ಸಿದ್ದು ಕಾಲದಲ್ಲಿ ಸಾವಿರಾರು ಕೋಟಿ ಭ್ರಷ್ಟಾಚಾರ : ಬಿಜೆಪಿ

0
24

ಬೆಂಗಳೂರು

       ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಮಂಡಿಸಿದ್ದ 2016-17 ರ ಸಾಲಿನ ಆಯವ್ಯಯದಲ್ಲಿ ಸಾವಿರಾರು ಕೋಟಿ ರೂ ಭ್ರಷ್ಟಾಚಾರ ನಡೆದಿದ್ದು, 35 ಸಾವಿರ ಕೋಟಿ ರೂ. ತಾಳೆಯಾಗುತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಗಂಭೀರ ಆರೋಪಮಾಡಿದ್ದಾರೆ.

         ವಿಧಾನಸೌಧದ ಬಿಜೆಪಿ ಶಾಸಕಾಂಗ ಕಚೇರಿಯಲ್ಲಿ ಬಿಜೆಪಿಯಿಂದ ” ಭ್ರಷ್ಟ ಕಾಂಗ್ರೆಸ್ ಸರ್ಕಾರದ ಲೂಟಿ ಅವಧಿ 2016-17 ” ಸಿಎಜಿ ವರದಿಯ ಕಿರುಹೊತ್ತಿಗೆ ಬಿಡುಗಡೆಮಾಡಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಜಿ ವರದಿ ಮತ್ತೊಮ್ಮೆ ಸಾರ್ವತ್ರಿಕ ಚರ್ಚೆಗೆ ಒಳಗಾಗಬೇಕು. ಬೆಳಗಾವಿ ಅಧಿವೇಶನದಲ್ಲಿ ಈ ಬಗ್ಗೆ ಮತ್ತೊಮ್ಮೆ ಚರ್ಚೆಗೆ ಅವಕಾಶ ಕಲ್ಪಿಸಿದರೆ ವಾಸ್ತವ ಸಂಗತಿಗಳನ್ನು ಸದನದ ಮೂಲಕ ರಾಜ್ಯದ ಜನರ ಮುಂದಿಡಲು ಸಾಧ್ಯವಾಗಲಿದೆ ಎಂದು ಹೇಳಿದರು.

            ಸಿದ್ದರಾಮಯ್ಯ ಅವರು ಮಂಡಿಸಿದ ಆಯವ್ಯಯದಲ್ಲಿ ವೆಚ್ಚವಾಗದೇ ಉಳಿದಿರುವ 12 ಸಾವಿರ ಕೋಟಿ ರೂ. ಹಣ ಯಾವ ಇಲಾಖೆಯಲ್ಲಿದೆ. ಈ ಹಣಕ್ಕೆ ಎಷ್ಟು ಬಡ್ಡಿ ಬರುತ್ತಿದೆ. ಖರ್ಚಾಗದೇ ಉಳಿದಿರುವ ಹಣವನ್ನು ಕುಮಾರಸ್ವಾಮಿ ಮಂಡಿಸಿದ ಬಜೆಟ್ ನಲ್ಲಿ ಯಾಕೆ ತೋರಿಸಿಲ್ಲ ಎಂದು ಪ್ರಶ್ನಿಸಿದರು.

             ಸಿದ್ದರಾಮಯ್ಯ ಬೇಜವಾಬ್ದಾರಿ ಆಡಳಿತ ನಡೆಸಿರುವುದಕ್ಕೆ ಇದು ಸೂಕ್ತ ಉದಾಹರಣೆಯಾಗಿದೆ. ಅವರು ಭ್ರಷ್ಟ ರಾಜಕಾರಣಿಯೆಂದು ಕುಮಾರಸ್ವಾಮಿಯವರೇ ಹೇಳಿದ್ದಾರೆ. ಮುಖ್ಯಮಂತ್ರಿಗಳಿಗೆ ನೈತಿಕತೆ, ಧೈರ್ಯ ಇದ್ದರೆ ಬೆಳಗಾವಿ ಅಧಿವೇಶನದಲ್ಲಿ ಸಿಎಜಿ ವರದಿಯನ್ನು ವಿಶೇಷ ಚರ್ಚೆಗೆ ತರಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ಧ ಬಿಜೆಪಿ ಹೋರಾಟ ಮಾಡಲಿದೆ ಎಂದು ಎಚ್ವರಿಸಿದರು.
ಸಾಮಾನ್ಯ ವ್ಯಕ್ತಿ ಪರ್ಸ್ ಕಳ್ಳತನವಾದರೆ ಪೊಲೀಸ್ ಠಾಣೆಗೆ ದೂರು ನೀಡಿ ತನಿಖೆಗೆ ಅಗ್ರಹಿಸುವ ಈ ಕಾಲಘಟ್ಟದಲ್ಲಿ ರಾಜ್ಯದ 6.5 ಕೋಟಿ ಜನರಿಂದ ಸಂಗ್ರಹಿಸಿದ ತೆರಿಗೆ ಹಣವನ್ನು ರಾಜ್ಯ ಸರಕಾರದ ಖಜಾನೆಯಿಂದ ನೇರವಾಗಿ ಕಳ್ಳತನ ಮಾಡಿರುವುದಾಗಿ ಸಿ ಎ ಜಿ ವರದಿ ನೀಡಿದರೂ ಇದುವರೆಗೂ ಯಾವುದೇ ಎಫ್‍ಐಆರ್ ದಾಖಲಾದ ಬಗ್ಗೆ ಅಥವಾ ಈ ಕುರಿತು ತನಿಖೆ ನಡೆಯುತ್ತಿರುವ ಬಗ್ಗೆ ಕನಿಷ್ಠ ಪಕ್ಷ ರಾಜ್ಯದ ಖಜಾನೆಯಿಂದ ಹಣ ಕಳವು ಆಗಿದೆ ಎಂಬುದರ ಬಗ್ಗೆ ಅದರ ಮಾಲಿಕರಾದ ರಾಜ್ಯದ ಜನತೆಗೆ ತಿಳಿಸುವ ಯಾವುದೇ ಪ್ರಯತ್ನ ಮಾಡದಿರುವುದು ಖೇದಕರ. ಇದು ಖಜಾನೆಯ ಕಾವಲುಗಾರನೇ ಕಳ್ಳತನ ಮಾಡಿದಂತಾಗಿದೆ. ಈ ಕುರಿತು ಶ್ರೀಘ್ರ ದೂರು ದಾಖಲಿಸಿ ಸೂಕ್ತ ತನಿಖೆ ಕೈಗೊಳ್ಳಬೇಕೆಂದು ಅಗ್ರಹಿಸುತ್ತೇವೆ ಎಂದರು.

            ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಿದ ರವಿಕುಮಾರ್, ರಮೇಶ್ ಕುಮಾರ್ ಆರೋಗ್ಯ ಸಚಿವರಾಗಿದ್ದಾಗ ಆರೋಗ್ಯ ಇಲಾಖೆಯಲ್ಲಿ 535 ಕೋಟಿ ರೂ.ಹಣ ಹಗರಣ ನಡೆದಿದೆ.ಶೇ 52 ರಷ್ಟು ಔಷಧಿಗಳನ್ನು ಪರೀಕ್ಷಿಸದೆಯೇ ವಿತರಿಸಲಾಗಿದೆ. ಈ ಬಗ್ಗೆ ಸರ್ಕಾರ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಶಾಸಕ ಅಶ್ವತ್ಥ ನಾರಾಯಣ್, ಬಿಜೆಪಿ ವಕ್ತಾರ ಶಾಂತಾರಾಮ್ ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here