ಬೀದಿ ನಾಟಕ ಮತ್ತು ಜಾಗೃತಿ ಗೀತೆ ಕಾರ್ಯಕ್ರಮ

0
14

ಹರಿಹರ:

      ಸ್ವಚ್ಛ ಭಾರತ ಅಭಿಯಾನದಡಿ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡುತ್ತಾ ಬಂದಿದ್ದು, ಈ ನಿಟ್ಟಿನಲ್ಲಿ ಜನರಿಗೆ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮವನ್ನು ನಿರಂತರವಾಗಿ ಹಮ್ಮಿಕೊಂಡಿದೆ ಎಂದು ನಗರಸಭಾ ಅಧ್ಯಕ್ಷೆ ಸುಜಾತ ರೇವಣಸಿದ್ದಪ್ಪ ಹೇಳಿದರು.

       ನಗರದ ಶಿವಮೊಗ್ಗ ವೃತ್ತದ ಸಂತೆ ಮಾರುಕಟ್ಟೆಯಲ್ಲಿ ಮಂಗಳವಾರ ಹರಿಹರ ನಗರಸಭೆ ಮತ್ತು ಪ್ರಥಮ ಗ್ರಾಮೀಣಾಭಿವೃದ್ದಿ, ಶೈಕ್ಷಣಿಕ ಮತ್ತು ಸಾಮಾಜಿಕ ಸಂಸ್ಥೆಯ ಸಹಯೋಗದೊಂದಿಗೆ ನಡೆದ ಸ್ವಚ್ಛ ಭಾರತ ಮಿಷನ್ ಯೋಜನೆ ಅಡಿಯಲ್ಲಿ ಬೀದಿ ನಾಟಕ ಮತ್ತು ಜಾಗೃತಿ ಗೀತೆಗಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸ್ವಚ್ಛತೆಗೆ ಎಲ್ಲರೂ ಕೈಜೋಡಿಸುವ ಮೂಲಕ ಸ್ಥಳದ ಉತ್ತಮ ವಾತಾವರಣವನ್ನು ಕಾಪಾಡಬೇಕಿದೆ. ಇದರಲ್ಲಿ ಸಾರ್ವಜನಿಕರ ಸಹಕಾರವು ಅಗತ್ಯ ಬೇಕಿದೆ ಎಂದರು.

         ಪೌರಾಯುಕ್ತೆ ಎಸ್.ಲಕ್ಷ್ಮೀ ಮಾತನಾಡಿ, ಸ್ವಚ್ಛ ನಗರವನ್ನಾಗಿ ಮಾಡಲು ನಗರಸಭೆ ಕಾರ್ಯ ಪ್ರವೃತ್ತವಾಗಿದ್ದು, ಸ್ಥಳೀಯ ನಾಗರಿಕರು ಕೈಜೋಡಿಸುವ ಮೂಲಕ ಉತ್ತಮ ಪರಿಸರ ನಿರ್ಮಾಣ ಮಾಡಲು ಪ್ರಯತ್ನಿಸಬೇಕು ಎಂದು ಹೇಳಿದರು.

         ನಗರದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ ನಗರಾದ್ಯಂತ ಕಸ ವಿಲೆವಾರಿ ಮಾಡುತ್ತಿದೆ. ನಗರದ ಪ್ರತಿ ವಾರ್ಡ್‍ಗಳಲ್ಲಿಯೂ ನಗರಸಭೆ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದು, ನಿವಾಸಿಗಳು ಎಲ್ಲೆಂದರಲ್ಲಿ ಕಸ ಹಾಕದೆ ನಗರಸಭೆಯ ಕಸದ ಗಾಡಿಗಳಿಗೆ ಹಾಕಬೇಕು ಆ ಮೂಲಕ ಸ್ವಚ್ಛತೆಗೆ ಪ್ರಧಾನ್ಯತೆ ನೀಡಬೇಕೆಂದು ಸಲಹೆ ನೀಡಿದರು.

        ಪ್ರತಿಯೊಂದು ನೀರಿನ ಹನಿ ಅಮೂಲ್ಯ. ಅಗತ್ಯಕ್ಕೆ ತಕ್ಕಷ್ಟು ಮಾತ್ರ ಜೀವಜಲ ಬಳಕೆ ಮಾಡಬೇಕು. ನೀರು ಮಲೀನವಾಗದಂತೆ ಕಾಪಾಡಿಕೊಳ್ಳಬೇಕು. ಸ್ವಚ್ಛ ಪರಿಸರದಲ್ಲಿ ಆರೋಗ್ಯವೂ ಸಮೃದ್ಧವಾಗಿರುತ್ತದೆ. ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯಬಾರದು. ನಗರಸಭೆಯೊಂದಿಗೆ ಸಹಕಾರ ನೀಡುತ್ತ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ನಾಟಕದ ಮೂಲಕ ಜನರಲ್ಲಿ ಅರಿವು ಮೂಡಿಸಲಾಯಿತು.

       ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಶಹಜಾದ್ ಸನಾವುಲ್ಲಾ, ಅಂಬುಜಾ ಪಿ.ರಾಜೋಳಿ, ಪರಿಸರ ಅಭಿಯಂತರರಾದ ಮಹೇಶ್ ಕೊಡಬಾಳ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶೇಖರ್ ಗೌಡ ಪಾಟೀಲ್, ಆರೋಗ್ಯ ನಿರೀಕ್ಷಕರಾದ ರವಿ ಪ್ರಕಾಶ್, ಸಂತೋಷ್, ನೀತಾ ಮೇಹರ್ವಾಡೆ, ಪ್ರಥಮ ಸಂಸ್ಥೆಯ ಕಾರ್ಯದರ್ಶಿ ಹೆಚ್. ಮಂಜನಾಯ್ಕ, ಹೆಚ್. ಸಂತೋಷ್, ರಮೇಶ್ ನಾಯ್ಕ, ಶಿವಲಿಂಗ ಹಾಗೂ ಪೌರ ಕಾರ್ಮಿಕರು, ಮತ್ತಿತರರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here