ಶೋಷಣೆ ಮೆಟ್ಟಿ ನಿಂತು ಕೃಷಿಯಲ್ಲಿ ತೊಡಗಿಸಿಕೊಳ್ಳಿ

ದಾವಣಗೆರೆ:

       ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರ ಮೇಲೆ ಶೋಷಣೆ ನಡೆಯುತ್ತಿದ್ದು, ಈ ಶೋಷಣೆಯನ್ನು ಮೆಟ್ಟಿ ನಿಂತು, ಮಹಿಳೆಯರು ಆತ್ಮವಿಶ್ವಾಸದಿಂದ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕೆಂದು ನಿಟ್ಟೂರಿನ ಪ್ರಗತಿಪರ ರೈತ ಮಹಿಳೆ ಸರೋಜ ಪಾಟೀಲ್ ಸಲಹೆ ನೀಡಿದರು.

       ನಗರದ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಂಗಳವಾರ ಐ.ಸಿ.ಎ.ಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ಕೃಷಿಕ ಸಮಾಜ ಇವುಗಳ ಸಂಯುಕ್ತಾಶ್ರುಯದಲ್ಲಿ ಏರ್ಪಡಿಸಿದ್ದ ಕೃಷಿ ತಂತ್ರಜ್ಞಾನ ಮಾಹಿತಿ ಸಪ್ತಾಹ ಹಾಗೂ ಕೃಷಿಯಲ್ಲಿ ಮಹಿಳೆ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

      ಸಾಮಾನ್ಯವಾಗಿ ಹೆಣ್ಣನ್ನು ಭೂಮಿ ತಾಯಿಗೆ ಹೋಲಿಸುತ್ತಾರೆ. ಆದರೆ, ಮಹಿಳೆಯರ ಮೇಲೆ ಎಲ್ಲಾ ಕ್ಷೇತ್ರಗಳಲ್ಲೂ ದೌರ್ಜನ್ಯ, ಶೋಷಣೆ ನಡೆಸಲಾಗುತ್ತಿದೆ. ಈ ಎಲ್ಲಾ ಶೋಷಣೆ, ದೌರ್ಜನ್ಯವನ್ನು ಮೆಟ್ಟಿ ನಿಲ್ಲುವ ಮೂಲಕ ಮಹಿಳೆಯರು ಮುನ್ನಡೆಯಬೇಕೆಂದು ಕಿವಿಮಾತು ಹೇಳಿದರು..

      ನನ್ನ ಪೋಷಕರು, ನನ್ನನ್ನು ಹಳ್ಳಿಯಲ್ಲಿರುವವರಿಗೆ ಮದುವೆ ಮಾಡಿಕೊಟ್ಟರು. ಹಳ್ಳಿಯಲ್ಲಿ ಏನೂ ಸಾಧಿಸಲಾಗದು ಎಂಬ ಬೇಸರ ಇತ್ತು. ಆದರೆ, ಕಾಲ ಕ್ರಮೇಣ ಜವಾಬ್ದಾರಿ ಹೆಚ್ಚಾದ ಕಾರಣ ತೆಂಗಿನ ನಾರು ಉತ್ಪಾದಿಸುವ ಬಗ್ಗೆ ತರಬೇತಿ ಪಡೆದು ಸ್ವಂತ ಕೇಂದ್ರ ಆರಂಭಿಸಿ, ಸುಮಾರು 600ಕ್ಕೂ ಹೆಚ್ಚು ಮಹಿಳೆಯರಿಗೆ ತರಬೇತಿ ನೀಡಿದೆ. ಆದರೆ, ಆರಂಭದಲ್ಲಿ ಉತ್ತವಾಗಿಯೇ ನಡೆಯುತ್ತಿದ್ದ ಘಟಕವು ವಿದ್ಯುತ್ ಅವಘಡದಿಂದ ಮುಚ್ಚುವ ಹಂತ ತಲುಪಿತು. ಆದರೂ, ಎದೆ ಗುಂದದೇ, ಕೃಷಿಯ ಸಮಗ್ರ ಪೀಡಿ ನಿರ್ವಹಣೆ ಬಗ್ಗೆ ತರಬೇತಿ ಪಡೆದು ಪ್ರಥಮ ಬಾರಿಗೆ ಶ್ರೀ ಪದ್ಧತಿ ಬೆಳೆಯ ಬಗ್ಗೆ ನನ್ನ ಜಮೀನಿನಲ್ಲಿಯೇ ಪ್ರಯೋಗ ಮಾಡಿದೆ.

       ಮಂಡ್ಯಲ್ಲೆ ತರಬೇತಿಗೆ ಹೋದಾಗ ಕೃಷಿಕ ಬೋರೇಗೌಡರನ್ನು ಭೇಟಿ ಮಾಡಿದ್ದೆ. ಅಲ್ಲಿಂದ ತಂದ 18 ಭತ್ತದ ತಳಿಯೊಂದಿಗೆ ಒಟ್ಟು 22 ದೇಶೀಯ ತಳಿಗಳನ್ನು ಸಂಗ್ರಹಿಸಿದೆ. ಆಸಕ್ತ ಮಹಿಳೆಯರನ್ನು ಒಗ್ಗೂಡಿಸಿ ನಮ್ಮ ತೆಂಗಿನ ತೋಟದಲ್ಲಿ 6 ಬಗೆಯ ಸಿರಿಧಾನ್ಯಗಳನ್ನು ಬೆಳೆದೆ. ನಂತರ ಮೌಲ್ಯವರ್ಧನೆ ಮಾಡಿ, ಮೌಲ್ಯವರ್ಧಿತ ಆಹಾರ ಘಟಕ ಸ್ಥಾಪಿಸಿ ಹತ್ತಾರು ಜನಕ್ಕೆ ಕೆಲಸ ನೀಡಿದ್ದೇನೆಂದು ತಮ್ಮ ಸಾಧನೆಯನ್ನು ಬಿಚ್ಚಿಟ್ಟರು.

       ಹರಪನಹಳ್ಳಿ ಕೃಷಿ ಇಲಾಖೆಯ ಉಪ ನಿರ್ದೇಶಕಿ ಜಿ.ಎಸ್. ಸ್ಫೂರ್ತಿ ಮಾತನಾಡಿ, ಕೃಷಿ ಇಲ್ಲದೇ ಮಹಿಳೆ ಇಲ್ಲ. ಮಹಿಳೆ ಇಲ್ಲದೇ ಕೃಷಿ ಇಲ್ಲ. ಹೀಗಾಗಿ ಪ್ರಸ್ತುತ ಮಹಿಳೆಯರು ಪೌಷ್ಠಿಕಾಂಶವುಳ್ಳ ಆಹಾರ ಪದಾರ್ಥ ಬೆಳೆಯುವ, ಸೇವಿಸುವ ಬಗ್ಗೆ ಚಿಂತನೆ ನಡೆಸಬೇಕಯ. ಇಲಾಖೆ, ಸಂಘ-ಸಂಸ್ಥಗಳು ಏರ್ಪಡಿಸುವ ತರಬೇತಿ, ಅಧ್ಯಯನ ಪ್ರವಾಸಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

         ಕತ್ತಲಗೆರೆ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ರಾಮಪ್ಪ ಪಾಟೀಲ್ ಮಾತನಾಡಿ, ಮಹಿಳೆಯರು ಎಲೆಮರೆಯ ಕಾಯಿಯಂತೆ ಸಾಕಷ್ಟು ಸಾಧನೆಗಳನ್ನು ಮಾಡುತ್ತಿದ್ದು, ಅವರು ಗುರುತಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಮಹಿಳಾ ಪ್ರಶಸ್ತಿ ನೀಡಬೇಕಾದರೆ, ಅರ್ಹರನ್ನು ಹುಡುಕಬೇಕಾದ ಪರಿಸ್ಥಿತಿ ಇದೆ ಎಂದರು.ಹಿರಿಯ ವಿಜ್ಞಾನಿ ಟಿ.ಎನ್. ದೇವರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು.

        `ಪೌಷ್ಠಿಕ ಕೈತೋಟ’ ವಿಷಯದ ಕುರಿತು ತೋಟಗಾರಿಕೆ ವಿಷಯ ತಜ್ಞ ಎಂ.ಜಿ. ಬಸವನಗೌಡ ಹಾಗೂ `ಸ್ವಚ್ಛತೆ ಮತ್ತು ಆರೋಗ್ಯ’ ಕುರಿತು ನಿವೃತ್ತ ಸ್ತ್ರೀರೋಗ ತಜ್ಞೆ ಡಾ.ಶಾಂತಾಭಟ್ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ತಾ.ಪಂ. ಅಧ್ಯಕ್ಷೆ ಮಮತಾ ಮಲ್ಲೇಶಪ್ಪ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಜಿ.ಹನುಮಂತಪ್ಪ ಉಪಸ್ಥಿತರಿದ್ದರು.

      ಮಣ್ಣು-ವಿಜ್ಞಾನ ವಿಷಯ ತಜ್ಞ ಸಣ್ಣಗೌಡ್ರ ಹೆಚ್.ಎಂ. ಸ್ವಾಗತಿಸಿದರು. ಕೃಷಿ ವಿಸ್ತರಣೆ ವಿಷಯ ತಜ್ಞ ಜೆ.ರಘುರಾಜ್ ನಿರೂಪಿಸಿದರು. ಬಿ.ಓ. ಮಲ್ಲಿಕಾರ್ಜುನ್ ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap