ಸ್ವಾಮಿ ವಿವೇಕಾನಂದ ಜಯಂತಿ

0
3
ಹಾನಗಲ್ಲ :
 
       ಆದರ್ಶಗಳು ಮರೆಯಾಗಿ ಪ್ರಭಾವ ಪ್ರಚಾರಗಳೇ ವಿಜೃಂಭಿಸುತ್ತಿರುವ ಈ ಕಾಲದಲ್ಲಿ ಅನಾಥರನ್ನು ಭಗವಂತನ ಸ್ಥಾನದಲ್ಲಿ ಕಾಣುವ ಕಾಲಕ್ಕೆ ಹೊಸ ಆಯಾಮ ನೀಡಬೇಕಾಗಿದೆ ಎಂದು ಆರ್ಷ ವಿದ್ಯಾ ಕೇಂದ್ರದ ಸ್ವಾಮಿ ನಾರಾಯಣಾನಂದ ಸರಸ್ವತಿಜೀ ನುಡಿದರು.

ಹುಬ್ಬಳ್ಳಿಯ ಸೇವಾ ಭಾರತಿ ಟ್ರಸ್ಟ ಹಾಗೂ ದಯಾಶಂಕರ ಛಾತ್ರಾಲಯದ ಸಹಯೋಗದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ, ಛಾತ್ರಾಲಯದ ಮಕ್ಕಳಿಗೆ ಸಾಮೂಹಿಕ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಮಾತನಾಡಿದ ಅವರು, ಇಡೀ ಜಗತ್ತಿನಲ್ಲಿ ಹತ್ತು ಹಲವು ವಿಧದ ನಿರಾಶ್ರಿತರಿದ್ದಾರೆ.
       ಇದರಲ್ಲಿ ಅನಾಥರೂ ಕಣ್ಣಿಗೆ ಕಾಣುತ್ತಾರೆ. ಆದರೆ ಪುಟ್ಟ ಮಕ್ಕಳು ಅನಾಥರಾದರೆ ಅಂತಹ ಬದುಕು ನಿರರ್ಥಕವಾಗಿ ಅವಸಾನವಾಗುವ ಸಂದರ್ಭವೇ ಹೆಚ್ಚು. ಇದಕ್ಕೆಲ್ಲ ಧರ್ಮ ಹಾಗೂ ರಾಷ್ಟ್ರ ಧರ್ಮ ಗಟ್ಟಿಯಾಗಿ ನಿಲ್ಲಬೇಕು. ಸಮಾಜ ಸೇವೆ ವ್ಯಾಪಾರವಾಗಬಾರದು. ಶಿಕ್ಷಣದ ವ್ಯಾಪಾರೀಕರಣ ಬಡವರು ಅನಾಥ ಪ್ರತಿಭಾವಂತರು ನೆಲೆ ಕಾಣದೆ ವ್ಯವಸ್ಥೆಯಿಂದ ದೂರ ಉಳಿಯುವ ಪ್ರಸಂಗಗಳೆ ಹೆಚ್ಚು.
        ಜಗತ್ತನ್ನು ಬದಲಾಯಿಸಲು ಹೊರಟವರಿಗೆ ಮೊದಲು ನನ್ನ ಪರಿಸರ ಬದಲಾಯಿಸುವ ಇಚ್ಛಾಶಕ್ತಿ ಬೇಕು. ಇದೆಲ್ಲದಕ್ಕೂ ಹೆಚ್ಚಾಗಿ ನಾನು ಬದಲಾಗಬೇಕು, ನಾವೂ ಬದಲಾಗಬೇಕು ಆಗ ಸಮಷ್ಠಿ ಪ್ರಜ್ಞೆ ಯಶಸ್ವಿಯಾಗಿ ಸಮಾನತೆಯ ಸಮಾಜ ನಮ್ಮ ಕಣ್ಣ ಮುಂದೆ ಕಟ್ಟಿಕೊಳ್ಳಲು ಸಾಧ್ಯ. ಈ ದೇಶದ ಭವ್ಯ ಪರಂಪರೆಯನ್ನು ಕಟ್ಟಿರುವುದೇ ಸತ್ಸಮಾಜ ನಿರ್ಮಾಣದ ಮೂಲ ಧ್ಯೇಯದ ಮೇಲೆ. ಇದರ ಅರಿವು ಮೂಡಿಸುವುದೇ ಈಗಿನ ಆಧ್ಯತೆ ಎಂದರು.
 
         ದಯಾಶಂಕರ ಛಾತ್ರಾಲಯದ ವಿಶ್ವಸ್ಥ ಮಂಡಳಿ ಅಧ್ಯಕ್ಷ ಶ್ರೀಧರ ದೇಸಾಯಿ ಮಾತನಾಡಿ, ಮಕ್ಕಳನ್ನು ಶ್ರೀಮಂತರು, ಬಡವರು, ಅನಾಥರ ಮಕ್ಕಳೆಂದು ವಿಂಗಡಿಸುವ ಕಾಲ ಬದಲಾಗಿ ಈ ದೇಶದ ಭವಿಷ್ಯದ ಶಕ್ತಿಯಾಗಿ ಮಕ್ಕಳನ್ನು ಸಮಾನ ದೃಷ್ಟಿಯಲ್ಲಿ ನೋಡುವ ಅಗತ್ಯವಿದೆ. ಯಾವ ಮಗುವಿನಲ್ಲಿ ಎಂಥ ಪ್ರತಿಭೆ ಇದೆ ಎಂಬುದು ಆ ಮಗುವಿನ ಬೆಳವಣಿಗೆಯ ಜೊತೆ ಗುರುತಿಸಬಹುದು. ಅನಾಥ ಮಕ್ಕಳು ಸಮಾಜದಿಂದ ಪಡೆದದನ್ನು ಸಮಾಜಕ್ಕೆ ನೀಡುತ್ತಾರೆ. ದೇಶದ ಆಸ್ತಿಯಾಗುತ್ತಾರೆ. ಆದರೆ ಅಂತಹ ವಾತಾವರಣ ಸೌಲಭ್ಯ ನೀಡುವುದು ನಮ್ಮ ಕಣ್ಣ ಮುಂದಿನ ಸಮಾಜದ ಜವಾಬ್ದಾರಿ. ಎಲ್ಲದಕ್ಕೂ ಸರಕಾರದತ್ತ ಬೆರಳು ತೋರಿಸಿ ಮುಂದೆ ಸಾಗುವುದಲ್ಲ. ಎಲ್ಲರೂ ಕೈ ಜೋಡಿಸಿದರೆ ಎಲ್ಲವೂ ಯಶಸ್ವಿಯಾಗಲು ಸಾಧ್ಯ. ಅದಕ್ಕೆ ಮುನ್ನುಡಿಯಾಗುವ ಸಮಾರಂಭ ಇದಾಗಿದೆ ಎಂದರು.
        ಪ್ರದೀಪಕುಮಾರ ಮಹೇಂದ್ರಕರ ಪ್ರಾಸ್ತಾವಿಕ ಮಾತನಾಡಿ, ದಯಾಶಂಕರ ಛಾತ್ರಾಲಯ ಸೇವಾ ಭಾರತಿ ಟ್ರಸ್ಟಿಗೆ ಹಸ್ತಾಂತರವಾದ ನಂತರ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿದೆ. ಇಲ್ಲಿನ ಮಕ್ಕಳಿಂದ ಪ್ರತಿದಿನ ಭಗವದ್ಗೀತೆ ಪಠಣ ಮಾಡಿಸುವ ಮೂಲಕ ಧರ್ಮ ಜಾಗೃತಿ ಮೂಡಿಸಲಾಗುತ್ತಿದೆ. ಇದರೊಂದಿನ ಪರಿಸರ ಸ್ವಚ್ಛತೆ ಕಾರ್ಯಕ್ರಮ, ಬೀಜದುಂಡೆ ತಯಾರಿಸಿ ಅರಣ್ಯ ಪ್ರದೇಶದಲ್ಲಿ ಹಾಕುವುದು, ಶಾಲಾ ಕಾಲೇಜುಗಳಲ್ಲಿ ಗಿಡ ಮರಗಳನ್ನು ನೆಡುವುದು ಮೊದಲಾದ ಕಾರ್ಯಕ್ರಮಗಳನ್ನು ನಡೆಸುತ್ತಿದೆ.
 
        ಅನಾಥ ಮಕ್ಕಳೂ ಕೂಡ ತಮ್ಮ ಹುಟ್ಟು ಹಬ್ಬ ಆಚರಿಸಿಕೊಳ್ಳಲಿ ಎಂಬ ಸದುದ್ದೇಶದಿಂದ ಸ್ವಾಮಿ ವಿವೇಕಾನಂದರ ಜಯಂತಿಯಂದು ಸಾಮೂಹಿಕ ಹುಟ್ಟು ಹಬ್ಬ ಆಚರಿಸಲು ಮುಂದಾಗಿರುವುದಾಗಿ ಅವರು ತಿಳಿಸಿದರು.ವಕ್ತಾರರಾದ ಕೃಷ್ಣ ಕುಲಕರ್ಣಿ, ಡಾ.ವಿ.ಎಸ್.ಪುರಾಣಿಕಮಠ, ಉದ್ಯಮಿ ಆರ್.ಪ್ರತಾಪ, ಸುರೇಶ ರಾಯ್ಕರ ಮಾತನಾಡಿದರು. ರೇಖಾ ಶೆಟ್ಟರ ಸ್ವಾಗತಿಸಿದರು. ಕಿರಣ ಜವಳಿ ನಿರೂಪಿಸಿದರು. ಶ್ರವಣಕುಮಾರ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here