ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕೊರತೆಯಾಗಲು ಶಿಕ್ಷಕರೆ ಮುಖ್ಯ ಕಾರಣ: ಶಾಸಕ ಎಂ.ಚಂದ್ರಪ್ಪ ವಿಷಾದ.

0
13

ಹೊಳಲ್ಕೆರೆ:

        ನನ್ನ ಕ್ಷೇತ್ರದಲ್ಲಿ 400ಕ್ಕೂ ಹೆಚ್ಚು ಸರ್ಕಾರಿ ಕನ್ನಡ ಶಾಲೆಗಳಿದ್ದು ಈ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ದಿನೇ ದಿನೇ ತುಂಬಾ ಕ್ಷಿಣಿಸುತ್ತಿದೆ. ಇದಕ್ಕೆ ಶಿಕ್ಷಕರೆ ಹೊಣೆ ಎಂದು ಶಾಸಕ ಎಂ.ಚಂದ್ರಪ್ಪ ವಿಷಾದ ವ್ಯಕ್ತಪಡಿಸಿದರು.

        ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಮತ್ತು ವಿವಿಧ ಕನ್ನಡ ಸಂಘಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು

        ತಾಲ್ಲೂಕಿನಲ್ಲಿ ಹೆಚ್ಚುವರಿ ಶಿಕ್ಷಕರು ಹೆಚ್ಚಾಗುತ್ತಿದ್ದಾರೆ. ಇದಕ್ಕೆ ಕಾರಣ ಮಕ್ಕಳ ಸಂಖ್ಯೆ ಗಣನಿಯವಾಗಿ ಇಳಿಮುಖವಾಗುತ್ತಿರುವುದೆ ಮುಖ್ಯ ಕಾರಣ. ಸರ್ಕಾರ ಶಿಕ್ಷಕರಿಗೆ ಸಾಕಷ್ಟು ಮೂಲಭೂತ ಸವಲತ್ತುಗಳನ್ನು ಕಲ್ಪಿಸಿದ್ದರು ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕೊರತೆ ಎಲ್ಲಿ ನೋಡಿದರು ಎದ್ದು ಕಾಣುತ್ತಿದೆ ಎಂದು ತಿಳಿಸಿದ ಶಾಸಕರು ಮುಂದೆ ಹಾಲಿ ಕರ್ತವ್ಯದಲ್ಲಿರುವ ಶಿಕ್ಷಕರು ಸಹ ಮುಂದೆ ಹೆಚ್ಚುವರಿ ಶಿಕ್ಷಕರಾಗುತ್ತಾರೆ ಎಂಬ ಎಚ್ಚರಿಕೆ ಕೊಡಬೇಕಾಗುತ್ತದೆ. ನನ್ನ ಕ್ಷೇತ್ರದಿಂದ ಬೇರೆ ಕಡೆ ಶಿಕ್ಷಕರನ್ನು ಕಳುಹಿಸಲು ಮನಸ್ಸಿಗೆ ತುಂಬಾ ನೋವುಗುತ್ತಿದೆ ಎಂದು ಶಾಸಕರು ತಿಳಿಸಿ ಶೇಕಡಾ 50 ರಷ್ಟು ಪ್ರಮಾಣದಲ್ಲಿರುವ ಮಹಿಳಾ ಶಿಕ್ಷಕರು ಎಲ್ಲಾ ಮಕ್ಕಳನ್ನು ತಮ್ಮ ಮಕ್ಕಳಂತೆ ಕಾಣಬೇಕೆಂದು ತಿಳಿಸಿದರು.

      ಮುಂದೆ ಕ್ಷೇತ್ರದ ಎಲ್ಲಾ ಸರ್ಕಾರಿ ಶಾಲೆಗಳನ್ನು ಅಭಿವೃಧ್ದಿ ಮಾಡುತ್ತೇನೆ. ಇದು ನನ್ನ ಕರ್ತವ್ಯವಾಗಿದೆ. ಇದರಲ್ಲಿ ಶಿಕ್ಷಕರ ಪಾತ್ರ ಸಹ ಬಹಳ ಮುಖ್ಯ ಎಂಬುದನ್ನು ಶಿಕ್ಷಕರು ಅರಿತುಕೊಳ್ಳಬೇಕು ಎಂದು ಶಾಸಕರು ತಾಕೀತು ಮಾಡಿದರು.

        ಕನ್ನಡ ನಾಡ ನುಡಿ ಇಡೀ ರಾಷ್ಟ್ರದ ಗಮನವನ್ನು ಸೆಳೆದಿದೆ. ಹರಿದು ಹೋಗಿದ್ದ ಕನ್ನಡ ನಾಡನ್ನು ಒಂದು ಗೂಡಿಸುವಲ್ಲಿ ಮಾಜಿ ಮುಖ್ಯ ಮಂತ್ರಿ ಎಸ್.ನಿಜಲಿಂಗಪ್ಪ ಸೇರಿದಂತೆ ಅನೇಕ ಮಹಾತ್ಮರ ಹೋರಾಟ ಪರಿಶ್ರಮ ಕನ್ನಡ ಭಾಷೆ ಮೇಲಿನ ಪ್ರೀತಿಯಿಂದ ಅಖಂಡ ಕರ್ನಾಟಕವಾಯಿತು. ಕನ್ನಡ ಭಾಷೆಗೆ 8 ಜ್ಞಾನ ಪೀಠ ಪ್ರಶಸ್ತಿ ಬಂದಿದೆ. ಪ್ರತಿಯೊಬ್ಬ ಕನ್ನಡಿಗರು ಕನ್ನಡಕ್ಕಾಗಿ ದುಡಿದ ಶ್ರಮಿಸಿದ ಮಹಾ ಕವಿಗಳನ್ನು ಸ್ಮರಿಸಬೇಕು. ಅವರು ನೀಡಿರುವ ಕನ್ನಡ ಸೊಗಸನ್ನು ಅನುಭವಿಸಬೇಕು. ಕನ್ನಡ ಭಾಷೆಯನ್ನು ರಕ್ಷಣೆ ಮಾಡಬೇಕು ಮತ್ತು ಆರ್ಥಿಕ, ಸಾಮಾಜಿಕ ಅಭಿವೃಧ್ದಿಗೆ ಪ್ರತಿಯೊಬ್ಬ ಕನ್ನಡಿಗೆ ಹೆಚ್ಚು ಒತ್ತು ನೀಡಬೇಕು ಎಂದು ಶಾಸಕರು ಕರೆ ನೀಡಿದರು.

        ಕಾರ್ಯಕ್ರಮವನ್ನು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯ ಅಧ್ಯಕ್ಷರಾದ ತಹಶೀಲ್ದಾರ್ ಹೆಚ್.ಎಂ.ರಮೇಶ್ ಉದ್ಘಾಟಿಸಿ ಮಾತನಾಡಿ ನಮ್ಮ ಕನ್ನಡ ನಾಡು ಬೇರೆ ಬೇರೆ ಪ್ರಾಂತ್ಯಗಳಿಗೆ ಹರಿದು ಹಂಚು ಹೋಗಿತ್ತು. 1956ರಲ್ಲಿ ಸಂವಿಧಾನದ ಪ್ರಕಾರ ಭಾರತ ಒಕ್ಕೂಟದಲ್ಲಿ ಕರ್ನಾಟಕ ಪ್ರತ್ಯೇಕ ರಾಜ್ಯವಾಯಿತು. ಕನ್ನಡ ಸಾಹಿತ್ಯ, ಕಲೆ, ಸಂ ತಿ ಅದ್ಭುತವಾಗಿ ಬೆಳೆಯಲು ಅನೇಕ ಕವಿಗಳು, ರಾಜಕಾರಣಿಗಳು ಕನ್ನಡ ಅಭಿಮಾನಿಗಳು ಕಾರಣವಾಗಿದೆ. 1973ರಲ್ಲಿ ಮೈಸೂರು ರಾಜ್ಯ ಕರ್ನಾಟಕ ಎಂದು ಮಾಜಿ ಮುಖ್ಯ ಮಂತ್ರಿ ಡಿ.ದೇವರಾಜು ಅರಸು ರವರು ಘೋಷಣೆ ಮಾಡಿದರು. ಕನ್ನಡ ಭಾಷೆಗೆ ವಿಶೇಷ ಸ್ಥಾನಮಾನ ಇದೆ. ಪ್ರತಿಯೊಬ್ಬ ಕನ್ನಡಿಗರು ಕನ್ನಡ ನಾಡು ನುಡಿಯ ಬಗ್ಗೆ ಅಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದು ಪ್ರತಿಪಾದಿಸಿದರು.

      ಮುಖ್ಯ ಅತಿಥಿಗಳಾಗಿ ಪ.ಪಂ. ಅಧ್ಯಕ್ಷೆ ಸವಿತಾ ಬಸವರಾಜ್, ತಾಲ್ಲೂಕು ಕ.ಸಾಪ ಅಧ್ಯಕ್ಷ ಲೋಕೇಶ್, ಕ.ರ.ವೇ ಅಧ್ಯಕ್ಷ ಹನುಮಂತಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಶಿವಮೂರ್ತಿ, ಪ.ಪಂ ಸದಸ್ಯರಾದ ಕೆ.ಸಿ.ರಮೇಶ್, ಹಬೀಬುಲ್ಲಾ ರಹಮಾನ್, ಇಂದೂಧರ ಮೂರ್ತಿ ಮತ್ತು ಸರ್ಕಾರಿ ಇಲಾಖೆಗಳ ಎಲ್ಲಾ ಮುಖ್ಯಸ್ಥರು ಸಂಘ ಸಂಸ್ಥೆಗಳು ಗಣ್ಯರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

      ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕತಿಕ ಕಾರ್ಯಕ್ರಮಗಳು ನಡೆದವು. ಬೆಳಿಗ್ಗೆ 9 ಗಂಟೆಯಿಂದ ತಾಲ್ಲೂಕು ಕಚೇರಿಯಿಂದ ಕನ್ನಡ ಭುವನೇಶ್ವರಿಯ ಭಾವ ಚಿತ್ರವನ್ನು ವಿವಿಧ ವಾದ್ಯಗೋಷ್ಠಿಗಳ ಮೂಲಕ ಪಟ್ಟಣದ ಮುಖ್ಯ ಬೀದಿಗಳಲ್ಲಿ ವಿಜೃಂಬಣೆಯಿಂದ ಮೆರವಣಿಗೆ ನಡೆಯಿತು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ 26 ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

LEAVE A REPLY

Please enter your comment!
Please enter your name here