ರಸ್ತೆ ಅಗಲೀಕರಣ ವಿಚಾರದಲ್ಲಿ ವಿಶೇಷ ಸಭೆ ಕರೆಯಲು ಒತ್ತಾಯ

0
9

ಹಗರಿಬೊಮ್ಮನಹಳ್ಳಿ:

           ಪಟ್ಟಣದಲ್ಲಿ ಪುರಸಭೆಯಿಂದ ನಡೆಯತ್ತಿರುವ ರಸ್ತೆ ಅಗಲೀಕರಣದ ಬಗ್ಗೆ ಸಾರ್ವಜನಿಕರಿಗೆ ವಿಪರೀತ ಗೊಂದಲವಿದ್ದು ಅವರಿಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಆದ್ದರಿಂದ ರಸ್ತೆ ಅಗಲೀಕರಣ ವಿಚಾರವಾಗಿ ವಿಶೇಷ ಸಭೆಯನ್ನು ಕರೆಯುವಂತೆ ಪುರಸಭೆ ಸದಸ್ಯ ಡಾ. ಸುರೇಶ್ ಕುಮಾರ್ ಒತ್ತಾಯಿಸಿದರು.

         ಪುರಸಭೆಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿ, ಆರಂಭದಿಂದಲೂ ರಸ್ತೆ ಅಗಲೀಕರಣ ವಿಚಾರದಲ್ಲಿ, ಪುರಸಭೆಯವರು ಎಡವುತ್ತಲೇ ಬಂದಿದ್ದಾರೆ. ಯಾವುದೇ ಸದಸ್ಯರಿಗೆ ಮಾಹಿತಿ ನೀಡದೆ ದಿಢೀರನೆ ಮನೆಮಾಲೀಕರಿಗೆ ಕೇವಿಯಟ್ ನೋಟೀಸ್ ಕೊಡುವ ಮೂಲಕ ನ್ಯಾಯಾಲಯ ಮೆಟ್ಟಿಲು ಹತ್ತಿದ್ದು ಸರಿಯಲ್ಲ. ಇದಕ್ಕಾಗಿ 10ಲಕ್ಷ ರೂ.ಗಳ ವೆಚ್ಚಮಾಡಿದ್ದು ಸಾರ್ವಜನಿಕರ ವಲಯದಲ್ಲಿ ಚರ್ಚೆಯಾಗುತ್ತಿದೆ.

          ಇದಲ್ಲದೆ, ನಗರದಲ್ಲಿ ಒಂದೊಂದು ರಸ್ತೆಗೆ ಒಂದೊಂದು ಅಳತೆ ನಿಗದಿ ಪಡಿಸಿದರುವುದು ಕೂಡ ಸಾರ್ವಜನಿಕರಿಗೆ ಗೊಂದಲ ಮೂಡಿಸಿದೆ. ಆದ್ದರಿಂದ ಇದಕ್ಕಾಗಿಯೇ ಒಂದು ವಿಶೇಷ ಸಭೆಯನ್ನು ಕರೆದು ಎಲ್ಲರ ಅಭಿಪ್ರಾಯ ಹಾಗೂ ಸಲಹೆಗಳನ್ನು ಕ್ರೂಢಿಕರಿಸಿ ಒಂದು ತೀರ್ಮಾನಕ್ಕೆ ಬರಬೇಕಾಗಿದೆ ಎಂದರು.

          ಸದಸ್ಯ ಹುಳ್ಳಿ ಮಂಜುನಾಥ ಹಾಗೂ ಲಕ್ಷ್ಮಣ ಮಾತನಾಡಿ ಯಾವುದೇ ಸರಿಯಾದ ಮಾಹಿತಿ ನೀಡದೆ ರಸ್ತೆ ಅಗಲೀಕರಣವನ್ನು ನಿಮಗೆ ತಿಳಿದಂತೆ ಮಾಡುತಿದ್ದೀರಿ ಇದು ಸರಿ ಅಲ್ಲ. ಪಟ್ಟಣದ ಎಲ್ಲಾ ರಸ್ತೆಗಳು ಏಕ ರೂಪ ಅಗಲೀಕರಣವಾಗಲಿ, ಅದು ಬಿಟ್ಟು ಎರಡೆರಡುಬಾರಿ ನೀವೆ ಮನೆಗಳಿಗೆ ಗುರತು ಮಾಡಿರುವುದನ್ನು ನೋಡಿದರೆ, ಈ ವಿಷಯದಲ್ಲಿ ನಿಮಗೆ ಸರಿಯಾದ ಮಾಹಿತಿ ಇಲ್ಲದಿರುವುದು ಎದ್ದು ಕಾಣುತ್ತಿದೆ.

          ಅಲ್ಲದೆ ನಿಮ್ಮ ಬಳಿ ಇರುವ ನಕಾಶೆ ಬಗ್ಗೆ ಈ ಕ್ಷಣಕ್ಕೂ ನಿಮಗೇ ಗೊಂದಲವಿದೆ. ಒಂದೊಂದು ರಸ್ತೆಗೆ ಎರಡೆರಡು ನಕಾಶೆಗಳು ಎಲ್ಲರ ಬಳಿಯೂ ಇವೆ. ಒಂದೆಡೆ ಕೂಡ್ಲಿಗಿ ವೃತ್ತದ ರಸ್ತೆಯನ್ನು ರಾಜ್ಯ ಹೆದ್ದಾರಿ ಎನ್ನುವ ನೀವು, ಅದು ಮುಂದುವರೆಯಲು ಕಂಟಿನ್ಯೂಟಿ ಕೊಡುವುದನ್ನು ಮರೆತು ರಸ್ತೆ ಅಗಲೀಕರಣದ ಅಳತೆಯನ್ನೇ ಕಡಿಮೆ ಮಾಡುತ್ತೀರಿ, ಇದಕ್ಕೆ ಸಮಂಜಸವಾದ ಉತ್ತರ ಕೊಡಲು ನಿಮ್ಮಿಂದ ಸಾಧ್ಯವಾಗುತ್ತಿಲ್ಲ ಇದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಎಡೆಮಾಡಿಕೊಡುತ್ತದೆ ಎಂದರು.

          ಬಸವೇಶ್ವರ ಬಜಾರದಲ್ಲಿರುವ ಟ್ರಾಫಿಕ್ ಕಿರಿಕಿರಿಗೆ ಮುಕ್ತಾಯವಾಡಲು ಗೂಡಂಗಡಿಗಳನ್ನು ತೆರವುಗೊಳಿಸಬೇಕು ಎಂದು ಸದಸ್ಯ ಮೃತ್ಯುಂಜಯ ಬದಾಮಿ ಸಭೆಯ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ಹುಳ್ಳಿ ಮಂಜುನಾಥ ಗೂಡಂಗಡಿಯವರು ನಿತ್ಯ ಬದುಕಿಗಾಗಿ ಸಣ್ಣ ವ್ಯಾಪಾರಮಾಡಿಕೊಂಡು ಹೊರಟಿದ್ದಾರೆ, ತೆರವು ಗೊಳಿಸುವುದಾದರೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಪಟ್ಟು ಹಿಡಿದರು. ಇದಕ್ಕೆ ಮಾಜಿ ಅಧ್ಯಕ್ಷ ಜೋಗಿ ಹನುಮಂತ ಮತ್ತು ಸದಸ್ಯ ಭರತ್ ಹಾಗೂ ಗಂಗಾಧರ ದನಿಗೂಡಿಸಿ ರಸ್ತೆಯಲ್ಲಿರುವ ಬಂಡಿಗಳನ್ನು ಚರಂಡಿಯ ಮೇಲೆ ಇಟ್ಟುಕೊಳ್ಳಲು ಅವಕಾಶ ಕೊಡಿ, ಅವುಗಳು ಹಿಂದಿರುವ ಅಂಗಡಿಗಳಿಗೆ ತೊಂದರೆ ಯಾಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

          ಎಪಿಎಂಸಿ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ನಿತ್ಯದ ತರಕಾರಿ ಸಂತೆ ಸ್ಥಳಾಂತರ ಗೊಳಿಸುವಂತೆ ಎಪಿಎಂಸಿಯಿಂದ ಬಂದಿರುವ ಮನವಿಯನ್ನು ಪುರಸಭೆಯ ಮುಖ್ಯಕಾರ್ಯನಿರ್ವಹಕ ಅಧಿಕಾರಿ ಪ್ರಕಾಶ್ ಚನ್ನಪ್ಪನವರ್ ಸಭೆಯ ಗಮನಕ್ಕೆ ತಂದರು. ಸಭೆಯಲ್ಲಿ ಈ ವಿಷಯದ ಮೇಲೆ ಚರ್ಚೆ ನಡೆದಾಗ ಕೆಲವರು ಪರ ಮತ್ತು ವಿರೋಧ ವ್ಯಕ್ತಪಡಿಸಿದರು. ಯು.ಬಾಲು ಮಾತನಾಡಿ ಎಪಿಎಂಸಿಯ ಆವರಣದಲ್ಲಿ ರೈತರಿಗೂ ಮತ್ತು ವರ್ತಕರಿಗೂ ಈ ಸಂತೆಯಿಂದ ತೊಂದರೆಯಾಗುತಿದ್ದು ಅದನ್ನು ಸ್ಥಳಾಂತರಿಸಬೇಕು ಎಂದರು. ಅಧಿಕಾರಿ ಪ್ರತಿಕ್ರಿಯಿಸಿ ಅಲ್ಲಿ ನಿತ್ಯದ ಸಂತೆ ಇರುವ ಕಾರಣದಿಂದಲೇ ಎಪಿಎಂಸಿಗೆ ಹೊಂದಿಕೊಂಡಿರುವಂತೆ ಇಂದಿರಾ ಕ್ಯಾಂಟಿನ್ ತೆರೆಯಲಾಗುತ್ತಿದೆ ಎಂದರು. ಅಧ್ಯಕ್ಷ ಟಿ.ರಾಘವೇಂದ್ರ ಮಾತನಾಡಿ ಮುಂದಿನ ದಿನಗಳಲ್ಲಿ ಸೂಕ್ತವಾದ ಸ್ಥಳ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದೆಂದು ಸಭೆಗೆ ತಿಳಿಸಿದರು.

         ಈ ಸಭೆಯಲ್ಲಿ ಮಧ್ಯೆ ಪ್ರವೇಶಿಸಿದ ಗಂಗಾವತಿ ವಿಜಯಕುಮಾರ್ ಮನವಿ ಸಲ್ಲಿಸಿ, ಗಂಗಾವತಿ ವೆಂಕೋಬಣ್ಣನವರ ಧರ್ಮಛತ್ರವು ಸಾರ್ವಜನಿಕರಿಗೆ ಉಚಿತವಾಗಿ ಕಲ್ಯಾಣ ಕಾರ್ಯಕ್ರಮಗಳನ್ನು ಮಾಡಿಕೊಳ್ಳಲೆಂದೇ ನಿರ್ಮಾಣ ಗೊಂಡಿದೆ. ಇದನ್ನು ನಮ್ಮ ವಂಶಸ್ಥರು ಸಾರ್ವಜನಿಕರ ಅನುಕೂಲಕ್ಕಾಗಿ ದಾನವಾಗಿ ನೀಡಿದ್ದಾರೆ. ಇದಕ್ಕೂ ಸಹ ಪುರಸಭೆ ತೆರಿಗೆ ವಿಧಿಸುತಿದ್ದು ದಯವಿಟ್ಟು ತೆರಿಗೆ ಮುಕ್ತಗೊಳಿಸಿ ಎಂದರು. ಇದಕ್ಕೆ ಸದಸ್ಯರು ಸರ್ವಾನುಮತದಿಂದ ಸ್ಪಂದಿಸಿ ಪಟ್ಟಣದಲ್ಲಿ ಗಂಗಾವತಿ ವಶಂಸ್ಥರು ಸಾರ್ವಜನಿಕರಿಗೆ ಸಾಕಷ್ಟು ಆಸ್ತಿಯನ್ನು ದಾನ ನೀಡಿದ್ದಾರೆ ಅದಕ್ಕಾಗಿ ಧರ್ಮಛತ್ರಕ್ಕೆ ಯಾವುದೇ ತೆರಿಗೆ ಹಾಕುವುದು ಬೇಡವೆಂದರು.

          ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಹುಲಿಗೆಮ್ಮ, ಸದಸ್ಯರಾದ ಹೆಚ್.ಎಂ.ಚೋಳರಾಜ್, ಮಾತಗ್ಯಾಸ್ ಯರ್ರಿಸ್ವಾಮಿ, ಕನಕಪ್ಪ, ಅಲ್ಲಾಭಕ್ಷಿ, ಕವಿತಾ ಹಾಲ್ದಾಳ್, ನಜುಬುನ್ನಿಕಾ ಬೇಗಂ, ಜಾಹಿದಾ ಬೇಗಂ, ಸಂಜೋತಾ, ಸಬೀಯಾ ಬೇಗಂ, ಜರಿನಾಬೇಗಂ, ಸರಸ್ವತಿ, ಕಲ್ಪನಾ, ಹುಲ್ಮನಿ ನೀಲಮ್ಮ ಹಾಗೂ ಪುರಸಭೆ ಸಿಬ್ಬಂದಿ ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here