ಎಸ್ ಬಿಎಂ ನಾಮಾವಶೇಷ ಮಾಡಿದ ಬಿಜೆಪಿಗೆ ಬುದ್ದಿ ಕಲಿಸಿ

0
5

ಶಿರಾ:

       ಸರ್ ಎಂ.ವಿಶ್ವೇಶ್ವರಯ್ಯ, ನಾಲ್ವಡಿ ಕೃಷ್ಣರಾಜ ಓಡೆಯರ್ ಸ್ಥಾಪಿಸಿ ಕನ್ನಡಿಗರ ಹೆಗ್ಗುರತಾಗಿದ್ದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರನ್ನು ನಾಮಾವಶೇಷ ಮಾಡಿದ ಬಿಜೆಪಿ ಸರ್ಕಾರಕ್ಕೆ ಮತನೀಡದೆ ಬುದ್ದಿ ಕಲಿಸಿ ಎಂದು ನಿವೃತ್ತ ಪ್ರಾಂಶುಪಾಲ ಪ್ರೊ.ಕಟಾವೀರನಹಳ್ಳಿ ನಾಗರಾಜು ಹೇಳಿದರು.

       ಶಿರಾ ನಗರದ ಅಂಬೇಡ್ಕರ್ ಪಾರ್ಕ್ ನಲ್ಲಿ ಮಂಗಳವಾರ ‘ಜನಗಣಮನ-ನಾವೂ ದೇಶವಾಸಿಗಳು’ ಸಂಘಟನೆಯಡಿ ನಡೆದ ಮತದಾರರ ಜಾಗೃತಿಗೆ ಜಾತ್ಯಾತೀತರ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಸ್ ಬಿಎಂ ಬ್ಯಾಂಕ್ ಜೊತೆ ಕರಾವಳಿ ಕನ್ನಡಿಗರ ವಿಜಯ ಬ್ಯಾಂಕನ್ನು ನಾಮವಾಶೇಷ ಮಾಡಿದರು ಎಂದರು.

       ಸಂವಿಧಾನವನ್ನೇ ಬದಲಾಯಿಸುವ ಮಾತುಗಳನ್ನಾಡುತ್ತಿರುವ ಬಿಜೆಪಿಯನ್ನು ಮೂಲೆಗುಂಪು ಮಾಡುವ ಅವಕಾಶ ಮತದಾರರಿಗೆ ಬಂದಿದ್ದು, ಬಿಜೆಪಿ ವಿರುದ್ಧ ಯಾವ ಪಕ್ಷಕ್ಕಾಗದರೂ ಮತ ಚಲಾಯಿಸಿ ಸಂವಿಧಾನ ಉಳಿಸಬೇಕು ಎಂದು ಮನವಿ ಮಾಡಿದರು.

        ಕಳೆದ ಐದು ವರ್ಷದಲ್ಲಿ ರೈತ ವಿರೋಧಿ ಧೋರಣೆ ಅನುಸರಿಸುತ್ತಲೇ ಬಂದ ಮೋದಿ ಸರ್ಕಾರದ ಕೃಷಿ ಸಚಿವರೊಬ್ಬರು ಲೋಕಸಭೆಯಲ್ಲಿ, ಆತ್ಮಹತ್ಯೆ ಮಾಡಿಕೊಂಡ ರೈತರು ಷಂಡರು ಎಂದು ಹೇಳಿಕೆ ನೀಡುವ ಮೂಲಕ ರೈತಕುಲವನ್ನು ಅವಮಾನಿಸಿದ್ದರು. ಆದ್ದರಿಂದ ರೈತರು ಬಿಜೆಪಿಗೆ ಮತ ಚಲಾಯಿಸಬಾರದು ಎಂದು ಕವಿ ಗೋಮಾರದಹಳ್ಳಿ ಮಂಜುನಾಥ್ ಹೇಳಿದರು.

         ಈ ಬಾರಿ ಮೋದಿಗೆ ಬಹುಮತ ಬಂದರೆ ಮುಂದೆ ಚುನಾವಣೆ ನಡೆಯುವುದಿಲ್ಲ ಎಂದ ತಾಲ್ಲೂಕು ದಲಿತ ಸಂಘರ್ಷ ಸಮಿತಿ ಸಂಚಾಲಕ ಲಕ್ಷ್ಮೀಕಾಂತ್, ಸಂವಿಧಾನವನ್ನೇ ತಿದ್ದುಪಡಿ ಮಾಡಿ ಮೋದಿ ಸರ್ವಾಧಿಕಾರಿಯಾಗಲಿದ್ದಾರೆ ಎಂದು ಭವಿಷ್ಯನುಡಿದರು.

        ರೈತ ಸಂಘದ ಮುಖಂಡರಾದ ಗೌಡಗೆರೆ ವೆಂಕಟೇಶ್, ಎಸ್.ಗೋವಿಂದಪ್ಪ, ಕೆ.ಮುಕುಂದಪ್ಪ, ದಲಿತ ಸಂಘರ್ಷ ಸಮಿತಿ ಮುಖಂಡರಾದ ಗಜಮಾರನಹಳ್ಳಿ ನಾಗರಾಜು, ಲೋಕೇಶ್, ಜನಗಣಮನ-ನಾವೂ ದೇಶವಾಸಿಗಳು ಸಂಘಟನೆ ಸಂಚಾಲಕರಾದ ಮುಬಾರಕ್ ಬೆಳ್ಳಾರ, ಡಿ.ವಿವೇಕಾನಂದ, ಆರ್.ಮಂಜುನಾಥ್ ಹಾಗೂ ಗೋಮಾರದಹಳ್ಳಿ ತಿಮ್ಮರಾಜು, ರಾಜಣ್ಣ, ಜಗನ್ನಾಥ ಮತ್ತಿತರರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here