ಜಿಲ್ಲೆಯಲ್ಲಿ ಸಡಗರದ ಸಂಕ್ರಾಂತಿ ಆಚರಣೆ

ದಾವಣಗೆರೆ:

  ಸಂಕ್ರಾಂತಿ ಹಬ್ಬವನ್ನು ಸಾರ್ವಜನಿಕರು ಜಿಲ್ಲೆಯಲ್ಲಿ ಸಡಗರ, ಸಂಭ್ರಮದಿಂದ ಆಚರಿಸಿದರು. ಉತ್ತರಾಯಣ ಪುಣ್ಯಕಾಲದ ನಿಮಿತ್ತ ಎಂಸಿಸಿ ಬಿ ಬ್ಲಾಕ್‍ನಲ್ಲಿರುವ ವೆಂಕಟೇಶ್ವರ ದೇವಾಲಯ, ನಗರದೇವತೆ ಶ್ರೀದುರ್ಗಾಂಭಿಕಾ ದೇವಾಲಯ ಸೇರಿದಂತೆ ನಗರದ ವಿವಿಧ ದೇವಸ್ಥಾನಗಳಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ ಮಾಡಿಸುವ ಮೂಲಕ ಪುನೀತರಾದರು.

      ಸೂರ್ಯ ಪಥ ಬದಲಿಸುವ ಪವಿತ್ರ ದಿನದಂದು ಮಹಿಳೆಯರು, ಯುವಜನತೆ ಪರಸ್ಪರ ಎಳ್ಳು-ಬೆಲ್ಲ ಹಂಚಿ, ಸಂಕ್ರಮಣ ಹಬ್ಬದ ಶುಭಾಷಯ ವಿನಿಮಯ ಮಾಡಿಕೊಂಡರು.ಇನ್ನೂ ಹಲವರು ಕುಟುಂಬ-ಮಿತ್ರರೊಂದಿಗೆ ಪ್ರೇಕ್ಷಣೀಯ ಹಾಗೂ ಧಾರ್ಮಿಕ ಸ್ಥಳಗಳಿಗೆ ತೆರಳಿ ಸುಗ್ಗಿ ಹಬ್ಬ ಆಚರಿಸಿದರೆ, ಮತ್ತೆ ಕೆಲವರು ನದಿ ದಡ ಮತ್ತು ಕೆರೆಕಟ್ಟೆಗಳಲ್ಲಿ ಸ್ನಾನ ಮಾಡಿ, ದೇವರ ದರ್ಶನ ಪಡೆದರು.

     ಜಿಲ್ಲಾ ಕೇಂದ್ರದ ಪಾರ್ಕ್, ಕೆರೆ ಮತ್ತಿತರ ಕಡೆಗಳಲ್ಲಿ ಜನಜಂಗುಳಿ ಅಧಿಕವಾಗಿತ್ತು. ಸಂಕ್ರಾಂತಿ ಹಿನ್ನೆಲೆಯಲ್ಲಿ ಬಂಧು-ಮಿತ್ರರೊಂದಿಗೆ ಆಗಮಿಸಿದ್ದ ಜನರು, ಉದ್ಯಾನವನಗಳಲ್ಲಿ ಸಹಭೋಜನ ಮಾಡಿ ಸಂಭ್ರಮಿಸಿದರು.

     ಹರಿಹರದ ತುಂಗಾಭದ್ರ ನದಿ ತೀರ, ಕೊಂಡಜ್ಜಿ ಕೆರೆ, ಆನಗೋಡು ಪಾರ್ಕ್, ಸಂತೇಬೆನ್ನೂರಿನಲ್ಲಿರುವ ಪುಷ್ಕರಣಿ ಮತ್ತಿತರರೇ ಪ್ರೇಕ್ಷಣಿಯ ಸ್ಥಳಗಳಿಗೆ ತೆರಳಿ ಮನೆಯಿಂದ ಮಾಡಿಕೊಂಡು ಹೋಗಿದ್ದ ವಿವಿಧ ಬಗೆ ಬಗೆಯ ಖಾದ್ಯಗಳನ್ನು ಸವಿದು ಸಂಭ್ರಮಿಸಿದರು.
ನಗರದ ಉದ್ಯಾನವನಗಳಲ್ಲಿ ಎಲ್ಲಿಲ್ಲದ ಸಂಭ್ರಮ ಕಂಡುಬಂತು. ಟಿವಿ ಸ್ಟೇಷನ್ ಹಾಗೂ ಕುಂದುವಾಡ ಕೆರೆ ಪ್ರದೇಶಕ್ಕೆ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿತ್ತು. ಹೀಗಾಗಿ, ಜನರು ನಿರಾಶೆಯಿಂದ ಬೇರೆ ಸ್ಥಳಗಳನ್ನು ಹುಡುಕಿಕೊಂಡು ಹೋಗಬೇಕಾಯಿತು. 

    ಸುಗ್ಗಿ ಹಬ್ಬ ಎಂದೇ ಹೆಸರಾಗಿರುವ ಮಕರ ಸಂಕ್ರಾಂತಿಯ ಸಡಗರ ಗ್ರಾಮೀಣ ಪ್ರದೇಶದಲ್ಲೂ ಕಳೆಕಳೆಯಾಗಿತ್ತು. ಗ್ರಾಮಾಂತರ ಪ್ರದೇಶದ ಜನರು ತಮ್ಮ ಕಣ, ಹೊಲಗಳಲ್ಲಿ ಧಾನ್ಯ, ಕಬ್ಬಿನ ರಾಶಿ ಪೂಜೆ ಮಾಡಿದರು. ರಾಶಿಯ ಪಕ್ಕದಲ್ಲೇ ಊಟ ಮಾಡಿ, ಮುಂದಿನ ದಿನಗಳಲ್ಲಿ ಉತ್ತಮ ಮಳೆ-ಬೆಳೆಗೆ ಪ್ರಾರ್ಥಿಸಿದರು.

   ಕೊಂಡಜ್ಜಿಯಲ್ಲಿ ಜನವೋ ಜನ

        ಜಿಲ್ಲೆಯ ವಿಕೆಂಡ್ ಸ್ಪಾಟ್ ಎಂದೇ ಹೆಸರು ಮಾಡಿರುವ ಕೊಂಡಜ್ಜಿ ಕೆರೆ ಅಂಗಳದಲ್ಲಿ ಸಂಕ್ರಾಂತಿ ಅಂಗವಾಗಿ ಭಾರೀ ಜನಸ್ತೋಮ ಸೇರಿತ್ತು. ದಾವಣಗೆರೆ ನಗರದಿಂದ ಬಹುತೇಕ ಜನರು ಅತ್ತಕಡೆ ಪ್ರಯಾಣ ಬೆಳೆಸಿದ್ದರು. ಕುಟುಂಬ, ಬಂಧು-ಮಿತ್ರರು ಸಮೇತ ಅಲ್ಲಿಗೆ ತೆರಳಿದ್ದ ನಾಗರಿಕರು ಊಟದ ಸವಿಯನ್ನು ಆಹ್ವಾದಿಸಿ ಸಂಭ್ರಮಿಸಿದರು. ಕೊಂಡಜ್ಜಿ ಕೆರೆಯ ಅಂಗಳದಲ್ಲಿನ ಮೈದಾನದಲ್ಲಿ ಮಕ್ಕಳು ಕ್ರಿಕೆಟ್, ಷಟಲ್ ಬ್ಯಾಡ್ಮಿಂಟನ್, ಚಂಡಿನಾಟ ಸೇರಿದಂತೆ ಮತ್ತಿತರರೇ ಆಟಗಳನ್ನು ಆಡಿ ಸಂಭ್ರಮಿಸಿದರು ಮಕ್ಕಳೊಂದಿಗೆ ಹಿರಿಯರೂ ಸೇರಿದ್ದು ವಿಶೇಷವಾಗಿತ್ತು. ಬೆಳಗ್ಗೆಯಿಂದಲೇ ಕಾರು, ಬೈಕು, ಟ್ರ್ಯಾಕ್ಟರ್‍ಗಳಲ್ಲಿ ಆಗಮಿಸಿದ್ದ ಜನರು ಸಂಜೆಯಾದರೂ ಅಲ್ಲಿಯೇ ಉಳಿದು ದಿನವೆಲ್ಲ ಸಂಭ್ರಮಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap