141 ಕೇಂದ್ರಗಳಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಆರಂಭ

ತುಮಕೂರು

         ಈ ಬಾರಿಯ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಲು ತುಮಕೂರು ಜಿಲ್ಲೆಯ 36,196 ವಿದ್ಯಾರ್ಥಿಗಳು ಸಿದ್ಧವಾಗಿದ್ದಾರೆ. ಇವರಲ್ಲಿ ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯ 23,751 ವಿದ್ಯಾರ್ಥಿಗಳಿಗೆ 83 ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯ 12,445 ವಿದ್ಯಾರ್ಥಿಗಳಿಗೆ 58 ಸೇರಿ ಒಟ್ಟು 141 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಎಲ್ಲಾ 141 ಪರೀಕ್ಷಾ ಕೇಂದ್ರಗಳಲ್ಲೂ ಸಿಸಿ ಕ್ಯಾಮರಾ ಅಳವಡಿಸಲಾಗಿದೆ.

       ಜೊತೆಗೆ ವಿದ್ಯಾರ್ಥಿಗಳು ಶಾಂತಿಯುತವಾಗಿ ಪರೀಕ್ಷೆ ಬರೆಯಲು ಅಗತ್ಯ ಅನುಕೂಲ ಮಾಡಿಕೊಡಲಾಗಿದೆ.ಎರಡೂ ಶೈಕ್ಷಣಿಕ ಜಿಲ್ಲೆಗಳ 19,728 ಬಾಲಕರು ಹಾಗೂ 16,468 ಬಾಲಕಿಯರು ಪರೀಕ್ಷೆ ಬರೆಯಲಿದ್ದಾರೆ. ಇವರಲ್ಲಿ ಖಾಸಗಿಯಾಗಿ 385 ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಮೂರು ಕೇಂದ್ರಗಳನ್ನು ತೆರೆಯಲಾಗಿದೆ. ತುಮಕೂರು ನಗರದ ವಿದ್ಯಾನಿಕೇತನ ಶಾಲೆ, ಎಸ್.ಐ.ಟಿ.ಬಡಾವಣೆಯ ವಾಸವಿ ಪ್ರೌಢಶಾಲೆ ಹಾಗೂ ಮಧುಗಿರಿಯ ಜ್ಯೂಪಿಟರ್ ಪಬ್ಲಿಕ್ ಶಾಲೆ ಸೇರಿ 3 ಖಾಸಗಿ ಕೇಂದ್ರಗಳಲ್ಲಿ ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

       ಈ ತಿಂಗಳ 21ರಂದ ಏಪ್ರಿಲ್ 4ರವರೆಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಯಲಿದೆ. ಪ್ರಥಮ ಭಾಷೆ ವಿಷಯಕ್ಕೆ 125 ಅಂಕ ಉಳಿದ ವಿಷಯಗಳಿಗೆ ಪ್ರತಿ ವಿಷಯಕ್ಕೆ ಗರಿಷ್ಠ 100 ಅಂಕಗಳಂತೆ ಪರೀಕ್ಷೆ ನಿಗಧಿಪಡಿಸಲಾಗಿದೆ. ಪರೀಕ್ಷೆ ಅವಧಿಯಲ್ಲಿ ಪ್ರಶ್ನೆ ಪತ್ರಿಕೆ ಓದಿಕೊಳ್ಳಲು ವಿದ್ಯಾರ್ಥಿಗಳಿಗೆ 15 ನಿಮಿಷ ಕಾಲಾವಕಾಶ ನೀಡಲಾಗಿದೆ. ಪ್ರಥಮ ಮತ್ತು ಐಚ್ಚಿಕ ವಿಷಯಗಳ ಪರೀಕ್ಷೆ ಬೆಳಿಗ್ಗೆ 9.30ರಿಂದ ಆರಂಭವಾಗಿ ಮಧ್ಯಾಹ್ನ 12.45ರವರೆಗೆ ಹಾಗೂ ದ್ವಿತೀಯ ಮತ್ತು ತೃತೀಯ ಭಾಷೆ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 12.15 ಗಂಟೆವರೆಗೆ ನಡೆಯಲಿದೆ.

        ಪರೀಕ್ಷೆ ನಡೆಯುವ ದಿನದಂದು ಆ ಅವಧಿಯಲ್ಲಿ ಪರೀಕ್ಷಾ ಕೇಂದ್ರದ ಸುತ್ತ ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಪರಿಕ್ಷಾ ಕೇಂದ್ರದ ಸಮೀಪ ಇರುವ ಜೆರಾಕ್ಸ್, ಟೈಪಿಂಗ್ ಕೇಂದ್ರಗಳನ್ನು ಮುಚ್ಚಲು ಸೂಚಿಸಲಾಗಿದೆ.
ಎಲ್ಲಾ 141 ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಪರೀಕ್ಷೆ ಅವಧಿಯಲ್ಲಿ ವಿದ್ಯುತ್ ಕಡಿತವಾಗದಂತೆ ಎಚ್ಚರವಹಿಸಲು ಜಿಲ್ಲಾಧಿಕಾರಿಗಳು ಬೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

          ವಿದ್ಯಾರ್ಥಿಗಳ ಆರೋಗ್ಯದ ಸಲುವಾಗಿ ಮುನ್ನೆಚ್ಚರಿಕೆಯಾಗಿ ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಒಬ್ಬೊಬ್ಬರು ಆರೋಗ್ಯ ಸಹಾಯಕರನ್ನು ನಿಯೋಜಿಸಲಾಗುವುದು. 84 ವಿಕಲಚೇತನ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆಯುತ್ತಿದ್ದು ಅವರಿಗೆ ನೆಲ ಅಂತಸ್ತಿನ ಕೊಠಡಿಲ್ಲೆ ಪರೀಕ್ಷೆ ಬರೆಯಲು ಹಾಗೂ ಅವರಿಗೆ ಅಗತ್ಯ ಸೌಕರ್ಯ ಒದಗಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಸರಿಯಾದ ಬೆಳಕು, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಮಾಡಲಾಗಿದೆ.

         ಮಕ್ಕಳು ಮುಕ್ತ ಹಾಗೂ ಭಯರಹಿತವಾಗಿ ಪರೀಕ್ಷೆ ಬರೆಯುವ ವಾತಾವರಣ ನಿರ್ಮಾಣ ಮಾಡಲಾಗಿದೆ ಎಂದು ತುಮಕೂರು ದಕ್ಷಿಣ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಎಂ ಆರ್ ಕಾಮಾಕ್ಷಿ ಹೇಳಿದರುಪರೀಕ್ಷೆಯು ಮುಕ್ತ ಹಾಗೂ ಶಾಂತಿಯುತವಾಗಿ ನಡೆಯಲು ಎಲ್ಲಾ ಕೇಂದ್ರಗಳಲ್ಲಿ ಬಿಗಿಭದ್ರತೆ ಮಾಡಲಾಗಿದೆ. ಪ್ರತಿ ಕೇಂದ್ರದಲ್ಲೂ ಸ್ಥಾನಿಕ ಜಾಗೃತ ದಳ, ಜೊತೆಗೆ ಮೊಬೈಲ್ ಸ್ಕ್ವಾಡ್, ಅಂತರ ಜಿಲ್ಲಾ ಹಾಗೂ ರಾಜ್ಯ ಜಾಗೃತಾ ದಳ ಅಲ್ಲದೆ ಆಯಾ ತಾಲ್ಲೂಕಿನಲ್ಲಿ ತಹಶೀಲ್ದಾರರ ನೇತೃತ್ವದ ದಳ ಪರೀಕ್ಷಾ ಕೇಂದ್ರಗಳ ಮೇಲೆ ನಿಗಾವಹಿಸುತ್ತದೆ ಎಂದರು.

        ಕಳೆದ ವರ್ಷ ತುಮಕೂರು ಶೈಕ್ಷಣಿಕೆ ಜಿಲ್ಲೆಗೆ ರಾಜ್ಯದಲ್ಲಿ 10ನೇ ಸ್ಥಾನ ಹಾಗೂಮಧುಗಿರಿ ಜಿಲ್ಲೆಗೆ 4ನೇ ಸ್ಥಾನ ದೊರಕಿತ್ತು. ಈಬಾರಿ ಸ್ಥಾನ ಉತ್ತಮ ಪಡಿಸಿಕೊಳ್ಳಲು ವಿವಿಧ ಶೈಕ್ಷಣಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು ಎಂದು ಹೇಳಿದರು.ಶಾಲೆಗಳಲ್ಲಿ ಶಿಕ್ಷಕರು ವಿಶೇಷ ತರಗತಿ ನಡೆಸಿ ವಿಷಯವಾರು ಕ್ಲಿಷ್ಟಾಂಶವನ್ನು ಸರಳೀಕರಣಗೊಳಿಸಿ ವಿದ್ಯಾರ್ಥಿಗಳಿಗೆ ಬೋಧನೇ ಮಾಡಿದ್ದಾರೆ. ವಿವಿಧ ಹಂತದ ಪರೀಕ್ಷೆಗಳನ್ನು ನಡೆಸಿ ಮೌಲ್ಯಮಾಪನ ಮಾಡಿ, ಅಭ್ಯಾಸದಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಅವರನ್ನು ಶಾಲಾ ಶಿಕ್ಷಕರು ದತ್ತು ಪಡೆದು ಹೆಚ್ಚಿನ ತರಬೇತಿ ನೀಡಿದ್ದಾರೆ.

         ಶಿಕ್ಷಕರು ಹಾಗೂ ಇಲಾಖೆ ಅಧಿಕಾರಿಗಳು ಮಕ್ಕಳ ಮನೆಗಳಿಗೆ ತೆರಳಿ ಪೋಷಕರನ್ನು ಭೇಟಿ ಮಾಡಿ ವಿದ್ಯಾರ್ಥಿಯ ಶಿಕ್ಷಣಮಟ್ಟ ಸುಧಾರಣೆಗೆ ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಜಿಲ್ಲಾ ಪಂಚಾಯ್ತಿ ಸಿಇಓ ಶುಭಾ ಕಲ್ಯಾಣ್ ಅವರು ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ಎಲ್ಲಾ ಮಕ್ಕಳ ಪೋಷಕರಿಗೆ ಪತ್ರ ಬರೆದು ಎಸ್‍ಎಸ್‍ಎಲ್‍ಸಿಯಲ್ಲಿ ಮಕ್ಕಳು ಉತ್ತಮ ಫಲಿತಾಂಶ ಪಡೆಯಲು ಸಹಕಾರ ನೀಡುವಂತೆ ಕೋರಿದ್ದಾರೆ. ಕೆಲವೆಡೆ, ಮಕ್ಕಳನ್ನು ಪರೀಕ್ಷಾ ಕೇಂದ್ರಗಳಿಗೆ ಕರೆಸಿ ಅಲ್ಲಿ ಪರೀಕ್ಷೆ ನಡೆಸಿ ಅವರಲ್ಲಿದ್ದ ಪರೀಕ್ಷಾ ಭಯ ನಿವಾರಿಸುವ ಪ್ರಯತ್ನ ಮಾಡಲಾಗಿದೆ ಎಂದು ಡಿಡಿಪಿಐ ಎಂ ಆರ್ ಕಾಮಾಕ್ಷಿ ಹೇಳಿದರು

ಪರೀಕ್ಷಾ ಕೇಂದ್ರಗಳು

          ತುಮಕೂರು ತಾಲ್ಲೂಕಿನಲ್ಲಿ ಅತಿ ಹೆಚ್ಚು ಎನ್ನುವ 31 ಹಾಗೂ ಅತಿ ಕಡಿಮೆ ಎನ್ನುವ 8 ಪರೀಕ್ಷಾ ಕೇಂದ್ರಗಳನ್ನು ತಿಪಟೂರು ಹಾಗೂ ತುರುವೇಕೆರೆ ತಾಲ್ಲೂಕಿನಲ್ಲಿ ಸ್ಥಾಪಿಸಲಾಗಿದೆ. ಉಳಿದಂತೆ ಚಿನಾ ಹಳ್ಳಿ 11, ಗುಬ್ಬಿ 14, ಕುಣಿಗಲ್ 11, ಕೊರಟಗೆರೆ 11, ಮಧುಗಿರಿ 16, ಪಾವಗಡ 15, ಹಾಗೂ ಶಿರಾ ತಾಲ್ಲೂಕಿನ 16 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

ಏಪ್ರಿಲ್ 10ರಿಂದ ಮೌಲ್ಯಮಾಪನ

         ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆ ಮುಗಿದ ನಂತರ ತುಮಕೂರು ನಗರದ 6 ಕೇಂದ್ರಗಳಲ್ಲಿ ಏಪ್ರಿಲ್ 10 ರಿಂದ ಮೌಲ್ಯಮಾಪನ ಕಾರ್ಯ ನಡೆಯಲಿದೆ. ಮೌಲ್ಯ ಮಾಪನ ಕಾರ್ಯಕ್ಕೆ ನಿಯೋಜಿಸಲಾಗಿರುವ ಶಿಕ್ಷಕರು ಕಡ್ಡಾಯವಾಗಿ ಹಾಜರಾಗಬೇಕು. ಸುಮಾರು 2500 ಶಿಕ್ಷಕರನ್ನು ಮೌಲ್ಯ ಮಾಪನ ಕಾರ್ಯಕ್ಕೆ ನಿಯೋಜಿಸಲಾಗಿದೆ. ಮೌಲ್ಯ ಮಾಪನ ಕೇಂದ್ರದಲ್ಲಿ ಈ ಬಾರಿ ಆನ್‍ಲೈನ್ ಪೋರ್ಟಿಂಗ್ ವ್ಯವಸ್ಥೆ ಮಾಡಲಾಗಿದ್ದು, ಇದಕ್ಕಾಗಿ 15 ಲ್ಯಾಪ್‍ಟಾಪ್‍ಗಳನ್ನು ಅಳವಡಿಸಲಾಗುವುದು. ಮೌಲ್ಯ ಮಾಪನದ ಪ್ರತಿ ದಿನದ ಮಾಹಿತಿಯನ್ನು ಆನ್‍ಲೈನ್ ಪೋರ್ಟಿಂಗ್ ಮೂಲಕ ಮಂಡಳಿಗೆ ನೀಡಲಾಗುವುದು ಎಂದು ಡಿಡಿಪಿಐ ಹೇಳಿದರು.

 

Recent Articles

spot_img

Related Stories

Share via
Copy link
Powered by Social Snap