ಸಮಸ್ಯೆಗಳಿಗೆ ಕಾಂಗ್ರೆಸ್-ಬಿಜೆಪಿ ಪರಿಹಾರವಲ್ಲ

0
8

ದಾವಣಗೆರೆ :

      ಕಾಂಗ್ರೆಸ್-ಬಿಜೆಪಿ ಪಕ್ಷಗಳು ಜನರ ಸಮಸ್ಯೆಗಳಿಗೆ ಪರಿಹಾರವಲ್ಲ, ಬದಲಾಗಿ ಜನ ಹೋರಾಟವೇ ಜನರ ಸಮಸ್ಯೆಗಳಿಗೆ ಪರಿಹಾರ ಎಂದು ಎಸ್‍ಯುಸಿಐ ಕಮ್ಯುನಿಷ್ಟ್ ಪಕ್ಷದ ರಾಜ್ಯ ಸಮಿತಿ ಸದಸ್ಯ ಟಿ.ಎಸ್.ಸುನೀತ್ ಕುಮಾರ್ ತಿಳಿಸಿದರು.

        ಎಸ್‍ಯುಸಿಐ ಅಭ್ಯರ್ಥಿ ಮಧು ತೊಗಲೇರಿ ಪರವಾಗಿ ಮತಯಾಚನೆ ಮಾಡಲು ತಾಲೂಕಿನ ಆನಗೋಡು, ಮಾಯಕೊಂಡ, ಬಾಡಾ, ಅತ್ತಿಗೆರೆ, ಹಿರೇತೊಗಲೇರಿ ಮತ್ತಿತರೆ ಗ್ರಾಮಗಳಲ್ಲಿ ಏರ್ಪಡಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ನಂತರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಸಂಸದರು ದಾವಣಗೆರೆ ಕ್ಷೇತ್ರದಿಂದ ಚುನಾಯಿತರಾಗಿದ್ದಾರೆ ಹಾಗೂ ಕೇಂದ್ರದಲ್ಲೂ ಸಹ ಈ ಪಕ್ಷಗಳು ಅಧಿಕಾರ ನಡೆಸಿವೆ. ಆದರೆ, ಈ ಎರಡೂ ಪಕ್ಷಗಳು ಜನರ ಸಮಸ್ಯೆಗಳಿಗೆ ಪರಿಹಾರವಲ್ಲ, ಬದಲಾಗಿ ಜನ ಹೋರಾಟವೇ ಜನರ ಸಮಸ್ಯೆಗಳಿಗೆ ಪರಿಹಾರ ಎಂದು ಹೇಳಿದರು.

        ಕಳೆದ ಕಾಂಗ್ರೆಸ್ ಸರ್ಕಾರವು ಹಲವಾರು ಕಾರ್ಮಿಕ ವಿರೋಧಿ ನೀತಿಗಳ ಜೊತೆಗೆ ಜಾಗತೀಕರಣದ ನೀತಿಗಳಿಗೆ ಒಪ್ಪಿಗೆ ಸೂಚಿಸಿದೆ. ಇದರಿಂದಾಗಿ ಶಿಕ್ಷಣ, ಆರೋಗ್ಯ, ಇನ್ನಿತರೆ ಸೇವಾ ಕ್ಷೇತ್ರಗಳು ಖಾಸಗೀಕರಣಕ್ಕೆ ಒಳಗಾಗಿದೆ. UPಂ ಎರಡರ ಕಾಮನ್ ವೆಲ್ತ್ ಹಗರಣ, ಆದರ್ಶ ಹೌಸಿಂಗ್ ಹಗರಣ, 2ಜಿ ತರಂಗ ಹಗರಣ, ಇನ್ನಿತರೆ ಭ್ರಷ್ಟಾಚಾರಗಳು ನಡೆದವು.

        ಇಂತಹ ಭ್ರಷ್ಟಾಚಾರದ ಪರ್ಯಾಯವಾಗಿ ಒಳ್ಳೆಯ ಆಡಳಿತಕ್ಕಾಗಿ 2019ರಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತಂದರು. ಬಿಜೆಪಿ ಪಕ್ಷದ ಈ 5 ವರ್ಷದ ಅಧಿಕಾರದ ಅವಧಿಯಲ್ಲಿ ಜಾಗತಿಕರಣದ ನೀತಿಗಳು ಅಬ್ಬರದಿಂದ ಜಾರಿಗೊಂಡವು. ಜೊತೆಗೆ ತೀವ್ರ ಕೋಮುವಾದಿ ಕಲಹಗಳು ನಡೆಸಲ್ಪಟ್ಟವು ಇಂತಹ ಜನ ವಿರೋಧಿ ನೀತಿಗಳನ್ನು ಸಂಸತ್ತಿನಲ್ಲಿ ಚುನಾಯಿತಗೊಂಡ ಯಾವ ಸಂಸದರು ಸಹ ಪ್ರಶ್ನೆ ಮಾಡಲಿಲ್ಲ ಎಂದು ಆರೋಪಿಸಿದರು.

         ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಬಂಡವಾಳಶಾಹಿಗಳ ಸೇವೆ ಮಾಡುವ ನಿಷ್ಠಾವಂತರ ಪಕ್ಷಗಳು ಈ ಎರಡೂ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳಾಗಿವೆ. ದಾವಣಗೆರೆ ಕ್ಷೇತ್ರದ ಸಂಸದ ಜಿ ಎಂ ಸಿದ್ದೇಶ್ವರ್ ರವರು ಮೂರುಬಾರಿ ಚುನಾಯಿತರಾದರು. ಈ 5 ವರ್ಷಗಳ ಅವಧಿಯಲ್ಲಿ ರೈತರ ಆತ್ಮಹತ್ಯೆ, ಬೆಲೆ ಏರಿಕೆ, ನೋಟು ಅಮಾನ್ಯೀಕರಣ, ಬರಗಾಲ, ಶೀಕ್ಷಣದ ವ್ಯಾಪಾರಿಕರಣ ಇತ್ಯಾದಿ ಸಮಸ್ಯೆಗಳ ಬಗ್ಗೆ ಒಂದೂ ಪ್ರಶ್ನೆಯನ್ನು ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

         ಎಲ್ಲಾ ಪಕ್ಷಗಳು ಜಾತಿ, ಧರ್ಮದ ರಾಜಕೀಯವನ್ನು ಮಾಡುತ್ತಿವೆ. ಇದು ಕೆಟ್ಟ ಬೆಳವಣಿಗೆ. ಜಾತಿ, ಧರ್ಮ ಇವು ಮನುಷ್ಯನ ಖಾಸಗೀ ವಿಷಯಗಳು ಇವುಗಳನ್ನು ಸಾರ್ವಜನಿಕ ಜೀವನದಲ್ಲಿ ತರಬಾರದು ಎಂದು ಹೇಳಿದರು. ಜನರಿಗೆ ಬೇಕಾಗಿರುವುದು ಮಾನವೀಯತೆ, ಪ್ರಾಮಾಣಿಕತೆ, ನೈತಿಕತೆ, ಮಾನವೀಯ ಮೌಲ್ಯಗಳು ಬೇಕೆ ಹೊರೆತು ಧರ್ಮ ಅಲ್ಲ ಎಂದು ಹೇಳಿದರು.

        ಪ್ರಚಾರ ಸಭೆಯಲ್ಲಿ ಪಕ್ಷದ ಅಭ್ಯರ್ಥಿ ಮಧು ತೊಗಲೇರಿ, ಜಿಲ್ಲಾ ಕಾರ್ಯದರ್ಶಿ ಮಂಜುನಾಥ್ ಕೈದಾಳೆ, ಮಂಜುನಾಥ್ ಕುಕ್ಕವಾಡ, ಬಿ.ಆರ್.ಅಪರ್ಣ, ಬನಶ್ರೀ, ಯತೀಂದ್ರ, ಭಾರತಿ, ಪರಶುರಾಮ್, ಸೌಮ್ಯ, ಸ್ಮಿತಾ, ವಸಂತ್, ಸತೀಶ್, ಚಂದ್ರಶೇಖರಪ್ಪ ಕಾವ್ಯ, ನಾಗರಾಜ್ ಮತ್ತಿತರರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here