ಇಟ್ಟಿಗೆ ಕಾರ್ಖಾನೆಯಿಂದ ಪರಿಸರಕ್ಕೆ ಹಾನಿಯಿಲ್ಲ

0
11

ಹುಳಿಯಾರು

       ಇಟ್ಟಿಗೆ ತಯಾರಿಕೆಗೆ ಕೆರೆ ಮಣ್ಣು ಅತ್ಯಗತ್ಯವಾಗಿದ್ದು ಇದರ ಬಳಕೆಗೆ ಯಾರೋ ಕೆಲವರು ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರಿಂದ ಹಿಡಿದು ನೀರಾವರಿ ಇಲಾಖೆಯ ಅಧಿಕಾರಿಗಳು, ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಸೇರಿದಂತೆ ಅನೇಕರು ಅಡ್ಡಿಪಡಿಸುತ್ತಿದ್ದು, ಇದರಿಂದಾಗಿ ಇದನ್ನೇ ನಂಬಿರುವ ಸಾವಿರಾರು ರೈತರು ಸಂಕಷ್ಟಕ್ಕೆ ಸಿಲುಕಿದ್ದು ಇದನ್ನು ಅರಿತು ಮಣ್ಣು ಬಳಕೆಗೆ ಅವಕಾಶ ನೀಡಲು ಜಿಲ್ಲಾಡಳಿತ ಕ್ರಮ ಕೈಗೊಳ್ಳದಿದ್ದರೆ ಹೋರಾಟ ನಡೆಸಲು ತೀರ್ಮಾನಿಸಿರುವುದಾಗಿ ಇಟ್ಟಿಗೆ ಕಾರ್ಖಾನೆಗಳ ಮಾಲೀಕರ ಸಂಘದ ಅಧ್ಯಕ್ಷ ಹೊಸಹಳ್ಳಿ ಎಚ್.ಅಶೋಕ್ ತಿಳಿಸಿದರು.

      ಇಟ್ಟಿಗೆ ಕಾರ್ಖಾನೆಯ ಕೂಲಿಕಾರ್ಮಿಕರ ಸಂಘದಿಂದ ಹುಳಿಯಾರಿನ ಪ್ರವಾಸಿ ಮಂದಿರದಲ್ಲಿ ಪ್ರತಿಭಟನಾ ಸಭೆ ನಡೆಸಿ ಸುಮಾರು 500 ಕ್ಕೂ ಹೆಚ್ಚು ಕಾರ್ಮಿಕರನ್ನುದ್ದೇಶಿಸಿ ಮಾತನಾಡಿದ ಅವರು ಹುಳಿಯಾರು ಇಟ್ಟಿಗೆ ರಾಜ್ಯದೆಲ್ಲೆಡೆ ಹೆಸರುವಾಸಿಯಾಗಿದ್ದು ಹೋಬಳಿ ವ್ಯಾಪ್ತಿಯಲ್ಲಿ ಸುಮಾರು ನೂರಕ್ಕೂ ಹೆಚ್ಚು ಕಾರ್ಖಾನೆಗಳಿದ್ದು, ಇದಕ್ಕೆ ಕಚ್ಚಾ ವಸ್ತುವಾದ ಮಣ್ಣನ್ನು ಕೆರೆಯಿಂದ ಪಡೆಯುವುದು ಸಮಸ್ಯೆಯಾಗಿದ್ದು, ಕೆರೆಯಲ್ಲಿ ಎಲ್ಲಿಯೇ ಮಣ್ಣು ತೆಗೆಯಲು ಹೋದರು ಪೊಲೀಸರು ಕಂದಾಯ ಇಲಾಖೆಯವರು ಅಡ್ಡಿಪಡಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

        ಸರ್ಕಾರ ಕೆರೆಯಲ್ಲಿನ ಹೂಳು ತೆಗೆಯಲು ಕೋಟ್ಯಾಂತರ ರೂಪಾಯಿ ವ್ಯಯ ಮಾಡುತ್ತಿದ್ದು ನಾವಾಗಿ ನಾವೇ ಕೆರೆ ಹೂಳನ್ನು ತೆಗೆಯುವುದರಿಂದ ಸರ್ಕಾರಕ್ಕೆ ಹಣ ಉಳಿಸುತ್ತಿದ್ದು ಇದಕ್ಕೆ ಅಡ್ಡಿ ಪಡಿಸುವುದು ಸರಿಯಲ್ಲ ಎಂದರು. ನಮ್ಮಗಳ ಸಮಸ್ಯೆಯ ಬಗ್ಗೆ ಈಗಾಗಲೇ ಶಾಸಕರಿಗೆ ಉಪವಿಭಾಗಾಧಿಕಾರಿಗಳ ಗಮನಕ್ಕೆ ತಂದಿದ್ದು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.

        ವಕೀಲ ಬಸವರಾಜ್ ಮಾತನಾಡಿ ಬದಲಾದ ಪರಿಸ್ಥಿತಿಯಲ್ಲಿ ತಿನ್ನುವ ಅನ್ನಕ್ಕೂ ಭಂಗ ಬಂದ ಹಿನ್ನೆಲೆಯಲ್ಲಿ ರೈತರು ಇಟ್ಟಿಗೆ ಕಸುಬಿನ ಮೇಲೆ ಅವಲಂಬಿತರಾಗಿದ್ದಾರೆ. ಸ್ಥಳೀಯವಾಗಿಯೇ ನೈಸರ್ಗಿಕವಾಗಿ ದೊರೆಯುವ ಕಚ್ಚಾ ವಸ್ತುಗಳನ್ನು ಬಳಸಿಕೊಂಡು ಇವರು ಪರಿಸರ ಇಟ್ಟಿಗೆಗಳನ್ನು ನಿರ್ಮಾಣ ಮಾಡುತ್ತಿದ್ದು ಇದು ಪರಿಸರಕ್ಕೆ ಹಾನಿ ಉಂಟುಮಾಡುವ ಯಾವುದೇ ಕೈಗಾರಿಕೆಯಲ್ಲ. ಅಲ್ಲದೆ ಕಾನೂನು ವಿರುದ್ಧವಾಗಿ ನಡೆಯುತ್ತಿಲ್ಲ ಎಂದರು. ಸಂವಿಧಾನ ಇವರಿಗೂ ಕೂಡ ಬದುಕುವ ಮೂಲಭೂತ ಹಕ್ಕನ್ನು ನೀಡಿದೆ. ಆದರೆ ಪರಿಸರದ ಹೆಸರಿನಲ್ಲಿ ಇವರ ಮೇಲೆ ವಿನಾಕಾರಣ ಅನುಮಾನ ವ್ಯಕ್ತಪಡಿಸಿ ಇವರ ಬದುಕುವ ಹಕ್ಕನ್ನೇ ಕಸಿದುಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

        ಗುತ್ತಿಗೆದಾರರಾದ ನಂದಿಹಳ್ಳಿ ಶಿವಣ್ಣ ಮಾತನಾಡಿ ಪರಿಸರವಾದಿಗಳ ಹೆಸರಿನಲ್ಲಿ ಕೆಲವರು ಸಮಸ್ಯೆ ಉಂಟು ಮಾಡುತ್ತಿದ್ದಾರೆ. ಮಳೆ ಇಲ್ಲದ ಪರಿಸ್ಥಿತಿಯಲ್ಲಿ ಸಾವಿರಾರು ಜನ ಗುಳೆ ಹೋಗುವುದನ್ನು ತಪ್ಪಿಸಲು ಇಟ್ಟಿಗೆ ಕಾರ್ಖಾನೆ ಆಶ್ರಯವಾಗಿದೆ. ಸರ್ಕಾರ ಕೋಟ್ಯಂತರ ರೂಪಾಯಿ ಸಬ್ಸಿಡಿ ರೂಪದಲ್ಲಿ ಕಾರ್ಖಾನೆಗಳಿಗೆ ನೀಡುತ್ತದೆ. ಆದರೆ ಗುಡಿ ಕೈಗಾರಿಕೆಯಾದ ಇಟ್ಟಿಗೆ ಕಾರ್ಖಾನೆಗೆ ಯಾವುದೇ ಸೌಲಭ್ಯಗಳನ್ನು ಕಲ್ಪಿಸುತ್ತಿಲ್ಲ. ರೈತರಿಗೆ ಸರ್ಕಾರ ಕನಿಷ್ಠ ಕೆರೆ ಮಣ್ಣು ಬಳಕೆ ಅವಕಾಶ ನೀಡದಿರುವುದು ದುರ್ದೈವ ಎಂದರು. ಮರಳು ದಂಧೆಗೂ ಇಟ್ಟಿಗೆ ಕಾರ್ಖಾನೆಯವರಿಗೂ ಸಂಬಂಧವಿಲ್ಲ. ಇಟ್ಟಿಗೆ ಕಾರ್ಖಾನೆಗೆ ಮರಳಿನ ಅವಶ್ಯಕತೆಯೇ ಬರುವುದಿಲ್ಲ. ಹೂಳಿನಂತಹ ಮಣ್ಣನ್ನು ಕಚ್ಚಾ ವಸ್ತುವಾಗಿ ನಾವು ಬಳಸುತ್ತೇವೆ ವಿನಹ ಮರಳು ಬಗೆದು ಮಾರುವವರು ನಾವಲ್ಲ ಎಂದರು.

         ಈ ಸಂದರ್ಭದಲ್ಲಿ ಇಟ್ಟಿಗೆ ಕಾರ್ಖಾನೆ ಮಾಲೀಕರ ಸಂಘದ ಕಾರ್ಯದರ್ಶಿ ಸುಧೀರ್, ಗ್ರಾ.ಪಂ ಸದಸ್ಯ ಕಾಯಿಕುಮಾರ್, ತಾಪಂ ಮಾಜಿ ಸದಸ್ಯ ಹೊಸಳ್ಳಿ ಜಯಣ್ಣ, ಬರಕನಾಳ್ ವಿಶ್ವನಾಥ್, ಗುತ್ತಿಗೆದಾರ ಶಿವಕುಮಾರ್, ತೋಟದಮನೆ ಜಯಣ್ಣ, ಶೇಖರ್, ಬಸವರಾಜು, ಶಿವಕುಮಾರ್ ಸೇರಿದಂತೆ ಹುಳಿಯಾರು ಹೋಬಳಿ ಹಾಗೂ ಸುತ್ತಮುತ್ತಲ ಗ್ರಾಮಗಳ ಸುಮಾರು ಐದುನೂರಕ್ಕೂ ಹೆಚ್ಚು ರೈತ ಕಾರ್ಮಿಕರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here