ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಆಹ್ವಾನ ನೀಡದ ಸಮ್ಮೇಳನ ಸಮಿತಿ

ಬೆಂಗಳೂರು

      ಧಾರವಾಡದಲ್ಲಿ ನಡೆದ ಮೂರು ದಿನಗಳ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕನ್ನಡದ ನಾಡು, ನುಡಿ ರಕ್ಷಣೆಗಾಗಿ ಟೊಂಕಕಟ್ಟಿ ನಿಂತಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಆಹ್ವಾನ ನೀಡದೇ ನಿರ್ಲಕ್ಷ್ಯವಹಿಸಿರುವ ಸಂಗತಿ ಬೆಳಕಿಗೆ ಬಂದಿದೆ.

      ಮೂರು ದಿನಗಳ ಸಮ್ಮೇಳನದಲ್ಲಿ ನಾಡಿನ ಮೂಲೆ ಮೂಲೆಗಳಿಂದ, ದೇಶ ವಿದೇಶಗಳಿಂದ ಕನ್ನಡ ಸಾಹಿತ್ಯಾಸಕ್ತರು, ಕನ್ನಡ ಪ್ರೇಮಿಗಳು, ಸರ್ಕಾರದ ವಿವಿಧ ನಿಗಮ, ಮಂಡಳಿಗಳು, ಪ್ರಾಧಿಕಾರಗಳ ಮುಖ್ಯಸ್ಥರು, ರಾಜಕೀಯ ಪಕ್ಷಗಳ ಧುರೀಣರು ಪಾಲ್ಗೊಂಡು ಕನ್ನಡ ಪ್ರೀತಿಯನ್ನು ಮೆರೆದಿದ್ದರು.

      ಆದರೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅನುಪಸ್ಥಿತಿ ಇಲ್ಲಿ ಎದ್ದು ಕಾಣುತ್ತಿತ್ತು. ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಸೇರಿದಂತೆ ಯಾವುದೇ ಪ್ರತಿನಿಧಿಗಳು ಈ ಸಮಾವೇಶದಲ್ಲಿ ಭಾಗಿಯಾಗಿರಲಿಲ್ಲ. ಕನ್ನಡ ಪುಸ್ತಕ ಪ್ರಾಧಿಕಾರ ಸೇರಿ ಹಲವು ಸರ್ಕಾರದ ಸಂಸ್ಥೆಗಳು ಸಮ್ಮೇಳದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದವು. ಆದರೆ ಪ್ರಾಧಿಕಾರಕ್ಕೆ ಆಹ್ವಾನವನ್ನೂ ಸಹ ನೀಡಿರಲಿಲ್ಲ. ಆಹ್ವಾನ ಪತ್ರಿಕೆಯಲ್ಲಿ ಪ್ರಾಧಿಕಾರದ ಹೆಸರನ್ನೂ ಸಹ ಮುದ್ರಿಸಿರಲಿಲ್ಲ. ಇದು ಶಿಷ್ಟಾಚಾರದ ಬಹುದೊಡ್ಡ ಲೋಪ ಎಂದು ವ್ಯಾಖ್ಯಾನಿಸಲಾಗುತ್ತಿದೆ.

     ಒಂದು ಸಾವಿರ ಇಂಗ್ಲೀಷ್ ಶಾಲೆಗಳಿಗೆ ಸರ್ಕಾರ ಅನುಮತಿ ನೀಡಿದ್ದನ್ನು ಮೊದಲು ವಿರೋಧಿಸಿದ್ದೇ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ . ಎಸ್.ಜಿ. ಸಿದ್ದರಾಮಯ್ಯ. ಮಾತೃ ಭಾಷಾ ಶಿಕ್ಷಣದ ವಿಚಾರದಲ್ಲಿ ಕಾನೂನು ಹೋರಾಟ ರೂಪಿಸಿದ್ದು, ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ ದೊರಕಿಸಿಕೊಡಲು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದು ಸಹ ಇದೇ ಪ್ರಾಧಿಕಾರ. ಆದರೆ ಸಾಹಿತ್ಯ ಸಮ್ಮೇಳನದಲ್ಲಿ ಅಭಿವೃದ್ಧಿ ಪ್ರಾಧಿಕಾರವನ್ನು ನಿರ್ಲಕ್ಷಿಸಿರುವುದು ಭಾರೀ ಅಸಮಾಧಾನಕ್ಕೆ ಕಾರಣವಾಗಿದೆ.

      ಆಡಳಿತದಲ್ಲಿ ಕನ್ನಡ ಭಾಷೆ ಅನುಷ್ಠಾನ ವಿಚಾರದಲ್ಲಿ ನಿರಂತರವಾಗಿ ಪ್ರಗತಿ ಪರಿಶೀಲನೆ ನಡೆಸುತ್ತಿರುವ ಪ್ರಾಧಿಕಾರಕ್ಕೆ ಸಾಹಿತ್ಯ ಸಮ್ಮೇಳನ ಆಯೋಜಿಸಿದ್ದ ಕನ್ನಡದ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿನ ಧೋರಣೆ ಬರಸಿಡಿಲು ಬಡಿದಂತಾಗಿದೆ.

      ಈ ಕುರಿತು ತಮ್ಮ ನೋವು ಹಂಚಿಕೊಂಡ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ  ಎಸ್.ಜಿ. ಸಿದ್ದರಾಮಯ್ಯ, ” ಸಾಹಿತ್ಯ ಸಮ್ಮೇಳನಕ್ಕೆ ನಮಗೆ ಆಹ್ವಾನ ಇರಲಿಲ್ಲ. ವೈಯಕ್ತಿಯ ಆಮಂತ್ರಣವಿರಲಿ. ಕನಿಷ್ಠ ಪಕ್ಷ ಆಹ್ವಾನ ಪತ್ರಿಕೆಯಲ್ಲೂ ಪ್ರಾಧಿಕಾರದ ಹೆಸರು ಮುದ್ರಿಸಿರಲಿಲ್ಲ. ಇದಕ್ಕೆ ಕಾರಣವೇನೆಂದು ತಮಗೆ ತಿಳಿದಿಲ್ಲ. ಸಾಹಿತ್ಯ ಸಮ್ಮೇಳನದಲ್ಲಿ ಪ್ರಾಧಿಕಾರದ ಗೌರವ, ಪ್ರತಿಷ್ಠೆಯನ್ನು ತಳಮಟ್ಟಕ್ಕೆ ಇಳಿಸಲಾಗಿದೆ” ಎಂದು ನೊಂದು ನುಡಿದರು.

      ಸಮ್ಮೇಳನದ ಅಧ್ಯಕ್ಷ ಡಾ. ಚಂದ್ರಶೇಖರ ಕಂಬಾರರು ನನ್ನ ಗುರುಗಳು. ಅವರ ಮೇಲಿನ ಗೌರವಕ್ಕಾಗಿ ನಾನು ಸಮ್ಮೇಳನಕ್ಕೆ ತೆರಳಲು ಸಜ್ಜಾಗಿದ್ದೆ. ಆದರೆ ವೈಯಕ್ತಿಕವಾಗಿ ಸಮ್ಮೇಳನಕ್ಕೆ ಹೋಗುವುದು ಬೇರೆ. ಪ್ರಾಧಿಕಾರದ ಅಧ್ಯಕ್ಷನಾಗಿ ತೆರಳುವುದು ಬೇರೆ. ಪ್ರಾಧಿಕಾರದ ಗೌರವ ಕಾಪಾಡುವ ಉದ್ದೇಶದಿಂದ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿಲ್ಲ ಎಂದು  ಎಸ್.ಜಿ. ಸಿದ್ದರಾಮಯ್ಯ ಸ್ಪಷ್ಟಪಡಿಸಿದರು .ಸಾಹಿತ್ಯ ಸಮ್ಮೇಳನ ನಡೆಯುವ ಸಂದರ್ಭದಲ್ಲೇ ಮುಂಬೈನಲ್ಲಿ ಕನ್ನಡ ಕಾರ್ಯಕ್ರಮವೊಂದು ಆಯೋಜನೆಗೊಂಡಿತ್ತು. ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಿನ್ನೆ ರಾತ್ರಿ ಬೆಂಗಳೂರಿಗೆ ವಾಪಸ್ ಬಂದೆ ಎಂದು ಅವರು ತಿಳಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap