ನಗರದಲ್ಲಿ ರಾಜ್ಯ ಮಟ್ಟದ ಅಥ್ಲೆಟಿಕ್ಸ್, 1427 ಕ್ರೀಡಾಪಟುಗಳು ಭಾಗಿ

0
12

ತುಮಕೂರು

         ‘ರಾಜಧಾನಿ ಬೆಂಗಳೂರಿಗೆ ಪರ್ಯಾಯವಾಗಿ ಬೆಳೆಯುತ್ತಿರುವ ತುಮಕೂರು ನಗರದಲ್ಲಿ ಅಂತರ ರಾಷ್ಟ್ರೀಯ ಮಟ್ಟದ ಕ್ರೀಡಾಂಗಣದ ಅವಶ್ಯಕತೆ ಇದ್ದು, ಈ ಬಗ್ಗೆ ಸ್ವತಃ ಕ್ರೀಡಾಪಟುವೂ ಆಗಿರುವ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಶೀಘ್ರವೇ ಘೋಷಣೆ ಮಾಡುವರು’ ಎಂದು ತುಮಕೂರು ಲೋಕಸಭಾ ಸದಸ್ಯ ಎಸ್.ಪಿ. ಮುದ್ದಹನುಮೇಗೌಡ ಹೇಳಿದರು.

        ಅವರು ಶನಿವಾರ ಬೆಳಗ್ಗೆ ತುಮಕೂರು ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ (ತುಮಕೂರು ದಕ್ಷಿಣ) ಸಂಯುಕ್ತಾಶ್ರಯದಲ್ಲಿ ಏರ್ಪಟ್ಟಿರುವ ಎರಡು ದಿನಗಳ (ಶನಿವಾರ ಮತ್ತು ಭಾನುವಾರ) ಅವಧಿಯ ‘‘2018-19 ನೇ ಸಾಲಿನ 14 ವರ್ಷ ವಯೋಮಿತಿಯ ಬಾಲಕ/ಬಾಲಕಿಯರ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ’’ದ ಉದ್ಘಾಟನಾ ಸಮಾರಂ‘ದಲ್ಲಿ ಮುಖ್ಯಅತಿಥಿಗಳಾಗಿ ಮಾತನಾಡುತ್ತಿದ್ದರು.

        ‘ಅಂತರ ರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ಆಗಬೇಕೆಂಬ ಬಗ್ಗೆ ಡಾ.ಜಿ. ಪರಮೇಶ್ವರ ಅವರನ್ನು ಈಗಾಗಲೇ ಕೋರಲಾಗಿದೆ. ಸ್ವತಃ ಅವರೂ ಕಾಲೇಜಿನ ದಿನಗಳಲ್ಲಿ ಅತ್ಯುತ್ತಮ ಕ್ರೀಡಾಪಟುಗಳಾಗಿದ್ದವರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಚಿವರೂ ಅವರೇ ಆಗಿರುವುದರಿಂದ, ಅವರೂ ಈ ನಿಟ್ಟಿನಲ್ಲಿ ಆಸಕ್ತಿ ವಹಿಸಿದ್ದಾರೆ. ಸದ್ಯದಲ್ಲೇ ಅವರು ಪ್ರಕಟಿಸುವರು’’ ಎಂದು ತಿಳಿಸಿದರು.
ಕ್ರೀಡಾ ಮನೋಭಾವವಿರಲಿ

         ‘ಶೈಕ್ಷಣಿಕ ಸಾಧನೆಯ ಜೊತೆ-ಜೊತೆಗೇ ನೀವು ಕ್ರೀಡಾ ಸಾಧನೆಯನ್ನೂ ಮಾಡುತ್ತಿದ್ದೀರಿ. ಈ ನಿಮ್ಮ ಸಾ‘ನೆಯು ನಿಮ್ಮನ್ನು ಉನ್ನತ ಸ್ಥಾನಕ್ಕೆ ಕರೆದೊಯ್ಯಲಿದೆ’’ ಎಂದು ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿದ ಅವರು, ‘‘ಗ್ರಾಮೀಣ ಪ್ರದೇಶಗಳಿಂದ ಆಯ್ಕೆಗೊಂಡು ಇಂಥ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದೇ ಒಂದು ಸಾ‘ನೆಯಾಗಿರುವುದರಿಂದ, ಸೋಲು-ಗೆಲುವು ಎಂಬ ಭೇದವಿಲ್ಲದೆ ಕ್ರೀಡಾ ಮನೋಭಾವದಿಂದ ಭಾಗವಹಿಸಬೇಕು’ ಎಂದು ಕಿವಿಮಾತು ಹೇಳಿದರು.

 ಫಿಟ್‌ನೆಸ್ ಅತಿಮುಖ್ಯ

          ಮತ್ತೋರ್ವ ಅತಿಥಿ ತುಮಕೂರು ನಗರದ ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ‘ಈ ಕ್ರೀಡಾಂಗಣವನ್ನು ಸುಸಜ್ಜಿತಗೊಳಿಸಬೇಕಾಗಿದೆ. ಇದರ ಎದುರಿನ ಪ್ರದೇಶವನ್ನೂ ಸೇರಿಸಿಕೊಂಡು ಮೂಲಸೌಕರ್ಯ ಕಲ್ಪಿಸಬೇಕಿದೆ. ಈ ಬಗ್ಗೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಒಪ್ಪಿದ್ದಾರೆ. ಸಂಸದರು ತಿಳಿಸಿದಂತೆ ಕ್ರೀಡಾಂಗಣದ ಬಗ್ಗೆ ಉಪಮುಖ್ಯಮಂತ್ರಿಗಳೇ ಘೋಷಣೆ ಮಾಡಲಿದ್ದಾರೆ’ ಎಂದು ಹೇಳಿದರು.

     ‘ಇಂದಿನ ಯುವ ಪೀಳಿಗೆಯಲ್ಲಿ ಫಿಟ್‌ನೆಸ್ ಅತಿ ಮುಖ್ಯ’ ಎಂದೂ ಅಭಿಪ್ರಾಯಪಟ್ಟರು.ಕ್ರೀಡಾಕೂಟವನ್ನು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಉದ್ಘಾಟಿಸಿದರು. ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ರಾಷ್ಟ್ರ ಮಟ್ಟದ ಖೋಖೋ ಕ್ರೀಡಾ ಕೂಟಕ್ಕೆ ಆಯ್ಕೆ ಆಗಿರುವ ತುಮಕೂರು ನಗರದ ಕ್ರೀಡಾಪಟುಗಳಾದ ಆರ್.ಶಶಾಂಕ್, ಬಿ.ಷಣ್ಮುಖ, ಡಿ.ರ್ವೇಜ್, ಸೈಯದ್ ಪರ್ಜೆನ್, ಜಿ.ಬಿ.ರೋಷನ್, ಜಿ.ಆರ್.ಯಶವಂತ್ ಮತ್ತು ಪಿ.‘ನುಷ್ ಅವರು ಕ್ರೀಡಾಜ್ಯೋತಿಯನ್ನು ಹೊತ್ತುತಂದರು.

       ತುಮಕೂರು ತಾಲ್ಲೂಕು ಪಂಚಾಯತ್ ಅಧ್ಯಕ್ಷ ಗಂಗಾಂಜನೇಯ, ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯ ಜಂಟಿ ನಿರ್ದೇಶಕ (ದೈಹಿಕ ಶಿಕ್ಷಣ) ಅನಂತ ನಾಯಕ್, ತುಮಕೂರಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಟಿ.ಜಯಲಕ್ಷ್ಮಿ ಮೊದಲಾದ ಗಣ್ಯರು ಭಾಗವಹಿಸಿದ್ದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಮಂಜುನಾಥ್ ಸ್ವಾಗತಿಸಿದರು. ಬೆಳಗ್ಗೆ 11 ಗಂಟೆಗೆ ಆರಂಭವಾಗಬೇಕಿದ್ದ ಉದ್ಘಾಟನಾ ಕಾರ್ಯಕ್ರಮವು ಗಣ್ಯರ ಆಗಮನದ ವಿಳಂಬದಿಂದ 11-40 ಕ್ಕೆ ಪ್ರಾರಂ‘ವಾಯಿತು. ಇದರಿಂದಾಗಿ ಕ್ರೀಡಾಪಟುಗಳು (ಬಾಲಕ- ಬಾಲಕಿಯರು) ಕ್ರೀಡಾಂಗಣದಲ್ಲಿ 40 ನಿಮಿಷಗಳ ಕಾಲ ಕಾದು ಕುಳಿತುಕೊಳ್ಳುವಂತಾಯಿತು.

ಸಂಚಾರ ನಿರ್ಬಂಧ

      ಶನಿವಾರ ಮತ್ತು ಭಾನುವಾರ ಈ ಕ್ರೀಡಾಕೂಟ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧಿ ಕ್ರೀಡಾಂಗಣದ ಮಂದಿನ ರಸ್ತೆಯ ಎರಡೂ ದಿಕ್ಕುಗಳಲ್ಲಿ (ಎಸ್.ಎಸ್. ವೃತ್ತ ಮತ್ತು ಹನುಮಂತಪುರ ರಸ್ತೆ) ವಾಹನ ಸಂಚಾರವನ್ನು ಪೊಲೀಸರು ನಿರ್ಬಂಧಿಸಿದ್ದಾರೆ. ಭಾನುವಾರ ಸಂಜೆ 4 ಗಂಟೆಗೆ ಕ್ರೀಡಾಕೂಟದ ಮುಕ್ತಾಯ ಸಮಾರಂ‘ ನಡೆಯಲಿದೆ.

ರಾಜ್ಯಾದ್ಯಂತದಿಂದ 1427 ಕ್ರೀಡಾಪಟುಗಳು ಭಾಗಿ

       2016-19 ನೇ ಸಾಲಿನ 14 ವರ್ಷ ವಯೋಮಿತಿಯ ಬಾಲಕ- ಬಾಲಕಿಯರ ರಾಜ್ಯಮಟ್ಟದ ಈ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ರಾಜ್ಯಾದ್ಯಂತದಿಂದ 721 ಬಾಲಕರು ಮತ್ತು 706 ಬಾಲಕಿಯರು ಸೇರಿ ಒಟ್ಟು 1427 ಕ್ರೀಡಾಪಟುಗಳು ಆಗಮಿಸಿದ್ದಾರೆ. ಇವರೊಂದಿಗೆ 62 ಪುರುಷ ಮತ್ತು 36 ಮಹಿಳೆಯರು ಸೇರಿ ಒಟ್ಟು 98 ಜನ ತಂಡದ ವ್ಯವಸ್ಥಾಪಕರು ಬಂದಿದ್ದಾರೆ. ಒಟ್ಟಾರೆ ಈ ಸಂಖ್ಯೆ 1525 ಆಗಲಿದೆ.

ತುಮಕೂರು ಜಿಲ್ಲಾ ತಂಡ

       ಈ ಪೈಕಿ ತುಮಕೂರು ಜಿಲ್ಲೆಯಿಂದ 20 ಬಾಲಕರು ಮತ್ತು 22 ಬಾಲಕಿಯರು ಸೇರಿ ಒಟ್ಟು 42 ಕ್ರೀಡಾಪಟುಗಳು ಪಾಲ್ಗೊಂಡಿದ್ದಾರೆ. ಇವರೊಡನೆ ತಂಡದ ವ್ಯವಸ್ಥಾಪಕರಾಗಿ ಇಬ್ಬರು ಪುರುಷರು ಮತ್ತು ಓರ್ವ ಮಹಿಳೆ ಇದ್ದು, ಒಟ್ಟಾರೆ ತುಮಕೂರು ಜಿಲ್ಲಾ ತಂಡದಲ್ಲಿ 45 ಜನರು ಇದ್ದಾರೆ.

       ಆಯಾ ಜಿಲ್ಲೆಗಳಲ್ಲಿ ಇತ್ತೀಚೆಗೆ ನಡೆದಿದ್ದ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್‌ನಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದು ವಿಜೇತರಾದವರು ಈಗ ನಡೆಯುತ್ತಿರುವ ರಾಜ್ಯಮಟ್ಟದ ಈ ಕ್ರೀಡಾಕೂಟಕ್ಕೆ ಆಯ್ಕೆಗೊಂಡು ಬಂದಿದ್ದಾರೆ.

10 ಬಗೆಯ ಸ್ಪರ್ಧೆಗಳು

      ಪ್ರಸ್ತುತ ಈ ಕ್ರೀಡಾಕೂಟದಲ್ಲಿ ಒಟ್ಟು 10 ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಲಿವೆ. ಅವುಗಳೆಂದರೆ 600 ಮೀಟರ್ ಓಟ, 200 ಮೀಟರ್ ಓಟ, 4ಗಿ100 ಮೀಟರ್ ರಿಲೆ, ಎತ್ತರ ಜಿಗಿತ, ಗುಂಡು ಎಸೆತ, ಉದ್ದ ಜಿಗಿತ, ಚಕ್ರ ಎಸೆತ, 400 ಮೀಟರ್ ಓಟ, 100 ಮೀಟರ್ ಓಟ ಹಾಗೂ 80 ಮೀಟರ್ ಹರ್ಡಲ್ಸ್ ಓಟ.

 ಇಲ್ಲಿಂದ ರಾಷ್ಟ್ರಮಟ್ಟಕ್ಕೆ ಆಯ್ಕೆ

      ಈ ಕ್ರೀಡಾಕೂಟದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆಯುವ ಬಾಲಕರ ವಿಭಾಗದ 22 ಹಾಗೂ ಬಾಲಕಿಯರ ವಿಭಾಗದ 22 ಜನ ಕ್ರೀಡಾಪಟುಗಳು ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ ಆಗುವರು. ಸದ್ಯದಲ್ಲೇ ಹರಿಯಾಣದ ಪಂಚಕುಲದಲ್ಲಿ ನಡೆಯಲಿರುವ ಸ್ಕೂಲ್ ಗೇಮ್ಸ್ ಫೆಡರೇಷನ್ ಆ್ ಇಂಡಿಯಾ ವತಿಯ 64 ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯದ ತಂಡವನ್ನು ಇವರು ಪ್ರತಿನಿಧಿಸುವರು.

ವಸತಿ, ಬಸ್, ಊಟದ ವ್ಯವಸ್ಥೆ

        ಕ್ರೀಡಾಪಟುಗಳು ಮತ್ತು ಅವರ ತಂಡಗಳ ವ್ಯವಸ್ಥಾಪಕರು ಒಳಗೊಂಡಂತೆ ಒಟ್ಟು 1525 ಜನರಿಗೆ ತುಮಕೂರು ನಗರದಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಬಾಲಕಿಯರಿಗೆ ಸೇಂಟ್ ಮೇರಿಸ್ ಶಾಲೆ, ಬಸವೇಶ್ವರ ಶಾಲೆ ಮತ್ತು ನಳಂದ ಶಾಲೆಯಲ್ಲಿ ಹಾಗೂ ಬಾಲಕರಿಗೆ ಚೇತನಾ ಶಾಲೆ, ಶ್ರೀವಿದ್ಯಾ ಶಾಲೆ ಮತ್ತು ಸಿದ್ಧಗಂಗಾ ಎಲಿಮೆಂಟರಿ ಶಾಲೆಯಲ್ಲಿ ವಸತಿ ಸೌಲಭ್ಯ ಕಲ್ಪಿಸಲಾಗಿದೆ.
ಇವರೆಲ್ಲಗೂ ವಸತಿ ಸ್ಥಳಗಳಿಂದ ಮಹಾತ್ಮ ಗಾಂಧಿ ಕ್ರೀಡಾಂಗಣಕ್ಕೆ ಬಂದು ಹೋಗಲು ಅನುಕೂಲವಾಗುವಂತೆ 20 ಶಾಲಾ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಮಹಾತ್ಮ ಗಾಂಧಿ ಕ್ರೀಡಾಂಗಣದ ಎದುರು ಭಾಗದಲ್ಲಿ ಇವರೆಲ್ಲರಿಗೂ ಉಪಹಾರ ಮತ್ತು ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.

ರಂಗೇರಿದ ಕ್ರೀಡಾಂಗಣ

      ರಾಜ್ಯಾದ್ಯಂತದ ಬಾಲಕ-ಬಾಲಕಿಯರು ಕ್ರೀಡಾಕೂಟದಲ್ಲಿ ಅತ್ಯುತ್ಸಾಹದಿಂದ ಪಾಲ್ಗೊಂಡಿರುವುದರಿಂದ ಮಕ್ಕಳ ಕಲರವದಿಂದ ಕ್ರೀಡಾಂಗಣದ ವಾತಾವರಣ ರಂಗೇರಿದೆ. ಇಲ್ಲಿ ನಡೆಯುತ್ತಿರುವ ವೈವಿದ್ಯಮಯವಾದ ಕ್ರೀಡಾ ಸ್ಪರ್ಧೆಗಳು ನಗರದ ಕ್ರೀಡಾಪಟುಗಳು ಮತ್ತು ಕ್ರೀಡಾಪ್ರೇಮಿಗಳನ್ನು ಆಕರ್ಷಿಸುತ್ತಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

LEAVE A REPLY

Please enter your comment!
Please enter your name here