ನೊಂದ ಕುಟುಂಬಗಳಿಗೆ ಶೆಡ್ ನಿರ್ಮಾಣ ಕಾರ್ಯ ಚುರುಕು.

ಚಳ್ಳಕೆರೆ

      ನಗರದ ವೆಂಕಟೇಶ್ವರ ನಗರ ಬಡಾವಣೆ ಕರೇಕಲ್ ಕೆರೆಯಂಗಳದಲ್ಲಿ ಜ.2ರಂದು ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ 35 ಗುಡಿಸಲು ಸಂಪೂರ್ಣ ಸುಟ್ಟಿದ್ದು, ನೂರಾರು ಜನರು ಬೀದಿ ಪಾಲಾಗಿದ್ದರು. ಈ ಹಿನ್ನೆಲೆಯಲ್ಲಿ ಇಲ್ಲಿನ ಶಾಸಕ ಟಿ.ರಘುಮೂರ್ತಿ ಮಾರ್ಗದರ್ಶನದಲ್ಲಿ ನಗರಸಭೆ, ತಾಲ್ಲೂಕು ಆಡಳಿತ, ನಗರಸಭಾ ಸದಸ್ಯ ಟಿ.ಮಲ್ಲಿಕಾರ್ಜುನ ನೊಂದ ಕುಟುಂಬಗಳಿಗೆ ನೆರವಿನ ಜೊತೆಗೆ ಪ್ರತಿನಿತ್ಯ ಊಟದ ವ್ಯವಸ್ಥೆಯನ್ನು ಸಹ ಮಾಡಿದ್ದು, 35 ಕುಟುಂಬಗಳಿಗೂ ಹೊಸದಾಗಿ 12 ಲಕ್ಷ ವೆಚ್ಚದಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸುವಂತೆ ಶಾಸಕ ಟಿ.ರಘುಮೂರ್ತಿ ಸೂಚಿಸಿದ ಹಿನ್ನೆಲೆಯಲ್ಲಿ ಶೆಡ್ ನಿರ್ಮಾಣ ಕಾರ್ಯ ಚಾಲನೆ ನೀಡಲಾಗಿದೆ ಎಂದು ಪೌರಾಯುಕ್ತರ ಜೆ.ಟಿ.ಹನುಮಂತರಾಜು ತಿಳಿಸಿದ್ದಾರೆ.

        ಈ ಬಗ್ಗೆ ಮಾಹಿತಿ ನೀಡಿದ ಅವರು, ಶಾಸಕರ ಅನುದಾನದಲ್ಲಿ ಬಳ್ಳಾರಿ ರಸ್ತೆಯ ಲಿಡ್ಕರ್ ಬಡಾವಣೆ ಸನಿಹದಲ್ಲೇ 35 ತಾತ್ಕಾಲಿಕ ಶೆಡ್‍ಗಳನ್ನು ನಿರ್ಮಿಸಲಾಗುವುದು. ನಗರಸಭೆ ಮತ್ತು ನಿರ್ಮಿತಿ ಕೇಂದ್ರದ ಇಂಜಿನಿಯರ್‍ಗಳು ಈ ಕಾರ್ಯದಲ್ಲಿ ಈಗಾಗಲೇ ನಿರತವಾಗಿದ್ಧಾರೆ. ಇಲ್ಲಿನ 35 ಮನೆಗಳಿಗೂ ಶೌಚಾಲಯ, ಕುಡಿಯುವ ನೀರು, ವಿದ್ಯುತ್, ಅಂಗನವಾಡಿ ಕೇಂದ್ರವೂ ಸೇರಿದಂತೆ ಎಲ್ಲಾ ಸೌಲಭ್ಯವನ್ನು ಒದಗಿಸಲು ಸಿದ್ದತೆಗಳು ನಡೆದಿವೆ ಎಂದರು. ಈಗಾಗಲೇ ತಾತ್ಕಾಲಿಕವಾಗಿ ನಿರ್ಮಾಣವಾಗುವ ಶೆಡ್‍ಗಳಿಗೆ ಬಂದು ಹೋಗುವ ರಸ್ತೆ ದುರಸ್ಥಿ ಕಾರ್ಯವನ್ನು ಸಹ ಕೈಗೊಳ್ಳಲಾಗುವುದು. ಪ್ರಸ್ತುತ ಕುಡಿಯುವ ನೀರಿನ ಸೌಕರ್ಯವಿದ್ದು, ಇನ್ನುಳಿದ ಸೌಲಭ್ಯಗಳನ್ನು ಒದಗಿಸಿ ಅಲ್ಲಿರುವ 35 ಕುಟುಂಬಗಳು ಇಲ್ಲಿಗೆ ಬಂದು ವಾಸಿಸುವಂತೆ ವ್ಯವಸ್ಥೆ ಮಾಡಲಾಗುವುದು ಎಂದರು.

        ನಗರಸಭಾ ಸದಸ್ಯ ಟಿ.ಮಲ್ಲಿಕಾರ್ಜುನ ಮಾತನಾಡಿ, ಈಗಾಗಲೇ ನೊಂದ ಕುಟುಂಬಗಳಿಗೆ ಪ್ರತಿನಿತ್ಯ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ನೊಂದ ಕುಟುಂಬಗಳಿಗೆ ಬಟ್ಟೆ ಬರೆ ಇತರೆ ಸಾಮಾನುಗಳನ್ನು ಸಹ ನೀಡಲಾಗಿದೆ. ನಗರಸಭೆ ಮತ್ತು ತಾಲ್ಲೂಕು ಆಡಳಿತ ತಾತ್ಕಾಲಿಕವಾಗಿ ಪ್ರತಿ ಕುಟುಂಬಕ್ಕೂ 2 ಸಾವಿರ ಚೆಕ್ ನೀಡಿದೆ, ಇನ್ನೂ ಹೆಚ್ಚಿನ ಆರ್ಥಿಕ ನೆರವು ಒದಗಿಸುವಂತೆ ಶಾಸಕರನ್ನು ಮನವಿ ಮಾಡಲಾಗುವುದು ಎಂದರು.

           ನಗರಸಭಾ ಸದಸ್ಯ ಬಿ.ಟಿ.ರಮೇಶ್‍ಗೌಡ ಮಾತನಾಡಿ, 35 ಕುಟುಂಬಗಳಿಗೂ ಸುರಕ್ಷತೆಯ ಜೊತೆಗೆ ಸೌಲಭ್ಯವನ್ನು ನೀಡುವ ಜವಾಬ್ದಾರಿ ನಗರಸಭೆ ಆಡಳಿತ ಮೇಲಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಶಾಸಕರಿಗೆ ಮನವಿ ಮಾಡಿದ್ದು, ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿದ್ದು, ಹಲವಾರು ಕುಟುಂಬಗಳು ಬೀದಿಪಾಲಾಗುತ್ತಿದ್ದು, ಇವುಗಳನ್ನು ನಿಯಂತ್ರಿಸಲು ಅಲ್ಲಿರುವ ಎಲ್ಲಾ ಬಡಕುಟುಂಬಗಳು ಇಲ್ಲಿಗೆ ಸ್ಥಳಾಂತರಗೊಳಿಸಿ ಅವರಿಗೆ ಸೂಕ್ತವಾದ ವಸತಿ ಸೌಕರ್ಯವನ್ನು ಕಲ್ಪಿಸಲಾಗುವುದು. ಈ ನಿಟ್ಟಿನಲ್ಲಿ ಶಾಸಕರು ಈಗಾಗಲೇ ಲಿಡ್ಕರ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ಧಾರೆಂದರು.

        ಈ ಸಂದರ್ಭದಲ್ಲಿ ನಿರ್ಮಿತಿ ಕೇಂದ್ರದ ಇಂಜಿನಿಯರ್ ಜಿ.ಟಿ.ಮೂಡಲಗಿರಿಯಪ್ಪ, ನಗರಸಭೆ ಎಇಇ ಶ್ಯಾಮಲ, ಸಹಾಯಕ ಇಂಜಿನಿಯರ್ ಲೋಕೇಶ್, ಹೊನ್ನೂರು ಸ್ವಾಮಿ, ಎ.ಟಿ.ಸ್ವಾಮಿ, ಗುತ್ತಿಗೆದಾರ ರಾಜಣ್ಣ, ಮುಖಂಡ ವೀರೇಶ್ ಮುಂತಾದವರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap