ಕೋಟೆ ನಾಡಿನ ಮೀಸಲು ಕ್ಷೇತ್ರದಲ್ಲಿ ಮೈತ್ರಿ ಪಕ್ಷದ ಚಂದ್ರಪ್ಪ, ಬಿ.ಜೆ.ಪಿ.ಯ ನಾರಾಯಣಸ್ವಾಮಿಗೆ ನೇರ ಹಣಾಹಣಿ

0
14

ಚಿತ್ರದುರ್ಗ

      ಕೋಟೆ ನಾಡು ಎಂದೇ ಖ್ಯಾತಿ ಗಳಿಸಿದ ಚಿತ್ರದುರ್ಗ ಲೋಕಸಭಾ ಕ್ಷೇತ್ರವು ಪ.ಜಾತಿಗೆ ಮೀಸಲಾಗಿದ್ದು ಕಳೆದ 15 ದಿನಗಳಿಂದಲೂ ರಣ ರಣ ಬಿಸಿಲಿಗೂ ರಂಗೇರದ ಚುನಾವಣಾ ಪ್ರಚಾರದ ಭರಾಟೆ ಇದೀಗ 5 ದಿನಗಳಿಂದ ಥರಾವರಿ ರಾಜಕೀಯ ಕಸರತ್ತುಗಳ ಹಿನ್ನೋಟಗಳನ್ನು ಪಡೆದುಕೊಂಡು ಕಾವೇರತೊಡಗಿದೆ.

      ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಮೂರು, ಹಿರಿಯೂರು, ಹೊಸದುರ್ಗ ಹಾಗೂ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರಗಳ ಜೊತೆಗೆ ತುಮಕೂರು ಜಿಲ್ಲೆಯ ಶಿರಾ ಹಾಗೂ ಪಾವಗಡ ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನು ತನ್ನ ಒಡಲೊಳಗೆ ಸೇರಿಸಿಕೊಂಡ ಚಿತ್ರದುರ್ಗ ಲೋಕಸಭಾ ಕ್ಷೇತ್ರ ರಾಜಕೀಯ ಮೇಲಾಟಗಳಿಂದ ದಿನ ದಿನಕ್ಕೂ ಥರಾವರಿ ರಾಜಕೀಯ ಪಟ್ಟುಗಳನ್ನು ಕಾಣುತ್ತಿದೆ.

      ದೇಶವು ಸ್ವಾತಂತ್ರ್ಯದ ಸಿಹಿ ವಾಸನೆಯನ್ನು ಕಂಡ ನಂತರ ನಡೆದ 1952ರ ಪ್ರಥಮ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಎಸ್.ನಿಜಲಿಂಗಪ್ಪ ಈ ಲೋಕಸಭಾ ಕ್ಷೇತ್ರದಿಂದ ಆಯ್ಕೆಗೊಂಡಿದ್ದರು. 1957ರ ಚುನಾವಣೆಯಲ್ಲಿ ಭಾರತೀಯ ಪ್ರಜಾ ಸೋಷಿಯಾಲಿಸ್ಟ್(ಪಿ.ಎಸ್.ಪಿ.) ಪಕ್ಷದಿಂದ ಸ್ಪರ್ಧಿಸಿದ್ದ ಜೆ.ಎಂ.ಮೊಹಮದ್ ಇಮಾಮ್ ಆಯ್ಕೆಯಾಗಿದ್ದರು.

     1962ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಎಸ್.ವೀರಭದ್ರಪ್ಪ ಅವರು ಪ್ರಜಾ ಸೋಶಿಯಾಲಿಸ್ಟ್ ಪಕ್ಷದ ಜಿ.ಬಸಪ್ಪ ಅವರನ್ನು 44,849 ಮತಗಳ ಅಂತರದಿಂದ ಪರಾಭವಗೊಳಿಸಿ ಆಯ್ಕೆಗೊಂಡಿದ್ದರು. ಕಳೆದ ಚುನಾವಣೆಯಲ್ಲಿ ಸೋತಿದ್ದ ಜೆ.ಎಮ್.ಮೊಹಮದ್ ಇಮಾಮ್ ಅವರು ಪುನಃ 1967ರಲ್ಲಿ ಸ್ವತಂತ್ರ ಪಕ್ಷದಿಂದ ಸ್ಪರ್ಧಿಸಿ ವೀರಬಸಪ್ಪ ಅವರಿಗಿಂತ 31,932 ಹೆಚ್ಚು ಮತಗಳನ್ನು ಗಳಿಸಿ ಜಯಶೀಲರಾಗಿದ್ದರು.

    1931 ರಲ್ಲಿ ಎನ್.ಪಿ.ಜೆ. ಪಕ್ಷದ ಕೊಂಡಜ್ಜಿ ಬಸಪ್ಪ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮೊಹಮದ್ ಇಮಾಮ್ ಅವರನ್ನು ಪರಾಭವಗೊಳಿಸಿ ಆಯ್ಕೆಯಾಗಿದ್ದರು. 1977ರ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಜಿಲ್ಲೆಯಲ್ಲಿದ್ದರೂ ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿದ ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಭಾಗದ ಕೆ.ಮಲ್ಲಣ್ಣ ಪ್ರಥಮ ಬಾರಿಗೆ ಚಿತ್ರದುರ್ಗ ಲೋಕಸಭೆಯಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧಿಸಿ ಆಯ್ಕೆಯಾದದ್ದು ಇತಿಹಾಸದ ಪುಟಗಳಿಗೆ ಸೇರ್ಪಡೆಗೊಂಡಂತಾಯಿತು. ಇವರ ವಿರುದ್ಧ ಸ್ಪರ್ಧಿಸಿದ್ದ ಭಾರತೀಯ ಲೋಕದಳ ಪಕ್ಷದ ಹೆಚ್.ಸಿ.ಬೋರಯ್ಯರವರ ವಿರುದ್ಧ 86,654 ಹೆಚ್ಚು ಮತಗಳನ್ನು ಕೆ.ಮಲ್ಲಣ್ಣ ಪಡೆದಿದ್ದರು.

      1980ರಲ್ಲಿ ಪುನಃ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕೆ.ಮಲ್ಲಣ್ಣ ಪುನರಾಯ್ಕೆ ಬಯಸಿ ಸ್ಪರ್ಧಿಸಿದ್ದಾಗ ಜನತಾ ಪಕ್ಷದ ಬಿ.ಎಲ್.ಗೌಡ ಪ್ರಬಲ ಪೈಪೋಟಿಗೆ ಹಣಾ ಹಣಿ ನಡೆಸಿದರಾದರೂ 1,09,361 ಮತಗಳ ಅಂತರದಿಂದ ಕೆ.ಮಲ್ಲಣ್ಣ ಪುನಃ ಜಯ ಗಳಿಸಿದರು.
1984ರಲ್ಲಿನ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಕೆ.ಹೆಚ್.ರಂಗನಾಥ್ ಕಣಕ್ಕಿಳಿದರೆ, ಜನತಾ ಪಕ್ಷದಿಂದ ಬಿ.ಎಲ್.ಗೌಡ ಕಣದಲ್ಲಿ ಉಳಿದು ಈ ನಡುವೆ ಕೆ.ಹೆಚ್.ರಂಗನಾಥ್ 56,811 ಮತಗಳ ಅಂತರದಿಂದ ಜಯಶೀಲರಾಗಿದ್ದರು. 1989ರಲ್ಲಿ ಕಾಂಗ್ರೆಸ್‍ನಿಂದ ಸಿ.ಪಿ.ಮೂಡಲಗಿರಿಯಪ್ಪ, ಜನತಾ ದಳದಿಂದ ಸಣ್ಣ ಚಿಕ್ಕಪ್ಪ ಸ್ಪರ್ಧಾ ಕಣದಲ್ಲಿದ್ದು 1,42,793 ಮತಗಳ ಅಂತರದಿಂದ ಸಿ.ಪಿ.ಮೂಡಲಗಿರಿಯಪ್ಪ ಆಯ್ಕೆಯಾಗಿದ್ದರು.

       1991ರಲ್ಲಿ ಪುನಃ ಕಾಂಗ್ರೆಸ್‍ನಿಂದ ಸಿ.ಪಿ.ಮೂಡಲಗಿರಿಯಪ್ಪ ಕಣಕ್ಕಿಳಿದರೆ ಬಿ.ಜೆ.ಪಿ. ಪಕ್ಷದಿಂದ ಎಲ್.ಜಿ.ಹಾವನೂರು ಅವರನ್ನು ಕಣಕ್ಕಿಳಿಸಲಾಗಿತ್ತು. ಆಫ್ರ್ರಿಕಾ ದೇಶಕ್ಕೆ ಸಂವಿಧಾನದ ಸಲಹೆಗಾರರೂ ಆಗಿದ್ದ ಎಲ್.ಜಿ.ಹಾವನೂರರ ಬಗ್ಗೆ ಹೆಚ್ಚು ಅರಿಯದ ಚಿತ್ರದುರ್ಗದ ಜನತೆ ಹಾವನೂರರನ್ನು ಕೊನೆಗೂ ಕೈ ಹಿಡಿಯಲೇ ಇಲ್ಲ. ಆಗ ಸಿ.ಪಿ.ಮೂಡಲಗಿರಿಯಪ್ಪ 82,512 ಮತಗಳ ಅಂತರದಿಂದ ಆಯ್ಕೆಗೊಂಡಿದ್ದರು.

       1996ರಲ್ಲಿ ಜನತಾ ದಳದಿಂದ ಸ್ಪರ್ಧಿಸಿದ್ದ ಕೋದಂಡರಾಮಯ್ಯ ಅವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಸಿ.ಪಿ.ಮೂಡಲಗಿರಿಯಪ್ಪ ಅವರನ್ನು 19,382 ಮತಗಳ ಅಂತರದಿಂದ ಸೋಲಿಸಿದ್ದರು. ಆಗ ಸಿ.ಪಿ.ಮೂಡಲಗಿರಿಯಪ್ಪ ಹೀನಾಯ ಸೋಲು ಕಾಣಲು ಕಳೆದ ಎರಡು ಮೂರು ಬಾರಿ ಆಯ್ಕೆಗೊಂಡರೂ ಕ್ಷೇತ್ರದಲ್ಲಿ ಕಾಣ ಸಿಗದ ಅಭಿವೃದ್ಧಿ ಕಾರ್ಯಗಳ ಕೊರತೆ ಪ್ರಮುಖ ಕಾರಣವಾಯಿತು. 1998ರಲ್ಲಿ ಪುನಃ ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ಸಿ.ಪಿ.ಮೂಡಲಗಿರಿಯಪ್ಪ ಅವರು ಲೋಕಶಕ್ತಿಯಿಂದ ಸ್ಪರ್ಧಿಸಿದ್ದ ಕೋದಂಡರಾಮಯ್ಯ ಅವರನ್ನು 58,321 ಮತಗಳ ಅಂತರದಿಂದ ಪರಾಜಯಗೊಳಿಸಿದ್ದರು.

      1999ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಎನ್.ವೈ.ಹನುಮಂತಪ್ಪ ಅವರನ್ನು ಜನತಾ ದಳ(ಯು)ನಿಂದ ಸ್ಪರ್ಧಿಸಿದ್ದ ಚಿತ್ರನಟ ಶಶಿಕುಮಾರ್ 11,178 ಮತಗಳ ಅಂತರದಿಂದ ಪರಾಜಯಗೊಳಿಸಿದ್ದರು. 2004ರಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ಎನ್.ವೈ.ಹನುಮಂತಪ್ಪ ಅವರು ಜೆ.ಡಿ.ಎಸ್. ಪಕ್ಷದ ಕೋದಂಡರಾಮಯ್ಯ ಅವರಿಗಿಂತಲೂ 37,460 ಮತಗಳನ್ನು ಪಡೆದು ಜಯಶೀಲರಾಗಿದ್ದರು.

      2009ರಲ್ಲಿ ಬಿ.ಜೆ.ಪಿ. ಪಕ್ಷವು ಜನಾರ್ಧನಸ್ವಾಮಿ ಅವರನ್ನು ಕಣಕ್ಕಿಳಿಸಿದಾಗ ಕಾಂಗ್ರೆಸ್ ಪಕ್ಷದಿಂದ ಅಷ್ಟೇನೂ ಪ್ರಬಲ ಅಭ್ಯರ್ಥಿಯೇ ಅಲ್ಲದ ಬಿ.ತಿಪ್ಪೇಸ್ವಾಮಿ ಅವರನ್ನು ಕಣಕ್ಕಿಳಿಸಿದಾಗ ದೇಶದಲ್ಲಿ ಬಿಜೆಪಿಯ ಗಾಳಿಯೂ ಬೀಸುತ್ತಿದ್ದ ಪರಿಣಾಮ ಜನಾರ್ಧನಸ್ವಾಮಿ 1,35,656 ಮತಗಳ ಬಹುಮತಗಳಿಂದ ಆಯ್ಕೆಗೊಂಡರು.

     2014 ರಲ್ಲಿ ಬಿ.ಜೆ.ಪಿ. ಪಕ್ಷದಿಂದ ಪಕ್ಷದಿಂದ ಜನಾರ್ಧನಸ್ವಾಮಿ ಮರು ಆಯ್ಕೆ ಬಯಸಿ ಸ್ಪರ್ಧಾ ಕಣಕ್ಕಿಳಿದಾಗ ಕಾಂಗ್ರೆಸ್ ಪಕ್ಷದಿಂದ ಚಂದ್ರಪ್ಪ ಅವರನ್ನು ಸ್ಪರ್ಧೆಗೆ ಇಳಿಸಲಾಯಿತು. ಜನ ಸಾಮಾನ್ಯರೊಂದಿಗೆ

      ಜನಾರ್ಧನಸ್ವಾಮಿ ಬೆರೆಯದ ಪರಿಣಾಮ ಹಾಗೂ ಕ್ಷೇತ್ರದ ಅಭಿವೃದ್ಧಿ ಗಣನೀಯ ಪ್ರಮಾಣದಲ್ಲಿ ಆಗಲಿಲ್ಲ ಅನ್ನುವ ಕಾರಣದಿಂದಾಗಿ ಕ್ಷೇತ್ರದ ಮತದಾರ ಹೊಸ ಮುಖವಾದ ಕಾಂಗ್ರೆಸ್‍ನ ಚಂದ್ರಪ್ಪ ಅವರ ಕೈ  ಹಿಡಿದನು. ಚಂದ್ರಪ್ಪ ಅವರು ಜನಾರ್ಧನಸ್ವಾಮಿ ಅವರಿಗಿಂತ 1,01,291 ಹೆಚ್ಚು ಮತಗಳನ್ನು ಪಡೆದು ಜಯ ಗಳಿಸಿದರು.

       ಕಳೆದ ಚುನಾವಣೆಗಳ ಹಿನ್ನೋಟದ ನಂತರ ಇದೀಗ ನಡೆಯಲಿರುವ ಲೋಕಸಭಾ ಚುನಾವಣೆ ಚಿತ್ರದುರ್ಗ ಕ್ಷೇತ್ರದ ಮತದಾರರನ್ನು ಸಂಕಟಕ್ಕೆ ಸಿಲುಕಿಸದಿದ್ದರೂ, ಕಾಂಗ್ರೆಸ್-ಜೆ.ಡಿ.ಎಸ್. ಪಕ್ಷದ ಕಾರ್ಯಕರ್ತ-ಮುಖಂಡರನ್ನು ಉಭಯ ಸಂಕಟಕ್ಕೆ ಸಿಲುಕಿಸಿ ಕ್ಷೇತ್ರದ ರಾಜಕಾರಣದ ವರಸೆಗಳನ್ನು ಅದಲು ಬದಲು ಮಾಡಿದೆ.

ಚಿತ್ರದುರ್ಗ:

      ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,53,623 ಮತದಾರರಿದ್ದು ಬಿ.ಜೆ.ಪಿ. ಪಕ್ಷದಿಂದ ಆಯ್ಕೆಗೊಂಡ ತಿಪ್ಪಾರೆಡ್ಡಿ ಪಕ್ಷದ ಅಭ್ಯರ್ಥಿಯ ಪರ ಚುನಾವಣಾ ಭರಾಟೆಯಲ್ಲಿ ತೊಡಗಿದ್ದಾರೆ. ಮೈತ್ರಿ ಪಕ್ಷದ ಅಭ್ಯರ್ಥಿಯ ಪರ ಜೆ.ಡಿ.ಎಸ್.ನ ಯೋಶೋಧರ, ನಗರಸಭೆಯ ಮಾಜಿ ಅಧ್ಯಕ್ಷ ಬಿ.ಕಾಂತರಾಜು, ಹನುಮಲಿ ಷಣ್ಮುಖಪ್ಪ ಪ್ರಚಾರದಲ್ಲಿ ತೊಡಗಿದ್ದಾರೆ.

       ಚಿತ್ರದುರ್ಗ ನಗರದಲ್ಲಿ ಮಾತ್ರ ವ್ಯಾಪಕವಾಗಿ ನರೇಂದ್ರ ಮೋದಿಯ ಹವಾ ಕಾಣ ಬಂದರೆ ಗ್ರಾಮಾಂತರ ಪ್ರದೇಶದಲ್ಲಿ ಕಾಂಗ್ರೆಸ್ ಬಿ.ಜೆ.ಪಿ.ಯೊಟ್ಟಿಗೆ ಪ್ರಬಲ ಪೈಪೋಟಿ ನೀಡುವ ಲಕ್ಷಣಗಳು ಕಾಣ ಸಿಗುತ್ತವೆ. ಚಿತ್ರದುರ್ಗ ವಿಧಾನಸಭಾ ವ್ಯಾಪ್ತಿಯಲ್ಲಿ ಲಿಂಗಾಯಿತ ಮತದಾರರ ಸಂಖ್ಯೆ ಹೆಚ್ಚಾಗಿದ್ದು, ಅಲ್ಪಸಂಖ್ಯಾತ, ಪ.ಜಾತಿ ಹಾಗೂ ಪ.ಪಂಗಡದ ಮತಗಳು ನಿರ್ಣಾಯಕವಾಗುತ್ತವೆ.

ಹಿರಿಯೂರು:

    ಹಿರಿಯೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2,35,665 ಮಂದಿ ಮತದಾರರಿದ್ದು ಬಿ.ಜೆ.ಪಿ. ಪಕ್ಷದಿಂದ ಆಯ್ಕೆಗೊಂಡ ಪೂರ್ಣಿಮಾ ಶ್ರೀನಿವಾಸ್ ಇಲ್ಲಿನ ಶಾಸಕರೂ ಆಗಿದ್ದಾರೆ. ಬಿ.ಜೆ.ಪಿ. ಪಕ್ಷದ ಅಭ್ಯರ್ಥಿ ಎ.ನಾರಾಯಣಸ್ವಾಮಿ ಪರವಾಗಿ ಶಾಸಕರೊಟ್ಟಿಗೆ ಪಕ್ಷದ ತಾ.ಘಟಕದ ಅಧ್ಯಕ್ಷ ದ್ಯಾಮೇಗೌಡ, ನಗರಸಭೆಯ ಮಾಜಿ ಅಧ್ಯಕ್ಷ ಚಂದ್ರಶೇಖರ್ ವ್ಯಾಪಕ ಪ್ರಚಾರದಲ್ಲಿ ತೊಡಗಿದ್ದಾರೆ. ಇತ್ತ ಕಾಂಗ್ರೆಸ್-ಜೆ.ಡಿ.ಎಸ್. ಮೈತ್ರಿ ಪಕ್ಷದ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಅವರ ಪರವಾಗಿ ಜಿಲ್ಲಾ ಜೆ.ಡಿ.ಎಸ್. ಅಧ್ಯಕ್ಷ ಯಶೋಧರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್ ಸೇರಿದಂತೆ ಹಲವು ಪ್ರಮುಖರು ಪಕ್ಷದ ಅಭ್ಯರ್ಥಿ ಪರ ಪ್ರಚಾರದಲ್ಲಿ ತೊಡಗಿದ್ದಾರೆ.

       ಹಿರಿಯೂರು ನಗರದಲ್ಲಿ ಬಿ.ಜೆ.ಪಿ. ವ್ಯಾಪಕ ಸದ್ದು ಮಾಡುತ್ತಿರುವುದು ಒಂದು ಕಡೆಯಾದರೆ ಹಿರಿಯೂರು ಗ್ರಾಮಾಂತರ ಭಾಗದಲ್ಲಿ ಮೈತ್ರಿ ಪಕ್ಷದ ಚಂದ್ರಪ್ಪ ಮತದಾರರ ಮನವೊಲಿಸುವಲ್ಲಿ ವ್ಯಾಪಕ ಕಸರತ್ತು ನಡೆಸಿದ್ದಾರೆ. ಸದರಿ ಕ್ಷೇತ್ರದಲ್ಲಿ ಯಾದವ ಜನಾಂಗದ ಮತಗಳು ಹೆಚ್ಚಾಗಿದ್ದು ಸದರಿ ಜನಾಂಗದ ಮತಗಳು ಈ ಚುನಾವಣೆಯಲ್ಲಿ ನಿರ್ಣಾಯಕವೂ ಆಗಿವೆ.

ಚಳ್ಳಕೆರೆ:

       ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2,11,492 ಮತದಾರರಿದ್ದು ಕಳೆದ ವಿಧಾನಸಭಾ ಚುನಾವಣೆಯಲ್ಲಿ
ಕಾಂಗ್ರೆಸ್ ಪಕ್ಷದಿಂದ ಆಯ್ಕೆಗೊಂಡಿದ್ದ ರಘುಮೂರ್ತಿ ಶಾಸಕರಾಗಿದ್ದಾರೆ. ಇಲ್ಲಿ ನಾಯಕ ಜನಾಂಗದ ಮತಗಳು ನಿರ್ಣಾಯಕವಾಗಿದ್ದು ಒಂದು ರೀತಿಯಲ್ಲಿ ಕಾಂಗ್ರೆಸ್ ತನ್ನ ಪ್ರಾಬಲ್ಯವನ್ನು ಇಲ್ಲಿ ಮೆರೆದಿರುವಂತೆ ಕಂಡು ಬಂದರೂ ಮೈತ್ರಿ ಪಕ್ಷದ ಚಂದ್ರಪ್ಪ ಹಾಗೂ ಬಿ.ಜೆ.ಪಿ. ಪಕ್ಷದ ನಾರಾಯಣಸ್ವಾಮಿ ಇಬ್ಬರೂ ಪ್ರಬಲ ಪೈಪೋಟಿಯಲ್ಲಿ ಮತ ಗಳಿಸುವ ಸಾಧ್ಯತೆಯೇ ಹೆಚ್ಚಾಗಿದೆ.

      ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿ.ಜೆ.ಪಿ. ಪಕ್ಷದಿಂದ ಸ್ಪರ್ಧಿಸಿ ರಘುಮೂರ್ತಿ ವಿರುದ್ಧ ಪರಾಜಯಗೊಂಡಿದ್ದ ಕೆ.ಟಿ.ಕುಮಾರಸ್ವಾಮಿ ಬಿ.ಜೆ.ಪಿ. ತೊರೆದು ಜೆ.ಡಿ.ಎಸ್.ಗೆ ಸೇರ್ಪಡೆಗೊಂಡ ಪರಿಣಾಮ ಎಲ್ಲರೂ ಒಗ್ಗೂಡಿ ಮೈತ್ರಿ ಪಕ್ಷದ ಚಂದ್ರಪ್ಪ ಅವರ ಪರ ವ್ಯಾಪಕ ಪ್ರಚಾರದಲ್ಲಿ ತೊಡಗಿರುವ ಕಾರಣದಿಂದಾಗಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗಟ್ಟಿತನ ಉಳಿಸಿಕೊಂಡಂತೆ ಕಾಣುತ್ತಿದೆ.
ಹಾಗಂತ ಈ ವಿಧಾನಸಭಾ ಕ್ಷೇತ್ರದಲ್ಲಿ ಬಿ.ಜೆ.ಪಿ. ಲೆಕ್ಕಕ್ಕೆ ಇಲ್ಲ ಎಂದು ಪರಿಗಣಿಸಲಾಗದು. ಇಲ್ಲಿನ ಬಿ.ಜೆ.ಪಿ. ಘಟಕದ ಅಧ್ಯಕ್ಷ ಬಿ.ವಿ.ಸಿರಿಯಣ್ಣ ಹಾಗೂ ನಗರ ಯೋಜನಾ ಪ್ರಾಧಿಕಾರದ ನಿವೃತ್ತ ಯೋಜನಾಧಿಕಾರಿ ಜೈರಾಮಯ್ಯ ತಮ್ಮ ಪಕ್ಷದ ಅಭ್ಯರ್ಥಿ ಪರ ಪ್ರಚಾರದ ಭರಾಟೆಯಲ್ಲಿ ತೊಡಗಿದ್ದಾರೆ.

ಹೊಸದುರ್ಗ:

       ಹೊಸದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 1,88,573 ಮತದಾರರಿದ್ದು ಬಿ.ಜೆ.ಪಿ. ಪಕ್ಷದ ಹಾಲಿ ಶಾಸಕ ಗೂಳಿಹಟ್ಟಿ ಶೇಖರ್ ಪಕ್ಷದ ಅಭ್ಯರ್ಥಿಗೆ ಹೆಚ್ಚು ಮತ ಗಳಿಸಿಕೊಡುವ ತಂತ್ರಗಾರಿಕೆ ನಡೆಸಿದ್ದಾರೆ. ನಾಲ್ಕು ಬಾರಿ ಶಾಸಕರಾಗಿದ್ದ ಬಿ.ಗೋವಿಂದಪ್ಪ ಕಾಂಗ್ರೆಸ್-ಜೆ.ಡಿ.ಎಸ್. ಮೈತ್ರಿ ಪಕ್ಷದ ಚಂದ್ರಪ್ಪ ಅವರಿಗೆ ಹೇಗಾದರೂ ಸರಿ ನಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚು ಮತ ಗಳಿಸಿಕೊಡುವ ಹಠತೊಟ್ಟಿದ್ದು ವ್ಯಾಪಕ ಮತ ಪ್ರಚಾರದಲ್ಲಿ ತೊಡಗಿದ್ದಾರೆ. ಈ ಕ್ಷೇತ್ರ ವ್ಯಾಪ್ತಿಯಲ್ಲಿ ಜೆ.ಡಿ.ಎಸ್. ಪಕ್ಷದ ಪ್ರಬಲ ಮುಖಂಡರ ಕೊರತೆ ಇರುವ ಕಾರಣದಿಂದಾಗಿ ಮಾಜಿ ಶಾಸಕ ಗೋವಿಂದಪ್ಪ ಅವರು ಚಂದ್ರಪ್ಪನವರ ಗೆಲುವಿಗೆ ಕಸರತ್ತು ನಡೆಸಿದ್ದಾರೆ.

       ಸದರಿ ಕ್ಷೇತ್ರದಲ್ಲಿ ಲಿಂಗಾಯಿತ, ಕುರುಬ, ಉಪ್ಪಾರ ಹಾಗೂ ಬೋವಿ ಜನಾಂಗದ ಮತಗಳು ಹೆಚ್ಚಾಗಿದ್ದು ಲಿಂಗಾಯಿತ ಮತಗಳನ್ನು ಹೊರತುಪಡಿಸಿ ಉಳಿದ ವರ್ಗಗಳ ಮತಗಳು ಹರಿದು ಹಂಚಿ ಹೋಗುವ ಸಾಧ್ಯತೆಯೂ ಇದೆ.

ಹೊಳಲ್ಕೆರೆ:

      ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2,27,522 ಮತದಾರರಿದ್ದು ಬಿ.ಜೆ.ಪಿ. ಪಕ್ಷದಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆಗೊಂಡ ಚಂದ್ರಪ್ಪ ತಮ್ಮ ಪಕ್ಷದ ಅಭ್ಯರ್ಥಿ ನಾರಾಯಣಸ್ವಾಮಿ ಅವರ ಪರವಾಗಿ ಪ್ರಚಾರದ ಭರಾಟೆಯಲ್ಲಿದ್ದಾರೆ. ಮೈತ್ರಿ ಪಕ್ಷದ ಚಂದ್ರಪ್ಪ ಅವರನ್ನು ಮತ್ತೊಮ್ಮೆ

       ಗೆಲ್ಲಿಸಿಕೊಳ್ಳಲೇಬೇಕೆಂದು ಹಠ ತೊಟ್ಟಿರುವ ಮಾಜಿ ಸಚಿವ ಆಂಜನೇಯ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ತಾವೇ ಪ್ರಚಾರದ ಮುಂಚೂಣಿಯಲ್ಲಿದ್ದಾರೆ. ಆಂಜನೇಯ ಅವರೊಟ್ಟಿಗೆ ಜೆ.ಡಿ.ಎಸ್. ಪಕ್ಷದ ತಾ.ಘಟಕದ ಅಧ್ಯಕ್ಷ ಜಿ.ಬಿ.ಶೇಖರ್ ಕೂಡ ಆಂಜನೇಯ ಅವರಿಗೆ ಸಾಥ್ ನೀಡಿದ್ದು ಈ ಕ್ಷೇತ್ರ ಪ್ರಬಲ ಪೈಪೋಟಿಯ ಕಣವಾಗಿದೆ.

      ಲಿಂಗಾಯಿತ ಮತಗಳು ಅತಿ ಹೆಚ್ಚಾಗಿರುವ ಈ ಕ್ಷೇತ್ರದಲ್ಲಿ ಪ.ಜಾತಿಯ ಎಡಗೈ ಹಾಗೂ ಬಲಗೈ ಕೋಮಿನ ಮತಗಳು ಅತ್ಯಂತ ನಿರ್ಣಾಯಕವೂ ಆಗಿವೆ. ಹಾಗಂತ ಯಾರೂ ಕೂಡ ಈ ಕ್ಷೇತ್ರದ ಲಂಬಾಣಿ ಹಾಗೂ ಬೋವಿ ಜನಾಂಗದ ಮತಗಳನ್ನು ಕಡೆಗಣಿಸುವಂತಿಲ್ಲ.

ಮೊಳಕಾಲ್ಮೂರು:

       ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2,32,621 ಮತದಾರರಿದ್ದು ಈ ಕ್ಷೇತ್ರದಲ್ಲಿ ಬಿ.ಜೆ.ಪಿ. ಪಕ್ಷದಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆಗೊಂಡಿದ್ದ ಶ್ರೀರಾಮುಲು ಅವರು ತಮ್ಮ ಪಕ್ಷದ ಅಭ್ಯರ್ಥಿ ನಾರಾಯಣಸ್ವಾಮಿ ಪರ ಬೆನ್ನಿಗೆ ನಿಂತಿದ್ದಾರೆ. ಸದರಿ ಕ್ಷೇತ್ರದಲ್ಲಿ ಶ್ರೀರಾಮುಲು ಅವರು ಬಿ.ಜೆ.ಪಿ. ಪಕ್ಷದ ಅಭ್ಯರ್ಥಿಗೆ ಬಹುಮತ ತಂದು ಕೊಡುವ ಛಲ ಹೊಂದಿದ್ದಾರಾದರೂ ಅವರು ಅಂದುಕೊಂಡಷ್ಟು ಸುಲಭದ ವಾತಾವರಣ ಇಲ್ಲಿ ಇಲ್ಲ.

       ಈ ಹಿಂದೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಶ್ರೀರಾಮುಲು ಬಿ.ಜೆ.ಪಿ.ಯನ್ನು ತೊರೆದು ಬಿ.ಎಸ್.ಆರ್. ಪಕ್ಷವನ್ನು ಕಟ್ಟಿಕೊಂಡು ಚುನಾವಣೆ ಎದುರಿಸಿದ್ದಾಗ ಇದೇ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಿಂದ ತಿಪ್ಪೇಸ್ವಾಮಿಯವರನ್ನು ಬಿ.ಎಸ್.ಆರ್. ಪಕ್ಷದಿಂದ ಶಾಸಕರನ್ನಾಗಿ ಆಯ್ಕೆ ಮಾಡಿಕೊಳ್ಳುವಲ್ಲಿ ಶ್ರೀರಾಮುಲು ಯಶ ಕಂಡಿದ್ದರು.

       ಕಳೆದ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಮತ್ತೆ ಬಿ.ಜೆ.ಪಿ.ಗೆ ಶ್ರೀರಾಮುಲು ಸೇರ್ಪಡೆಗೊಂಡಾಗ ತಿಪ್ಪೇಸ್ವಾಮಿ ಕೂಡ ಅವರದೇ ಹಾದಿ ಹಿಡಿದು ವಿಧಾನಸಭಾ ಚುನಾವಣೆಯಲ್ಲಿ ಬಿ.ಜೆ.ಪಿ. ಪಕ್ಷದಿಂದ ಟಿಕೆಟ್‍ಗಾಗಿ ಹಪಹಪಿಸಿದ್ದರು. ಅಂತಿಮ ಗಳಿಗೆಯವರೆಗೂ

ಶ್ರೀರಾಮುಲು ಮೊಳಕಾಲ್ಮೂರು ವಿಧಾನಸಭೆಗೆ

     ನಿನ್ನದೇ ಟಿಕೆಟ್ ಎಂದು ಹೇಳುತ್ತಿದ್ದವರು ಅಂತಿಮ ಘಳಿಗೆಯಲ್ಲಿ ಈ ಕ್ಷೇತ್ರದಿಂದ ತಾವೇ ಬಿ.ಜೆ.ಪಿ. ಅಭ್ಯರ್ಥಿಯಾದಾಗ ಮಾಜಿ ಶಾಸಕ ತಿಪ್ಪೇಸ್ವಾಮಿ ಶ್ರೀರಾಮುಲು ವಿರುದ್ಧ ಸೆಟೆದು ನಿಂತಿದ್ದರು. ಕೊನೆಗೆ ಪಕ್ಷೇತರ ಅಭ್ಯರ್ಥಿಯೂ ಆಗಿ ಸ್ಪರ್ಧೆ ನೀಡಿ ಪರಾಜಯಗೊಂಡರು.
ಟಿಕೆಟ್ ತಪ್ಪಿದ ಕಹಿ ಘಟನೆಯಿಂದ ವ್ಯಾಪಕವಾಗಿ ನೊಂದಿದ್ದ ಮಾಜಿ ಶಾಸಕ ತಿಪ್ಪೇಸ್ವಾಮಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರಿಂದ ಕಾಂಗ್ರೆಸ್-ಜೆ.ಡಿ.ಎಸ್. ಪಕ್ಷದ ಅಭ್ಯರ್ಥಿ ಚಂದ್ರಪ್ಪ ಅವರಿಗೆ ಬಲ ಬಂದಂತಾಗಿದೆ. ಮೊಳಕಾಲ್ಮೂರು ಕ್ಷೇತ್ರದಲ್ಲಿ ಚಂದ್ರಪ್ಪಗೆ ಬಹುಮತ ಕೊಡಿಸಲು ತಿಪ್ಪೇಸ್ವಾಮಿ ತೀವ್ರ ಕಸರತ್ತು ನಡೆಸಿದ್ದಾರೆ.

ಪಾವಗಡ:

     ಪಾವಗಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 1,97,721 ಮತದಾರರಿದ್ದು ಕಾಂಗ್ರೆಸ್ ಪಕ್ಷದಿಂದ ಆಯ್ಕೆಗೊಂಡು ಹಾಲಿ ಸಚಿವರೂ ಆಗಿರುವ ವೆಂಕಟರವಣಪ್ಪ ಅವರು ಮೈತ್ರಿ ಪಕ್ಷದ ಅಭ್ಯರ್ಥಿ ಚಂದ್ರಪ್ಪ ಪರ ಬ್ಯಾಟಿಂಗ್ ಆಡುತ್ತಿದ್ದಾರೆ. ಜೆ.ಡಿ.ಎಸ್. ಪಕ್ಷದ ಮಾಜಿ ಶಾಸಕ ತಿಮ್ಮರಾಯಪ್ಪ, ಮಾಜಿ ಶಾಸಕ ಸೋಮ್ಲಾನಾಯ್ಕ, ಮತ್ತೋರ್ವ ಮಾಜಿ ಶಾಸಕ ಉಗ್ರ ನರಸಿಂಹಪ್ಪ ಸೇರಿದಂತೆ ಈ ಕ್ಷೇತ್ರದ ಮಾಜಿ ಶಾಸಕರುಗಳ ದಂಡು ದಂಡೇ ಮೈತ್ರಿ ಪಕ್ಷದ ಅಭ್ಯರ್ಥಿಯ ಪರ ಮತಬೇಟೆಯಲ್ಲಿ ತೊಡಗಿದ್ದು ಚಂದ್ರಪ್ಪನವರಿಗೆ ಈ ವಿಧಾನಸಭಾ ಕ್ಷೇತ್ರದಲ್ಲಿ ಬಲ ಬಂದಂತಾಗಿದೆ.

      ಈ ವಿಧಾನಸಭಾ ಕ್ಷೇತ್ರದಲ್ಲಿ ಬಿ.ಜೆ.ಪಿ. ಅಭ್ಯರ್ಥಿ ನಾರಾಯಣಸ್ವಾಮಿ ಅವರ ಪರ ಪ್ರಚಾರದ ಭರಾಟೆಯಲ್ಲಿ ತೊಡಗಿರುವುದು ಕೇವಲ ಆ ಪಕ್ಷದ ಕಾರ್ಯಕರ್ತ-ಮುಖಂಡರು ಮಾತ್ರ್ರ ಆಗಿದ್ದು ಹಾಗೆಂದು ಇಲ್ಲಿ ಬಿ.ಜೆ.ಪಿ.ಗೆ ನೆಲೆ ಇಲ್ಲ ಅನ್ನುವಂತಿಲ್ಲ. ಒಂದಿಷ್ಟು ಮೋದಿಯ ಅಲೆಯೂ ಇದ್ದು ಕಾಂಗ್ರೆಸ್-ಜೆ.ಡಿ.ಎಸ್. ಮುಖಂಡರು ಮೈ ಮರೆತು ಕೂರುವಂತೆಯೂ ಇಲ್ಲ. ಕ್ಷೇತ್ರದ ಒಳ ಹೊಕ್ಕು ನೋಡಿದರೆ ಇಲ್ಲಿ ಬಿ.ಜೆ.ಪಿ. ಪರವಾದ ಮತದಾರರೂ ಇದ್ದಾರೆಂಬುದು ಅಷ್ಟೇ ಮುಖ್ಯವಾಗುತ್ತದೆ. ಸದರಿ ವಿಧಾನಸಭಾ ಕ್ಷೇತ್ರದಲ್ಲಿ ಪ,ಜಾತಿಯ ಮತಗಳೇ ಹೆಚ್ಚಾಗಿದ್ದು ಪ.ಪಂಗಡದ ಮತಗಳು ಕೂಡ ಇಲ್ಲಿ ನಿರ್ಣಾಯಕವಾಗುತ್ತವೆ.

ಶಿರಾ:

        ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,13,170 ಮತದಾರರಿದ್ದು ಜೆ.ಡಿ.ಎಸ್. ಪಕ್ಷದ ಬಿ.ಸತ್ಯನಾರಾಯಣ್ ಹಾಲಿ ಶಾಸಕರಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಾಜಯಗೊಂಡ ಮಾಜಿ ಸಚಿವ ಟಿ.ಬಿ.ಜಯಚಂದ್ರ ಹಾಗೂ ಸತ್ಯನಾರಾಯಣ್ ರಾಜಕೀಯವಾಗಿ ಎಣ್ಣೆ ಸೀಗೆಕಾಯಿಯಂತಿದ್ದರೂ ಕಾಂಗ್ರೆಸ್-ಜೆ.ಡಿ.ಎಸ್. ಪಕ್ಷದ ಮೈತ್ರಿ ಅಭ್ಯರ್ಥಿ ಚಂದ್ರಪ್ಪ ಅವರ ಪರ ಇಬ್ಬರೂ ಪ್ರಚಾರದ ಭರಾಟೆಯಲ್ಲಿ ಒಟ್ಟಾಗಿ ತೊಡಗುವುದು ಅನಿವಾರ್ಯವಾಗಿದೆ.

       ಆರಂಭದಲ್ಲಿ ಸತ್ಯನಾರಾಯಣ್ ಹಾಗೂ ಜಯಚಂದ್ರ ಇಬ್ಬರೂ ಒಂದೆಡೆ ಸೇರಿಕೊಂಡು ಮೈತ್ರಿ ಪಕ್ಷದ ಅಭ್ಯರ್ಥಿಯ ಪರ ಪ್ರಚಾರ ಮಾಡುವುದು ಸಂಶಯದಂತೆ ಅವರ ಪಕ್ಷದ ಕಾರ್ಯಕರ್ತರಿಗೆ ಕಂಡು ಬಂದರೂ ವರಿಷ್ಠರ ತೀರ್ಮಾನಕ್ಕೆ ಇಬ್ಬರೂ ಬದ್ಧರಾಗಿ ಕೈ ಕೈ ಕುಲುಕಿಕೊಂಡು ಸದ್ಯಕ್ಕೆ ಜೊತೆ ಜೊತೆಯಲ್ಲಿಯೇ ಪ್ರಚಾರದ ಭರಾಟೆಯಲ್ಲಿ ತೊಡಗಿದ್ದಾರೆ.

       ನಗರ ಘಟಕದ ಅಧ್ಯಕ್ಷ ಪಿ.ಆರ್.ಮಂಜುನಾಥ್, ಗ್ರಾ..ಕಾಂಗ್ರೆಸ್ ಅಧ್ಯಕ್ಷ ನಟರಾಜ್ ಬರಗೂರು, ತಾ.ಜೆ.ಡಿ.ಎಸ್. ಘಟಕದ ಅಧ್ಯಕ್ಷ ಆರ್.ಉಗ್ರೇಶ್, ರಾಜ್ಯ ಜೆ.ಡಿ.ಎಸ್. ಸಂಚಾಲಕ ಕಲ್ಕೆರೆ ರವಿಕುಮಾರ್ ಸೇರಿದಂತೆ ಅನೇಕ ಮುಖಂಡರು ಒಟ್ಟೊಟ್ಟಿಗೆ ಪಕ್ಷ-ಭೇದ ಮರೆತು ಮೈತ್ರಿ ಅಭ್ಯರ್ಥಿಯ ಪರ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ.

       ಇನ್ನೊಂದೆಡೆ ಬಿ.ಜೆ.ಪಿ. ಪಕ್ಷದ ನಾರಾಯಣಸ್ವಾಮಿ ಅವರ ಪರವಾಗಿ ಜಿಲ್ಲಾ ಬಿ.ಜೆ.ಪಿ. ಉಪಾಧ್ಯಕ್ಷ ಬಿ.ಕೆ.ಮಂಜುನಾಥ್, ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡ, ಗ್ರಾ.ಅಧ್ಯಕ್ಷ ಮಾಲಿ ಮರಿಯಪ್ಪ, ನಗರ ಘಟಕದ ಅಧ್ಯಕ್ಷ ಬಿ.ಗೋವಿಂದಪ್ಪ, ಇತ್ತೀಚೆಗಷ್ಟೆ ಜೆ.ಡಿ.ಎಸ್. ತೊರೆದು ಬಿ.ಜೆ.ಪಿ.ಗೆ ಸೇರ್ಪಡೆಗೊಂಡ ಚಿದಾನಂದ್ ಎಂ.ಗೌಡ ಸೇರಿದಂತೆ ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದ ಎಲ್ಲಾ ಮುಖಂಡರು ಮತ ಯಾಚನೆಯಲ್ಲಿ ತೊಡಗಿದ್ದಾರೆ.

        ಸದರಿ ವಿಧಾನಸಭಾ ಕ್ಷೇತ್ರದಲ್ಲಿ ಕುಂಚಿಟಿಗ ವರ್ಗದ ಮತಗಳು ಹೆಚ್ಚಾಗಿದ್ದು ಕುರುಬ ಹಾಗೂ ಯಾದವರ ಮತಗಳು ಅಭ್ಯರ್ಥಿಯ ಗೆಲುವಿಗೆ ನಿರ್ಣಾಯಕವಾಗುತ್ತವೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಚಂದ್ರಪ್ಪ ಆಯ್ಕೆಗೊಂಡಾಗ ಇಡೀ ಚಿತ್ರದುರ್ಗ ಕ್ಷೇತ್ರ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಮತಗಳನ್ನು ಗಳಿಸಿಕೊಟ್ಟ ಕೀರ್ತಿ ಶಿರಾ ವಿಧಾನಸಭಾ ಕ್ಷೇತ್ರದ್ದು.

        ಈ ಎಲ್ಲಾ ಬೆಳವಣಿಗೆಗಳ ನಡುವೆಯೂ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಮೋದಿ ಹವಾ ಕೂಡ ವ್ಯಾಪಕವಾಗಿ ಹರಡಿರುವುದು ಒಂದು ಕಡೆಯಾದರೆ ಇನ್ನೊಂದೆಡೆ ಸಂಸದರಾಗಿದ್ದ ಚಂದ್ರಪ್ಪ ಅವರ ಸರಳತೆಯೂ ಮತದಾರರ ಕೈಹಿಡಿಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

        ಒಟ್ಟಾರೆ ಚಿತ್ರದುರ್ಗ ಲೋಕಸಭಾ ವ್ಯಾಪ್ತಿಯಲ್ಲಿರುವ 8 ವಿಧಾನಸಭಾ ಕ್ಷೇತ್ರಗಳ ಪೈಕಿ 4 ಕ್ಷೇತ್ರಗಳಲ್ಲಿ ಬಿ.ಜೆ.ಪಿ. ಪಕ್ಷದ ಹಾಲಿ ಶಾಸಕರು, ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಹಾಗೂ ಶಿರಾ ಕ್ಷೇತ್ರದಲ್ಲಿ ಜೆ.ಡಿ.ಎಸ್. ಶಾಸಕರಿದ್ದು ಆಯಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಾಸಕರ ಸಂಖ್ಯೆ ಗಮನಿಸಿದರೆ ಬಿ.ಜೆ.ಪಿ.ಯ ಶಾಸಕರೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಪ್ರಾಬಲ್ಯ ಮೆರೆದಿದ್ದಾರೆ.

          ಇಡೀ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಜಾತಿ ಲೆಕ್ಕಾಚಾರವನ್ನು ಗಮನಿಸಿದರೆ ಪ.ಜಾತಿಯ ಮತಗಳೇ ಹೆಚ್ಚಾಗಿದ್ದು ಸ್ಪರ್ಧಾ ಕಣದಲ್ಲಿರುವ ಇಬ್ಬರು ಅಭ್ಯರ್ಥಿಗಳು ಕೂಡ ಪ.ಜಾತಿಯ ಅದರಲ್ಲೂ ಎಡಗೈ ಕೋಮಿನ ಅಭ್ಯರ್ಥಿಗಳೇ ಆಗಿರುವುದರಿಂದ ಈ ವರ್ಗದ ಅತಿ ಹೆಚ್ಚು ಮತಗಳು ಯಾರ ಪಾಲಾಗುತ್ತವೆಯೋ ಕಾದು ನೋಡಬೇಕಿದೆ.

        ಈ ಕ್ಷೇತ್ರದಲ್ಲಿ ಬಿ.ಜೆ.ಪಿ ಶಾಸಕರ ಸಂಖ್ಯೆ ಹೆಚ್ಚಾಗಿದ್ದರೂ ಕಾಂಗ್ರೆಸ್-ಜೆ.ಡಿ.ಎಸ್. ಪಕ್ಷದ ಪ್ರಬಲ ಮುಖಂಡರೇನೂ ಈ ಕ್ಷೇತ್ರದಲ್ಲಿ ಕಡಿಮೆ ಇಲ್ಲ. ಎರಡೂ ಪಕ್ಷಗಳ ಅಭ್ಯರ್ಥಿಯ ಪರ ನೇರ ಸ್ಪರ್ಧೆಯೇ ಏರ್ಪಟ್ಟಿದ್ದು ಮತದಾರನ ಅಂತರಾಳದ ನಿವೇದನೆಯನ್ನು ಪತ್ತೆ ಹಚ್ಚುವಲ್ಲಿ ಆಯಾ ಪಕ್ಷದ ಮುಖಂಡರು ಪಡಿಪಾಟಲು ಬೀಳುತ್ತಿದ್ದಾರೆ.

         ಬಿ.ಜೆ.ಪಿ. ಪಕ್ಷದಿಂದ ಅಭ್ಯರ್ಥಿಯಾಗಿ ಕಣದಲ್ಲಿರುವ ಎ.ನಾರಾಯಣಸ್ವಾಮಿ ಈ ಹಿಂದೆ ಸಮಾಜ ಕಲ್ಯಾಣ ಇಲಾಖಾ ಸಚಿವರಾಗಿದ್ದರು. ಮೈತ್ರಿ ಪಕ್ಷದ ಅಭ್ಯರ್ಥಿಯಾದ ಬಿ.ಎನ್.ಚಂದ್ರಪ್ಪ ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದರು. ಅವರ ಸರಳತೆ ಚಂದ್ರಪ್ಪ ಅವರಿಗೆ ವರದಾನವಾಗಬಲ್ಲದಾದರೆ ಬಿ.ಜೆ.ಪಿ. ಅಭ್ಯರ್ಥಿ ನಾರಾಯಣಸ್ವಾಮಿಗೆ ಮೋದಿಯ ಅಲೆ ವರದಾನವಾಗಬೇಕಷ್ಟೆ.
ಚಿತ್ರದುರ್ಗ ಲೋಕಸಭಾ ಚುನಾವಣೆಗಳ ಹಿನ್ನೋಟವನ್ನು ಗಮನಿಸಿದರೆ ಈವರೆಗೆ ಈ ಕ್ಷೇತ್ರದಲ್ಲಿ ಸಂಸದರಾಗಿ ಆಯ್ಕೆಗೊಂಡವರು ಬಹುತೇಕ ಕಾಂಗ್ರೆಸ್ಸಿಗರೇ ಹೆಚ್ಚಾಗಿದ್ದು ಒಂದು ರೀತಿಯಲ್ಲಿ ಈ ಕ್ಷೇತ್ರ ಕಾಂಗ್ರೆಸ್ ಪಕ್ಷದ ಭದ್ರ ಕೋಟೆಯೂ ಹೌದು. ಬದಲಾದ ರಾಜಕೀಯ ಸನ್ನಿವೇಶಗಳನ್ನು ಕಂಡರೆ ಅಂತಿಮ ಘಳಿಗೆಯಲ್ಲಿ ಸೋಲು-ಗೆಲುವಿನ ಲೆಕ್ಕಾಚಾರಗಳು ಬುಡಮೇಲಾಗುವ ಸಾಧ್ಯತೆಗಳು ಈ ಕ್ಷೇತ್ರದಲ್ಲಿ ಹೆಚ್ಚಾಗಿವೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here