ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ಬೇಕು;ಸೌಭಾಗ್ಯ

ಚಿತ್ರದುರ್ಗ;

      ಸಾರ್ವಜನಿಕರು, ಚುನಾಯಿತ ಪ್ರತಿನಿಧಿಗಳು ಹಾಗೂ ಸರ್ಕಾರದ ಉತ್ತೇಜನ ಸಿಕ್ಕೆರೆ ಕ್ರೀಡಾ ಕ್ಷೇತ್ರದಲ್ಲಿ ಮಕ್ಕಳು ಉತ್ತಮ ಸಾಧನೆ ಮಾಡಲು ಅನುಕೂಲವಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಅಭಿಪ್ರಾಯ ಪಟ್ಟರು
ಸಾರ್ವಜನಿಕ ಶಿಕ್ಷಣ ಇಲಾಖೆ, ವಿದ್ಯಾಭಾರತಿ ಜ್ಞಾನಮಂದಿರ ಹಾಗೂ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಿ.ಪಿ. ಬಡಾವಣೆ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಾಲಾ ಗೇಟ್ ಉದ್ಘಾಟನೆ ಹಾಗೂ ಕ್ರೀಡಾಪಟುಗಳಿಗೆ ಅಭಿನಂದನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

       ಇಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ಉಳಿಸಿಕೊಳ್ಳುವುದು ಸವಾಲಿನ ಕೆಲಸವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಶಾಲೆಯು ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿ. ಇದು ದೈಹಿಕ ಶಿಕ್ಷಕರ ಶ್ರಮದ ಪ್ರÀತೀಕವಾಗಿದೆ. ಇಲ್ಲಿನ ಶಾಸಕರು, ಸಂಸದರು ಸೇರಿದಂತೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳನ್ನು ಬೇಟಿ ಮಾಡಿ ಕ್ರೀಡೆಗೆ ಬೇಕಾದ ಪ್ರೋತ್ಸಾಹ ಪಡೆದುಕೊಳ್ಳುವ ನಿಟ್ಟಿನಲ್ಲಿ ಶಿಕ್ಷಕರು ಮುಂದಾಗಬೇಕು. ಇದರಿಂದ ಮತ್ತಷ್ಟು ಸಾಧನೆ ಮಾಡಬಹುದು ಎಂದರು.

      ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಕ್ಕಳು ಚಿಕ್ಕ ವಯಸ್ಸಿನಲ್ಲಿ ಯಾವುದೇ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ. ಹಾಗಾಗಿ ದೈಹಿಕ ಶಿಕ್ಷಕರು ಅವರಿಗೆ ಕ್ರೀಡೆಗಳಲ್ಲಿ ಹೆಚ್ಚು ಆಸಕ್ತಿ ಮೂಡಿಸಬೇಕು. ಉತ್ತಮ ಮಾರ್ಗದರ್ಶನ ನೀಡುವ ಮೂಲಕ ಸೂಕ್ತ ತರಬೇತಿ ನೀಡಬೇಕು. ಇದರಿಂದ ಅವರು ಮುಂದೊಂದು ದಿನ ಕ್ರೀಡಾ ಸಾಧಕರಾಗಿ ಬೆಳೆಯುತ್ತಾರೆ. ರಾಜ್ಯ, ರಾಷ್ಟ್ರಮಟ್ಟದಲ್ಲಿ ಜಿಲ್ಲೆಯ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿಯಲಿದ್ದಾರೆ. ಈ ನಿಟ್ಟಿನಲ್ಲಿ ದೈಹಿಕ ಶಿಕ್ಷಕರು ಗಮನ ನೀಡಬೇಕೆಂದು ಹೇಳಿದರು.

       ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ವಿವಿಧ ಕ್ರೀಡೆಗಳಿಗೆ ಸಂಬಂಧಿಸಿದಂತೆ ಸೂಕ್ತ ತರಬೇತಿ ನೀಡಿದಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಲಿದ್ದಾರೆ ಎಂದು ಶಾಸಕರು ಇಷ್ಟು ದಿನ ಈ ಶಾಲೆಗೆ ಸರಿಯಾದ ಗೇಟ್ ವ್ಯವಸ್ಥೆ ಇರಲಿಲ್ಲ. ಈಗ ದಾನಿಗಳು ಗೇಟ್ ನಿರ್ಮಿಸಿಕೊಟ್ಟಿದ್ದಾರೆ. ಈ ಶಾಲಾ ಆವರಣದಲ್ಲಿ ಸಂಜೆ ಹೊತ್ತಿನಲ್ಲಿ ಅನೇಕ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವುದಾಗಿ ದೂರು ಕೇಳಿಬಂದಿದೆ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಮಾತನಾಡಲಾಗುವುದು. ಶಾಲೆಯಿಂದ ಒಂದು ಲಿಖಿತ ದೂರು ನೀಡಿರಿ. ಅನೈತಿಕ ಚಟುವಟಿಕೆ ನಡೆಸುವ ಕಿಡಿಗೇಡಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಪೊಲೀಸರಿಗೆ ಶಿಫಾರಸು ಮಾಡಲಾಗುವುದು ಎಂದು ತಿಳಿಸಿದರು.

      ದೈಹಿಕ ಶಿಕ್ಷಕರ ಸಂಘದ ಕಾರ್ಯದರ್ಶಿ ಓಂಕಾರಪ್ಪ ಮಾತನಾಡಿ, ಕಡಿಮೆ ಜನಸಂಖ್ಯೆ ಹೊಂದಿರುವ ದೇಶಗಳು ಒಲಂಪಿಕ್‍ನಲ್ಲಿ ಉತ್ತಮ ಸಾಧನೆ ಮಾಡುತ್ತಿವೆ. 120 ಕೋಟಿ ಜನಸಂಖ್ಯೆಯ ಹೊಂದಿರುವ ಭಾರತ ಒಲಂಪಿಕ್‍ನಲ್ಲಿ ಪದಕ ಗಳಿಸಲು ಪ್ರಾಯಾಸಪಡುವಂತಾಗಿದೆ. ಶಾಲೆಗಳಲ್ಲಿ ದೈಹಿಕ ಶಿಕ್ಷಕರಿಲ್ಲದಿರುವುದೇ ಇದಕ್ಕೆ ಕಾರಣ. ರಾಜ್ಯದಲ್ಲಿ ಸುಮಾರು 38 ಸಾವಿರ ಪ್ರಾಥಮಿಕ ಶಾಲೆಗಳಿವೆ. ಆದರೆ ಕೇಲವ 500 ಜನ ದೈಹಿಕ ಶಿಕ್ಷಕರಿದ್ದಾರೆ. ಇದರಿಂದ ಕ್ರೀಡೆಗಳಿಗೆ ಸೂಕ್ತ ಪ್ರೋತ್ಸಾಹ ದೊರೆಯುತ್ತಿಲ್ಲ ಎಂದು ಹೇಳಿದರು.

     ಈ ಕುರಿತು ಶಾಸಕರು ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಪ್ರಸ್ತಾಪ ಮಾಡಬೇಕು. ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕು. ಎಲ್ಲ ಶಾಲೆಗಳಲ್ಲಿ ದೈಹಿಕ ಶಿಕ್ಷಕರ ನೇಮಕಾತಿ ಆಗಬೇಕು. ಅಲ್ಲದೇ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳಿಂದ ಕ್ರೀಡಾಕೂಟಗಳಿಗೆ ತೆರಳಲು ಅಗತ್ಯ ಅನುದಾನವಿಲ್ಲ. ಹಾಗಾಗಿ ಸರ್ಕಾರದ ವತಿಯಿಂದ ಅಗತ್ಯ ಅನುದಾಣ ನೀಡುವಂತಾಗಬೇಕು. ಇದರಿಂದ ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚು ಸಾಧನೆ ಮಾಡಲು ಅನುಕೂಲವಾಗುತ್ತದೆ ಎಂದರು.ನಗರಸಭೆ ಸದಸ್ಯೆ ರೋಹಿಣಿ ನವೀನ್, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಾನಂದ್, ಕಾರ್ಯದರ್ಶಿ ಮಹಾಂತೇಶ್, ಶಾಲೆಯ ಮುಖ್ಯಶಿಕ್ಷಕ ಗಂಗಾಧರ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap