ಸೀಟು ಹಂಚಿಕೆ ಜಟಾಪಟಿ ದೆಹಲಿ ಅಂಗಳಕ್ಕೆ

ತುಮಕೂರು:

           ನಾಮಪತ್ರ ಸಲ್ಲಿಕೆಯ ದಿನಾಂಕ ಹತ್ತಿರ ಬಂದಿದ್ದರೂ ಸೀಟು ಹಂಚಿಕೆಯಲ್ಲಿನ ಗೊಂದಲ ಬಗೆಹರಿದಿಲ್ಲ. ತುಮಕೂರು ಕ್ಷೇತ್ರವನ್ನು ಮರಳಿ ಪಡೆಯಲು ಕಾಂಗ್ರೆಸ್ ನಾಯಕರು ಹೋರಾಟ ಮುಂದುವರೆಸಿದ್ದಾರೆ. ಕಳೆದ ಮೂರು ದಿನಗಳಿಂದ ರಾಜ್ಯದಲ್ಲಿ ನಾಯಕರುಗಳ ಮನೆ ಭೇಟಿ ಮನವೊಲಿಕೆ ನಡೆಸುತ್ತಿದ್ದ ನಾಯಕರು ಶನಿವಾರ ದೆಹಲಿ ತಲುಪಿದ್ದಾರೆ. ಇದರಿಂದಾಗಿ ತುಮಕೂರು ಕ್ಷೇತ್ರದ ಟಿಕೆಟ್ ಹಂಚಿಕೆ ಪ್ರಹಸನ ದೆಹಲಿಗೆ ಶಿಫ್ಟ್ ಆಗಿದೆ.

          ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಮುದ್ದಹನುಮೇಗೌಡ ಅವರನ್ನು ಜೊತೆಗೆ ಹಾಕಿಕೊಂಡು ನಾಯಕರುಗಳಾದ ಮಲ್ಲಿಕಾರ್ಜುನ ಖರ್ಗೆ, ದೇವೇಗೌಡರು, ಹೆಚ್.ಡಿ.ಕುಮಾರಸ್ವಾಮಿ ಎಲ್ಲರನ್ನೂ ಕಂಡದ್ದಾಯಿತು. ಆದರೆ ಯಾವುದೇ ಪ್ರತಿಕ್ರಿಯೆ ಮತ್ತು ಸ್ಪಂದನೆ ಸಿಕ್ಕಿದಂತೆ ಕಾಣಲಿಲ್ಲ. ಇದರಿಂದ ಸಹಜವಾಗಿಯೇ ಅಸಮಾಧಾನಗೊಂಡಿರುವ ಡಾ.ಜಿ.ಪರಮೇಶ್ವರ್ ಕೊನೆಯ ಅಸ್ತ್ರ ಎಂಬಂತೆ ದೆಹಲಿಗೆ ತೆರಳಿದ್ದಾರೆ.

         ತುಮಕೂರು ಕ್ಷೇತ್ರ ಜೆಡಿಎಸ್‍ಗೆ ದಕ್ಕಿದ್ದರೂ ಆ ಪಕ್ಷದಿಂದ ಇಲ್ಲಿ ಯಾರು ಸ್ಪರ್ಧಿಸುತ್ತಾರೆಂಬ ಮಾಹಿತಿ ಈವರೆಗೂ ಲಭ್ಯವಾಗಿಲ್ಲ. ಅಂತೆ ಕಂತೆಗಳೇ ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ. ಕೆಲವರ ಹೆಸರುಗಳನ್ನು ಪ್ರಸ್ತಾಪ ಮಾಡಲಾಗಿದ್ದರೂ ಅವರೂ ಸಹ ಸ್ಪರ್ಧೆಗೆ ತೀವ್ರ ಉತ್ಸುಕರಾಗಿರುವಂತೆ ಕಂಡುಬರುತ್ತಿಲ್ಲ. ಪಕ್ಷ ದೇವೇಗೌಡರನ್ನೇ ನೋಡುತ್ತಿದೆ. ಸ್ಪರ್ಧಿಸುವುದಾದರೆ ಅವರೇ ಬಂದು ನಿಲ್ಲಲಿ ಎನ್ನುತ್ತಿದ್ದಾರೆ. ನನಗೆ ಟಿಕೇಟ್ ಕೊಡಿ, ನಿಲ್ಲುತ್ತೇನೆ ಎಂದು ಹೇಳುವ ಮುಖಂಡರು ಕಾಣಸಿಗುತ್ತಿಲ್ಲ. ಈ ವಿದ್ಯಮಾನಗಳನ್ನು ಗಮನಿಸಿದರೆ ಜಿಲ್ಲೆಯ ಸ್ಥಳೀಯ ಮುಖಂಡರಲ್ಲಿ ಸ್ಪರ್ಧಿಸುವ ಆಸಕ್ತಿ ಅಷ್ಟಾಗಿಲ್ಲ. ಪಕ್ಷದ ನಿರ್ಧಾರವನ್ನಷ್ಟೇ ಎದುರು ನೋಡುತ್ತಿದ್ದಾರೆ.

         ಮಿತ್ರ ಪಕ್ಷವಾದ ಕಾಂಗ್ರೆಸ್ ಸಹ ಇದನ್ನೇ ಹೇಳುತ್ತಿದೆ. ಬರುವುದಾದರೆ ದೇವೇಗೌಡರು ಬಂದು ಸ್ಪರ್ಧಿಸಲಿ. ಇಲ್ಲವಾದರೆ ಕಾಂಗ್ರೆಸ್‍ಗೆ ಈ ಕ್ಷೇತ್ರ ಬಿಟ್ಟುಕೊಡಲಿ ಎಂಬ ಒಂದಂಶದ ಬೇಡಿಕೆ ಕಾಂಗ್ರೆಸ್ ನಾಯಕರದ್ದು. ಇದೇ ಅಜೆಂಡಾ ಮುಂದಿಟ್ಟುಕೊಂಡು ಕಳೆದೆರಡು ದಿನಗಳಿಂದ ಪ್ರತಿಭಟನೆಗಳೂ ನಡೆದಿವೆ. ಪತ್ರಿಕಾ ಗೋಷ್ಠಿಗಳನ್ನು ನಡೆಸಲಾಗಿದೆ. ನಾಯಕರ ಮೇಲೆ ಒತ್ತಡ ಹಾಕುವ ಎಲ್ಲ ತಂತ್ರಗಾರಿಕೆ ನಡೆದಿದೆ. ಜಿಲ್ಲೆಯ ಪ್ರಮುಖ ಕಾಂಗ್ರೆಸ್ ನಾಯಕರೂ ಸಹ ಕಾಂಗ್ರೆಸ್ ಅಭ್ಯರ್ಥಿ ಪರ ಬ್ಯಾಟಿಂಗ್ ನಡೆಸಿದ್ದಾರೆ. ಕಳೆದ ಮೂರು ದಿನಗಳಿಂದ ಏನೆಲ್ಲಾ ವಿದ್ಯಮಾನಗಳು ನಡೆಯುತ್ತಿದ್ದರೂ ಯಾವುದಕ್ಕೂ ಪ್ರತಿಸ್ಪಂದನೆ ಮಾತ್ರ ಸಿಗುತ್ತಿಲ್ಲ. ಆದರೆ ಕಾಂಗ್ರೆಸ್‍ನ ಒಂದು ವಲಯ ಹೇಳುವ ಪ್ರಕಾರ ಕೊನೇ ಘಳಿಗೆಯಲ್ಲಿ ಕಾಂಗ್ರೆಸ್‍ಗೆ ಈ ಕ್ಷೇತ್ರವನ್ನು ಬಿಟ್ಟುಕೊಡಬಹುದು ಎಂಬುದು. ಈ ನಿರೀಕ್ಷೆಯಲ್ಲಿಯೇ ಇಲ್ಲಿನ ಕಾಂಗ್ರೆಸ್ ಮುಖಂಡರು ಮುಂದಿನ ನಡೆಯನ್ನು ಎದುರು ನೋಡುತ್ತಿದ್ದಾರೆ.

           ಹಾಸನ ಹಾಗೂ ಮಂಡ್ಯದಲ್ಲಿ ತಮ್ಮ ವಾರಸುದಾರರ ಗೆಲುವಿಗೆ ಗೌಡರು ನಿಲ್ಲಬೇಕಿದೆ. ಮಂಡ್ಯದಲ್ಲಿ ಸುಮಲತಾ ಎಬ್ಬಿಸಿರುವ ಬಿರುಗಾಳಿಯನ್ನು ತಣ್ಣಗೆ ಮಾಡುವುದು ಬಹುದೊಡ್ಡ ತ್ರಾಸದ ಕೆಲಸ. ಹೀಗೆ ಜೆಡಿಎಸ್ ಪ್ರಭಾವದ ಪ್ರದೇಶಗಳಲ್ಲೇ ಗೌಡರು ಹೆಚ್ಚು ಶ್ರಮ ವಹಿಸಬೇಕಾಗಿರುವ ಹಿನ್ನೆಲೆಯಲ್ಲಿ ಬೇರೆ ಕ್ಷೇತ್ರಗಳತ್ತ ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಒಂದು ವೇಳೆ ಸುಮಲತಾ ಸೈಲೆಂಟ್ ಆಗಿದ್ದರೆ ಗೌಡರ ಕುಟುಂಬಕ್ಕೆ ಅಲ್ಲಿನ ರಾಜಕೀಯ ಇಷ್ಟು ಶ್ರಮದಾಯಕ ಆಗುತ್ತಿರಲಿಲ್ಲ. ಮಂಡ್ಯದಲ್ಲಿ ಸುಮಲತಾ ಅವರನ್ನು ಕಣಕ್ಕಿಳಿಯದಂತೆ ನೋಡಿಕೊಳ್ಳುವುದು, ಅಲ್ಲಿನ ಅಸಮಾಧಾನವನ್ನು ಶಮನಗೊಳಿಸುವ ಕಾರ್ಯದಲ್ಲಿ ಎಷ್ಟರ ಮಟ್ಟಿಗೆ ಸಫಲರಾಗುತ್ತಾರೆ ಎಂಬುದೂ ಸಹ ಇಲ್ಲಿ ಗಮನಾರ್ಹ. ಇವೆಲ್ಲವನ್ನು ಒಳಗೊಂಡಂತೆಯೇ ತುಮಕೂರು ಕ್ಷೇತ್ರವನ್ನು ಪರಿಗಣಿಸಬೇಕಿದೆ.

          ಜೆಡಿಎಸ್ ಇಟ್ಟಿದ್ದ 12 ಕ್ಷೇತ್ರಗಳ ಪೈಕಿ 8 ಕ್ಷೇತ್ರಗಳು ಲಭಿಸಿರುವುದರಿಂದ, ಹೇಗಾದರೂ ಸರಿ ಈ ಎಂಟೂ ಕ್ಷೇತ್ರಗಳನ್ನು ತನ್ನದಾಗಿಸಿಕೊಳ್ಳಬೇಕು ಎಂಬ ತವಕ ಆ ಪಕ್ಷದ್ದು. ಜೊತೆಗೆ ಈ ಬಾರಿ ಮೈತ್ರಿ ಚುನಾವಣೆ ನಡೆಯುತ್ತಿರುವುದರಿಂದ, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಇರುವುದರಿಂದ, ಮುಂದಿನ ದಿನಗಳಲ್ಲಿ ನರೇಂದ್ರ ಮೋದಿಯನ್ನು ಪ್ರಧಾನಿ ಗಾದಿಯಿಂದ ಇಳಿಸಬೇಕೆಂಬ ಬಿಜೆಪಿಯೇತರ ಪಕ್ಷಗಳ ಇರಾದೆ ಇವೆಲ್ಲವೂ ಒಟ್ಟಾಗಿ ಕೆಲಸ ಮಾಡುತ್ತದೆ.

         ಮತಗಳ ಕ್ರೂಢೀಕರಣ ಆಗುತ್ತದೆ ಎಂಬ ಲೆಕ್ಕಾಚಾರ ಜೆಡಿಎಸ್‍ಗೆ ಇರಬಹುದು. ಹೀಗಾಗಿಯೇ ಏನೇ ಒತ್ತಡಗಳು ಬರುತ್ತಿದ್ದರೂ ಕ್ಯಾರೇ ಅನ್ನುತ್ತಿಲ್ಲ. ಮೈತ್ರಿ ಪಕ್ಷ ಕಾಂಗ್ರೆಸ್ ಸಹ ಸುಮ್ಮನೆ ಕುಳಿತಿಲ್ಲ. ಲೋಕಸಭಾ ಚುನಾವಣೆಗೆ ನಾಮ ಪತ್ರ ಸಲ್ಲಿಕೆಯ ದಿನಗಳು ಹತ್ತಿರ ಬರುತ್ತಿರುವ ಈ ಸಮಯದಲ್ಲಿ ಕಾಂಗ್ರೆಸ್ ಮುಖಂಡರು ಪಕ್ಷದ ಇತರೆ ಜವಾಬ್ದಾರಿಗಳನ್ನು ನಿಭಾಯಿಸುವತ್ತ ಗಮನ ಹರಿಸಲಾಗದೆ ಟಿಕೆಟ್ ಪಡೆಯುವ ಹೋರಾಟದಲ್ಲಿಯೇ ಇನ್ನೂ ಮುಳುಗಿದ್ದಾರೆ.

          ಮೈತ್ರಿ ಪಕ್ಷದಲ್ಲಾಗುತ್ತಿರುವ ಈ ಬೆಳವಣಿಗೆಯನ್ನು ಕಂಡು ಬಿಜೆಪಿ ಸೈಲೆಂಟ್ ಆಗಿ ನಗುತ್ತಿದೆ. ಇದೆಲ್ಲವೂ ತನಗೇ ಲಾಭವಾಗಲಿದೆ ಎಂಬ ಲೆಕ್ಕಾಚಾರದಲ್ಲಿ ಆ ಪಕ್ಷ ಮುಳುಗಿದೆ. ಮೈತ್ರಿ ಪಕ್ಷದಲ್ಲಿ ಒಡಕು ಮೂಡಿದಷ್ಟೂ ನನಗೇ ಲಾಭ ಎಂಬುದು ಬಿಜೆಪಿಯ ಲೆಕ್ಕಾಚಾರ. ಮೈತ್ರಿ ಪಕ್ಷದ ಅಭ್ಯರ್ಥಿಯನ್ನು ನೋಡಿಕೊಂಡು ಬಿಜೆಪಿ ತನ್ನ ಅಭ್ಯರ್ಥಿಯನ್ನು ಘೋಷಿಸಬಹುದು ಎಂದೇ ಹೇಳಲಾಗುತ್ತಿದೆ. ಆ ಪಕ್ಷದಲ್ಲಿಯೂ ಈಗಾಗಲೇ ಮೂವರ ಹೆಸರು ಹರಿದಾಡುತ್ತಿದೆ. ಅದರಲ್ಲಿ ಯಾರಿಗೆ ಟಿಕೆಟ್ ಲಭಿಸಲಿದೆ ಎಂಬುದು ಸಹ ಕುತೂಹಲಕಾರಿ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap