ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಂಡು ಉನ್ನತ ಸ್ಥಾನಕ್ಕೇರಿ

ದಾವಣಗೆರೆ:

      ದೈನಂದಿನ ಜೀವನದ ಸಮಸ್ಯೆಗಳ ನಡುವೆಯೂ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಂಡು ಉನ್ನತ ಸ್ಥಾನಕ್ಕೇರಬೇಕು ಎಂದು ಸಂಚಾರ ಠಾಣೆಯ ಪಿಎಸೈ ಆರ್.ಎಲ್.ಲಕ್ಷ್ಮೀಪತಿ ಸಲಹೆ ನೀಡಿದರು.

      ನಗರದ ಕುವೆಂಪು ಕನ್ನಡ ಭವನದಲ್ಲಿ ಬುಧವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ, ಸ್ಪರ್ಧಾತ್ಮಕ ಪರೀಕ್ಷೆಗಳ ಕೋಶ ಮತ್ತು ಉದ್ಯೋಗ ಮಾಹಿತಿ ಕೋಶದ ಸಂಯುಕ್ತ ಆಶ್ರಯದಲ್ಲಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲರ ಮನೆಯಲ್ಲೂ ಸಮಸ್ಯೆಗಳಿರುತ್ತವೆ. ಆದರೆ ಅದೇ ಕಾರಣದಿಂದ ಬೇಸತ್ತು ಸ್ಪರ್ಧಾತ್ಮಕ ಪರೀಕ್ಷೆಯಿಂದ ಹಿಂದೆ ಸರಿಯಬಾರದು. ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ದಿಟ್ಟತನದಿಂದ ಪರಿಹಾರ ಕಂಡುಕೊಳ್ಳಬೇಕು. ಒಳ್ಳೆಯ ಉದ್ಯೋಗ ಸಂಪಾದಿಸಿ ಎಲ್ಲಾ ಕಷ್ಟಗಳಿಗೂ ಮಂಗಳ ಹಾಡಬೇಕು ಎಂದರು.

       ಜೀವನದಲ್ಲಿ ಮೊದಲು ನಾವು ಏನಾಗಬೇಕೆಂಬ ಗುರಿ ಹೊಂದಿರಬೇಕು. ಗುರಿ ತಲುಪಲು ಸರಿಯಾದ ಪೂರ್ವ ತಯಾರಿ ನಡೆಸಬೇಕು. ಆಗ ಮಾತ್ರ ಯಶಸ್ಸು ಕಾಣಲು ಸಾಧ್ಯ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದ್ದು, ನಾಲ್ಕಾರು ತಿಂಗಳು ಕಾಲ ಕಠಿಣ ಪರಿಶ್ರಮದಿಂದ ಓದಿದರೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಸುಲಭವಾಗಿ ಎದುರಿಸಬಹುದು. ಪರೀಕ್ಷಾ ಸಂದರ್ಭದಲ್ಲಿ ಯಾವುದೇ ರೀತಿಯಲ್ಲಿ ಭಯಪಡದೆ, ಆತ್ಮವಿಶ್ವಾಸದಿಂದ ಅಧ್ಯಯನ ಮಾಡಬೇಕು ಎಂದು ಅವರು ಕಿವಿಮಾತು ಹೇಳಿದರು.

      ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಪ್ರಕಾಶ ಹಲಗೇರಿ ಮಾತನಾಡಿ, ಜಾಗತೀಕರಣ ಸಂದರ್ಭದಲ್ಲಿ ಸ್ಪರ್ಧೆ ಮತ್ತು ಸಂಘರ್ಷ ಪ್ರಮುಖ ಅಂಶವಾಗಿದೆ. ಈಗ ಉದ್ಯೋಗಗಳು ಸೃಷ್ಟಿಯಾಗಿದ್ದರೂ, ಅಗತ್ಯಕ್ಕೆ ತಕ್ಕಂತೆ ಕುಶಲಕರ್ಮಿಗಳು ಸಿಗುತ್ತಿಲ್ಲ. ಕೌಶಲ್ಯ ಮತ್ತು ಯೋಗ್ಯತೆ ಇದ್ದವರಿಗೆ ಖಂಡಿತವಾಗಿಯೂ ಒಳ್ಳೆಯ ಅವಕಾಶಗಳು ಅರಸಿಕೊಂಡು ಬರುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವುದಕ್ಕೆ ಸಿದ್ಧರಾಗಬೇಕೆಂದು ಕರೆ ನೀಡಿದರು.

     ಕಾಲೇಜಿನ ಪ್ರಾಂಶುಪಾಲ ಶಂಕರ್ ಆರ್.ಶೀಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪಿಡಿಓ ಎಸ್.ನಾಗರಾಜ್, ನಿವೃತ್ತ ಉಪನ್ಯಾಸಕ ಮಂಜುನಾಥ್ ಎನ್.ಮರಿಗೌಡ್ರು, ಪತ್ರಾಂಕಿತ ವ್ಯವಸ್ಥಾಪಕ ಎಸ್.ಆರ್.ಭಜಂತ್ರಿ, .ಭೀಮಣ್ಣ ಸುಣಗಾರ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap