ಸಚಿವರಂತೆ ಸಾಮಾನ್ಯ ಜನರನ್ನೂ ಚಿಕಿತ್ಸೆಗೆ ವಿದೇಶಕ್ಕೆ ಕಳುಹಿಸಿ

ಹುಳಿಯಾರು

      ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡೂ ಅನಾರೋಗ್ಯ ಪೀಡಿತ ಸಚಿವರನ್ನು ವಿದೇಶಕ್ಕೆ ಚಿಕಿತ್ಸೆಗೆ ಕಳುಹಿಸಿ ರಾಜ್ಯದ ಜನರಿಂದ ಸಂಗ್ರಹಿಸಿದ್ದ ತೆರಿಗೆ ಹಣದಲ್ಲಿ ಚಿಕಿತ್ಸಾ ವೆಚ್ಚ ಭರಿಸಿದೆ. ಆದರೆ ಸಾಮಾನ್ಯ ಜನರು ಅನಾರೋಗ್ಯಕ್ಕೀಡಾದರೆ ಅದೇ ವೈದ್ಯರಿಲ್ಲದ, ಔಷಧಿಗಳಿಲ್ಲದ ಸರ್ಕಾರಿ ಆಸ್ಪತ್ರೆಗೆ ಹೋಗಬೇಕು. ಸಚಿವರಿಗೆ ಇರುವುದು ಒಂದೇ ಓಟು, ಸಾಮಾನ್ಯ ನಾಗರೀಕನಿಗೆ ಇರುವುದು ಒಂದೇ ಓಟು.

          ಆದರೂ ಈ ತಾರತಮ್ಯ ನೀತಿ ದೇಶದಲ್ಲಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಗುಣಮಟ್ಟದ ಚಿಕಿತ್ಸೆ ನೀಡುವ ಸಕಲ ಸೌಕರ್ಯಗಳನ್ನೂ ಕಲ್ಪಿಸಿ, ಇಲ್ಲವಾದರೆ ಸಚಿವರಂತೆ ಸಾಮಾನ್ಯ ಜನರನ್ನೂ ಚಿಕಿತ್ಸೆಗೆ ವಿದೇಶಕ್ಕೆ ಕಳುಹಿಸಿ ಎಂದು ಜಿಲ್ಲಾ ಎಐಟಿಯುಸಿ ಅಧ್ಯಕ್ಷ ಗಿರೀಶ್ ಹೇಳಿದರು.

         ಹುಳಿಯಾರು ಹೋಬಳಿ ಸೋಮಜ್ಜನಪಾಲ್ಯದಲ್ಲಿ ನಡೆದ ಕಟ್ಟಡ ಕಾರ್ಮಿಕರ ಸಂಘದ ವಾರ್ಷಿಕ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಪ್ರಧಾನಿ ಮೋದಿಯವರು ಭಾಷಣದಲ್ಲಿ ಬೇಟಿ ಬಚಾವೋ, ಬೇಟಿ ಪಡಾವೋ ಎಂದು ಸ್ತ್ರೀಪರ ಮಾತನಾಡುತ್ತಾರೆ. ಆದರೆ ಅಂಗನವಾಡಿ ಕಾರ್ಯಕರ್ತೆಯರಿಗೆ, ಆಶಾ ಕಾರ್ಯಕರ್ತೆಯರಿಗೆ, ಬಿಸಿಯೂಟದ ಸಿಬ್ಬಂಧಿಗೆ ಕನಿಷ್ಠ ಸಂಬಳ ನೀಡುತ್ತಾರೆ. ಸ್ತ್ರೀಯರ ಮೇಲೆ ಇವರಿಗೆ ಗೌರವ ಮತ್ತು ಅನುಕಂಪ ಇದ್ದರೆ ತಕ್ಷಣ ಇವರೆಲ್ಲರ ಸಂಬಳವನ್ನು ಪುರುಷ ಕಾರ್ಮಿಕ ಪಡೆಯುವ ದಿನಕ್ಕೆ 600 ರೂ. ನಂತೆ ಮಾಸಿಕ 18 ಸಾವಿರ ರೂ. ಮಾಡಬೇಕು ಎಂದು ಆಗ್ರಹಿಸಿದರು.

        ಜಿಲ್ಲಾ ಎಐಟಿಯುಸಿ ಖಜಾಂಜಿ ಅಶ್ವತ್ ನಾರಾಯಣ್ ಅವರು ಮಾತನಾಡಿ ಕರ್ತವ್ಯ ನಿರತ ಕಾರ್ಮಿಕ ಸಾವನ್ನಪ್ಪಿದರೆ ಐದು ಲಕ್ಷ ರೂ. ಆಸ್ಪತ್ರೆ ವೆಚ್ಚವಾಗಿ ಎರಡು ಲಕ್ಷ ರು. ಅಂಗವೈಕಲ್ಯವಾದರೆ 1.5 ಲಕ್ಷ ರೂ ಮತ್ತು ಮಾಸಿಕ ಒಂದು ಸಾವಿರ ರೂ ಪಿಂಚಣಿ, ಸಹಜ ಸಾವಿಗೆ 54 ಸಾವಿರ ರು. ಮಕ್ಕಳ ವಿದ್ಯಾಭ್ಯಾಸ, ಮದುವೆ, ಹೆರಿಗೆ ಹೀಗೆ ಅನೇಕ ಸೌಲಭ್ಯಗಳು ಕಾರ್ಮಿಕ ಮಂಡಳಿಯಲ್ಲಿದೆ ಆದರೆ ಇವುಗಳಿಗಾಗಿ ಅರ್ಜಿ ಸಲ್ಲಿಸಿ ಎರಡು ಮೂರು ವರ್ಷಗಳಾಗಿದ್ದರೂ ಮಂಜೂರು ಮಾಡದೆ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆಯನ್ನು ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.

        ರಾಜ್ಯ ರೈತ ಸಂಘದ (ಹೊಸಹಳ್ಳಿ ಚಂದ್ರಣ್ಣ ಬಣ) ರಾಜ್ಯಾಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ, ರೈತ ಸಂಘದ ಜಿಲ್ಲಾಧ್ಯಕ್ಷ ಈಶ್ವರಪ್ಪ, ಹೋಬಳಿ ಅಧ್ಯಕ್ಷ ಬೀರಪ್ಪ, ಕರ್ಮಿಕರ ಸಂಘದ ಸಿದ್ಧರಾಮಯ್ಯ, ಕರಿಯಪ್ಪ, ನಾಗಣ್ಣ, ಶಿವಣ್ಣ ಮತ್ತಿತರರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap