ಲೋಕಸಭಾ ಚುನಾವಣೆ ಹಿನ್ನಲೆ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ.

ಕೂಡ್ಲಿಗಿ:

         ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯನ್ನು ಸುಗಮವಾಗಿ ನಡೆಸಲು ಸಂಬಂಧಿಸಿದ ಅಧಿಕಾರಿಗಳು ಮಾನಸಿಕವಾಗಿ ಸಿದ್ದರಾಗಬೇಕು ಎಂದು ಸಹಾಯಕ ಚುನಾವಣೆ ಅಧಿಕಾರಿ ಮೋತಿಲಾಲ್ ಕೃಷ್ಣ ಲಮಾಣಿ ತಿಳಿಸಿದರು.

         ಪಟ್ಟಣದ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಗುರುವಾರ ನಡೆದ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತ, ಕಳೆದ ವಿಧಾನಸಭೆ ಚುನಾವಣೆಯಲ್ಲಿರುವಂತೆಯೇ ಕೂಡ್ಲಿಗಿ ಕ್ಷೇತ್ರದಲ್ಲಿ 229 ಮತಗಟ್ಟೆಗಳಿದ್ದು, ಆಗ ಕರ್ತವ್ಯ ನಿರ್ವಹಿಸಿದ ಅಧಿಕಾರಿಗಳೇ ಇದ್ದಾರೆ ಅಥವಾ ಒಂದಿಬ್ಬರು ಬದಲಾವಣೆಯಾಗಿರಬಹುದು. ಹಾಗಾಗಿ ಚುನಾವಣೆ ಕರ್ತವ್ಯದ ಬಗ್ಗೆ ಎಲ್ಲ ಅಧಿಕಾರಿಗಳಿಗೂ ಮಾಹಿತಿ ಇರುವುದರಿಂದ ಯಾವುದೇ ಲೋಪವಾಗದಂತೆ ತಮಗೆ ವಹಿಸುವ ಕರ್ತವ್ಯ ನಿರ್ವಹಿಸಬೇಕು ಎಂದು ಹೇಳಿದರು.

         ಮತದಾನ ನಡೆಯುವ ಎಲ್ಲ ಮತಗಟ್ಟೆಗಳಲ್ಲಿ ಮೂಲ ಸೌಕರ್ಯಗಳಾದ ವಿದ್ಯುತ್, ಕುಡಿವ ನೀರು, ಶೌಚಾಲಯ ಹಾಗೂ ಇತರ ಸೌಲಭ್ಯಗಳು ಇರುವ ಬಗ್ಗೆ ಸಂಬಂಧಿಸಿದ ಅಧಿಕಾಗಳು ಪರಿಶೀಲನೆ ಮಾಡಬೇಕು ಜತೆಗೆ ಮತದಾನ ಮಾಡಲು ಬರುವ ವಿಕಲಚೇತನರು ಮತ್ತು ವೃದ್ಧರಿಗೆ ಅನುಕೂಲವಾಗುವಂತೆ ಮತ ಕೇಂದ್ರದಲ್ಲಿ ರ್ಯಾಂಪ್ ಇರುವ ಬಗ್ಗೆ ಗಮನಿಸಬೇಕು ಒಂದು ವೇಳೆ ಯಾವುದಾದರೂ ಸೌಕರ್ಯಗಳು ಇಲ್ಲದಿದ್ದರೆ ಕೂಡಲೆ ಮಾಡಿಸುವಂತೆ ಸೂಚನೆ ನೀಡಿದರು.

        ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 3 ಚಕ್ ಪೋಸ್ಟ್ ಗಳನ್ನು ತೆರೆಯಲಾಗಿದ್ದು, ಒಬ್ಬ ಅಧಿಕಾರಿ ಮತ್ತು ಇಬ್ಬರು ಪೊಲೀಸರು ಇದ್ದಾರೆ. ಇವರು ಕಟ್ಟುನಿಟ್ಟಾಗಿ ತಮಗೆ ವಹಿಸಿರುವ ಕೆಲಸ ಮಾಡುತ್ತಿರುವ ಬಗ್ಗೆ ಸಂಬಂಧಿಸಿದ ಮೇಲಾಧಿಕಾರಿಗಳು ಗಮನಿಸುವಂತೆ ಸೂಚಿಸಿ, ಚಕ್‍ಪೋಸ್ಟ್‍ಗಳಲ್ಲಿ ಸಿಸಿ ಕ್ಯಾಮರ ಹಾಕಿಸುವಂತೆ ತಹಸೀಲ್ದಾರರಿಗೆ ತಿಳಿಸಿದರು.

        ಈಗಾಗಲೆ ಇಲ್ಲಿ ಕೆಲಸ ನಿರ್ವಹಿಸುವ ಅಧಿಕಾರಿಗಳಿಗೆ ಕೆಲವು ಚಕ್ ಪೋಸ್ಟ್‍ಗಳು ದೂರ ಆಗುವುದರಿಂದ ಅಂತಹ ಅಧಿಕಾರಿಗಳಿಗೆ ಸಮೀಪದ ಚಕ್ ಪೋಸ್ಟ್‍ಗಳಿಗೆ ನಿಯೋಜಿಸಲು ಈಗಾಗಲೆ ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದು, ಪರಿಶೀಲನೆ ಹಂತದಲ್ಲಿದೆ ಎಂದು ತಹಶೀಲ್ದಾರ್ ಎಲ್. ಕೃಷ್ಣಮೂರ್ತಿ ಹೇಳಿದರು.

         ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಜಿ.ಎಂ. ಬಸಣ್ಣ. ಸಿಪಿಐ ನಾಹೀಂ ಆಹಮದ್, ಪಟ್ಟಣ ಪಂಚಾಯ್ತಿ ಮುಖ್ಯಧಿಕಾರಿ ಉಮೇಶ್ ಹಿರೇಮಠ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು, ಕಂದಾಯ ಇಲಾಖೆ ಸಿಬ್ಬಂದಿ ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap