ಟಿಪ್ಪು ವಿರೋಧಿಗಳಿಗೆ ಸಿದ್ದರಾಮಯ್ಯ ತಿರುಗೇಟು

0
7

ಚಿತ್ರದುರ್ಗ:

        ದಯೆ ಇಲ್ಲದವರು ಧರ್ಮದ ಬಗ್ಗೆ ಮಾತನಾಡಬಾರದು. ಮತ್ತೊಂದು ಧರ್ಮವನ್ನು ದ್ವೇಷಿಸುವವರೆ ನಿಜವಾದ ಕೋಮುವಾದಿಗಳು ಎಂದು ಮಾಜಿ ಮುಖ್ಯಮಂತ್ರಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯನವರು ಟಿಪ್ಪುಜಯಂತಿ ವಿರೋಧಿಗಳಿಗೆ ಕಟುವಾಗಿ ಕುಟುಕಿದರು.
ಚಳ್ಳಕೆರೆ ಟೋಲ್‍ಗೇಟ್ ಸಮೀಪ ಸದ್ಗುರು ಕಬೀರಾನಂದಾಶ್ರಮದ ವತಿಯಿಂದ ನಿರ್ಮಾಣಗೊಂಡಿರುವ ನೂತನ ಎಸ್.ಎಸ್.ಕೆ.ಎಸ್.ಸಮುದಾಯ ಭವನವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

        ಹನ್ನೆರಡನೇ ಶತಮಾನದಲ್ಲಿಯೇ ಬಸವಣ್ಣನವರು ದಯೇಯೆ ಧರ್ಮದ ಮೂಲವಯ್ಯ ಎನ್ನುವ ಸಂದೇಶವನ್ನು ಸಮಾಜಕ್ಕೆ ನೀಡಿದ್ದಾರೆ. ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳದ ಕೆಲವು ಸ್ವಾರ್ಥ ರಾಜಕಾರಣಿಗಳು ಧರ್ಮವನ್ನು ಛಿದ್ರ ಮಾಡಲು ಹೊರಟಿದ್ದಾರೆ. ಟಿಪ್ಪು ಮತಾಂಧನಾಗಿದ್ದರೆ ಶೃಂಗೇರಿ ಶಾರದಾಂಬೆಯ ಪರಮ ಭಕ್ತನಾಗಿರುತ್ತಿರಲಿಲ್ಲ. ಶ್ರೀರಂಗಪಟ್ಟಣದಲ್ಲಿ ರಂಗನಾಥಸ್ವಾಮಿ ದೇವಾಲಯವಿರುತ್ತಿರಲಿಲ್ಲ.

        ಇತಿಹಾಸವನ್ನು ತಿಳಿದುಕೊಳ್ಳದವರು ನನ್ನನ್ನು ಟೀಕಿಸುತ್ತಿದ್ದಾರೆ. ನಾನು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಬರೀ ಟಿಪ್ಪುಜಯಂತಿಯಷ್ಟೆ ಆಚರಣೆ ಮಾಡಲಿಲ್ಲ. ಕೆಂಪೇಗೌಡ ಜಯಂತಿ, ಕಿತ್ತೂರುರಾಣಿ ಚೆನ್ನಮ್ಮ ಜಯಂತಿ, ಹೇಮರೆಡ್ಡಿ ಮಲ್ಲಮ್ಮ ಜಯಂತಿ, ವೇಮನ ಜಯಂತಿ, ಅಂಬಿಗರ ಚೌಡಯ್ಯ, ದೇವರದಾಸಿಮಯ್ಯ, ಅಡಪದ ಅಪ್ಪಣ್ಣ, ಮಾಚಿದೇವ ಜಯಂತಿ ಸೇರಿದಂತೆ ಒಟ್ಟು ಹದಿಮೂರು ದಾರ್ಶನಿಕರ ಜಯಂತಿಯನ್ನು ಆಚರಿಸಿದ್ದೇನೆ. ಇದನ್ನು ಸಹಿಸಿಕೊಳ್ಳಲು ಆಗದವರಿಗೆ ನನ್ನನ್ನೆ ಮತಾಂಧ ಎಂದು ಹೇಳುವ ಹಕ್ಕೆಲ್ಲಿದೆ ಎಂದು ಖಾರವಾಗಿ ಪ್ರಶ್ನಿಸಿದರು.

           ರಾಜ್ಯಾದ್ಯಂತ ಎಲ್ಲಾ ಹಿಂದುಳಿದವರ ಮಠಗಳಿಗೆ 280 ಕೋಟಿ ರೂ.ನೀಡಿದ್ದೇನೆ. ಹೆಚ್.ಆಂಜನೇಯ ಸಮಾಜ ಕಲ್ಯಾಣ ಸಚಿವರಾಗಿದ್ದಾಗ ಎಲ್ಲಾ ಸಮಾಜದ ಸಮುದಾಯ ಭವನಗಳಿಗೆ ಇಪ್ಪತ್ತು ಕೋಟಿ ರೂ.ಗಳನ್ನು ನೀಡಿದ್ದಾರೆ. ಎಲ್ಲಾ ಜನಾಂಗದವರನ್ನು ಗೌರವದಿಂದ ಕಾಣಬೇಕು ಎನ್ನುವುದು ನನ್ನ ತತ್ವ. ರಸಋಷಿ ಕುವೆಂಪುರವರು ರಚಿಸಿರುವಂತೆ ಸರ್ವ ಜನಾಂಗದ ಶಾಂತಿಯ ತೋಟ. ರಸಿಕರ ಕಂಗಳ ಸೆಳೆಯುವ ನೋಟ. ಹಿಂದು ಕ್ರೈಸ್ತ ಮುಸಲ್ಮಾನ ಪಾರಸಿಕ ಜೈನ ಉದ್ಯಾನ ಎನ್ನುವ ನಾಲ್ಕು ಸಾಲುಗಳನ್ನು ಹಾಡಿದ ಸಿದ್ದರಾಮಯ್ಯನವರು ಇಂತಹ ನಮ್ಮ ನಾಡಿನಲ್ಲಿ ಮತ್ತೊಂದು ಧರ್ಮವನ್ನು ದ್ವೇಷಿಸುವುದೇ ಕೆಲವರ ಕೆಲಸವಾಗಿದೆ. ಇದಕ್ಕಿಂತ ಹೇಯವಾದ ಕೆಲಸ ಮತ್ತೊಂದಿಲ್ಲ. ಟಿಪ್ಪುವಿರೋಧಿಗಳು ರಾಜಕಾರಣದ ಕನ್ನಡಕ ತೆಗೆದು ಮನುಷ್ಯತ್ವದ ಕನ್ನಡಕ ಹಾಕಿಕೊಳ್ಳಲಿ ಎಂದು ವಿರೋಧಿಗಳಿಗೆ ತಿರುಗೇಟು ನೀಡಿದರು.

          ಸದ್ಗುರು ಕಬೀರಾನಂದಾಶ್ರಮದ ನೂತನ ಸಮುದಾಯ ಭವನವನ್ನು ಸಂತೋಷದಿಂದ ಉದ್ಗಾಟಿಸಿದ್ದೇನೆ. ಆದಿಚುಂಚನಗಿರಿ ಮಠದ ಲಿಂಗೈಕ್ಯ ಬಾಲಗಂಗಾಧರನಾಥಸ್ವಾಮಿಗಳು ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದರು. ಅದೇ ರೀತಿ ಚಿತ್ರದುರ್ಗದ ಕಬೀರಾನಂದಾಶ್ರಮ ಕೂಡ ಶಿಕ್ಷಣಕ್ಕೆ ಒತ್ತು ನೀಡುತ್ತಾ ಬರುತ್ತಿದೆ. ಆದಿಚುಂಚನಗಿರಿಯ ಡಾ.ನಿರ್ಮಲಾನಂದನಾಥ ಮಹಾಸ್ವಾಮಿಗಳು ಬಾಲಗಂಗಾಧರನಾಥ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಸಾಗುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬಾಲಗಂಗಾಧರನಾಥ ಮಹಾಸ್ವಾಮಿಗಳು ಸಣ್ಣ ಸಣ್ಣ ಮಠಗಳಿಗೆ ಬೆನ್ನೆಲುಬಾಗಿ ನಿಂತಿದ್ದರು. ಶಿಕ್ಷಣಕ್ಕೆ ಅವರ ಕೊಡುಗೆ ಅಪಾರವಾದುದು. ಮನುಷ್ಯ ಸರಿದಾರಿಯಲ್ಲಿ ನಡೆದು ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕಾದರೆ ಆಧ್ಯಾತ್ಮಿಕತೆ ಬಹಳ ಮುಖ್ಯವಾದುದು. ಅದಕ್ಕಾಗಿ ಸಮಾಜವನ್ನು ತಿದ್ದುವಲ್ಲಿ ಮಠಗಳ ಪಾತ್ರ ಪ್ರಮುಖವಾಗಿದೆ ಎಂದರು.

           ಆದಿಚುಂಚನಗಿರಿಯ ಡಾ.ನಿರ್ಮಲಾನಂದನಾಥಮಹಾಸ್ವಾಮಿಗಳು ಸಮಾರಂಭದ ಸಾನಿಧ್ಯ ವಹಿಸಿದ್ದರು. ಕಬೀರಾನಂದಾಶ್ರಮದ ಶಿವಲಿಂಗಾನಂದಸ್ವಾಮಿ, ಬೆಂಗಳೂರಿನ ಪ್ರಕಾಶನಾಥಸ್ವಾಮಿ, ಮಾಜಿ ಸಚಿವ ಹೆಚ್.ಆಂಜನೇಯ, ಮಾಜಿ ಶಾಸಕ ಡಿ.ಸುಧಾಕರ್, ವಿಧಾನಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್, ಜಿ.ಪಂ.ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಜಿಲ್ಲಾಧಿಕಾರಿ ಆರ್.ಗಿರೀಶ್, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಫಾತ್ಯರಾಜನ್ ವೇದಿಕೆಯಲ್ಲಿದ್ದರು.ಸುಮನ ಪ್ರಾರ್ಥಿಸಿದರು. ವಿ.ಎಲ್.ಪ್ರಶಾಂತ್ ಸ್ವಾಗತಿಸಿದರು. ಶಿಕ್ಷಕ ಶಿವರಾಂ ನಿರೂಪಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here