ರಫಲ್ ಡೀಲ್ : ಸುಪ್ರೀಂ ತೀರ್ಪು ಸರಿಯಿಲ್ಲ…!!!

ಬೆಂಗಳೂರು

          ರಫೇಲ್ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಸರಿಯಲ್ಲ ಎಂದು ಎಚ್‍ಎಎಲ್‍ನ ನಿವೃತ್ತ ಅಧಿಕಾರಿ ಅನಂತ ಪದ್ಮನಾಭ ಹೇಳಿದ್ದಾರೆ.

          ಸುಪ್ರೀಂ ಕೋರ್ಟ್ ತೀರ್ಪು ದೌರ್ಭಾಗ್ಯವಾಗಿದೆ. ಆದರೂ ಸುಪ್ರೀಂ ಕೊಟ್ಟ ತೀರ್ಪನ್ನು ಗೌರವಿಸಲೇಬೇಕಿದೆ. ನ್ಯಾಯಮೂರ್ತಿಗಳು ಏಕೆ ಈ ತಪ್ಪು ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲು ಆಗುತ್ತಿಲ್ಲ. ಅನಿಲ್ ಅಂಬಾನಿ ಅವರ ಕಂಪನಿ ಕೆಲವೇ ದಿವಸಗಳ ಮೊದಲು ನೊಂದಣಿ ಆಗಿದೆ. ಒಂದು ಕಾರ್ ಸರ್ವಿಸ್‍ಗೆ ಬಿಡಬೇಕಿದ್ದರೂ ಅನುಭವ ಹಿನ್ನಲೆಯನ್ನು ನೋಡಿ ಕೊಡಲಿದ್ದೇವೆ ಆದರೆ ಇಲ್ಲಿ ಇಂತಹ ದೊಡ್ಡ ಡೀಲನ್ನು ಏನೂ ಗೊತ್ತಿಲ್ಲದೇ ಇರುವವರು, ಒಂದು ಶೆಡ್ ಹಾಕಿಕೊಂಡಿರುವವನಿಗೆ ಕೊಟ್ಟಿರುವುದು ಬಹಳ ತಪ್ಪು ಎಂದರು.

           ರಕ್ಷಣಾ ಇಲಾಖೆಗೆ ಬೇಕಾದಂತಹ ಹೆಲಿಕಾಪ್ಟರ್, ವಿಮಾನವನ್ನು ದೊಡ್ಡ ಕಂಪನಿ ಎಚ್‍ಎಎಲ್ ನೀಡುತ್ತಾ ಬಂದಿದೆ. ಹೆಚ್‍ಎಎಲ್‍ನಲ್ಲಿ ನಿಧಾನ ಎಂದು ಹೇಳಬಹುದು. ಕೆಲಸದ ಸಮಯ ಹೆಚ್ಚು ಎನ್ನಬಹುದು. ಅದಕ್ಕೆಲ್ಲ ಏನು ಉಪಾಯ, ಸುಧಾರಣೆ ಎಂಬುದು ನಮಗೆ ಗೊತ್ತಿದೆ. ಹಿಂದೆ ಜಾಗ್ವಾರ್ ಏರ್ ಕ್ರಾಫ್ಟ್ ಬಂದಾಗ ಕೂಡ ನಮ್ಮದು ಕೆಲಸದ ಸಮಯ ಜಾಸ್ತಿಯಾಗುತ್ತದೆ ಎನ್ನುವ ಮಾತುಗಳು ಕೇಳಿಬಂದಿತ್ತು. ಬಳಿಕ ನಾವು ಅದನ್ನು ಸುಧಾರಣೆ ಮಾಡಿದೆವು ಆದರೆ ಅನುಭವವಿಲ್ಲದ ಕಂಪನಿಗೆ ನೀಡಿರುವುದು ಸರಿ ಎನ್ನುವ ತೀರ್ಪು ಸಮಾಧಾನಕರವಾಗಿಲ್ಲ ತೀರ್ಪಿನ ವಿರುದ್ದಹೋರಾಟ ಮುಂದುವರೆಸಲಾಗುವುದು ಎಂದು ಹೇಳಿದರು.

            126 ವಿಮಾನ ಬೇಕು ಎಂದು ವಾಯುಸೇನೆ ಮಾಡಿದ್ದ ತೀರ್ಮಾನ ತೆಗೆದುಕೊಂಡಿತ್ತು ಅದನ್ನು ಪ್ರಧಾನಿ ಅವರು ಒಂದೇ ಬಾರಿ ಹೋಗಿ 36 ವಿಮಾನ ಖರೀದಿ ಮಾಡಿಬಿಟ್ಟರು. 2.86 ಬಿಲಿಯನ್ ಡಾಲರ್ ಖರೀದಿ ಒಪ್ಪಂದ 8. 2 ಬಿಲಿಯನ್ ಡಾಲರ್ ಹೋಗಿ ಮತ್ತೆ ವಾಪಸ್ 7.8 ಬಿಲಿಯನ್ ಡಾಲರ್ ಗೆ ಬಂದಿದೆ. ನನ್ನ ಅಭಿಪ್ರಾಯದಲ್ಲಿ 20 ಸಾವಿರ ಕೋಟಿ ನಮಗೆ ನಷ್ಟ ಆಗುತ್ತಿದೆ. ಹೀಗಾಗಿ ಈ ತೀರ್ಪು ಸರಿಯಿಲ್ಲ ಎನ್ನುವುದಕಕ್ಕೆ ನಾನು ಬದ್ಧನಾಗಿದ್ದೇನೆ ಎಂದು ತಿಳಿಸಿದರು.

ಸುಪ್ರೀಂ ಕೋರ್ಟ್ ತೀರ್ಪು

           ರಫೇಲ್ ಖರೀದಿ ವ್ಯವಹಾರಗಳನ್ನು ನಿಯಮದಡಿಯಲ್ಲಿಯೇ ಮಾಡಲಾಗಿದೆ. ಯುದ್ಧ ವಿಮಾನ ಖರೀದಿಯಲ್ಲಿ ಯಾವುದೇ ರೀತಿಯ ಅವ್ಯವಹಾರ ಕಂಡುಬಂದಿಲ್ಲ. ಈ ಕಾರಣಕ್ಕೆ ತನಿಖೆ ನಡೆಸಲು ಆದೇಶ ನೀಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶದಲ್ಲಿ ತಿಳಿಸಿದೆ.

           ರಫೇಲ್ ಯುದ್ದ ವಿಮಾನ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ವಕೀಲ ಎಂ.ಎಲ್ ಶರ್ಮಾ, ವಿನೀತಾ ದಾಂಡ, ಆಪ್ ನಾಯಕ ಸಂಜಯ್ ಸಿಂಗ್ ಮಾಜಿ ಕೇಂದ್ರ ಸಚಿವ ಯಶವಂತ ಸಿನ್ಹಾ, ಅರುಣ್ ಶೌರಿ ಹಾಗೂ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅರ್ಜಿ ಸಲ್ಲಿಸಿದ್ದರು. ರಫೇಲ್ ಒಪ್ಪಂದವನ್ನು ರದ್ದುಗೊಳಿಸಿ ಸುಪ್ರೀಂಕೋರ್ಟ್ ಮೇಲುಸ್ತುವಾರಿಯಲ್ಲಿ ಸಿಬಿಐ ತನಿಖೆ ನಡೆಸಬೇಕು ಎಂದು ವಕೀಲರು ಆಗ್ರಹಿಸಿದ್ದರು. ಈ ಅರ್ಜಿಗಳನ್ನು ಒಟ್ಟಾಗಿಸಿದ್ದ ಮುಖ್ಯ.ನ್ಯಾ ರಂಜನ್ ಗೋಗಯ್ ನೇತೃತ್ವದ ತ್ರಿ ಸದಸ್ಯ ಪೀಠ ಸುದೀರ್ಘ ವಿಚಾರಣೆ ನಡೆಸಿತ್ತು. ನವೆಂಬರ್ 14 ರಂದು ವಿಚಾರಣೆ ಅಂತ್ಯಗೊಳಿಸಿದ್ದ ಸುಪ್ರೀಂಕೋರ್ಟ್ ಇಂದು ಈ ಅರ್ಜಿಯನ್ನು ವಜಾಗೊಳಿಸಿದೆ.

              ಇದು ಶಾಸಕಾಂಗದ ವ್ಯಾಪ್ತಿಗೆ ಬರುವುದರಿಂದ ಇದು ದೇಶದ ಹಿತಾಶಕ್ತಿ ಹಾಗೂ ಭದ್ರತೆಗಾಗಿ ನಡೆದ ಒಪ್ಪಂದವಾಗಿದೆ. ಈ ಅಂಶಗಳು ಬಹಿರಂಗವಾದರೆ ವಿರೋಧಿ ರಾಷ್ಟ್ರಗಳಿಗೆ ಜೆಟ್ ವಿಮಾನದಲ್ಲಿ ಬಳಸಿರುವ ತಂತ್ರಜ್ಞಾನಗಳ ಮಾಹಿತಿ ಸೋರಿಕೆಯಾಗುತ್ತದೆ ಅನ್ನೋ ಆತಂಕವನ್ನು ಸುಪ್ರೀಂನಲ್ಲಿ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರು ವ್ಯಕ್ತಪಡಿಸಿದ್ದರು. ಈ ಅಂಶವನ್ನು ಇದೀಗ ಪರಿಗಣಿಸಿ ಮಾಹಿತಿ ಬಹಿರಂಗ ಮಾಡುವುದು ಬೇಡ ಜೊತೆಗೆ ತನಿಖೆಯೂ ಬೇಡ ಅನ್ನೋ ಅಭಿಪ್ರಾಯವನ್ನು ಸುಪ್ರೀಂ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಇದೊಂದು ದೊಡ್ಡ ಮಟ್ಟದ ಗೆಲುವಾಗಿದೆ. ಈ ಮೂಲಕ ಕಾಂಗ್ರೆಸ್ಸಿಗೆ ಹಿನ್ನಡೆಯಾಗಿದೆ.

ಯುಪಿಎ ಒಪ್ಪಂದ

               ಯುಪಿಎ ಸರ್ಕಾರದ ಅವಧಿಯಲ್ಲಿ 2012ರಲ್ಲಿ ಫ್ರಾನ್ಸ್’ನ ಡಸಾಲ್ಟ್ ಏವಿಯೇಶನ್ ಸಂಸ್ಥೆಯೊಂದಿಗೆ 126 ಮಧ್ಯಮ ಶ್ರೇಣಿಯ ಬಹುಮುಖಿ ಯುದ್ಧ ವಿಮಾನಗಳ(ಎಂಎಂಆರ್’ಸಿಎ-ಮೀಡಿಯಂ ಮಲ್ಟಿ ರೋಲ್ ಕಾಂಬಾಟ್ ಏರ್’ಕ್ರಾಫ್ಟ್) ಖರೀದಿಗೆ ಒಪ್ಪಂದ ಮಾಡಿಕೊಟ್ಟಿತ್ತು. ಮಾತುಕತೆಯ ನಿಯಮಗಳ ಪ್ರಕಾರ ಡಸಾಲ್ಟ್ ಏವಿಯೇಶನ್ ಸಂಸ್ಥೆಯು 18 ರಫೇಲ್ ಜೆಟ್‍ಗಳನ್ನು ಹಾರಾಡಲು ಸನ್ನದ್ಧವಾಗಿರುವ ಸ್ಥಿತಿಯಲ್ಲಿ ಭಾರತಕ್ಕೆ ಪೂರೈಸಬೇಕು ಹಾಗೂ ಭಾರತದ ಎಚ್‍ಎಎಲ್‍ನೊಂದಿಗೆ ಉಳಿದ 108 ಯುದ್ಧ ವಿಮಾನಗಳನ್ನು ಭಾರತದಲ್ಲಿಯೇ ತಯಾರಿಸಬೇಕೆನ್ನುವ ಷರತ್ತನ್ನು ಹಾಕಿತ್ತು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap