ಸರ್ಕಾರವನ್ನು ಉರುಳಿಸುವ ಆಟ ಶುರುವಾಗಿದೆ: ಡಿವಿಎಸ್

ಬೆಂಗಳೂರು

      ವಿಧಾನಮಂಡಲ ಅಧಿವೇಶನ ಪ್ರಾರಂಭಕ್ಕೆ ಕೆಲವೇ ದಿನ ಉಳಿದಿರುವ ಸಂದರ್ಭದಲ್ಲೇ ಪುನ: ಕುಮಾರಸ್ವಾಮಿ ನೇತೃತ್ವದ ಮೈತ್ರಿಕೂಟ ಸರ್ಕಾರವನ್ನು ಉರುಳಿಸುವ ಆಟ ಶುರುವಾಗಿದ್ದು, ಇದು ತೋಳ ಬಂತು ತೋಳ ಆಟವಲ್ಲ, ಆಗಲೇ ತೋಳಗಳು ಬಂದಾಗಿವೆ. ಇನ್ನು ಆಟ ಶುರುವಾಗುತ್ತದೆ ಎಂದು ಬಿಜೆಪಿ ನಾಯಕ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಬಾಂಬ್ ಸಿಡಿಸಿದ್ದಾರೆ.

       ದೆಹಲಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸದಾನಂದಗೌಡ ಅವರು, ಸಮ್ಮಿಶ್ರ ಸರ್ಕಾರ ರಾಜ್ಯದ ಜನರ ವಿಶ್ವಾಸ ಕಳೆದುಕೊಂಡಿದೆ. ಹೀಗಾಗಿ ಸದ್ಯದಲ್ಲೇ ಪತನವಾಗಲಿದೆ ಎಂದರಲ್ಲದೆ, ಈ ವಿಷಯದಲ್ಲಿ ತೋಳ ಬಂತು ತೋಳದ ಕತೆ ಎಂದು ಮೈತ್ರಿಕೂಟದ ನಾಯಕರು ವ್ಯಂಗ್ಯವಾಡಬೇಕಿಲ್ಲ. ಆಗಲೇ ತೋಳಗಳು ಬಂದಾಗಿದೆ. ಈಗಾಗಲೇ ಬೆಳಗಾವಿಯ ತೋಳವೂ ಬಂದಾಗಿದೆ.

        ಚಿಂತಾಮಣಿಯ ತೋಳವೂ ಬಂದಾಗಿದೆ. ಮುಂದಿನ ಆಟ ಸದ್ಯದಲ್ಲೇ ಶುರುವಾಗಲಿದೆ ಎಂದು ಅವರು ಮಾರ್ಮಿಕವಾಗಿ ನುಡಿದರು. ಹೀಗೆ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಭವಿಷ್ಯದ ಬಗ್ಗೆ ಸದಾನಂದಗೌಡರು ದೆಹಲಿಯಲ್ಲಿ ಈ ರೀತಿ ಹೇಳಿಕೆ ನೀಡುತ್ತಿದ್ದಂತೆಯೇ, ಇತ್ತ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಬಿಜೆಪಿ ವಿರುದ್ಧ ಹರಿಹಾಯ್ದಿದ್ದು, ಈ ಹುಲಿ ಬಂತು ಹುಲಿ ಆಟ ನಡೆದಷ್ಟೂ ನಮಗೆ ಹೊಸ ಉತ್ಸಾಹ ಬರುತ್ತಿದೆ ಎಂದು ತಿರುಗೇಟು ನೀಡಿದ್ದಾರೆ.

       ಜೆಡಿಎಸ್ ನಾಯಕ, ರೇಷ್ಮೆ ಖಾತೆ ಸಚಿವ ಸಾ.ರಾ.ಮಹೇಶ್ ಮಾತನಾಡಿ, ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಯಾವ ಕಾರಣಕ್ಕೂ ಬಿಜೆಪಿ ನಾಯಕರಿಗೆ ಸಾಧ್ಯವಿಲ್ಲ. ಕಳೆದ ಆರು ತಿಂಗಳಿನಿಂದ ಅವರು ಹುಲಿ ಬಂತು ಹುಲಿ ಆಟವಾಡುತ್ತಾ ಬಂದಿದ್ದಾರೆ ಎಂದರು.
ಅವರು ಹುಲಿ ಬಂತು ಹುಲಿ ಆಟವಾಡಿದಷ್ಟೂ ನಮಗೆ ಹೊಸ ಉತ್ಸಾಹ ಬರುತ್ತಿದೆ. ಈ ಸರ್ಕಾರವನ್ನು ಉಳಿಸಿಕೊಳ್ಳಲೇಬೇಕು ಎಂಬ ಹಠ ಹೆಚ್ಚಾಗುತ್ತಿದೆ. ಆದರೆ ಯಾವ ಕಾರಣಕ್ಕೂ ಸಮ್ಮಿಶ್ರ ಸರ್ಕಾರ ಉರುಳುವುದಿಲ್ಲ. ಅದು ಭದ್ರವಾಗಿದೆ, ಭದ್ರವಾಗಿರುತ್ತದೆ ಎಂದರು.
ಹಿರಿಯ ಕಾಂಗ್ರೆಸ್ ನಾಯಕ, ಸಚಿವ ಆರ್.ವಿ.ದೇಶಪಾಂಡೆ ಮಾತನಾಡಿ, ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಬಿಜೆಪಿ ನಿರಂತರವಾಗಿ ಯತ್ನಿಸುತ್ತಲೇ ಬಂದಿದೆ. ಈಗಲೂ ಅದು ಮುಂದುವರಿದಿದೆ ಎಂದು ಹೇಳಿದರು.

         ಆದರೆ ಯಾವ ಕಾಂಗ್ರೆಸ್ ಶಾಸಕರೂ ಅವರ ಹಿಂದೆ ಹೋಗುವುದಿಲ್ಲ. ಅವರು ಹಾಗೆ ಹೋಗುತ್ತಾರೆ ಎಂಬುದು ಹಗಲುಗನಸು ಅಷ್ಟೇ. ಬಿಜೆಪಿ ನಾಯಕರಿಗೆ ಹಗಲುಗನಸು ಕಾಣುವುದನ್ನು ಬಿಟ್ಟರೆ ಬೇರೆ ಗತಿಯಿಲ್ಲ ಎಂದರು.

        ಕುಮಾರಸ್ವಾಮಿ ನೇತೃತ್ವದ ಸರ್ಕಾರ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ. ಇಂತಹ ಸರ್ಕಾರವನ್ನು ಬೀಳಿಸುವ ಯತ್ನ ಸಫಲವಾಗುವುದಿಲ್ಲ ಎಂದು ಇದೇ ಸಂದರ್ಭದಲ್ಲಿ ಅವರು ವ್ಯಂಗ್ಯವಾಡಿದರು.

         ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ನಾವು ರಾಜಕೀಯದಲ್ಲಿ ಒಂದು ಪರ್ಸೆಂಟಿನಷ್ಟಾದರೂ ಪಳಗಿದ್ದೇವೆ ಎಂದರು. ಬಿಜೆಪಿ ನಾಯಕರು ಸರ್ಕಾರವನ್ನು ಉರುಳಿಸಲು ಮಾಡುತ್ತಿರುವ ಕಸರತ್ತೇನು? ಎಲ್ಲೆಲ್ಲಿ ಏನೇನು ಮಾಡುತ್ತಿದ್ದಾರೆ? ಯಾರನ್ನು ಸಂಪರ್ಕಿಸುತ್ತಿದ್ದಾರೆ ಅನ್ನುವುದೆಲ್ಲವೂ ನಮಗೆ ಗೊತ್ತಿದೆ ಎಂದು ಅವರು ಹೇಳಿದರು.

        ಆದರೆ ಇಂತಹ ಯತ್ನಗಳು ಯಶಸ್ವಿಯಾಗುವುದಿಲ್ಲ. ಕುಮಾರಸ್ವಾಮಿ ಅವರಿಗೆ ನಾವು ಮಾತು ಕೊಟ್ಟಿದ್ದೇವೆ. ಐದು ವರ್ಷಗಳ ಕಾಲ ನೀವೇ ಮುಖ್ಯಮಂತ್ರಿಯಾಗಿರುತ್ತೀರಿ ಎಂದಿದ್ದೇವೆ. ಅವರು ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿರುತ್ತಾರೆ ಎಂದರು.
ಇವರು ಮಾಡುತ್ತಿರುವ ಚಟುವಟಿಕೆಗಳ ವಿವರ ಈಗಾಗಲೇ ಬಹಿರಂಗವಾಗಿದೆ. ಕೇಂದ್ರದ ಬಿಜೆಪಿ ನಾಯಕ ಪ್ರಕಾಶ್ ಜಾವಡೇಕರ್ ಕೂಡ, ಸದ್ಯದಲ್ಲೇ ಕರ್ನಾಟಕದ ರಾಜಕೀಯದಲ್ಲಿ ಭೂಕಂಪವಾಗಲಿದೆ ಎಂದು ಹೇಳಿದ್ದಾರೆ.

        ಇಷ್ಟಾದರೂ ರಾಜ್ಯದ ಬಿಜೆಪಿ ನಾಯಕರು ನಾವು ಆಪರೇಷನ್ ಕಮಲ ಮಾಡುತ್ತಿಲ್ಲ ಎಂದು ಕತೆ ಹೇಳುತ್ತಾರೆ. ಆದರೆ ತಮ್ಮಿಂದ ಸಾಧ್ಯವಿರುವುದನ್ನು ಅವರು ಮಾಡುತ್ತಿದ್ದಾರೆ. ಆದರೆ ಅದು ಸಾಧ್ಯವಾಗುತ್ತಿಲ್ಲ ಎಂದು ನುಡಿದರು.

        ಹೀಗೆ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಜಂಗಿ ಕುಸ್ತಿ ನಿರಂತರವಾಗಿ ನಡೆಯುತ್ತಿದ್ದು ಬೆಳಗಾವಿಯ ವಿಧಾನಮಂಡಲ ಅಧಿವೇಶನಕ್ಕೂ ಮುನ್ನ ಏನಾಗಲಿದೆ ಅನ್ನುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

         ಎರಡು ದಿನಗಳ ಹಿಂದೆ ಬಿಜೆಪಿ ನಾಯಕ ಬಿ.ಶ್ರೀರಾಮುಲು ಅವರ ಆಪ್ತ ಸಹಾಯಕ, ದುಬೈ ಮೂಲದ ಉದ್ಯಮಿಯೊಬ್ಬರ ಜತೆ ನಡೆಸಿದ್ದಾರೆನ್ನಲಾದ ಮಾತುಕತೆಯ ಧ್ವನಿಸುರುಳಿ ಬಹಿರಂಗಗೊಂಡು ತೀವ್ರ ಸಂಚಲವನ್ನುಂಟು ಮಾಡಿದ್ದು, ಅದರ ಬೆನ್ನಲ್ಲೇ ಇನ್ನಷ್ಟು ಕುತೂಹಲಕಾರಿ ವಿದ್ಯಮಾನಗಳು ನಡೆಯತೊಡಗಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap