ಈ ಬಾರಿ ಶೇಕಡಾ 100 ರಷ್ಟು ಮತದಾನ ಮಾಡಬೇಕೆಂಬ ಗುರಿ : ಕೆ.ಶಶಿಧರ್

0
4

ತುರುವೇಕೆರೆ:

     ತುರುವೇಕೆರೆ ತಾಲ್ಲೂಕು ಶಾಂತಿಪ್ರಿಯ ನಾಡಾಗಿದ್ದು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಶೇಕಡಾ 76 ರಷ್ಟು ಮತದಾನವಾಗಿದ್ದು ಈ ಬಾರಿ ಶೇಕಡಾ 100 ರಷ್ಟು ಮತದಾನ ಮಾಡಬೇಕೆಂದು ಸಹಾಯಕ ಚುನಾವಣಾಧಿಕಾರಿ ಕೆ.ಶಶಿಧರ್ ತಾಲ್ಲೂಕಿನ ಜನತೆಗೆ ಕರೆ ನೀಡಿದರು.

      ಪಟ್ಟಣದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ಭವನದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ “ಮತದಾನ ಜಾಗೃತಿ ಕವಿಗೋಷ್ಟಿ” ಯಲ್ಲಿ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದ ಅವರು ತುರುವೇಕೆರೆ ತಾಲ್ಲೂಕು ಶಾಂತಿಪ್ರಿಯ ನಾಡಾಗಿದ್ದು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಶೇಕಡಾ 100 ರಷ್ಟು ಮತದಾನ ಮಾಡುವಂತೆ ತಮ್ಮ ಕುಟುಂಬ ಹಾಗು ನೆರೆಹೊರೆಯವರಿಗೆ ಪ್ರೀತಿ ವಿಶ್ವಾಸದಿಂದ ತಿಳಿಸುವ ಮೂಲಕ ಮತದಾನ ಮಾಡಲು ಪ್ರೇರೇಪಿಸಬೇಕೆಂದು ಮನವಿ ಮಾಡಿದರು.

      ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕ.ಸಾ.ಪ. ಅಧ್ಯಕ್ಷೆ ಬಾ.ಹ.ರಮಾಕುಮಾರಿ ಮಾತನಾಡಿ ಮತದಾನ ನಮ್ಮ ಹಕ್ಕಾಗಿದ್ದು ನಮಗೆ ಬೇಕಾದವರನ್ನು ಆರಿಸುವ ಏಕ ಮಾತ್ರ ಹಕ್ಕು. ಪರಿಪೂರ್ಣವಾದ ನಮ್ಮ ಹಕ್ಕನ್ನು ಚಲಾಯಿಸದವರು ಗುಲಾಮರಿಗಿಂತ ಕಡೆ. ನಾವು ಎಲ್ಲಿವರೆಗೆ ಆಸೆ ಆಮಿಷಗಳಿಗೆ ಬಲಿಯಾಗುತ್ತೇವೆಯೋ ಅಲ್ಲಿವರೆಗೆ ನಮಗೆ ಆಮಿಷಗಳನ್ನು ಒಡ್ಡುತ್ತಲೇ ಇರುತ್ತಾರೆ. ಅಂತಹವರು ಹುತ್ತ ಬಡಿಯುತ್ತಾರೆಯೇ ಹೊರತು ಹಾವನ್ನು ಸಾಯಿಸಲು ಹೋಗುವುದಿಲ್ಲ.

       ಅ ನಿಟ್ಟಿನಲ್ಲಿ ಮತದಾನ ಜಾಗೃತಿ ಮೂಡಿಸುವಲ್ಲಿ ವಿಧ್ಯಾವಂತರ ಪಾತ್ರ ದೊಡ್ಡದಿದೆ. ಜಿಲ್ಲೆಯಲ್ಲಿ ಹೆಣ್ಣುಮಕ್ಕಳ ಶೇಕಡಾವಾರಿನಲ್ಲಿ ಮುಂದಿದ್ದು ಎಲ್ಲಾ ರಂಗಗಳಲ್ಲಿಯೂ ತಮ್ಮ ಪ್ರತಿಭೆಗಳಲ್ಲಿ ಮುಂದಿರುವಂತೆಯೇ ಮತದಾನದಲ್ಲೂ ಮೊದಲಿಗರಾಗಿ ದೇಶ ಕಟ್ಟುವ ಕೆಲಸದಲ್ಲಿ ಸಾಕ್ಷಿಯಾಗಬೇಕು. ಚುನಾವಣಾ ಸಂಧರ್ಭದಲ್ಲಿ ಯಾವುದೇ ಆಸೆ ಆಮಿಷಗಳಿಗೆ ತಮ್ಮನ್ನು ತಾವು ಮಾರಿಕೊಳ್ಳದೆ ಕುಟುಂಬದ ಎಲ್ಲಾ ವಯಸ್ಕರು ಹಬ್ಬದ ರೀತಿಯಲ್ಲಿ ಮತದಾನ ಕೇಂದ್ರಕ್ಕೆ ತೆರಳಿ ಮತದಾನ ಮಾಡುವುದರೊಂದಿಗೆ ಸಮರ್ಥ ಅಭ್ಯರ್ಥಿಯನ್ನು ಆಯ್ಕೆಮಾಡಿ ದೇಶದ ಅಭಿವೃದ್ದಿಗೆ ಸಹಕರಿಯಾಗಬೇಕೆಂದು ಕರೆ ನೀಡಿದರು.

      ಮುಖ್ಯ ಅತಿಥಿಗಳಾದ ಕ.ಸಾ.ಪ.ನಗರ ಘಟಕ ಅಧ್ಯಕ್ಷ ಗಂಗಾಧರ್ ದೇವರಮನೆ, ತಾ.ಸ.ನೌ.ಸಂಘದ ಪ್ರಹ್ಲಾದ್ ಮಾತನಾಡಿ ಮತದಾನದ ಬಗ್ಗೆ ಜಾಗೃತಿ ಮೂಡಿಸಿದರು.

       ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಶ್ರೀಮತಿ ಮಂಜುಳಾದೇವಿ ಮತದಾನದ ಪ್ರತಿಜ್ಞಾವಿಧಿ ಬೋಧಿಸಿದರು. ತಾ.ಕ.ಸಾ.ಪ.ಅಧ್ಯಕ್ಷ ನಂ.ರಾಜು ಆಶಯ ನುಡಿಗಳನ್ನಾಡಿದರು.

      ಇದೇ ಸಂಧರ್ಭದಲ್ಲಿ ಶ್ರೀಮತಿ ಉಷಾ ಶ್ರೀನಿವಾಸ್, ಜ್ಯೋತಿ ಸುಂಕಲಾಪುರ, ಎಲ್.ವಿರೂಪಾಕ್ಷ, ಅಶೋಕ್. ಚಂದ್ರಕೀರ್ತಿ, ಬೋರಲಿಂಗಯ್ಯ ಮುಂತಾದವರು ಮತದಾನ ಬಗ್ಗೆ ಕವಿವಾಚನ ಮಾಡಿದರು. ತಾ.ಸಾಹಿತ್ಯ ಸಮ್ಮೇಳನದಲ್ಲಿ ನಾಡಗೀತೆಯನ್ನು ಸುಶ್ರಾವ್ಯವಾಗಿ ಹಾಡಿದ ಮಹಿಳಾ ಸಮಾಜದ ಮುಖಂಡರನ್ನು ಇದೇ ವೇದಿಕೆಯಲ್ಲಿ ಸನ್ಮಾನಿಸಲಾಯಿತು.

       ಈ ಸಂಧರ್ಭದಲ್ಲಿ ಚಿದಂಬರೇಶ್ವರ ಗ್ರಂಥಾಲಯದ ರಾಮಚಂದ್ರು, ಹೋಬಳಿ ಘಟಕದ ಭೋಜರಾಜ್, ದಿನೇಶ್, ಶ್ರೀಮತಿ ದೇವಮ್ಮ ಶಂಕರಪ್ಪ, ಮಂಜುಳ ಧನಪಾಲ್, ವಿಜಯಲಕ್ಷ್ಮೀ ವಿಶ್ವೇಶ್ವರಯ್ಯ, ಲಲಿತಾರಾಮಚಂದ್ರ, ವೆಂಕಟೇಶ್‍ಮೂರ್ತಿ ಸೇರಿದಂತೆ ಅನೇಕ ಸಾಹಿತ್ಯಾಶಕ್ತರು ಉಪಸ್ಥಿತರಿದ್ದರು. ಅಶೋಕ್ ಸ್ವಾಗತಿಸಿ, ಶಿಕ್ಷಕಿ ರೇಣುಕಾನಂಜುಂಡಯ್ಯ ನಿರೂಪಿಸಿ ವಂದಿಸಿದರು.

 

LEAVE A REPLY

Please enter your comment!
Please enter your name here