ಪಾಟೀಲ್ ವಿರುದ್ಧ ಗುಡುಗಿದ ಲಕ್ಷ್ಮಿ ಹೆಬ್ಬಾಳ್ಕರ್

ದಾವಣಗೆರೆ:

      ಅಣ್ಣನವರ ಮಾತಿಗೆ ನಾನು ಉತ್ತರ ಕೊಡಲ್ಲ. ನಾಲ್ಕು ತಿಂಗಳ ಹಿಂದೆಯೇ ಕ್ಷೇತ್ರದ ಜನ ಉತ್ತರ ಕೊಟ್ಟಿದ್ದಾರೆ. ಇನ್ನೂ ಉತ್ತರ ಬೇಕೆಂದರೆ, ಇನ್ನು ನಾಲ್ಕೂವರೆ ವರ್ಷದ ಮೇಲೆ ನಾನೇ ಉತ್ತರ ನೀಡುತ್ತೇನೆ ಎಂದು ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಾಜಿ ಶಾಸಕ ಸಂಜಯ್ ಪಾಟೀಲ್‍ಗೆ ಟಾಂಗ್ ನೀಡಿದರು.

      ಹರಿಹರದ ಪಂಚಮಸಾಲಿ ಪೀಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬೆಳಗಾವಿ ಜಿಲ್ಲೆಯ ರಾಜಕಾರಣಿಗಳೂ ಸೇರಿದಂತೆ ಎಲ್ಲರಿಗೂ ಅಣ್ಣನವರ ಭಾಷೆ, ಸಂಸ್ಕøತಿ ಬಗ್ಗೆ ಗೊತ್ತಿದೆ. ಅಣ್ಣನವರಿಗೆ ನಾನು ಉತ್ತರಿಸುವುದಿಲ್ಲ. ಒಂದು ವೇಳೆ ಉತ್ತರ ಬೇಕೆಂದರೆ ನಾಲ್ಕೂವರೆ ವರ್ಷದ ನಂತರ ನನ್ನ ವಿರುದ್ಧ ಚುನಾವಣೆಗೆ ಸ್ಪರ್ಧಿಸಲಿ. ಆಗ ಕ್ಷೇತ್ರದ ಜನರೇ ಅಣ್ಣನವರಿಗೆ ಮತ್ತೊಮ್ಮೆ ಉತ್ತರವನ್ನೂ ನೀಡುತ್ತಾರೆ ಎಂದು ಮಾರ್ಮಿಕವಾಗಿ ನುಡಿದರು.

       ಬಿಜೆಪಿಯವರು 30 ಕೋಟಿ ರೂ. ಹಾಗೂ ಸಚಿವ ಸ್ಥಾನದ ಆಮಿಷವನ್ನು ತಮಗೆ ಒಡ್ಡಿದ್ದ ಬಗ್ಗೆ ನನ್ನ ಪಕ್ಷದ ವರಿಷ್ಟರೊಂದಿಗೆ ಚರ್ಚಿಸುತ್ತೇನೆ. ಬಿ.ಎಸ್.ಯಡಿಯೂರಪ್ಪನವರ ಬಗ್ಗೆ ನನಗೆ ಅಭಿಮಾನವಿದೆ. ಸಮಯ ಬಂದಾಗ ಅದಕ್ಕೆ ನಾನೇ ಉತ್ತರ ನೀಡುತ್ತೇನೆ. ಅಣ್ಣನವರ ಮಾತು ಮಾತಿಗೂ ಉತ್ತರಿಸುವ ಅಗತ್ಯವೂ ಇಲ್ಲ ಎಂದರು.

       ಪಂಚಮಸಾಲಿ ಸಮಾಜದ ದಿಟ್ಟ ಹೆಣ್ಣು ಮಗಳು ನಾನು. ನಾನಾಗಿ ಯಾರನ್ನೂ ತಡವುವುದಿಲ್ಲ. ಸುಖಾಸುಮ್ಮನೇ ನನ್ನನ್ನು ಯಾರಾದರೂ ತಡೆದರೆ ಸುಮ್ಮನಿರುವುದೂ ಇಲ್ಲ. ವೀರ ರಾಣಿ ಕಿತ್ತೂರು ಚನ್ನಮ್ಮ, ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಸಹ ಬೆಳಗಾವಿಯವರು. ಹೆಣ್ಣು-ಗಂಡು ಎಂಬ ಭೇದ ಮಾಡದೇ, ಸಮಾನವಾಗಿ ಬೆಳೆಸಿದ ನೆಲ ಬೆಳಗಾವಿ. ಬೆಳಗಾವಿ ರಾಜಕೀಯ ಸಧ್ಯಕ್ಕೆ ತಣ್ಣಗಾಗಿದೆ. ಕಾಂಗ್ರೆಸ್ ಪಕ್ಷದ ವರಿಷ್ಟರೂ ಅಲ್ಲಿಗೆ ಬಂದು, ನಮ್ಮೆಲ್ಲರ ಜೊತೆಗೆ ಮಾತನಾಡಿ ಎಲ್ಲಾ ವಿಚಾರಕ್ಕೂ ಅಂತ್ಯ ಹಾಡಿದ್ದಾರೆ. ನಾನು ಬೇರೆಯವರ ಮನೆ ಇಣುಕಿ ನೋಡುವುದಿಲ್ಲ. ನನ್ನ ಮನೆಯಲ್ಲಿ ನಾನು ಜೀವನ ಮಾಡಲು ಬಿಡಿ. ನನ್ನ ತಂಟೆಗೆ ಬಂದರೆ ಸುಮ್ಮನಿರುವವಳೂ ನಾನಲ್ಲ ಎಂದು ಪರೋಕ್ಷವಾಗಿ ಜಾರಕಿಹೊಳಿ ಬ್ರದರ್ಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap