ತರಳಬಾಳು ಮಠದಿಂದ ಗೋಶಾಲೆ ಆರಂಭ..!!

ಸಿರಿಗೆರೆ:

      ಸಿರಿಗೆರೆಯ ತರಳಬಾಳು ಮಠವು ಬರದ ಸಂದರ್ಭದಲ್ಲಿ ಜಾನುವಾರು ರಕ್ಷಣೆಗಾಗಿ ಆರಂಭಿಸಿರುವ ಗೋಶಾಲೆಗೆ ತರಳಬಾಳು ಹುಣ್ಣಿಮೆಯಲ್ಲಿ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಗೋಶಾಲೆಗೆ ಚಾಲನೆ ನೀಡಿದರು.ಸಿರಿಗೆರೆ ಸಮೀಪದ ಶಾಂತಿವನದಲ್ಲಿ ತಾತ್ಕಾಲಿಕ ಗೋಶಾಲೆ ಸಜ್ಜಾಗಿದ್ದು, ಸುಮಾರು 100 ಎಕರೆಯಲ್ಲಿ 2 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿಸಿರುವ ಶಾಶ್ವತ ಗೋಶಾಲೆಗೂ ಇದೇ ಸಂದರ್ಭದಲ್ಲಿ ಶಂಕುಸ್ಥಾಪನೆ ನೆರವೇರಿಸಲಾಯಿತು.

       ಗೋಶಾಲೆಗೆ ಚಾಲನೆ ನೀಡಿ ಮಾತನಾಡಿದ ತರಳಬಾಳು ಜಗದ್ಗುರು ಡಾ.ಶ್ರೀಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಬರ ಪರಿಸ್ಥಿತಿ ರೈತರನ್ನು ನಿರಂತರವಾಗಿ ಕಾಡುತ್ತಿದೆ. ನೀರು, ಮೇವು ಕೊರತೆ ಉಂಟಾಗಿ ಜಾನುವಾರು ಮಾರಾಟ ಮಾಡುವ ಸ್ಥಿತಿಗೆ ರೈತರು ತಲುಪಿದ್ದಾರೆ. ಇದಕ್ಕೆ ಶಾಶ್ವತ ಪರಿಹಾರ ಕಂಡು ಕೊಳ್ಳುವ ಉದ್ದೇಶದಿಂದ ಗೋಶಾಲೆ ತೆರೆಯಲಾಗುತ್ತಿದೆ ಎಂದು ಹೇಳಿದರು.

        ದೊಡ್ಡಕಾವಲಿನಲ್ಲಿ ಕಾಯಂ ಗೋಶಾಲೆ ನಿರ್ಮಿಸುವ ಉದ್ದೇಶವಿತ್ತು. ಅದು ತಕ್ಷಣಕ್ಕೆ ಸಾಧ್ಯವಾಗದ ಕಾರಣ ಶಾಂತಿವನದಲ್ಲಿ ಸ್ಥಾಪಿಸಲಾಗಿದೆ. ಪ್ರತಿ ಶೆಡ್‍ನಲ್ಲಿ 80 ಜಾನುವಾರು ತಂಗಲು ಸಾಧ್ಯವಿದೆ. ಗೋಶಾಲೆ ಸೇರುವ ಜಾನುವಾರು ಆಧಾರದ ಮೇರೆಗೆ ಶೆಡ್ ನಿರ್ಮಾಣ ಮಾಡಲಾಗುತ್ತದೆ. ರಾಜ್ಯದ ಯಾವ ಭಾಗದಲ್ಲಿ ಬರ ಬಂದರೂ ಜಾನುವಾರಿಗೆ ಗೋಶಾಲೆ ಆಶ್ರಯ ಕಲ್ಪಿಸಲಿದೆ ಎಂದು ಹೇಳಿದರು.

         ರೈತರಿಗೆ ಜಾನುವಾರು ಮೇಲೆ ಪ್ರೀತಿ ಇದೆ. ಆದರೆ, ಅವರು ಅಸಹಾಯಕರಾಗಿದ್ದಾರೆ. ಮೇವು ಮತ್ತು ನೀರು ಒದಗಿಸಿದರೆ ರೈತರು ಜಾನುವಾರು ಮಾರಾಟ ಮಾಡುವುದಿಲ್ಲ ಎಂಬ ಕಾರಣದಿಂದ ಗೋಶಾಲೆ ಆರಂಭಿಸಲಾಗಿದೆ ಎಂದರು.ಚುನಾವಣೆಯಲ್ಲಿ ಆಮಿಷಗಳಿಗೆ ಬಲಿಯಾಗದಂತೆ ಭಕ್ತರಿಗೆ ಬುದ್ದಿವಾದ ಹೇಳುವ ಮಠವೇ, ಅಭ್ಯರ್ಥಿಯಿಂದ ದಾನ ಪಡೆಯುವುದು ತಪ್ಪು ಅನಿಸಿದ ಕಾರಣಕ್ಕಾಗಿಯೇ, ದಾನ ನೀಡಲು ಬಂದಿದ್ದ ಭಕ್ತನಿಂದಲೇ ಗೀರ್ ತಳಿಯ ಎರಡು ಗೋವುಗಳನ್ನು 1.5 ಲಕ್ಷಕ್ಕೆ ಖರೀದಿಸಿದೆವು ಎಂದು ನುಡಿದರು.

       ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ಅನೇಕರು ಸರ್ಕಾರದ ಅನುದಾನ ಪಡೆದು ಗೋಶಾಲೆ ತೆರೆಯುತ್ತಾರೆ. ಆದರೆ, ಸಿರಿಗೆರೆ ಮಠ ಭಕ್ತರ ನೆರವಿನಿಂದ ಜಾನುವಾರು ರಕ್ಷಣೆಗೆ ಮುಂದಾಗಿದೆ. ರೈತರ ಬಾಳು ಹಸನು ಮಾಡಲು ಶ್ರೀಮಠ ಶ್ರಮಿಸುತ್ತಿದೆ ಎಂದರು.ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ತಿಪ್ಪೇಸ್ವಾಮಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಡಿ.ಎಂ. ಲಿಂಗರಾಜ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಸವರಾಜಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪಾ ಪ್ರಕಾಶ್ ಮತ್ತಿತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap