ, ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ಗುತ್ತಿಗೆ ಮತ್ತು ಇನ್ನಿತರೆ ಕಾರ್ಮಿಕರ ಖಾಯಂಯಾತಿ, ಕೇಂದ್ರ ಸರ್ಕಾರ 7ನೇ ವೇತನ ಆಯೋಗದಂತೆ ಕನಿಷ್ಠ ವೇತನ 18 ಸಾವಿರಕ್ಕೆ ಹೆಚ್ಚಳ ಮುಂತಾದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.

      ಇಲ್ಲಿನ ನೆಹರೂ ವೃತ್ತದಲ್ಲಿ ಎಐಟಿಯುಸಿ ರಾಜ್ಯ ಸಂಚಾಲಕ ಸಿ.ವೈ.ಶಿವರುದ್ರಪ್ಪ, ತಾಲ್ಲೂಕು ಅಧ್ಯಕ್ಷ ತಿಪ್ಪೇರುದ್ರಪ್ಪ, ಉಪಾಧ್ಯಕ್ಷ ಪಿ.ಒ.ಬಸವರಾಜು ಮುಂತಾದವರು ರಸ್ತೆಗಳಲ್ಲಿ ಕೈಮುಗಿದು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್‍ಗೆ ಸಹಕಾರ ನೀಡಬೇಕು. ಕಾರ್ಮಿಕ ವಿರೋಧಿ ನೀತಿಯನ್ನು ಎಲ್ಲರೂ ದಿಕ್ಕರಿಸಬೇಕೆಂದು ಮನವಿ ಮಾಡಿದರು.

        ಸಿಐಟಿಯು ಜಿಲ್ಲಾ ಸಂಚಾಲಕ ಟಿ.ತಿಪ್ಪೇಸ್ವಾಮಿ, ತಾಲ್ಲೂಕು ಅಧ್ಯಕ್ಷ ಕೆ.ವಿ.ವೀರಭದ್ರಪ್ಪ, ಉಪಾಧ್ಯಕ್ಷ ನಾಗರಾಜ, ಖಜಾಂಚಿ ನಿಂಗಣ್ಣ ಮುಂತಾದವರು ಆಟೋ ಮೂಲಕ ಪ್ರಚಾರ ನಡೆಸಿ ಕೇಂದ್ರ ಸರ್ಕಾರ ಕಳೆದ ನಾಲ್ಕೂವರೆ ವರ್ಷಗಳಿಂದ ಕಾರ್ಮಿಕರ ಹಿತವನ್ನು ರಕ್ಷಿಸುವಲ್ಲಿ ವಿಫಲವಾಗಿದ್ದು, ಕಾರ್ಮಿಕ ಸಮೂಹದ ಉಳಿವಿಗಾಗಿ ಭಾರತ ಬಂದ್ ನಡೆಸುತ್ತಿದ್ದು, ತಾವೆಲ್ಲರೂ ಸಹಕಾರ ನೀಡುವಂತೆ ಮನವಿ ಮಾಡಿದರು.

          ಪ್ರತಿಭಟನಕಾರರು ಗುಂಪು ಗುಂಪಾಗಿ ಬಾವುಟಗಳನ್ನು ಹಿಡಿದು ತೆರಳಿ ಬಂದ್ ಮಾಡುವಂತೆ ಒತ್ತಾಯ ಪಡಿಸುತ್ತಿದ್ದನ್ನು ಮನಗಂಡ ಪಿಎಸ್‍ಐ ಕೆ.ಸತೀಶ್‍ನಾಯ್ಕ, ಬಂದ್ ಮಾಡುವಂತೆ ಯಾವುದೇ ರೀತಿಯ ಒತ್ತಡ ಹೇರಬಾರದು. ಕೇವಲ ಮನವಿ ಮಾಡಬೇಕೆಂದು ತಾಕೀತು ಪಡಿಸಿದರಲ್ಲದೆ, ಪೊಲೀಸ್ ವಾಹನದ ಧ್ವನಿವರ್ಧದ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಿ ಎಂದಿನಂತೆ ಅಂಗಡಿ, ಹೋಟೆಲ್ ಮಾಲೀಕರು ಸ್ವತಂತ್ರರಾಗಿದ್ಧಾರೆ.

          ಬಲವಂತವಾಗಿ ಬಂದ್ ಮಾಡುವಂತೆ ಯಾರಾದರು ಒತ್ತಡ ಹೇರಿದ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ ತಿಳಿಸಿದರು. ಇದರಿಂದ ಸಂತಸಗೊಂಡ ಕೆಲವು ಹೋಟೆಲ್ ಅಂಗಡಿ ಮಾಲೀಕರು ಕೆಂಪು ಬಾವುಟ ಹಿಡಿದು ಬಂದ ಪ್ರತಿಭಟನಕಾರರನ್ನು ಕಂಡ ಕೂಡಲೇ ಅಂಗಡಿಗಳನ್ನು ಮುಚ್ಚುತ್ತಿದ್ದರು, ಅವರು ಹೋದ ಕೂಡಲೇ ವ್ಯಾಪಾರ ಮಾಡಿಕೊಳ್ಳುತ್ತಿದ್ದರು. ಮಧ್ಯಾಹ್ನ 1 ಗಂಟೆ ನಂತರ ಯಾವುದೇ ಪ್ರತಿಭಟನಕಾರರು ಆಗಮಿಸಿದ ಹಿನ್ನೆಲೆಯಲ್ಲಿ ಎಂದಿನಂತೆ ಜನಜೀವನ ಪ್ರಾರಂಭವಾಯಿತು. ಚಳ್ಳಕೆರೆ ನಗರ ಭಾರತ ಬಂದ್‍ಗೆ ಹೆಚ್ಚಿನ ಮಹತ್ವ ಕಂಡುಬರಲಿಲ್ಲ.

           ತಾಲ್ಲೂಕಿನಾದ್ಯಂತ ಯಾವುದೇ ಕೆಎಸ್‍ಆರ್‍ಟಿಸಿ ಬಸ್‍ಗಳು ಸಂಚರಿಸಲಿಲ್ಲ, ಖಾಸಗಿ ಬಸ್‍ಗಳ ಓಡಾಟ ಮಾಮೂಲಾಗಿತ್ತು, ಆಟೋರಿಕ್ಷಾಗಳು ಸಹ ಎಂದಿನಂತೆ ಕಾರ್ಯನಿರ್ವಹಿಸಿದವು, ಬ್ಯಾಂಕ್, ಅಂಚೆ ಕಚೇರಿ, ಶಾಲಾ ಕಾಲೇಜುಗಳು ಬಂದ್ ಆಗಿದ್ದವು. ಇಲ್ಲಿನ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಬಂದ್ ಹಿನ್ನೆಲೆಯಲ್ಲಿ ಯುವಕರು ಕ್ರಿಕೆಟ್ ಆಡಿದರು. ಕೆಎಸ್‍ಆರ್‍ಟಿಸಿ ಡಿಪೋ ವ್ಯವಸ್ಥಾಪಕ ಪ್ರಭು ಮಾತನಾಡಿ, ಇಲ್ಲಿನ ಘಟಕದಲ್ಲಿ 48 ಬಸ್‍ಗಳಿದ್ದು, 44 ಮಾರ್ಗಗಳಲ್ಲಿ ನಿತ್ಯ ಸೇವೆ ನೀಡುತ್ತಿದ್ದು, ಇಂದು ಕೇವಲ 4 ಮಾರ್ಗಗಳಲ್ಲಿ ಮಾತ್ರ ಬಸ್‍ಗಳು ಸಂಚರಿಸಿದ್ದು, ಅವುಗಳನ್ನು ಸಹ ಪ್ರತಿಭಟನೆ ಹಿನ್ನೆಲೆಯಲ್ಲಿ ವಾಪಾಸ್ ಪಡೆಯಲಾಯಿತು ಎಂದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here