ರಾಜ್ಯಮಟ್ಟದ ಕವಿಗೋಷ್ಠಿ ಸಮಾರಂಭ

0
8

ಹೊನ್ನಾಳಿ:

      ಗ್ರಾಮೀಣ ಪ್ರದೇಶಗಳಲ್ಲಿನ ಅನೇಕ ಸಾಹಿತ್ಯಕ ಚಟುವಟಿಕೆಗಳಿಂದ, ಜನರ ನಿರಂತರ ಬಳಕೆಯಿಂದ ಕನ್ನಡ ಭಾಷೆ ಉಳಿದಿದೆ ಎಂದು ಖ್ಯಾತ ಸಾಹಿತಿ ಜರಗನಹಳ್ಳಿ ಶಿವಶಂಕರ್ ಹೇಳಿದರು.

      ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಕವಿ ವೃಕ್ಷ ಸಾಹಿತ್ಯ ಬಳಗ ಮತ್ತು ಎಚ್‍ಎಸ್‍ಆರ್‍ಎ ಪ್ರಕಾಶನಗಳ ಸಂಯುಕ್ತ ಆಶ್ರಯದಲ್ಲಿ ಬುಧವಾರ ನಡೆದ ಕನ್ನಡ ರಾಜ್ಯೋತ್ಸವ ಹಾಗೂ ರಾಜ್ಯಮಟ್ಟದ ಕವಿಗೋಷ್ಠಿ ಸಮಾರಂಭದಲ್ಲಿ ತಾಲೂಕಿನ ಬಿದರಗಡ್ಡೆ ಗ್ರಾಮದ ಶಿಕ್ಷಕ, ಸಾಹಿತಿ ಬಿದರಗಡ್ಡೆ ಸಂತೋಷ್ ಅವರಿಗೆ ಕವಿವೃಕ್ಷ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

     ಆಂಗ್ಲ ಮಾಧ್ಯಮ ಶಿಕ್ಷಣದ ವ್ಯಾಮೋಹ, ಕನ್ನಡ ಭಾಷೆಯ ಬಳಕೆಯಲ್ಲಿ ನಗರ ಪ್ರದೇಶಗಳ ಜನರ ನಿರಾಸಕ್ತಿ ಮತ್ತಿತರ ಕಾರಣಗಳಿಂದಾಗಿ ಕನ್ನಡ ಭಾಷೆ ಕಳೆಗುಂದುತ್ತಿದೆ. ಇದು ಅಹಿತಕರ ಬೆಳವಣಿಗೆ. ಸಮಗ್ರವಾಗಿ ಕನ್ನಡ ಭಾಷೆಯ ವ್ಯಾಪಕ ಬಳಕೆ ಬಗ್ಗೆ ನಾವೆಲ್ಲರೂ ಪ್ರಯತ್ನಿಸಬೇಕು. ಕನ್ನಡ ಭಾಷೆಯ ಬಗ್ಗೆ ನಾವೆಲ್ಲರೂ ಪ್ರೀತಿ, ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಕನ್ನಡ ಭಾಷೆಗೆ ಸುಮಾರು 2 ಸಾವಿರ ವರ್ಷಗಳ ಇತಿಹಾಸವಿದೆ. ಕನ್ನಡ ಭಾಷೆಯ ಸಾಹಿತಿಗಳಿಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ದೊರೆತಿರುವುದು ಕನ್ನಡದ ಹಿರಿಮೆಗೆ ಸಾಕ್ಷಿಯಾಗಿದೆ. ಕನ್ನಡ ಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಲು ಇವಿಷ್ಟು ಕಾರಣಗಳು ಸಾಕು ಎಂದು ಅಭಿಪ್ರಾಯಪಟ್ಟರು.

      ಕವಿವೃಕ್ಷ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿದ ಶಿಕ್ಷಕ, ಸಾಹಿತಿ ಬಿದರಗಡ್ಡೆ ಸಂತೋಷ್ ಮಾತನಾಡಿ, ಕನ್ನಡ ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸವನ್ನು ಎಲ್ಲರೂ ರೂಢಿಸಿಕೊಳ್ಳಬೇಕು. ಎಲ್ಲರೂ ಕನ್ನಡ ಭಾಷೆಯನ್ನು ತಮ್ಮ ದೈನಂದಿನ ವ್ಯವಹಾರಗಳಲ್ಲಿ ಬಳಸಲು ಮುಂದಾಗಬೇಕು ಎಂದು ತಿಳಿಸಿದರು.

     ತಮ್ಮನ್ನು ಸಾಹಿತ್ಯ ಕೃಷಿಗೆ ಪ್ರೇರೇಪಿಸಿದ ಸಾಹಿತಿಗಳಾದ ಹೊನ್ನಾಳಿಯ ಯು.ಎನ್. ಸಂಗನಾಳಮಠ, ಕೊಟ್ರೇಶ್ ಉತ್ತಂಗಿ, ಗೊಲ್ಲರಹಳ್ಳಿ ಮಂಜುನಾಥ್, ಹಿರಿಯರಾದ ಬಿ.ಎಚ್. ಮಂಜಪ್ಪ, ಬಿ.ಎಚ್. ಕುಬೇರಗೌಡ, ಹಾವೇರಿ ಜಿಲ್ಲಾ ಸೃಜನಶೀಲ ಕನ್ನಡ ಸಾಹಿತ್ಯ ಬಳಗದ ಜಿಲ್ಲಾಧ್ಯಕ್ಷರಾಗಲು ತಮಗೆ ಸಹಕಾರ ನೀಡಿದ ಎಲ್ಲಾ ಹಿರಿಯರು, ಹಿರಿಯ ಸಾಹಿತಿಗಳಾದ ಪ್ರೊ. ಮಾರುತಿ ಶಿಡ್ಲಾಪುರ, ಸತೀಶ್ ಕುಲಕರ್ಣಿ, ಎಚ್.ಬಿ. ಲಿಂಗಯ್ಯ, ನಾಗರಾಜ ಅಡಿಗ, ಪಾರ್ವತಿ ಕಾಶಿಕರ್, ಗಂಗಾಧರ್ ನಂದಿ, ಪುಷ್ಪ ಶಲವಡಿಮಠ, ಲಿಂಗರಾಜ ಸೊಟ್ಟಪ್ಪನವರ್, ಬಿ. ಬಸವರಾಜಪ್ಪ ಮತ್ತಿತರರನ್ನು ಸ್ಮರಿಸುವುದಾಗಿ ನುಡಿದರು . ಚಲನಚಿತ್ರ ಗೀತ ರಚನಕಾರ ವಿ. ನಾಗೇಂದ್ರಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here