ಉಪ ಸಮಿತಿಗೆ ನೀರಿನ ಹಾಹಾಕಾರದ ಸತ್ಯದರ್ಶನ

0
5

ದಾವಣಗೆರೆ

         ಕೊರೆಸಿದ ಕೊಳವೆಬಾವಿಗಳು ಬತ್ತಿ ಹೋಗಿವೆ, ಕೆರೆ-ಕಟ್ಟೆ ಏನೂ ಇಲ್ಲ, ಜನ-ಜಾನುವಾರುಗಳಿಗೆ ಕುಡಿಯಲು ನೀರಿಲ್ಲ…
ಹೀಗೆ ನೀರಿನ ಸಮಸ್ಯೆಯನ್ನು ತಾಲೂಕಿನ ಹುಣಸಿಕಟ್ಟೆ ಗ್ರಾಮಸ್ಥರು ಭಾನುವಾರ ಬರದ ಹಿನ್ನೆಲೆಯಲ್ಲಿ ವಾಸ್ತವ ಸ್ಥಿತಿ ಅಧ್ಯಯನ ಮಾಡಲು ಗ್ರಾಮಕ್ಕೆ ಭೇಟಿ ನೀಡಿದ ಕೃಷಿ ಸಚಿವ ಶಿವಶಂಕರರೆಡ್ಡಿ ನೇತೃತ್ವದ ಸಚಿವ ಸಂಪುಟದ ಉಪ ಸಮಿತಿ ಎದುರು ಎಳೆ, ಎಳೆಯಾಗಿ ಬಿಚ್ಚಿಡುವ ಮೂಲಕ ಬರದ ಸತ್ಯ ದರ್ಶನ ಮಾಡಿಸಿದರು.

          ಭಾನುವಾರ ಬೆಳಿಗ್ಗೆ ಕೃಷಿ ಸಚಿವ ಎನ್.ಹೆಚ್.ಶಿವಶಂಕರ ರೆಡ್ಡಿ, ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಸಣ್ಣ ಕೈಗಾರಿಕೆಗಳ ಸಚಿವ ಎಸ್.ಆರ್.ಶ್ರೀನಿವಾಸ್, ಕಾರ್ಮಿಕ ಸಚಿವ ವೆಂಕಟರಮಣಪ್ಪ ಅವರನ್ನೊಳಗೊಂಡ ಸಚಿವ ಸಂಪುಟದ ಉಪ ಸಮಿತಿ ತಂಡವು ಕೃಷಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಹೇಶ್ವರರಾವ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಲ್ಲಾ ಪಂಚಾಯತ್ ಸಿಇಒ ಅಶ್ವತಿ ಅವರೊಂದಿಗೆ ಭೇಟಿ ನೀಡಿ, ನೀರಿನ ಜ್ವಲಂತ ಸಮಸ್ಯೆಯ ಬಗ್ಗೆ ಮಾಹಿತಿ ಪಡೆಯಿತು.

         ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮದ ರಾಜೇಶ್ವರಿ ನಮ್ಮ ಗ್ರಾಮಗಳಲ್ಲಿ ಸುಮಾರು 800 ಮನೆಗಳಿವೆ. ಕೊರೆಸಿದ ಕೊಳವೆ ಬಾವಿಗಳು ಬತ್ತಿ ಹೋಗಿವೆ. ನಮ್ಮೂರಿನ ಸಮೀಪದಲ್ಲಿ ಯಾವುದೇ ಕೆರೆ, ಕಟ್ಟೆ ಹೊಂಡಗಳಿಲ್ಲ. ಹೀಗಾಗಿ ನೀರಿಗಾಗಿ ಪರದಾಡಬೇಕಾದ ಪರಿಸ್ಥಿತಿ ಇದ್ದು, ಹೆಬ್ಬಾಳಿನಿಂದ ನೀರು ತರಬೇಕಾಗಿದೆ. ಸ್ನಾನ ಮಾಡದೆಯೇ ಮಕ್ಕಳು ಶಾಲೆಗಳಿಗೆ ಹೋಗಬೇಕಾದ ಸ್ಥಿತಿ ಗ್ರಾಮದಲ್ಲಿ ನಿರ್ಮಾಣವಾಗಿದೆ ಎಂದು ಅವಲತ್ತು ಕೊಂಡರು.

          ಗ್ರಾಮದ ಹೆಚ್.ಕೆ.ರುದ್ರೇಶಪ್ಪ ಮಾತನಾಡಿ, ನನಗೀಗ 65 ವರ್ಷ ಹುಟ್ಟಿನಿಂದ ಇಂತಹ ಭೀಕರ ಬರಗಾಲ ಪರಿಸ್ಥಿತಿಯನ್ನು ನೋಡಿರಲಿಲ್ಲ. ಮಳೆ ಬಾರದ ಹಿನ್ನೆಲೆಯಲ್ಲಿ ಕಳೆದ ಮೂರು ವರ್ಷಗಳಿಂದ ನೀರಿನ ಹಾಹಾಕಾರ ಎದುರಾಗಿದೆ. ಆದ್ದರಿಂದ ನಿರ್ಥಡಿ ಗುಡ್ಡದಲ್ಲಿರುವ ಅರಣ್ಯ ಪ್ರದೇಶದಲ್ಲಿ ಕೊಳವೆಬಾವಿ ಕೊರೆ ನೀರು ಪೂರೈಸಬೇಕೆಂದು ಒತ್ತಾಯಿಸಿದರು.

       ಗ್ರಾಮ ಪಂಚಾಯತಿ ಸದಸ್ಯ ಮಲ್ಲಿಕಾರ್ಜುನ್ ಮಾತನಾಡಿ, ನಮ್ಮೂರಿನಲ್ಲಿ 1128 ಜನಸಂಖ್ಯೆ ಇದ್ದು, 917 ಜಾನುವಾರುಗಳಿವೆ. ಸಧ್ಯ ಉದ್ಭವಿಸಿರುವ ನೀರಿನ ಸಮಸ್ಯೆ ನೀಗಿಸಲು ಅಧಿಕಾರಿಗಳ ಸೂಚನೆಯಂತೆ ದಿನಕ್ಕೆ 11 ಟ್ಯಾಂಕರ್ ಮೂಲಕ ನೀರು ಪೂರೈಸುವ ಮೂಲಕ ನೀರಿನ ಸಮಸ್ಯೆಯನ್ನು ಗ್ರಾಮ ಪಂಚಾಯತ್ ನೀಗಿಸುತ್ತಿದೆ ಎಂದರು.

         ಗ್ರಾಮಸ್ಥರಿಂದ ಮಾಹಿತಿ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದ ಕೃಷಿ ಸಚಿವ ಶಿವಶಂಕರ ರೆಡ್ಡಿ,. ಈ ಊರಿನಲ್ಲಿ ನೀರಿನ ಸಮಸ್ಯೆ ಇದ್ದು, ನಾಲ್ಕು ಕೊಳವೆಬಾವಿ ಕೊರೆಸಿದರೂ ನೀರು ಸಿಕ್ಕಿಲ್ಲ. ಹೀಗಾಗಿ 800 ಅಡಿಗೂ ಹೆಚ್ಚು ಕೊಳವೆ ಬಾವಿ ಕೊರೆಸಿ ನೀರು ಪೂರೈಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

        ಈಗಾಗಲೇ ಕಂದಾಯ ಅಧಿಕಾರಿಗಳ ಮೂಲಕ ಬೆಳೆ ನಷ್ಟ, ಮೇವು, ಕುಡಿಯುವ ನೀರಿನ ಸಮೀಕ್ಷೆ ನಡೆಸಿದ್ದು, ಜಿಲ್ಲೆಯಲ್ಲಿ 52 ಕೋಟಿ ರೂ. ಮೊತ್ತದ ಬೆಳೆ ನಷ್ಟವಾಗಿದೆ ಎಂಬ ಮಾಹಿತಿ ಜಿಲ್ಲಾಡಳಿತದಿಂದ ಲಭ್ಯವಾಗಿದೆ. ರಾಜ್ಯದಲ್ಲಿ ಸುಮಾರು 16 ಸಾವಿರ ಕೋಟಿ ಮೊತ್ತದಷ್ಟು ಬೆಳೆ ಹಾನಿಯಾಗಿದೆ. ಕೇಂದ್ರ ಸರ್ಕಾರಕ್ಕೆ ಬರ ನಿರ್ವಹಣೆಗಾಗಿ ಸೂಕ್ತ ಅನುದಾನ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರ ಮನವಿ ಮಾಡಿದೆ. ಎನ್‍ಡಿಆರ್‍ಎಫ್ ಮಾರ್ಗಸೂಚಿ ಪ್ರಕಾರ ರಾಜ್ಯ ಸರ್ಕಾರ ಸುಮಾರು 2,434 ಕೋಟಿ ಅನುದಾನ ಬಿಡುಗಡೆ ಮಾಡಬೇಕಾಗಿದ್ದು, ಅನುದಾನದ ನಿರೀಕ್ಷೆಯಲ್ಲಿದ್ದೇವೆ ಎಂದು ಮಾಹಿತಿ ನೀಡಿದರು.

        ರಾಜ್ಯ ಸರ್ಕಾರವು ಬರ ನಿರ್ವಹಣೆಗೆ ಅನುದಾನ ವಿನಿಯೋಗಿಸುತ್ತಿದ್ದು, ಇದರ ಜತೆಗೆ ಕೇಂದ್ರದ ಅನುದಾನ ಬಂದರೂ ಇನ್ನೂ ಪರಿಣಾಮಕಾರಿಯಾಗಿ ಬರ ನಿರ್ವಹಣೆ ಮಾಡಬಹುದು ಎಂದ ಅವರು, ಇನ್ನೂ 24 ವಾರಗಳಿಗೆ ಆಗುವಷ್ಟು ಮೇವು ದಾಸ್ತಾನಿದ್ದು, ರೈತರಿಂದ ಮೇವು ಬೆಳೆಸಲು ಮೇವು ಕಿಟ್ ಸಹ ವಿತರಿಸಲಾಗಿದೆ ಎಂದರು.

         ನಂತರ ಈ ತಂಡವು ಜಗಳೂರು ತಾಲೂಕಿನ ತೋರಣಗಟ್ಟೆ ಸೇರಿದಂತೆ ಇತರೆಡೆ ಭೇಟಿ ನೀಡಿ, ಬರ ನಿರ್ವಹಣೆಯ ವಾಸ್ತವ ಸ್ಥಿತಿಯನ್ನು ಅಧ್ಯಯನ ಮಾಡಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here