ಆದಿಲ್‍ಶಾಹಿಗಳ ಪ್ರಭುತ್ವ ತಿಳಿಯಲು ಆಗ ಕರ್ನಾಟಕದಲ್ಲಿ ಸಾಹಿತ್ಯವೇ ಇರಲಿಲ್ಲ.

0
29

ಹೊಸಪೇಟೆ :

       ಸುಮಾರು 200 ವರ್ಷಗಳ ಕಾಲ ಆಡಳಿತ ನಡೆಸಿದ ಆದಿಲ್‍ಶಾಹಿಗಳ ಪ್ರಭುತ್ವದ ಬಗ್ಗೆ ತಿಳಿಯಬೇಕೆಂದರೆ ಆಗ ಇಡೀ ಕರ್ನಾಟಕದಲ್ಲಿಯೇ ಸಾಹಿತ್ಯ ಇರಲಿಲ್ಲ ಎಂದು ವಿಜಯಪುರದ ಇತಿಹಾಸ ಸಂಶೋಧಕ ಡಾ.ಕೃಷ್ಣ ಕೋಲ್ಹಾರ ಕುಲಕರ್ಣಿ ಹೇಳಿದರು.

       ಇಲ್ಲಿನ ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ವಿಭಾಗ ಶ್ರೀ ಬಸವೇಶ್ವರ ವಿದ್ಯಾವರ್ಧಕ ಸಂಘ ಬಾಗಲಕೋಟ, ದತ್ತಿನಿಧಿಯ ಆಶ್ರಯದಲ್ಲಿ ಬುಧವಾರ ಮಂಟಪ ಸಭಾಂಗಣದಲ್ಲಿ ಏರ್ಪಡಿಸಿದ್ದ ಆದಿಲ್‍ಶಾಹಿ ಸಾಹಿತ್ಯ : ಚಾರಿತ್ರಿಕ ನೋಟ ವಿಶೇಷ ದತ್ತಿ ಉಪನ್ಯಾಸ ನೀಡಿ ಅವರು ಮಾತನಾಡಿದರು.

       ಆದಿಲ್‍ಶಾಹಿ ಸಾಹಿತ್ಯ ತಿಳಿಯಬೇಕೆಂದರೆ ಈ ಮೊದಲು ಸಮಕಾಲೀನ ರಚಿತಸಾಹಿತ್ಯ ಅಧ್ಯಯನ ಮಾಡಬೇಕಿತ್ತು. 200 ವರ್ಷಗಳ ಅವರ ಆಳ್ವಿಕೆಯನ್ನು ಆ ಕಾಲದಲ್ಲಿ ರಚಿತವಾದ ಸಾಹಿತ್ಯದ ಹಸ್ತಪ್ರತಿಗಳು, ಲೇಖನಗಳು, ಪ್ರಕಟಿತ ಪುಸ್ತಕಗಳು, ಫರ್ಮಾನುಗಳು, ಸನ್ನದುಗಳು, ಕೈಫಿಯತ್ತುಗಳ ಮೂಲಕ ಅಧ್ಯಯನ ಮಾಡಬೇಕಾಗಿತ್ತು. ಅವೆಲ್ಲವೂ ಅರೇಬಿಕ್, ದಖನಿ, ಉರ್ದು, ಪರ್ಷಿಯನ್ ಭಾಷೆಯಲ್ಲಿ ಇದ್ದವು. ಇವು ಆದಿಲ್‍ಶಾಹಿ ಸಾಹಿತ್ಯದ ಕುರಿತು ಬೆಳಕು ನೀಡುತ್ತವೆ ಎಂದರು.

        ಪಾರಸನೀಸನು 1850ರಲ್ಲಿ ಬುಸಾತೀನೆ, ಸಲಾತೀನ ಕೃತಿಯನ್ನು ಇಂಗ್ಲಿಷರಿಗೆ ಮರಾಠಿಯಿಂದ ಅನುವಾದಿಸಿದ ಹಸ್ತಪ್ರತಿಯನ್ನು ಕೊಟ್ಟಿದ್ದನು. 1951-52ರಲ್ಲಿ ಮರಾಠಿ ಇತಿಹಾಸಕಾರರಾದ ವಾಸಿಬೇಂದ್ರೆಯವರು ಸಂಪಾದಿಸಿ ಪ್ರಕಟಿಸಿದ್ದರು. ಇದನ್ನು ನಾನು ಕನ್ನಡಕ್ಕೆ ಅನುವಾದಿಸಿದ ನಂತರ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ ಪ್ರಕಟವಾಗಿದೆ. ಈ ಕೃತಿಯು ಆದಿಲ್‍ಶಾಹಿ ಚರಿತ್ರೆಯ ಮೇಲೆ ಬೆಳಕು ಚೆಲ್ಲುತ್ತದೆ ಎಂದು ತಿಳಿಸಿದರು.

        ಅಧ್ಯಕ್ಷತೆ ವಹಿಸಿ ಕುಲಪತಿ ಡಾ.ಮಲ್ಲಿಕಾ ಎಸ್. ಘಂಟಿ ಅವರು ಮಾತನಾಡಿ, ಸಮಕಾಲೀನ ಚರಿತ್ರೆ ಮತ್ತು ವಾಸ್ತವಿಕತೆಗೆ ಸಂಬಂಧಪಟ್ಟ ಹಾಗೆ ಉತ್ತರಗಳನ್ನು ಖಚಿತವಾಗಿ, ನಿಖರವಾಗಿ ಕೊಡಬೇಕೆನ್ನುವ ಪ್ರಜ್ಞಾವಂತಿಕೆ ಇರುವವರೆಲ್ಲರೂ ಆದಿಲ್‍ಶಾಹಿ ಸಂಪುಟಗಳನ್ನು ಅಗತ್ಯವಾಗಿ ಓದಬೇಕು. ಸಮಕಾಲೀನ ರಾಜಕೀಯವು ಮತ ಧರ್ಮಗಳ ಹೆಸರಿನಲ್ಲಿ ಮಾಡುತ್ತಿರುವ ಪ್ರಯತ್ನಗಳಲ್ಲಿ ನಾವು ಚರಿತ್ರೆಯನ್ನು ಸರಿಯಾಗಿ ಗ್ರಹಿಸಿಕೊಳ್ಳಬೇಕಾಗಿದೆ. ಬಹಳ ದೊಡ್ಡ ತಪ್ಪು ಕಲ್ಪನೆ ಎಂದರೆ ಮುಸ್ಲಿಮರು ಈ ದೇಶಕ್ಕೆ ಬಂದ ಮೇಲೆ ಇಲ್ಲಿರುವ ಎಲ್ಲಾ ಸಂಪತ್ತನ್ನು ಕೊಳ್ಳೆ ಹೊಡೆದರು ಎಂಬ ರಾಜಕೀಯ ಪ್ರೇರಿತವಾದ ಮಾತುಗಳನ್ನು ನಾವು ಕೇಳುತ್ತಿದ್ದೇವೆ. ಚರಿತ್ರೆ ಗೊತ್ತಿಲ್ಲದ ಯುವ ಮಿತ್ರರು ಇದನ್ನು ಸತ್ಯ ಎಂದು ನಂಬಿ ನಮ್ಮ ಜೊತೆಗೆ ಹುಟ್ಟಿ ಬೆಳೆದ ಮುಸ್ಲಿಂರನ್ನು ಅಪನಂಬಿಕೆಯಿಂದ ನೋಡಲಾಗುತ್ತಿದೆ. ಇದನ್ನು ಬದಲಿಸಿಕೊಳ್ಳಲು ನಾವೇ ಸ್ವತಃ ಚರಿತ್ರೆ ಓದಬೇಕಾಗಿದೆ ಎಂದರು.

        2ನೇ ಆದಿಲ್‍ಶಾಹಿಗೆ ಜಗದ್ಗುರು ಎಂದು ಬಿರುದು ಕೊಟ್ಟಿದ್ದು ಮುಸ್ಲಿಮರಲ್ಲ, ಹಿಂದುಗಳು ಈ ಬಿರುದು ನೀಡಿದ್ದರು. ಸರಸ್ವತಿಯನ್ನು ನೆನೆದು ಆದಿಲ್‍ಶಾಹಿಗಳು ತಮ್ಮ ಫರ್ಮಾನುಗಳನ್ನು ಹೊರಡಿಸುತ್ತಿದ್ದರು. ಆ ಕಾಲದಲ್ಲಿ ಹಿಂದು ಮುಸ್ಲಿಂ ಸಮಾನತೆ ಇತ್ತು. ನಮ್ಮಲ್ಲಿ ವಾರಸುದಾರಿಕೆ ಇಲ್ಲದ ಸಂಪತ್ತನ್ನು ರಾಜಪ್ರಭುತ್ವವು ವಶಪಡಿಸಿ ಕೊಳ್ಳಬೇಕೆಂಬುದು ಧರ್ಮ ಸಮ್ಮತವಾಗಿತ್ತು. ಆದರೆ ಆದಿಲ್‍ಶಾಹಿಗಳು ವಾರಸುದಾರರಿಲ್ಲದ ಆಸ್ತಿಯನ್ನು ವಶಪಡಿಸಿಕೊಳ್ಳಬಾರದು. ಅದನ್ನು ಸತ್ಕಾರ್ಯಕ್ಕೆ ಸಮಾಜ ಕಾರ್ಯಕ್ಕೆ ಬಳಸಿಕೊಳ್ಳಬೇಕು ಎಂದು ನಿಯಮ ಹೊಂದಿದ್ದರು ಎಂದು ತಿಳಿಸಿದರು.

        ಚರಿತ್ರೆ ವಿಭಾಗದ ಮುಖಸ್ಥರಾದ ಡಾ.ವಿರೂಪಾಕ್ಷಿ ಪೂಜಾರಹಳ್ಳಿ ಪ್ರಸ್ತಾವಿಕ ಮಾತನಾಡಿದರು. ಸಂಶೋಧನಾ ವಿದ್ಯಾರ್ಥಿ ಶಿವರಾಜ್ ಜಿ.ಓ. ನಿರೂಪಿಸಿದರು. ಸಂಶೋಧನಾ ವಿದ್ಯಾರ್ಥಿ ಮಂಜುನಾಥ ವಂದಿಸಿದರು. ಕೋರ್ಸ್‍ವರ್ಕ್‍ನ ಸಂಶೋಧಕರೆಲ್ಲರು, ಅಧ್ಯಾಪಕರು, ಅಧಿಕಾರಿಗಳು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here