ಭೂ ಸ್ವಾಧೀನಕ್ಕಾಗಿ ಜಂಟಿ ಸರ್ವೇ ಆರಂಭ

ದಾವಣಗೆರೆ:

       ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗಕ್ಕೆ ಬೇಕಾಗಿರುವ ಭೂಮಿಯನ್ನು ಗುರುತಿಸಲು, ಮಂಗಳವಾರದಿಂದ ದಾವಣಗೆರೆ ತಾಲೂಕಿನಲ್ಲಿ ಜಂಟಿ ಸರ್ವೇ ಕಾರ್ಯ ಆರಂಭವಾಗಿದೆ.

       ಈ ನೇರ ರೈಲು ಮಾರ್ಗಕ್ಕೆ ದಾವಣಗೆರೆ ತಾಲೂಕಿನ 237 ಎಕರೆ ಜಮೀನು ಸೇರಿದಂತೆ ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಿಂದ ಒಟ್ಟು 2500 ಎಕರೆ ಭೂಮಿಯ ಅವಶ್ಯಕತೆ ಇದೆ ಎಂಬುದಾಗಿ ಅಂದಾಜಿಸಲಾಗಿದೆ. ಆದರೆ, ಈಗ ಯೋಜನೆಯ ವಿಶೇಷ ಭೂಸ್ವಾಧಿನಾಧಿಕಾರಿ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಲೋಕೋಪಯೋಗಿ ಇಲಾಖೆ, ರೈಲ್ವೆ ಇಲಾಖೆ ಮತ್ತು ಸರ್ವೇ ಇಲಾಖೆಯ ಅಧಿಕಾರಿಗಳು ಸೇರಿಕೊಂಡು ಮಂಗಳವಾರದಿಂದ ದಾವಣಗೆರೆ ತಾಲೂಕಿನ ಪಾಮೇನಹಳ್ಳಿ ಮತ್ತು ಹಾಲುವರ್ತಿ ಗ್ರಾಮಗಳಿಂದ ಜಂಟಿ ಸರ್ವೇ ಆರಂಭಿಸಿದ್ದು, ಈ ಸರ್ವೇ ಮುಗಿದ ಬಳಿಕವೇ ನೇರ ರೈಲು ಮಾರ್ಗಕ್ಕೆ ನಿಖರವಾಗಿ ಎಷ್ಟು ಭೂಮಿ ಬೇಕಾಗಲಿದೆ ಎಂಬುದು ಗೊತ್ತಾಗಲಿದೆ.

      ಸಧ್ಯ ದಾವಣಗೆರೆ ತಾಲೂಕು ಒಂದರಲ್ಲೇ 14 ಹಳ್ಳಿಗಳ ಸುಮಾರು 353 ರೈತರ 237 ಎಕರೆ ಭೂಮಿ ಈ ಯೋಜನೆಗೆ ಬೇಕಾಗಬಹುದು ಹಾಗೂ ಸುಮಾರು 90 ಕೋಟಿ ರೂ. ಪರಿಹಾರ ನೀಡಬಹುದು ಎಂಬುದಾಗಿ ಅಂದಾಜಿಸಲಾಗಿದೆ. ಆದರೆ, ಈಗ ಪ್ರಾರಂಭವಾಗಿರುವ ಅಧಿಕಾರಿಗಳ ಜಂಟಿ ಸರ್ವೇ ಮುಗಿಯಲು ಇನ್ನೂ ಎರಡರಿಂದ ಮೂರು ತಿಂಗಳು ಕಾಲಾವಕಾಶ ಬೇಕಾಗಿದೆ. ಈ ಸರ್ವೇ ಕಾರ್ಯ ಮುಗಿದ ನಂತರವೇ ಯೋಜನೆಗೆ ಒಟ್ಟು ಎಷ್ಟು ಭೂಮಿಬೇಕು? ಒಟ್ಟು ಎಷ್ಟು ಆಸ್ತಿ ಬಾಧಿತವಾಗಲಿವೆ? ಭೂಮಿ ಕಳೆದುಕೊಂಡಿರುವ ರೈತರಿಗೆ ಎಷ್ಟು ಪರಿಹಾರ ನೀಡಬಹುದು ಎಂಬುದರ ಬಗ್ಗೆ ನಿಖರವಾಗಿ ತಿಳಿಯಲಿದೆ.

      ಪ್ರಸ್ತುತ ನಡೆಯುತ್ತಿರುವ ಜಂಟಿ ಸರ್ವೇಯಲ್ಲಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಆಯಾ ತೋಟಗಾರಿಕೆ ಬೆಳೆಯ ಆಧಾರದ ಮೇಲೆ ಭೂ ಸ್ವಾಧೀನದಿಂದ ಬಾಧಿತವಾಗುವ ಒಂದು ಗಿಡಕ್ಕೆ ಇಂತಿಷ್ಟು ಮೌಲ್ಯ ನಿಗದಿ ಮಾಡಲಿದ್ದಾರೆ. ಹಾಗೆಯೇ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸಹ ಬಾಧಿತವಾಗಲಿರುವ ಕೊಳವೆಬಾವಿ, ಕಟ್ಟಡ, ವಿದ್ಯುತ್ ಕಂಬ, ಕೊಳವೆ ಮಾರ್ಗ ಸೇರಿದಂತೆ ಇತರೆ ಆಸ್ತಿಗಳ ಮೌಲ್ಯವನ್ನು ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಬಾಧಿತವಾಗುವ ಬೆಳೆಯ ಮೌಲ್ಯವನ್ನು ನಿಗದಿಗೊಳಿಸಲಿದ್ದಾರೆ. ಆ ಬಳಿಕ ನಾವು ಉಪ ನೋಂದಣಾಧಿಕಾರಿಗಳ ಕಚೇರಿಯಿಂದ ಬಾಧಿತ ಆಸ್ತಿಗಳ ಮೌಲ್ಯಗಳ ದಾಖಲೆ ಸಂಗ್ರಹಿಸಿ, ನೇರ ರೈಲು ಮಾರ್ಗಕ್ಕಾಗಿ ಜಮೀನು ಕಳೆದುಕೊಂಡಿರುವ ರೈತರಿಗೆ ಎಷ್ಟು ಪರಿಹಾರ ನೀಡಬೇಕೆಂಬುದರ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ವಿಶೇಷ ಭೂ ಸ್ವಾಧೀನಾಧಿಕಾರಿ ರೇಷ್ಮಾ ಹಾನಗಲ್ ತಿಳಿಸಿದ್ದಾರೆ.

ಜಂಟಿ ಸಮೀಕ್ಷೆ ವೇಳಾಪಟ್ಟಿ:

         ನ.12ರಂದು ಪಾಮೇನಹಳ್ಳಿ ಹಾಗೂ ಹಾಲುವರ್ತಿ ಗ್ರಾಮಗಳಿಂದ ಜಂಟಿ ಸಮೀಕ್ಷೆ ಆರಂಭವಾಗಿದ್ದು, ನ. 14ರಿಂದ 15ರಂದು ತೋಳಹುಣಸೆ, ನ.20ರಿಂದ 23ರ ವರೆಗೆ ಪಂಚೇನಹಳ್ಳಿ, ನ.24ರಿಂದ 28ರ ವರೆಗೆ ಕರೆಲಕ್ಕೇನಹಳ್ಳಿ, ನ.29ರಿಂದ ಡಿ.3ರ ವರೆಗೆ ಬುಳ್ಳಾಪುರ, ಡಿ.4ರಿಂದ 6ರ ವರೆಗೆ ರಂಗವ್ವನಹಳ್ಳಿ, ಡಿ. 12-15 ನೀರ್ಥಡಿ, ಡಿ. 17-20 ಹುಣಸೆಕಟ್ಟೆ, ಡಿ. 21-26 ಹೆಬ್ಬಾಳು, ಡಿ. 27-31 ಆನಗೋಡು, ಜ. 01-05 ಚಟ್ಟೋಬನಹಳ್ಳಿ ಗ್ರಾಮಗಳಲ್ಲಿ ಜಂಟಿ ಸರ್ವೇ ಕಾರ್ಯ ನಡೆಯಲಿದೆ.

          ನೇರ ರೈಲ್ವೆ ಮಾರ್ಗಕ್ಕಾಗಿ 2013ರ ಜುಲೈ ತಿಂಗಳಿನಲ್ಲಿಯೇ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ, ಭೂ ಸ್ವಾಧೀನ ಅಧಿಸೂಚನೆ 2018ರ ಆಗಸ್ಟ್ 2ರಂದು ರಾಜ್ಯಪತ್ರದಲ್ಲಿ ದಾಖಲಾಗಿದೆ. ಸರ್ಕಾರದ ಈ ವಿಳಂಬದಿಂದಾಗಿಯೇ ಭೂಸ್ವಾಧೀನ ಪ್ರಕ್ರಿಯೆ ಆರಂಭವಿರಲಿ, ಭೂಮಿಯ ಸರ್ವೇ ಸಹ ನಡೆದಿರಲಿಲ್ಲ. ಹೀಗಾಗಿ ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗ ಕುಂಟುತ್ತಾ ಸಾಗುವ ಮೂಲಕ ಕಡಿಮೆ ಪ್ರಯಾಣದ ಅವಧಿಯಲ್ಲಿ ಬೆಂಗಳೂರಿನಿಂದ ದಾವಣಗೆರೆಗೆ, ದಾವಣಗೆರೆಯಿಂದ ಬೆಂಗಳೂರಿಗೆ ಓಡಾಡುವ ತವಕದಲ್ಲಿರುವ ಈ ಭಾಗದ ರೈಲ್ವೆ ಪ್ರಯಾಣಿಕರ ಕನಸು ನನಸಾಗಿಲ್ಲ.

           ಈಗಿರುವ ದಾವಣಗೆರೆ-ಬೆಂಗಳೂರು ರೈಲು ಮಾರ್ಗ 326 ಕಿಲೋ ಮೀಟರ್ ಅಷ್ಟಿದೆ. ಆದರೆ, ಈ ನೇರ ರೈಲು ಮಾರ್ಗ ಕಾಮಗಾರಿ ಮುಗಿದು ಲೋಕಾರ್ಪಣೆಗೊಂಡರೆ ತುಮಕೂರು, ಸಿರಾ, ಹಿರಿಯೂರು, ಚಿತ್ರದುರ್ಗ ಮೂಲಕ ಬೆಂಗಳೂರಿನಿಂದ ದಾವಣಗೆರೆಗೆ 236 ಕಿ.ಮೀ. ಮಾತ್ರ ಆಗಲಿದ್ದು, ಸುಮಾರು 90 ಕಿ.ಮೀ. ಅಂತರ ಕಡಿಮೆಯಾಗಿ, ಪ್ರಯಾಣದ ಅವಧಿಯೂ ಕಡಿಮೆಯಾಗಲಿದೆ. ಆದರೆ, ಈಗ ಆರಂಭಗೊಂಡಿರುವ ಜಂಟಿ ಸರ್ವೇ ಕಾರ್ಯ ಮುಗಿದು, ಭೂಸ್ವಾಧೀನ ಪಡಿಸಿಕೊಂಡು, ರೈಲ್ವೆ ಇಲಾಖೆಗೆ ವಿಶೇಷ ಭೂಸ್ವಾಧೀನಾಧಿಕಾರಿಗಳು ಹಸ್ತಾಂತರಿಸಿದ ನಂತರವೇ ಈ ನೇರ ರೈಲು ಮಾರ್ಗದ ಕಾಮಗಾರಿ ಆರಂಭಗೊಳ್ಳಲಿದೆ.

ಯಾವ ಗ್ರಾಮದ ಎಷ್ಟು ಭೂಮಿ
ಬುಳ್ಳಾಪುರ 24-29 ಎಕರೆ,ಆನಗೋಡು 56-34.4 ಎಕರೆ,ನೀರ್ಥಡಿ 21-27 ಎಕರೆ,ಹೆಬ್ಬಾಳ್ 42-17.12 ಎಕರೆ,ಹುಣಸೆಕಟ್ಟೆ 21-28.4 ಎಕರೆ,ರಂಗವ್ವನಹಳ್ಳಿ 14-32 ಎಕರೆ,ಪಂಜೇನಹಳ್ಳಿ 10-6.8 ಎಕರೆ,ಚಿಕ್ಕನಹಳ್ಳಿ 5 ಗುಂಟೆ,ತೋಳಹುಣಸೆ 4-12.8 ಎಕರೆ, ಕರೆಲಕ್ಕೇನಹಳ್ಳಿ 17-26 ಎಕರೆ,ಚಟ್ಟೋಬನಹಳ್ಳಿ 21-21.8 ಎಕರೆ,ಕೊಗ್ಗನೂರು 9.8 ಗುಂಟೆ,ಹಾಲುವರ್ತಿ 1-32 ಎಕರೆ ,ಪಾಮೇನಹಳ್ಳಿ 14 ಗುಂಟೆ.

 

Recent Articles

spot_img

Related Stories

Share via
Copy link
Powered by Social Snap