ರೆಫರೆನ್ಸ್ ಲೈಬ್ರರಿವೊಂದು ರಾಜ್ಯದಲ್ಲಿ ಇಲ್ಲದಿರುವುದು ವಿಷಾದದ ಸಂಗತಿ: ನರಹಳ್ಳಿ ಬಾಲಸುಬ್ರಹ್ಮಣ್ಯ

ಧಾರವಾಡ

           ಕನ್ನಡದ ಎಲ್ಲಾ ಪ್ರಮುಖ ಲೇಖಕರ ಕೃತಿಗಳು ಒಂದೇ ಕಡೆ ಸಿಗುವ ಉಲ್ಲೇಖ ಗ್ರಂಥಾಲಯ (ರೆಫರೆನ್ಸ್ ಲೈಬ್ರರಿ)ವೊಂದು ರಾಜ್ಯದಲ್ಲಿ ಇಲ್ಲದಿರುವುದು ವಿಷಾದದ ಸಂಗತಿ. ಸಾಹಿತ್ಯ ಸಮ್ಮೇಳನಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡುವ ಸರ್ಕಾರಗಳಿಗೆ ಮನಸ್ಸು ಮಾಡಿದರೆ ಕನಿಷ್ಠ 10 ಕೋಟಿ ರೂ.ವೆಚ್ಚದಲ್ಲಿ ಮಾದರಿ ಗ್ರಂಥಾಲಯವೊಂದನ್ನು ಆರಂಭಿಸಲು ಕಷ್ಟವೇನಲ್ಲ. ಆದರೆ ಸರ್ಕಾರಕ್ಕೆ ಇಚ್ಛಾ ಶಕ್ತಿ ಕೊರತೆ ಇದೆ ಎಂದು ಹಿರಿಯ ವಿಮರ್ಶಕ ಹಾಗೂ ಸಾಹಿತಿ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಹೇಳಿದ್ದಾರೆ.

           84ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಂದು ರೈತರ ಜ್ಞಾನಾಭಿವೃದ್ಧಿ ಕೇಂದ್ರ ಸಭಾಂಗಣದ ಡಾ.ಶಂ.ಬಾ. ಜೋಷಿ ವೇದಿಕೆಯಲ್ಲಿ ಏರ್ಪಡಿಸಿದ್ದ ಮರು ಚಿಂತನೆ: ಆಧುನಿಕ ಸಾಹಿತ್ಯ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಶೋಧಕರು, ಸಾಹಿತ್ಯ ವಿದ್ಯಾರ್ಥಿಗಳಿಗೆ ವಿಷಯಗಳ ರೆಫರೆನ್ಸ್‍ಗಳಿಗೆ ಒಂದು ಗ್ರಂಥಾಲಯ ವ್ಯವಸ್ಥೆ ರಾಜ್ಯದಲ್ಲಿಲ್ಲ. ಈ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಯುವ ಜನಾಂಗಕ್ಕೆ ನಾವು ಓದಿ ಓದಿ ಎಂದು ಹೇಳುತ್ತಿದ್ದೇವೆ. ಆದರೆ ಓದುವವರಿಗೆ ನಾವು ಯಾವ ಅನುಕೂಲ ಮಾಡಿಕೊಟ್ಟಿದ್ದೇವೆ. ಸರ್ಕಾರಕ್ಕೆ ಕಣ್ಣೂ ಇಲ್ಲ, ಕಿವಿಯೂ ಇಲ್ಲ ಎಂದು ತೀಕ್ಷ್ಣವಾಗಿ ಟೀಕಿಸಿದರು.

          ಲೇಖಕರ ಮನೆಯಲ್ಲಿ ಸಾಕಷ್ಟು ಅತ್ಯಮೂಲ್ಯ ಕೃತಿಗಳಿವೆ. ಆದರೆ ಒಂದು ಮನೆಯಲ್ಲಿ ಎಷ್ಟು ಪುಸ್ತಕಗಳನ್ನು ಇಡಲು ಸಾಧ್ಯ ?. ಎಲ್ಲಾ ಲೇಖಕರ ಕೃತಿಗಳು ಒಂದೇ ಕಡೆ ಸಿಗುವ ಒಂದು ವಿಶಿಷ್ಟ ಗ್ರಂಥಾಲಯ ಇದ್ದರೆ ಎಷ್ಟು ಅನುಕೂಲವಾಗುತ್ತಿತ್ತು. ಸಾಹಿತ್ಯ ಸಮ್ಮೇಳನಕ್ಕೆ ಇಷ್ಟೊಂದು ಹಣ ಖರ್ಚು ಮಾಡುವ ಸರ್ಕಾರ ಒಂದು ಗ್ರಂಥಾಲಯ ಮಾಡುವ ನಿಟ್ಟಿನಲ್ಲಿ ಮುಂದಡಿ ಇಡಬೇಕು ಎಂದು ಒತ್ತಾಯಿಸಿದರು.
ತಾವು ಈ ಹಿಂದೆ ಸಾಹಿತ್ಯ ಪರಿಷತ್‍ನಲ್ಲಿದ್ದಾಗ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿದ್ದೆ. ನನ್ನ ಪ್ರಸ್ತಾವನೆಗೆ 37 ಮಂದಿ ಸದಸ್ಯರ ಪೈಕಿ ಕೇವಲ ಒಬ್ಬರು ಮಾತ್ರ ಬೆಂಬಲ ಸೂಚಿಸಿದರು. ಎಲ್ಲರಿಗೂ ಸಂಭ್ರಮ, ಆಚರಣೆ, ಅದ್ಧೂರಿಯೇ ಬೇಕಾಗಿದೆ. ಸಾಹಿತಿಗಳ ಮಾತು ಕೇವಲ ಗೊಣಗಾಟವಾಗಿ ಕೇಳುತ್ತಿದೆ. ಅದು ವಿಧಾನಸೌಧಕ್ಕೆ ತಲುಪುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

           ಕಾದಂಬರಿಕಾರ  ರಾಘವೇಂದ್ರ ಪಾಟೀಲ್ ಅವರು ಗುಲ್ವಾಡಿ ವೆಂಕಟರಾವ್ ಅವರ ಕಾದಂಬರಿಗಳ ಬಗ್ಗೆ ವಿಷಯ ಮಂಡಿಸಿ, ಗುಲ್ವಾಡಿ ಅವರು ಬರೆದ ಇಂದಿರಾಬಾಯಿ, ಭಾಗೀರಥಿ ಮತ್ತು ಸೀಮಂತಿನಿ ಕಾದಂಬರಿಗಳಲ್ಲಿ ಆಧುನಿಕತೆ, ಭಾರತೀಯ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕತೆ ಮೇಲೆ ಬೀರಿದ ಪರಿಣಾಮಗಳ ಬಗ್ಗೆ ಬೆಳಕು ಚೆಲ್ಲುತ್ತವೆ ಎಂದು ಉದಾಹರಣೆಗಳ ಮೂಲಕ ವಿವರಿಸಿದರು.
ಸಾಹಿತಿ ಹಾಗೂ ಬರಹಗಾರ ಡಾ.ಶಾಂತಿನಾಥ ದಿಬ್ಬಣ ಅವರು ಮಿರ್ಜಿ ಅಣ್ಣಾರಾಯ ಅವರ ಸಮಗ್ರ ವಾಙ್ಮಯ ಕುರಿತು ಮಾತನಾಡಿ, ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ ಮಿರ್ಜಿ ಅಣ್ಣಾರಾಯ ಅವರು ಸಣ್ಣ ಅವಧಿಯಲ್ಲಿ 14000 ಪುಟಗಳಷ್ಟು ಸಾಹಿತ್ಯ ರಚನೆ ಮಾಡಿದ್ದರು. ಸಮಾಜವನ್ನು ವಿಮರ್ಶಾತ್ಮಕವಾಗಿ ನೋಡಿದ ಅವರು, ತಮ್ಮ ಕಾದಂಬರಿಗಳಲ್ಲಿ ಸಮಾಜದ ಕಟ್ಟುಪಾಡುಗಳನ್ನು ಪ್ರಶ್ನಿಸಿದ್ದಾರೆ ಎಂದು ತಿಳಿಸಿದರು.

            ಸಾಹಿತಿ ಡಾ.ಬಸವರಾಜ ಸಾದರ ಅವರು ಬಸವರಾಜ ಕಟ್ಟಿಮನಿ ಅವರ ಕಾದಂಬರಿಗಳ ಬಗ್ಗೆ ಮಾತನಾಡಿ, ಅಯೋಗ್ಯ ಧಾರಾವಾಹಿಗಳನ್ನು ನಿರ್ಮಿಸುವ ಬದಲು ಕಟ್ಟಿಮನಿಯಂತಹ ಸಾಹಿತಿಗಳ ಸಾಹಿತ್ಯ ಕೃತಿಗಳನ್ನು ಆಧರಿಸಿ ಧಾರಾವಾಹಿ ನಿರ್ಮಿಸಿದರೆ ಟಿಆರ್‍ಪಿಯೂ ಹೆಚ್ಚುತ್ತದೆ. ಅದರೊಂದಿಗೆ ಸಾಮಾಜಿಕ ಜಾಗೃತಿ, ಸಾಮಾಜಿಕ ಸ್ವಾಸ್ಥವೂ ಹೆಚ್ಚುತ್ತದೆ ಎಂದು ಹೇಳಿ, ಕಟ್ಟಿಮನಿ ಕಾದಂಬರಿಗಳ ಬಗ್ಗೆ ಬೆಳಕು ಚೆಲ್ಲಿದರು.ಡಾ.ರುದ್ರೇಶ್ ಅದರಂಗಿ, ಎಂ.ಚಂದ್ರಶೇಖರ್, ಎಚ್.ಮುನಾಫ್ ಮತ್ತಿತರರು ಉಪಸ್ಥಿತರಿದ್ದರು.

          ವಿಳಂಬಕ್ಕೆ ಆಕ್ರೋಶ: ನಿನ್ನೆ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನಾ ಸಮಾರಂಭ ಸುಮಾರು 4 ಗಂಟೆ ವಿಳಂಬವಾಗಿ ಆರಂಭಗೊಂಡಿದೆ. ಸಾರ್ವಜನಿಕರ ಈ ಸಮಯವನ್ನು ವ್ಯರ್ಥ ಮಾಡುವುದು ಯಾರಿಗೂ ಶೋಭೆ ತರುವಂಥದ್ದಲ್ಲ. ಅದು ರಾಜಕಾರಣಿಗಳೇ ಆಗಿರಲಿ, ಸಂಘಟಕರೇ ಆಗಿರಲಿ. ಬೇರೆಯವರ ಸಮಯವನ್ನು ನಿರ್ಲಕ್ಷ್ಯವಾಗಿ ಕಾಣುವುದು ಸರಿಯಲ್ಲ ಎಂದು ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಆಕ್ರೋಶ ವ್ಯಕ್ತಪಡಿಸಿದರು.

           ಇಂದು ಬೆಳಗ್ಗೆ 9.45ಕ್ಕೆ ರೈತರ ಜ್ಞಾನಾಭಿವೃದ್ಧಿ ಕೇಂದ್ರ ಸಭಾಂಗಣದಲ್ಲಿ ಏರ್ಪಾಡಾಗಿದ್ದ ಗೋಷ್ಠಿಗೆ ಅರ್ಧಗಂಟೆ ಮೊದಲೇ ಆಗಮಿಸಿದ್ದ ಅವರು ಸಮಯ ಮೀರುತ್ತಿದ್ದರೂ ಸಂಘಟಕರು ಕಾರ್ಯಕ್ರಮ ಆರಂಭಿಸದಿದ್ದುದಕ್ಕೆ ಕೋಪಗೊಂಡು ಸ್ವತಃ ತಾವೇ ವೇದಿಕೆಗೆ ಹತ್ತಿ ಮೈಕ್ ಇಲ್ಲದೆಯೇ ಕಾರ್ಯಕ್ರಮ ಆರಂಭಿಸಿದರು. ಈ ವೇಳೆ ಅವರು ಸಂಘಟಕರ ವಿರುದ್ಧ ಹರಿಹಾಯ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap