ಧರ್ಮ ಹಾಗೂ ನಂಬಿಕೆ ವಿಚಾರದಲ್ಲಿ ನ್ಯಾಯ ನೀಡುವುದು ಕಷ್ಟ

ಬೆಂಗಳೂರು

        ಧರ್ಮ ಹಾಗೂ ನಂಬಿಕೆ ವಿಚಾರದಲ್ಲಿ ನ್ಯಾಯ ನೀಡುವುದು ಕಷ್ಟವಾಗಿದೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ಅಭಿಪ್ರಾಯ ಪಟ್ಟಿದ್ದಾರೆ.

         ಕೃಷ್ಣರಾಜನಗರದ ವೇದಾಂತಭಾರತೀ ಸಂಸ್ಥೆ ನಗರದ ಚಂದ್ರಶೇಖರಭಾರತೀ ಕಲ್ಯಾಣ ಮಂಟಪದಲ್ಲಿಂದು ಏರ್ಪಡಿಸಿದ್ದ ಭಾಷ್ಯಾಮೃತವಾಹಿನೀ ಉಪನಿಷತ್ ಭಾಷ್ಯ ಪ್ರವಚನ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಧರ್ಮವನ್ನು ಯಾವ ತಳಹದಿಯ ಮೇಲೆ ನೋಡಿಕೊಳ್ಳಬೇಕು ಎಂಬುದನ್ನು ಸಂವಿಧಾನ ವಿವರಿಸುತ್ತದೆ. ಆದರೆ, ಅಧರ್ಮದ ಪ್ರಭಾವ ಹೆಚ್ಚಾಗಿ ದೇಶ ವಿಭಜನೆಯಾಗುತ್ತಿರುವುದರಿಂದ ರಾಷ್ಟ್ರೀಯ ಭಾವೈಕ್ಯತೆ ನಶಿಸುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

        ಉಪನಿಷತ್ತು ಓದುವುದು ಕಷ್ಟವಿರಬಹುದು. ಆದರೆ ಅದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ಚಿಕ್ಕ ವಯಸ್ಸಿನಿಂದಲೂ ಮಕ್ಕಳಿಗೆ ಉಪನಿಷತ್ತು ಹೇಳಿಕೊಡುವುದು ಕಡ್ಡಾಯ ಆಗಬೇಕು. ಶಂಕರರ ಉಪನಿಷತ್ತುಗಳು ಅತ್ಯಂತ ಸರಳ ಆಂಗ್ಲಭಾಷೆಗೆ ತುರ್ಜಮೆಯಾಗಿವೆ. ಅದರಲ್ಲಿ ಶಂಕರಾಚಾರ್ಯರರನ್ನು ಪ್ರಪಂಚದ ಅತ್ಯಂತ ಉತ್ತಮ ವಿಜ್ಞಾನಿಗಳಿಗೆ ಹೋಲಿಸಲಾಗಿದೆ ಎಂದು ಸ್ಮರಿಸಿಕೊಂಡರು.

        ಶಂಕರರು ಜ್ಞಾನಕ್ಕೆ ಪ್ರಾಶಸ್ತ್ಯ ನೀಡಿದರು. ಪ್ರಸ್ತುತ ನಗರದ 41 ಕೇಂದ್ರಗಳಲ್ಲಿ ಪ್ರವಚನ ಮಾಲಿಕೆ ಯಶಸ್ವಿಯಾಗಿದ್ದ ದಾಖಲೆಗಳಿವೆ. ಆದರೆ ಶಂಕರರ ಕಾಲದಲ್ಲಿ ದಾಖಲೆಗಳಿರಲಿಲ್ಲ. ಅವರು ಉಪನಿಷತ್ತುಗಳನ್ನು ಪೀಳಿಗೆಯಿಂದ ಪೀಳಿಗೆಗೆ ಬಾಯಿ ಮಾತಿನ ಮೂಲಕ ರವಾನಿಸಿತ್ತಿದ್ದರು. ಅವರಂತೆ ಇಂದು ನಾವೂ ಸಮಾಜವನ್ನು ಒಳ್ಳೆಯ ದಾರಿಯಲ್ಲಿ ಕೊಂಡ್ಯುವ ಮೂಲಕ ಶಂಕರರ ತತ್ವಗಳನ್ನು ಮುಂದಿನ ಪೀಳಿಗೆಗೆ ತಿಳಿಸಲು ಸರ್ವರು ಶ್ರಮಿಸಬೇಕಾಗಿದೆ ಎಂದು ಕರೆ ನೀಡಿದರು.

         ಯಡತೊರೆ ಯೋಗಾನಂದೇಶ್ವರ ಸರಸ್ವತಿ ಮಠದ ಪೀಠಾಧೀಶ ಶಂಕರಭಾರತೀ ಸ್ವಾಮೀಜಿ ಮಾತನಾಡಿ, ಶಂಕರಾಚಾರ್ಯರು ವೇದ, ಸ್ಮೃತಿ, ಉಪನಿಷತ್ತು , ವ್ಯವಹಾರ ಹಾಗೂ ವೇದಾಂತ ಎಲ್ಲವೂ ಒಂದೇ ಎಂದು ಹೇಳುವ ಮೂಲಕ ಸಮಾಜಕ್ಕೆ ಸಮನ್ವಯತೆಯ ನೀತಿ ಸಾರಿದರು ಎಂದು ಅಭಿಪ್ರಾಯಪಟ್ಟರು.

       ಶಂಕರರು ಸಮಾಜಕ್ಕೆ ಸಮನ್ವಯತೆ ಸಾರದಿದ್ದರೆ ಇಂದು ದೇಶದ ಪರಿಸ್ಥಿತಿ ಊಹಿಸುವುದಕ್ಕೆ ಸಾಧ್ಯವಿರಲಿಲ್ಲ. ಉಪನಿಷತ್ತಿನ ಮೂಲಕ ಜನರಲ್ಲಿ ಅರಿವು ಮೂಡಿಸಿದರು. ಸನ್ಯಾಸತ್ವ ಸ್ವೀಕರಿಸುವುದು ಸುಲಭ. ಆದರೆ ಆತ್ಮದ ಕೊಳೆ ತೊಳೆಯದಿದ್ದರೆ, ಆ ಸ್ಥಾನದಿಂದ ಕೆಳಬೀಳುವುದು ದಿಟ. ಆದ್ದರಿಂದ ಎಲ್ಲರೂ ತಮ್ಮ ಕರ್ಮವನ್ನು ಶುದ್ಧಿಗೊಳಿಸಿಕೊಳ್ಳಬೇಕು ಎಂಬುದು ಶಂಕರರ ನಿಲುವಾಗಿತ್ತು. ಪ್ರಸ್ತುತ ಜಾತಿ, ಜನಾಂಗದ ಮಧ್ಯೆ ಜಗಳ ಹಚ್ಚಿ ಹೊಟ್ಟೆಪಾಡು ಕಟ್ಟಿಕೊಳ್ಳುತ್ತಿರುವುದು ಸಮಾಜಕ್ಕೆ ಕಂಟಕವಾಗಿದೆ ಎಂದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap