ಸಂಕ್ರಾಂತಿ ಹಬ್ಬಕ್ಕೆ ಖರೀದಿ ಭರಾಟೆ ಜೋರು

ಚಿತ್ರದುರ್ಗ

     ಸುಗ್ಗಿ ಹಬ್ಬ ಎಂದೇ ಜನಜನಿತವಾಗಿರುವ ಮಕರ ಸಂಕ್ರಾಂತಿ ಆಚರಣೆಗೆ ನಾಡಿನ ಜನತೆ ಸಜ್ಜಾಗಿದ್ದು, ಎಲ್ಲೆಡೆ ಸಂಭ್ರಮ ಮನೆ ಮಾಡಿದೆ. ಮಾರುಕಟ್ಟೆಯಲ್ಲಿ ಕಬ್ಬು, ಎಳ್ಳು, ಬೆಲ್ಲ, ಸಕ್ಕರೆ ಅಚ್ಚು, ಹೂ, ಹಣ್ಣು ಖರೀದಿ ಭರಾಟೆ ಜೋರಾಗಿದೆ.

      ಮನೆ ಮನೆಗಳಲ್ಲಿ ಆಚರಿಸುವ ಹಬ್ಬದ ಸಂಭ್ರಮಕ್ಕೆ ಕಳೆದ ಕೆಲವು ದಿನಗಳಿಂದ ಎಳ್ಳು ಮಿಶ್ರಣಕ್ಕೆ ಪದಾರ್ಥಗಳನ್ನು ಕೊಳ್ಳುವ ಕಾರ್ಯ ನಡೆದಿದ್ದು, ಶನಿವಾರ ಮತ್ತು ಭಾನುವಾರ ಇದರ ಭರಾಟೆ ಹೆಚ್ಚಾಗಿತ್ತು. ಮಾರುಕಟ್ಟೆಯಲ್ಲಿ ಜನ ಜಂಗುಳಿ ಹೆಚ್ಚಾಗಿತ್ತು. ಕಳೆದ ಕೆಲವು ದಿನಗಳಿಗೆ ಹೋಲಿಸಿದರೆ ದರ ಸ್ವಲ್ಪ ಹೆಚ್ಚಾಗಿದೆ. ಹೂ, ಹಣ್ಣು ಮಾರುಕಟ್ಟೆಗೆ ಹೆಚ್ಚಾಗಿ ಬಂದಿದೆ. ಕಬ್ಬಂತೂ ಎಂದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ನಗರದಲ್ಲಿ ಕಾಣಿಸಿಕೊಂಡಿದೆ.

       ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಸುಗ್ಗಿ ಹಬ್ಬದ ಸಂಭ್ರಮ ಮನೆ ಮಾಡಿದೆ. ನಗರದ ಮಾರುಕಟ್ಟೆ, ಸಂತೇ ಹೊಂಡದ ರಸ್ತೆ, ಸಂತೇ ಮೈದಾನ, ಸೇರಿದಂತೆನಗರದ ವಿವಿಧ ವೃತ್ತಗಳು, ಪ್ರಮುಖ ವಾಣಿಜ್ಯ ಕೇಂದ್ರಗಳು, ಬಡಾವಣೆಗಳ ಪ್ರಮುಖ ಸ್ಥಳಗಳಲ್ಲಿ ಕಬ್ಬು ಜಲ್ಲೆ, ಹೂ, ಹಣ್ಣುಗಳ ಮಾರಾಟ ಭರದಿಂದ ಸಾಗಿದೆ. ಅಂಗಡಿಗಳಲ್ಲಿ ಸಿದ್ಧಪಡಿಸಿದ ಎಳ್ಳು-ಬೆಲ್ಲ, ಸಕ್ಕರೆ ಅಚ್ಚುಗಳ ಖರೀದಿಯೂ ಜೋರಾಗಿದೆ.

       ಕಳೆದ ವರ್ಷಕ್ಕೆ ಹೋಲಿಸಿದರೆ ವಿವಿಧ ಬಗೆಯ ತರಕಾರಿಗಳು, ಹಣ್ಣುಗಳು, ದವಸ ಧಾನ್ಯಗಳು ಹೆಚ್ಚಾಗಿ ಮಾರುಕಟ್ಟೆಗೆ ಆವಕವಾಗಿವೆ. ಕಬ್ಬು ಯಥೇಚ್ಛವಾಗಿ ನಗರಕ್ಕೆ ಬಂದಿದ್ದು, ವಿವಿಧ ದರಗಳಲ್ಲಿ ರಸ್ತೆ ಬದಿಗಳಲ್ಲಿ ವ್ಯಾಪಾರ ಮಾಡಲಾಗುತ್ತಿದೆ. ಇಂತಹ ಕಬ್ಬು ಒಂದು ಜಲ್ಲೆಗೆ 40ರವರೆಗೂ ಇದೆ. ಸಾಮಾನ್ಯ ಕಬ್ಬು 20ರಿಂದ 30 ರೂ ವವರೆಗೆ ಮಾರಾಟವಾಗುತ್ತಿದೆ. ಕತ್ತರಿಸಿದ ಬೆಲ್ಲ, ಕಡಲೆ, ಜೀರಿಗೆ ಕೆ.ಜಿಗೆ 120 ರೂ. ಆಸುಪಾಸಿನಲ್ಲಿ ಮಾರಾಟವಾಗುತ್ತಿದೆ. ಬೆಲ್ಲ ಸೇರಿಸಿದ ಎಳ್ಳು ಕೆ.ಜಿಗೆ 140 ರೂ. ಆಜುಬಾಜಿನಲ್ಲಿದೆ.

         ಸಾಮಾನ್ಯವಾಗಿ ಸಂಕ್ರಾಂತಿಗೆ ಎಲ್ಲ ತರಕಾರಿಗಳನ್ನು ಹಾಕಿ ಸಾಂಬಾರ್ ಮಾಡುವುದು ವಾಡಿಕೆ. ಇದರಿಂದ ತರಕಾರಿಗಳ ಬೆಲೆಯಲ್ಲಿ ಹೆಚ್ಚಳವಾಗಿದೆ. ಕುಂಬಳಕಾಯಿ, ಅವರೆಕಾಯಿ, ಸೋರೆಕಾಯಿ, ಬದನೆ, ಟೊಮೆಟೊ, ಕ್ಯಾರೇಟ್, ಬೀನ್ಸ್, ಹಸಿಮೆಣಸಿನಕಾಯಿ ಹೀಗೆ ಬಹುತೇಕ ತರಕಾರಿಗಳ ಬೆಲೆಗಳು ಸಗಟು ಮಾರುಕಟ್ಟೆಯಲ್ಲಿ ಏರಿಕೆ ಕಾಣದಿದ್ದರೂ, ಚಿಲ್ಲರೆ ಮಾರುಕಟ್ಟೆಯಲ್ಲಿ ಕಳೆದ ವಾರಕ್ಕೆ ಹೋಲಿಸಿದರೆ ತುಸು ಏರಿಕೆ ಕಂಡಿವೆ.

ಹಿಂದೂಗಳಿಗೆ ಸಡಗರ;

        ಹಿಂದೂಗಳ ಪಾಲಿಗೆ ಸಂಕ್ರಾಂತಿ ಸಡಗರದ ಹಬ್ಬ. ಕೌಟುಂಬಿಕ ಭ್ರಾಂತಿಗಳನ್ನು ದೂರ ಮಾಡಿ ನವಕ್ರಾಂತಿ ತರುವ ಕಾಲ. ಈ ಕಾರಣಕ್ಕಾಗಿಯೇ ಹಳ್ಳ- ಕೊಳ್ಳಗಳ ಬಳಿ ಹೋಗಿ ಪುಣ್ಯಸ್ನಾನ ಮಾಡಿಬರುವ ಆಚರಣೆ ಇದೆ. ಸೂರ್ಯನ ಹಾಗೆಯೇ ಬದುಕಿನ ಚಲನೆಗಳು ಬದಲಾಗಲಿ ಎನ್ನುವುದು ಹಬ್ಬದ ಸಂದೇಶ.

         ಗಂಡುಮಕ್ಕಳು ಗಾಳಿಪಟ ಹಾರಿಸುವುದು, ಹೆಣ್ಣುಮಕ್ಕಳು ರಂಗೋಲಿ ಬಿಡುವುದು, ದೊಡ್ಡವರು ತಮ್ಮ ಸಾಕುಪ್ರಾಣಿಗಳನ್ನು ಕಿಚ್ಚಿನ ಮೇಲೆ ಓಡಿಸುವುದು ಎಲ್ಲವೂ ಜನಪದರ ಸಂಸ್ಕೃತಿ. ಅಂದಹಾಗೆ, ಈ ದಿನ ನಿಮಗೆ ಕೋಲೆ ಬಸವ ನೆನಪಾಗದೇ ಇರಲಾರ. ಎತ್ತಿನ ಬೆನ್ನ ಮೇಲೆ ಗರಿಗರಿ ಬಟ್ಟೆ ಹಾಕಿ, ಕೋಡಂಚುಗಳಿಗೆ ಬಣ್ಣ ಬಳಿದು, ಕಾಲಿಗೆ ಗೆಜ್ಜೆ ಗಟ್ಟಿ, ಕೊರಳಿಗೆ ಗಂಟೆ ಗಟ್ಟೆ, ತುತ್ತೂರಿ ಊದುತ್ತ ಮನೆಮುಂದೆ ಬರುವ ಕೋಲೆಬಸವನನ್ನು ಚಿಕ್ಕವರಿದ್ದಾಗ ನೋಡಿರುತ್ತೇವೆ. ಸಂಕ್ರಾಂತಿ ಬಂದಾಗೆಲ್ಲ ಆ ಕೋಲೆಬಸವ ಶ್ರೀಮಂತ ಜನಪದ ಸಂಸ್ಕೃತಿಯೊಂದನ್ನು ನಮ್ಮ ಸ್ಮೃತಿಪಟಲದ ಮೇಲೆ ಹಾಗೆಯೇ ಮರೆಮಾಚುತ್ತಾನೆ.

ಕಿರಾಣಿ ಅಂಗಡಿಗಳ ಆಕರ್ಷಣೆ

       ಇನ್ನೊಂದೆಡೆ ಮನೆಯ ಅಂಗಳಕ್ಕಷ್ಟೇ ಮೀಸಲಾಗಿದ್ದ ಸಂಕ್ರಾಂತಿ ಇದೀಗ ಕಿರಾಣಿ ಅಂಗಡಿಗಳನ್ನು ಬಿಡದೆ ಬೀಡುಬಿಟ್ಟಿದೆ. ಗ್ರಾಹಕರನ್ನು ಆಕರ್ಷಿಸಲು ಕಿರಾಣಿ ಅಂಗಡಿಗಳು ಸಂಕ್ರಾಂತಿ ವೇಷ ತೊಟ್ಟುಕೊಂಡು ನಿಂತಿದೆ. ದೊಡ್ಡ – ದೊಡ್ಡ ಅಂಗಡಿಗಳಂತೂ ಕಬ್ಬಿನ ಜಲ್ಲೆ, ಮಡಿಕೆ ಕುಡಿಕೆಗಳಿಂದ ತುಂಬಿ ಸಿಂಗಾರಗೊಂಡಿದೆ.

        ಡಿಜಿಟಲ್ ಜಮಾನದ ಜನರ ಟೇಸ್ಟ್‍ಗೆ ತಕ್ಕಂತೆ ಸಕ್ಕರೆ ಅಚ್ಚಿನ ಆಕಾರ, ವಿನ್ಯಾಸ ಸಹ ಬದಲಾಗಿದೆ. ಅವರ ಅಭಿರುಚಿಗೆ ತಕ್ಕಂತೆ ಪೆಪ್ಪರ್ ಮೆಂಟ್ ಮಾದರಿಯಲ್ಲಿ ಸಕ್ಕರೆ ಅಚ್ಚುಗಳು ಮಾರಾಟಕ್ಕೆ ಬಂದಿವೆ. ಇದರೊಟ್ಟಿಗೆ ಹುರಿದ ಎಳ್ಳು, ಕಡಲೆ, ಕೊಬ್ಬರಿ, ಬೆಲ್ಲ, ಕಡಲೆ ಕಾಯಿ ಬೀಜಗಳು ಪ್ಯಾಕೇಟ್ ರೂಪದಲ್ಲಿ ಮಾರುಕಟ್ಟೆಗೆ ಬಂದಿದೆ..

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap