ಉಡಿ ತುಂಬುವ ಕಾರ್ಯಕ್ರಮ

ಬ್ಯಾಡಗಿ:

          ಸಾಂಸ್ಕತಿಕ ದೇಶವಾಗಿರುವ ಭಾರತದಲ್ಲಿರುವಷ್ಟು ಮಹಿಳಾ ಪ್ರಧಾನ (ದೇವತೆಗಳ) ದೇವಾಲಯಗಳು ವಿಶ್ವದ ಯಾವುದೇ ರಾಷ್ಟ್ರಗಳಲ್ಲಿಲ್ಲ, ಒಂದು ಕಡೆ ಗೌರವಿಸುತ್ತಿರುವುದರ ಜೊತೆಗೆ ಪುರುಷ ಪ್ರಧಾನ ಸಮಾಜ ಇತ್ತೀಚೆಗೆ ಮಹಿಳೆ ಮೇಲೆ ನಿರಂತರ ದೌರ್ಜನ್ಯಗಳನ್ನೆಸುಗುತ್ತಿರುವುದು ದುರಂತದ ಸಂಗತಿ, ಇದರಲ್ಲಿ ಯಾರನ್ನೂ ದೂಷಿಸಬೇಕೆಂಬುದು ಅರ್ಥವಾಗುತ್ತಿಲ್ಲ ಎಂದು ಹೂವಿನಶಿಗ್ಲಿಯ ವಿರಕ್ತಮಠದ ಚನ್ನವೀರಶ್ರೀಗಳು ಖೇದ ವ್ಯಕ್ತಪಡಿಸಿದರು.

         ಪಟ್ಟಣದ ದಾನಮ್ಮದೇವಿ ಜಾತ್ರಾಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಆರು ಸಾವಿರ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಮಹಿಳೆಯರು ದೇಶ ಹಾಗೂ ಸಮಾಜದ ಆಧಾರಸ್ಥಂಭ ನಿರಾಕಾರಿ ದೇವತೆಗಳನ್ನು ಪೂಜಿಸುತ್ತಿರುವ ಜನರು ಮನೆಯಲ್ಲಿರುವ ಹೆಂಡತಿ, ತಾಯಿ, ತಂಗಿಯರ ಬಗ್ಗೆ ಅಗೌರವ ತೋರುತ್ತಿರುವುದು ದುರಂತದ ಸಂಗತಿ ದೇವರ ಮೇಲೆ ನಂಬಿಕೆ ಇಟ್ಟವರು ಮನೆಯಲ್ಲಿರುವವರನ್ನು ನಡೆದಾಡುವ ದೇವತೆ ಎಂಬುದಾಗಿ ಏಕೆ ತಿಳಿದುಕೊಳ್ಳುತ್ತಿಲ್ಲ..? ಎಂದು ಪ್ರಶ್ನಿಸಿದರು.

        ನಾಸ್ತಿಕತೆಯಿಂದ ಜೀವನ ನಶ್ವರ: ಮನುಷ್ಯನೊಬ್ಬ ಆಶಾ ಜೀವಿ, ನೂರಾರು ಆಸೆಗಳನ್ನಿಟ್ಟುಕೊಂಡು ತನ್ನ ಬದುಕನ್ನು ನಡೆಸುತ್ತಿದ್ದಾನೆ, ಆದರೆ ಇತ್ತೀಚೆಗೆ ನಾಸ್ತಿಕ ಮನೋಭಾವನೆ ಕೆಲ ವ್ಯಕ್ತಿಗಳು ಮಹಿಳೆಯರ ಬಗ್ಗೆ ಅಮಾನುಷ ವರ್ತನೆ ತೋರುತ್ತಿದ್ದಾರೆ, ದೇವರು ಎಂಬುದು ಕೇವಲ ಕಲ್ಪನೆಯಷ್ಟೇ ಅವನೇನು ನಮಗೆ ಮಾಡಬಲ್ಲ..? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳುವ ಮೂಲಕ ತಾನು ಮಾಡಿದ್ದೇ ಸರಿ ಎಂಬಂತೆ ನಡೆದುಕೊಳ್ಳುತ್ತಿರುವುದು ವಿಷಾದಕರ ಸಂಗತಿ ಎಂದರು.

         ಎಚ್ಚರಿಕೆ ಬದುಕು ನಡೆಸಿ: ಮಹಿಳೆಯರು ಸ್ವೇಚ್ಚಾಚಾರಿಗಳಾಗಿ ಬದುಕಬಾರದು, ಅವರಲ್ಲಿರುವ ತಮ್ಮ ಕನಿಷ್ಟ ಬುದ್ಧಿಯನ್ನು ಪ್ರಚುರಪಡಿಸುವುದರಿಂದ ಕುಟುಂಬಕ್ಕಾಗಿ ತೋರಿದಂತಹ ತ್ಯಾಗದ ಬದುಕು ನಗಣ್ಯವೆನಿಸುತ್ತಿದೆ, ಪುರುಷನ ಪ್ರತಿಯೊಂದು ಸಾಧನೆಯ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂಬ ಮಾತೊಂದಿತ್ತು, ಆದರೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಅಪರಾಧ ಪ್ರಕರಣಗಳ ಹಿಂದೆ ಮಹಿಳೆಯರ ಕೈವಾಡವಿರುತ್ತಿದೆ, ಆರೋಗ್ಯವಂತ ಸಮಾಜ ಯಾವುದೇ ಕಾರಣಕ್ಕೂ ಇದನ್ನು ಸಹಿಸಲು ಸಾಧ್ಯವಿಲ್ಲ ಎಂದರು

ನೈತಿಕವಾಗಿ ದುರ್ಬಲವಾಗುತ್ತಿರುವ ಮನುಷ್ಯ: ಶ್ರೀಮತಿ ಶಶಿಕಲಾ ಪಾಟೀಲ ಮಾತನಾಡಿ, ಮನುಷ್ಯನಲ್ಲಿನಲ್ಲಿರುವ ಸ್ವಾರ್ಥ ಪರ ಬದುಕು ಪ್ರಸ್ತುತ ಸಮಾಜವನ್ನು ವಿಘಟನೆಯತ್ತ ಕೊಂಡೊಯ್ಯುತ್ತಿದೆ, ತಾತ್ಕಾಲಿಕ ಸುಖದೆಡೆಗೆ ಮುಖ ಮಾಡಿರುವ ಜನರು ಧಾರ್ಮಿಕ ನಂಬಿಕೆ ಮತ್ತು ಮಾನವೀಯ ಮೌಲ್ಯ ಕಳೆದುಕೊಳ್ಳುತ್ತಿದ್ದು ನೈತಿಕವಾಗಿ ದುರ್ಬಲರಾಗುತ್ತಿದ್ದಾರೆ ಎಂದರು..

           6 ಸಾವಿರ ಮಹಿಳೆಯರಿಗೆ ಉಡಿ ತುಂಬಿದ ಕಾರ್ಯಕರ್ತರು: ಇದೇ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಸುಮಾರು 6 ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ದೇವಸ್ಥಾನ ಸಮಿತಿ ಕಾರ್ಯಕರ್ತರಿಂದ ಉಡಿ ತುಂಬುವ ಕಾರುಕ್ರಮ ವ್ಯವಸ್ಥಿತವಾಗಿ ನಡೆಯಿತು.

           ವೇದಿಕೆಯಲ್ಲಿ ಅಬಕಾರಿ ಸಹಾಯಕ ನಿರ್ದೇಶಕಿ ಆಸಿಫಿಯಾಬಾನು, ಲಿಂಗನಗೌಡ ಪಾಟೀಲ, ಅಡಿವೆಪ್ಪ ಎಲಿ, ಎಲ್.ಆರ್.ಮೇಲಗಿರಿ, ಶಿವಯೋಗೆಪ್ಪ ಶೆಟ್ಟರ, ಶಾಂತಮ್ಮ ಮೇಲ್ಮುರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap