ಚೀಲೂರು: ಎಂದಿನಂತೆ ಶಾಲೆಗಳು ಓಪನ್

0
7

ಹೊನ್ನಾಳಿ:

      ಮೋಟಾರು ವಾಹನ ನೂತನ ಕಾಯಿದೆ ವಾಪಸ್ ಪಡೆಯಲು ಆಗ್ರಹಿಸಿ ಹಾಗೂ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಂಗಳವಾರದಿಂದ ಹಮ್ಮಿಕೊಂಡ ಭಾರತ್ ಬಂದ್‍ಗೆ ತಾಲೂಕಿನ ಕುಂದೂರು, ನ್ಯಾಮತಿ ತಾಲೂಕಿನ ಚೀಲೂರು ಮತ್ತಿತರ ಭಾಗಗಳಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

          ಕುಂದೂರು ಭಾಗದಲ್ಲಿ ಕೆಎಸ್‍ಆರ್‍ಟಿಸಿ ಬಸ್‍ಗಳ ಸಂಚಾರ ಇಲ್ಲ. ಈ ಕಾರಣಕ್ಕಾಗಿ, ಈ ಭಾಗದ ಜನತೆ ಸಾರ್ವಜನಿಕ ಸಾರಿಗೆಗೆ ಖಾಸಗಿ ಬಸ್‍ಗಳನ್ನೇ ಅವಲಂಬಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಖಾಸಗಿ ಬಸ್‍ಗಳು ಎಂದಿನಂತೆ ಸಂಚರಿಸಿದ್ದರ ಪರಿಣಾಮ ಬಂದ್ ಸಂಪೂರ್ಣ ವಿಫಲವಾಯಿತು.

        ಖಾಸಗಿ ಬಸ್ ಸಂಚಾರ ಎಂದಿನಂತೆ ಇತ್ತು. ಕುಂದೂರು ಮೂಲಕ ಹೊನ್ನಾಳಿ, ಶಿವಮೊಗ್ಗ, ದಾವಣಗೆರೆ, ಚನ್ನಗಿರಿ, ಮಲೇಬೆನ್ನೂರು ಮತ್ತಿತರ ಭಾಗಗಳಿಗೆ ಖಾಸಗಿ ಬಸ್‍ಗಳು ನಿಯಮಿತವಾಗಿ ಸಂಚರಿಸಿದವು. ಸೋಮವಾರ ಟಿವಿ ಇತರ ಮಾಧ್ಯಮಗಳ ಮೂಲಕ ಭಾರತ್ ಬಂದ್‍ಗೆ ಸಹಕರಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿತ್ತಾದರೂ ಸೂಕ್ತ ಸ್ಪಂದನೆ ಲಭಿಸಲಿಲ್ಲ. ಕೆಲ ಖಾಸಗಿ ಶಾಲೆ-ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಶಾಲೆ-ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿ ಸಮೂಹ ಖಾಸಗಿ ಬಸ್‍ಗಳನ್ನು ಅವಲಂಬಿಸಿದ್ದು ಕಂಡುಬಂತು.

         ಕೂಲಂಬಿ ಭಾಗದ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಕುಂದೂರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುತ್ತಾರೆ. ಬಂದ್‍ನಿಂದಾಗಿ ಯಾರಿಗೂ ಯಾವುದೇ ತೊಂದರೆ ಆಗಲಿಲ್ಲ. ಬಸ್ ಸಂಚಾರ ಸಹಜವಾಗಿತ್ತು. ಇದರೊಂದಿಗೆ, ಇತರ ಅಂಗಡಿ-ಮುಂಗಟ್ಟೆಗಳು, ಸರಕಾರಿ ಕಚೇರಿಗಳು, ಕೃಷಿ ಇಲಾಖೆಯ ಕಚೇರಿ, ಬ್ಯಾಂಕ್‍ಗಳು ಎಂದಿನಂತೆ ತೆರೆದಿದ್ದವು. ಹಾಗಾಗಿ, ಸಾರ್ವಜನಿಕರಿಗೆ ಬಂದ್ ಬಿಸಿ ತಟ್ಟಲಿಲ್ಲ.

         ಎಂದಿನಂತೆ ಶಾಲೆಗಳು ಓಪನ್: ನ್ಯಾಮತಿ ತಾಲೂಕಿನ ಚೀಲೂರು ಮತ್ತಿತರ ಭಾಗಗಳಲ್ಲಿ ಸರಕಾರಿ ಹಾಗೂ ಖಾಸಗಿ ಶಾಲೆಗಳು ಎಂದಿನಂತೆ ಕಾರ್ಯನಿರ್ವಹಿಸುವ ಮೂಲಕ ಬಂದ್‍ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಜಿಲ್ಲಾಧಿಕಾರಿ ಆದೇಶ ಉಲ್ಲೇಖಿಸಿ ಜ.8 ಮತ್ತು 9ರಂದು ಶಾಲೆಗಳಿಗೆ ರಜೆ ಎಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದರೂ ಚೀಲೂರು ಭಾಗದಲ್ಲಿ ಶಾಲೆಗಳು ಓಪನ್ ಇದ್ದದ್ದು ಸಾರ್ವಜನಿಕರ ಅಚ್ಚರಿಗೆ ಕಾರಣವಾಯಿತು.

           ಜ.8 ಮತ್ತು 9ರಂದು ರಜೆ ಘೋಷಿಸುತ್ತಿರುವ ಹಿನ್ನೆಲೆಯಲ್ಲಿ, ಶನಿವಾರ ಮತ್ತು ಭಾನುವಾರಗಳಂದು ದಿನ ಪೂರ್ತಿ ಶಾಲಾ ತರಗತಿಗಳನ್ನು ನಡೆಸಬೇಕು ಎಂಬ ಹಿನ್ನೆಲೆಯಲ್ಲಿ ನಮಗೆ ಈ ದಿನ ರಜೆ ಬೇಡ ಎಂದು ಶಿಕ್ಷಕರೇ ನಿರ್ಧರಿಸಿ ಮಂಗಳವಾರ ಶಾಲೆಗೆ ಆಗಮಿಸಿದ್ದಾರೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದ ದೃಶ್ಯ ಕಂಡುಬಂತು.

           ಖಾಸಗಿ ವಾಹನಗಳಲ್ಲಿ ಪಯಣ: ನ್ಯಾಮತಿ ಪಟ್ಟಣ ಮತ್ತು ಸುತ್ತ-ಮುತ್ತಲಿನ ಸ್ಥಳಗಳಿಂದ ಚೀಲೂರು ಭಾಗದ ಶಾಲೆಗಳಿಗೆ ತೆರಳುವ ಶಿಕ್ಷಕರು ಮಂಗಳವಾರ ಬೆಳಿಗ್ಗೆ ಕೆಎಸ್‍ಆರ್‍ಟಿಸಿ ಬಸ್‍ಗಳಿಲ್ಲದೇ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ನ್ಯಾಮತಿಯಿಂದ ಹೊನ್ನಾಳಿಗೆ ಖಾಸಗಿ ಬಸ್‍ಗಳಲ್ಲಿ ಆಗಮಿಸಿದ ಶಿಕ್ಷಕರು, ಹೊನ್ನಾಳಿಯಿಂದ ಚೀಲೂರಿಗೆ ಖಾಸಗಿ ವಾಹನಗಳಲ್ಲಿ ಪಯಣಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here