‘ಶಿವ’ ಧರ್ಮ ಸಂಕೇತವಲ್ಲ, ಒಳಿತಿನ ಪ್ರತೀಕ

ಸಾಣೇಹಳ್ಳಿ :

         `ಶಿವ’ ಒಂದು ಧರ್ಮದ, ರಾಜ್ಯದ, ಸಂಘಟನೆಯ, ದೇಶದ ಸಂಕೇತವಲ್ಲ, ಸಕಲ ಜೀವಾತ್ಮರಿಗೆ ಒಳಿತನ್ನು ಬಯಸುವಂಥದ್ದು. ಶಿವ ಎಂದರೆ ಮಂಗಳ, ಒಳಿತು, ಲೇಸು, ಅಭ್ಯುದಯ, ಕಲ್ಯಾಣ ಎಂದರ್ಥ ಎಂದು ಸಾಣೇಹಳ್ಳಿಯ ಶ್ರೀಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಿಶ್ಲೇಷಿಸಿದರು.

         ಸಾಣೇಹಳ್ಳಿಯ ಶ್ರೀಶಿವಕುಮಾರ ರಂಗಮಂದಿರದಲ್ಲಿ ಶಿವಕುಮಾರ ಕಲಾಸಂಘದಿಂದ ಆಯೋಜಿಸಿರುವ ರಾಷ್ಟ್ರೀಯ ನಾಟಕೋತ್ಸವಕ್ಕೆ ಶಿವಧ್ವಜಾರೋಹಣ ನೆರೆವೇರಿಸುವ ಮೂಲಕ ಚಾಲನೆ ನೀಡಿ, ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

        ನಾವೆಲ್ಲರೂ ಕನ್ನಡಿಗರಾದ ಕಾರಣ ನಮಗೆ ಕನ್ನಡ ಭಾಷೆಯ ಮೂಲಕವೇ ಜ್ಞಾನ, ತಿಳುವಳಿಕೆ ಬಂದಿದೆ. ಆದ್ದರಿಂದ ನಾವು ಮೊದಲು ಕನ್ನಡ ನುಡಿಯನ್ನು ಗೌರವಿಸಬೇಕು. ಪ್ರಾರ್ಥನೆಯು ಹೊರ ನೋಟವನ್ನು ಕಡಿಮೆ ಮಾಡಿ, ಒಳ ನೋಟದ ಕಡೆ ಗಮನಹರಿಸುವಂತೆ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿದಿನ ಬೆಳಗ್ಗೆ ಪ್ರಾರ್ಥನೆ, ಧ್ಯಾನ, ಮೌನ ಮತ್ತು ಚಿಂತನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.

        ಸಂವಿಧಾನದ ಮೂಲ ಆಶಯ ಸ್ವಾತಂತ್ರ್ಯ, ಸಮಾನತೆ, ಸರ್ವೋದಯ. ವಿಶ್ವದ ಎಲ್ಲ ಸಂವಿಧಾನಕ್ಕಿಂತ ಮಿಗಿಲಾದುದು 12ನೇ ಶತಮಾನದ ಬಸವಾದಿ ಶಿವ ಶರಣರು ನೀಡಿದ ಸಂವಿಧಾನ. `ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ’ ಎಂದು ಜ್ಞಾನಕ್ಕೆ ಮೊದಲ ಆದ್ಯತೆ ನೀಡಿದರು.

      `ಇವ ನಮ್ಮವ, ಇವ ನಮ್ಮವ’ ಎನ್ನುವ ಮೂಲಕ ಮನುಕುಲವೇ ಒಂದು ಎನ್ನುವ ಕರೆಕೊಟ್ಟರು. `ಕರ್ಣದೊಳಗೆ ಜನಸಿದವರುಂಟೆ’ ಎನ್ನುವ ಮೂಲಕ ವರ್ಣ, ಜಾತಿ, ಸ್ಥಳ ಮುಂತಾದ ಅಸಮಾನತೆಗಳನ್ನು ದೂರಗೊಳಿಸಲು ಎಲ್ಲರ ಹುಟ್ಟಿನ ಗುಟ್ಟು ಒಂದೇ ಎಂದರು. `ನಡುವೆ ಸುಳಿವಾತ್ಮ ಹೆಣ್ಣೂ ಅಲ್ಲ ಗಂಡೂ ಅಲ್ಲ’ ಎನ್ನುವ ಮೂಲಕ ಲಿಂಗ ತಾರತಮ್ಯವನ್ನು ಹೋಗಲಾಡಿಸಿದರು. `ದೇವನೊಬ್ಬ ನಾಮ ಹಲವು’ ಎನ್ನುವ ಮೂಲಕ ಮೌಢ್ಯಗಳ ವಿರುದ್ಧ ಸಮರವನ್ನೇ ಸಾರಿದರು. ಹೀಗೆ ಇಂದಿನ ಸಂವಿಧಾನದ ಶ್ರೇಷ್ಠಗುಣಗಳೆಲ್ಲವೂ ಶರಣರ ವಚನಗಳಲ್ಲಿವೆ ಎಂದರು.

       ಸರ್ವಾಧಿಕಾರತ್ವವನ್ನು ಹೋಗಲಾಡಿಸುವುದೇ ಸಂವಿಧಾನದ ಮೂಲ ಆಶಯವಾಗಿತ್ತು. ಆದರೆ ಇಂದು ಮತ್ತೆ ಸರ್ವಾಧಿಕಾರ ಎಲ್ಲೆಡೆ ಎದ್ದು ಕಾಣುತ್ತಿದೆ. ಹೆಚ್ಚು ಜನಪ್ರತಿನಿಧಿಗಳನ್ನು ಹೊಂದಿದ ಪಕ್ಷದವರು ಮಾತ್ರ ಆಡಳಿತ ನಡೆಸಬೇಕು ಎಂಬುದು ಸಂವಿಧಾನದ ಆಶಯ. ಆದರೆ, ಇಂದು ಈ ಆಶಯ ಈಡೇರುತ್ತಿದೆಯೇ ಎನ್ನುವುದರ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಾಗಿದೆ. ಇಂದಿನ ಪರಿಸ್ಥಿತಿಯನ್ನು ನೋಡಿದರೆ ನಮ್ಮ ಸಂವಿಧಾನವನ್ನು ನಾವೇ ಅವಹೇಳನ ಮಾಡುತ್ತಿದ್ದೇವೆ ಎನ್ನಿಸುತ್ತಿದೆ ಎಂದು ಮಾರ್ಮಿಕವಾಗಿ ನುಡಿದರು.

        ಜನಪ್ರತಿನಿಧಿಗಳು ಜನ ಸೇವಕರೇ ಹೊರತು ಪ್ರಭುಗಳಲ್ಲ. ಆದರೆ, ಮತ ಚಲಾಯಿಸುವ ತನಕ ಮಾತ್ರ ಪ್ರಜೆಗಳು ಪ್ರಭುಗಳು; ನಂತರ ಜನಪ್ರತಿನಿಧಿಗಳೇ ಪ್ರಭುಗಳಾಗುವರು. ಅನೇಕ ರೀತಿಯ ಆಮಿಷಗಳಿಗೆ ಒಳಗಾಗಿ ಮತದಾರರು ಮತವನ್ನು ಮಾರಿಕೊಳ್ಳುತ್ತಿರುವುದು ದುರದೃಷ್ಟಕರ ಸಂಗತಿ. ಮತ ಮಾರುವುದೂ ಅಲ್ಲ; ಕೊಳ್ಳುವುದೂ ಅಲ್ಲ. ಈ ಕೊಳ್ಳುವ-ಮಾರುವ ಪ್ರವೃತ್ತಿ ಹೆಚ್ಚಾಗುತ್ತಿರುವುದರಿಂದ ಪ್ರಜಾಪ್ರಭುತ್ವ ಸಂಕಷ್ಟಕ್ಕೆ ಸಿಲುಕುತ್ತಿದೆ. ಪ್ರಜಾಪ್ರಭುತ್ವಕ್ಕೆ ಧರ್ಮ ಮತ್ತು ನೈತಿಕ ನೆಲೆಗಟ್ಟು ಇರಬೇಕು ಎಂದು ಪ್ರತಿಪಾದಿಸಿದರು.

        `ಸಾಂವಿಧಾನಿಕ ಮೌಲ್ಯಗಳು’ ವಿಷಯ ಕುರಿತು ಮಾತನಾಡಿದ ಹೈಕೋರ್ಟ್‍ನ ವಿಶ್ರಾಂತ ನ್ಯಾಯಮೂರ್ತಿ ಹೆಚ್.ಬಿಲ್ಲಪ್ಪ, ಸಂವಿಧಾನ ನಮ್ಮ ರಾಷ್ಟ್ರೀಯ ಧರ್ಮ. ಜನರ ಸರ್ವಾಂಗೀಣ ಬೆಳವಣಿಗೆಯೇ ಸಂವಿಧಾನದ ಧ್ಯೇಯ. ಅದರ ಪೀಠಿಕೆಯಲ್ಲಿ ಭಾರತವನ್ನು ಜಾತ್ಯತೀತ ಪ್ರಜಾರಾಜ್ಯವನ್ನಾಗಿ ಪರಿಗಣಿಸಿದ್ದೇವೆ ಎನ್ನುವ ಘೋಷವಾಕ್ಯವಿದೆ. ಭಾರತ ಬಹು ಸಂಸ್ಕøತಿ, ಧರ್ಮ, ಭಾಷೆ, ವೇಷಭೂಷಣ, ಕಟ್ಟುಪಾಡುಗಳ ವೈವಿಧ್ಯಮಯ ರಾಷ್ಟ್ರ. ಇಂಥ ರಾಷ್ಟ್ರವನ್ನು ಜಗತ್ತಿನ ಬೇರೆಡೆ ಕಾಣಲು ಸಾಧ್ಯವಿಲ್ಲ ಎಂದರು.

         ಜಾತ್ಯತೀತ ಅಂದರೆ ಧರ್ಮರಹಿತ ಮತ್ತು ಯಾವುದೋ ಒಂದು ಧರ್ಮಕ್ಕೆ ಮಾತ್ರ ಮಾನ್ಯತೆ ನೀಡುವಂಥದ್ದು ಎನ್ನುವ ಅರ್ಥವಲ್ಲ. ಎಲ್ಲ ಧರ್ಮದ ಜನರನ್ನು ಸಮಾನವಾಗಿ ಗೌರವಿಸುವುದು ಎಂದರ್ಥ. ಪ್ರಜೆಗಳಲ್ಲಿನ ಪ್ರಬುದ್ಧತೆಯ ಕೊರತೆಯಿಂದಾಗಿ ಪ್ರಜೆಗಳೂ ಇನ್ನೂ ಪ್ರಭುಗಳಾಗಿಲ್ಲ. ಪ್ರಜಾಸೇವಕರನ್ನೇ ಪ್ರಜಾಪ್ರಭುಗಳು ಎಂದು ಭಾವಿಸಿರುವುದು ಇಂದಿನ ದೊಡ್ಡ ತಪ್ಪು. ಇದರಿಂದಾಗಿಯೇ ನಮ್ಮ ದೇಶ ಪದೇ ಪದೇ ಕಷ್ಟನಷ್ಟಗಳಿಗೆ ಒಳಗಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

            ವೇದಿಕೆಯ ಮೇಲೆ ಮುಖ್ಯೋಪಾಧ್ಯಾಯರಾದ ಹೊನ್ನೇಶಪ್ಪ, ಸಂಗಾಪುರ್, ಶಿವಕುಮಾರ್ ಮೊದಲಾದ ಅಧ್ಯಾಪಕರಿದ್ದರು. ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ನೌಕರರು, ಗ್ರಾಮಸ್ಥರು, ಕಲಾವಿದರು ಮುಂತಾದವರು ಸಾಮೂಹಿಕ ಪ್ರಾರ್ಥನೆ, ಶಿವಮಂತ್ರಲೇಖನ, ಧ್ಯಾನ, ಮೌನದಲ್ಲಿ ಭಾಗವಹಿಸಿದ್ದರು. ಹೆಚ್ ಎಸ್ ನಾಗರಾಜ್ ಸಾಮೂಹಿಕ ಪ್ರಾರ್ಥನೆ ನಡೆಸಿಕೊಟ್ಟರು. ವಿದ್ಯಾರ್ಥಿಗಳು ಕಾರ್ಯಕ್ರಮ ನಿರ್ವಹಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap